ಅನುಭವದಿಂದ ಪಡೆದ ಆಸ್ತಿ ಕಲೆಯನ್ನು ಗಟ್ಟಿಗೊಳಿಸುವ ಸಾಧನ ಹೌದು. ಕೆಲವರಿಗೆ ಕಲೆ ರಕ್ತಗತವಾಗಿ ಬಂದು ಅನುಭವಿಸದರಷ್ಟೆ ಕೌಶಲ್ಯ ಶ್ರೀಮಂತಿಕೆ ತುಂಬುತ್ತದೆ. ಇದು ವರ ಕೂಡ, ಇಂತಹ ಅನನ್ಯ ಪ್ರತಿಭೆಯ ಸಾಧಕಿ ಗಾಯತ್ರಿ ಕೇಶವ್! ಸುಗಮ ಸಂಗೀತ ಗಾಯಕಿಯಾಗಿ, ಶಿಕ್ಷಕಿಯಾಗಿ ಒಂದು ಸಂಸ್ಥೆಯ ಸ್ಥಾಪಕಿಯಾಗಿ ಸಂಗೀತ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿರುವ ಗಾಯತ್ರಿ ಕೇಶವ್ ತಮ್ಮ ಸಾಧನೆಯಲ್ಲಿ ಹಲವಾರು ಕಷ್ಟ ಕಾರ್ಪಣ್ಯಗಳನ್ನು ಎದುರಿಸಿದರು. ಗಾಯತ್ರಿ 6 ತಿಂಗಳ ಮಗುವಾಗಿದ್ದಾಗಲೇ ತಮ್ಮ ತಂದೆಯನ್ನು ಕಳೆದುಕೊಂಡರು. ತಮ್ಮ ಅಣ್ಣಂದಿರಾದ ಶ್ರೀನಿವಾಸ ಮೂರ್ತಿ ಮತ್ತು ನರಸಿಂಹಮೂರ್ತಿ, ಅಕ್ಕ ಪದ್ಮಾ ಇವರುಗಳ ಪೋಷಣೆಯಲ್ಲಿ, ತಾಯಿ ಶಂಕರಮ್ಮರವರ ಹಾರೈಕೆಯಲ್ಲಿ ಬೆಳೆದು ತಮ್ಮ ಪ್ರತಿಭೆಯನ್ನು ಸಾಕ್ಷೀಕರಿಸಿದರು.
ಸಂಗೀತದಲ್ಲಿ ಆಸಕ್ತಿ
ಅಣ್ಣ ಶ್ರೀನಿವಾಸ್‌ಮೂರ್ತಿ ಸರ್ಕಾರಿ ಉದ್ಯೋಗಿಯಾಗಿದ್ದು, ಅವರೊಂದಿಗೆ ತಮ್ಮ ಪ್ರಯಾಣವನ್ನು ಸಾಗಿಸುತ್ತಾ ಇದರೊಂದಿಗೆ ಹಲವಾರು ಊರು ಮತ್ತು ಹಲವಾರು ವ್ಯಕ್ತಿಗಳ ಪರಿಚಯ ಹೊಂದುವ ಸೌಭಾಗ್ಯ ಅವರದಾಗಿತ್ತು. ಅವರು ಚಿತ್ರದುರ್ಗದಲ್ಲಿದ್ದಾಗ ಶೈಕ್ಷಣಿಕ ಶಿಕ್ಷಣದೊಂದಿಗೆ ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಸಂಗೀತಕ್ಕೆ ಸೇರಲು ಬಡತನದಿಂದಾಗಿ ಸಾಧ್ಯವಾಗಿರಲಿಲ್ಲ. ಆಗ ಅವರ ಸಹಾಯಕ್ಕೆ ಬಂದರು ಅಲ್ಲಿನ ಕೆನರಾ ಬ್ಯಾಂಕ್ ಉದ್ಯೋಗಿಯಾಗಿದ್ದ ಅವರ ಅಣ್ಣನ ಸ್ನೇಹಿತರಾದ ಯು.ಎನ್. ಮಯ್ಯ ಮತ್ತು ಭಾವ ಜಗದೀಶ್. ಅವರುಗಳ ಸಹಕಾರದಿಂದ ಸುಗಮ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗಿದೆ. 5 ವರ್ಷದ ಮಗುವಾಗಿದ್ದಾಗಲೇ ಕರ್ನಾಟಕ ಶಾಸ್ತ್ರೀಯ ಸಂಗೀತದ ಪ್ರಾರಂಭಿಕ ಪಾಠವನ್ನು ವೆಂಕಟರಾಮು ಅವರಲ್ಲಿ ಪ್ರಾರಂಭಿಸಿದ್ದು, ಅದು ಅನಂತರದಲ್ಲಿ ನಿರಂತರವಾಗಿ ಸಾಗಿತು. ನಂತರದಲ್ಲಿ ತಿಪಟೂರಿನ ಚೆನ್ನಬಸಯ್ಯನವರಲ್ಲಿ ಮುಂದುವರಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರು.

ಸುಗಮ ಸಂಗೀತದಲ್ಲಿ ಒಲವು
ಒಮ್ಮೆ ಆಕಾಶವಾಣಿಯಲ್ಲಿ ಮೂಡಿ ಬರುತ್ತಿದ್ದ ಶಾಂತ ಜಯತೀರ್ಥರರು ಹಾಡುತ್ತಿದ್ದ `ಒಡಲೆಂಬ ಗುಡಿಯೊಳಗೆ ಒಡೆಯ ನನ್ನನಿಹನು,’ ಎಂಬ ಹಾಡನ್ನು ಕೇಳಿ ಸ್ಛೂರ್ತಿಗೊಂಡು ಸುಗಮ ಸಂಗೀತ ಕಲಿಕೆ ಪ್ರಾರಂಭಿಸಿದರು. ತಿಪಟೂರಿನ ಕಲ್ಪತರು ಕಾಲೇಜಿನ ಕನ್ನಡ ಪ್ರಾಧ್ಯಾಪಕರು, ಗಾಯಕರು, ಸಂಗೀತ ಸಂಯೋಜಕರೂ ಆದ ಟಿ.ಕೆ. ಶಿವಣ್ಣರವರ ಮಾರ್ಗದರ್ಶನದಲ್ಲಿ ಸುಗಮ ಸಂಗೀತ ಕಲಿಕೆ ಪ್ರಾರಂಭವಾಯಿತು.
ಇವರೊಂದಿಗೆ ತಿಪಟೂರಿನ ಎಲ್.ಐ.ಸಿಯಲ್ಲಿ ಉದ್ಯೋಗಿಯಾಗಿದ್ದ ಮಾಧೂರಾವ್, ಸುಗಮ ಸಂಗೀತದ ಹಲವಾರು ಗೀತೆಗಳನ್ನು ಹೇಳಿಕೊಟ್ಟು ಪ್ರೋತ್ಸಾಹಿಸಿದರು.
ಗಾಯತ್ರಿಯವರ ಸಂಗೀತ ಸಾಧನೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದವರು ತಿಪಟೂರಿನ ಆಗಿನ ಡಿ.ವೈ.ಎಸ್.ಪಿಗಳಾಗಿದ್ದ ಕೆ.ವಿ.ಆರ್. ಟ್ಯಾಗೂರ್, ಸುಭಾಷ್ ಭರಣಿಯವರನ್ನು ಮರೆಯುವಂತಿಲ್ಲ.
ಬಾಲ್ಯದಿಂದಲೇ ಸುಮಾರು 300ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದಲ್ಲದೆ, ಗಾನಶಾರದೆ, ಕಾವ್ಯಗಂಗಾ, ಗಾಯನಶ್ರೀ ಮುಂತಾದ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.
ಹಲವಾರು ಹಿರಿಯ ಸಂಗೀತ ಸಂಯೋಜಕರು, ಪ್ರಸಿದ್ಧ ನಿರ್ದೇಶಕರು, ನಟನಟಿಯರ ಸಮ್ಮುಖದಲ್ಲಿ ಹಾಡಿ ಅವರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅವರುಗಳಲ್ಲಿ ಮುಖ್ಯವಾದವರೆಂದರೆ, ಜಿ.ಕೆ. ವೆಂಕಟೇಶ್, ವಿಜಯಭಾಸ್ಕರ್, ಕೆ.ವಿ. ಮಹದೇವನ್, ಸಿ.ವಿ. ಶಿವಶಂಕರ್, ಬಿ.ಎಂ. ವೆಂಕಟೇಶ್, ಆರತಿ, ಪುಟ್ಟಣ್ಣ ಕಣಗಾಲ್, ಮಂಜುಳಾ, ಎಚ್.ಎಲ್. ನಾಗೇಗೌಡ ಮುಂತಾದವರು.
ಬಸವೇಶ್ವರ ಕಾಲೇಜ್ ನಲ್ಲಿ ಬಿ.ಕಾಂ. ಪದವಿ ಪಡೆದು ಆ ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಅಂತರ ಕಾಲೇಜು ಮಟ್ಟದಲ್ಲಿ ನಡೆದು ಸುಗಮ ಸಂಗೀತ ಸ್ಪರ್ಧೆಯಲ್ಲಿ ಮೂರು ವರ್ಷಗಳ ಕಾಲ ಮೊದಲ ಬಹುಮಾನ ಪಡೆದದ್ದಕ್ಕಾಗಿ ಕಾಲೇಜಿನವರು ಸನ್ಮಾನಿಸಿ, ಗೌರವಿಸಿದ್ದು ಅವಿಸ್ಮರಣೀಯ!

ಸಂಗೀತ ಸೇವೆ
ಕಲೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಸಮಾಜ ಸೇವೆ ಮಾಡುವ ನಿಟ್ಟಿನಲ್ಲಿ 1999ರಲ್ಲಿ ಪಂಚಾಮೃತ ಸುಗಮ ಸಂಗೀತ ಅಕಾಡೆಮಿಯನ್ನು ಸ್ಥಾಪಿಸಿ ಆ ಮೂಲಕ ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸುಗಮ ಸಂಗೀತ ಕಲಿಸುತ್ತಿದ್ದು, ಅದರಲ್ಲೂ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಸುಗಮ ಸಂಗೀತ ಶಿಕ್ಷಣ ನೀಡುತ್ತಿದ್ದಾರೆ.
ಹಿರಿಯ ಕಲಾವಿದರಿಗೆ ಗೌರವ, ಯುವ ಕಲಾಪ್ರತಿಭಾವಂತರಿಗೆ ವೇದಿಕೆ ಕಲ್ಪಿಸುವುದು, ಇತರ ಸಂಗೀತ ಸಂಸ್ಥೆಗಳಿಗೆ ತುಂಬು ಮನದ ಸಹಕಾರ, ಮಕ್ಕಳಿಗೆ ಕಲೆ, ಸಾಹಿತ್ಯ ಸಂಸ್ಕೃತಿಯಲ್ಲಿ ಒಲವು ಮೂಡಿಸುವುದು, ಸಂಗೀತ ಸ್ಪರ್ಧೆ ನಡೆಸುವುದು, ಹಿರಿಯ ಕವಿಗಳ ಸ್ಮರಣಾರ್ಥ ಗೀತಗಾಯನ, ಕನ್ನಡ ದೇಶಭಕ್ತಿ ಗೀತೆಗಳ ಗಾಯನ, ಗೀತ ನಾಟಕಗಳು, ಭಾವ ಸಂಭ್ರಮ, ನಾದಝರಿ, ಬೇಸಿಗೆ ಶಿಬಿರ, ಜನಪದಗೀತ ಗಾಯನ, ಕವಿ ಪರಿಚಯ ಇತ್ಯಾದಿಗಳನ್ನು ನಿರಂತರ ನಡೆಸುತ್ತಿದ್ದಾರೆ.
ಇದರೊಂದಿಗೆ ಕನ್ನಡ ಭಗವದ್ಗೀತೆ ಹಾಗೂ ಪ್ರತಿ ತಿಂಗಳು ನಡೆಯುವ ಇಂಚರ 130ರ ಸಂಚಿಕೆಯತ್ತ ಹೀಗೆ ಹಲವಾರು ವಿಶಿಷ್ಟ/ ವಿಭಿನ್ನ ಕಾರ್ಯಕ್ರಮಗಳಿಂದಾಗಿ ಸುಗಮ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ವರ್ಷಕ್ಕೆ ಎರಡು ಬಾರಿ ರಕ್ತದಾನ ಶಿಬಿರ ಸಹ ನಡೆಸುತ್ತಾ ಬಂದಿದ್ದಾರೆ.
ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಹಾಡಿರುವ/ ಹಾಡುತ್ತಿರುವ ಗಾಯತ್ರಿ ಕೇಶವ್ ಹಲವಾರು ಸ್ಪರ್ಧೆಗಳಿಗೆ ತೀರ್ಪುಗಾರರಾಗಿರುತ್ತಾರೆ. ಇದರೊಂದಿಗೆ ಕರಕುಶಲ ವಸ್ತುಗಳ ತಯಾರಿಕೆ ಮತ್ತು ಶಿಕ್ಷಣವನ್ನು ನೀಡುತ್ತಿದ್ದಾರೆ.
ಸಹಕಾರ
ಇವರ ಸಾಂಸ್ಕೃತಿಕ ಸೇವೆಗೆ ಪತಿ ಕೇಶವಮೂರ್ತಿಯವರ ಮಾರ್ಗದರ್ಶನ ಕೂಡ ಸಹಕಾರಿಯಾಗಿದೆ. ಇದರೊಂದಿಗೆ ಹಲವಾರು ಚಲನಚಿತ್ರ/ಧಾರಾವಾಹಿಗಳಲ್ಲಿ ನಟಿಸಿ, ಹಾಡಿರುವ, ಗಾಯಕ/ಸಂಗೀತ ನಿರ್ದೇಶಕ ಮಗ ಕಾರ್ತಿಕ್ ಶರ್ಮಾರ ಪ್ರೋತ್ಸಾಹ ಸಹ ಸುಗಮ ಸಂಗೀತ ಕ್ಷೇತ್ರದ ಸೇವೆಗೆ ಪೂರಕವಾಗಿದೆ.
ಪಂಚಾಮೃತ ಸುಗಮ ಸಂಗೀತ ಅಕಾಡೆಮಿಯ ಗೌರವ ಅಧ್ಯಕ್ಷರಾಗಿದ್ದ ಹಾಗೂ ಮಾಲಾ ಎಂ.ಎಸ್. ಅನಂತರಾಮ ಶರ್ಮಾ ಮತ್ತು ಇಂದಿಗೂ ಅವರ ಕಾರ್ಯದಲ್ಲಿ ಸಹಕಾರಿಯಾಗಿ ಪ್ರೋತ್ಸಾಹ ನೀಡುತ್ತಿರುವ ಅತ್ತೆ ಜಯಮ್ಮ, ಸಂಸ್ಥೆಯ ಎಲ್ಲಾ ಗೌರವ ಸಲಹೆಗಾರರು/ಪೋಷಕರು/ಕಾರ್ಯಕಾರಿ ಸಮಿತಿ ಸದಸ್ಯರನ್ನು ಯಾವಾಗಲೂ ನೆನೆಯುತ್ತಾರೆ.
ಪುಟ್ಟ ಮಕ್ಕಳಿಂದ ಹಿರಿಯ ಗೃಹಿಣಿಯವರೆವಿಗೂ ಶಿಷ್ಯ ವೃಂದವನ್ನು ಹೊಂದಿರುವ ಗಾಯತ್ರಿ ಕೇಶವ್ ಸ್ಥಾಪಿಸಿದ `ಪಂಚಾಮೃತ ಸುಗಮ ಸಂಗೀತ ಅಕಾಡೆಮಿ’ಗೆ ಈಗ ರಜತ ಸಂಭ್ರಮದ ವರ್ಷ. ಕಳೆದ 25 ವರ್ಷದಿಂದ ಹಲವಾರು ಕಾರ್ಯಕ್ರಮಗಳ ಮೂಲಕ ಕಲಾಸೇವೆ ಮಾಡುತ್ತಿರುವ ಗಾಯತ್ರಿ ಕೇಶವ್ ಗೆ ಶುಭವಾಗಲಿ ಎಂದು ಗೃಹಶೋಭಾ ಹಾರೈಸುತ್ತಾಳೆ.
– ಕೇಶವಮೂರ್ತಿ





