ಹಾಸ್ಯದ ಹೊನಲು
ಪುಢಾರಿ ಪತ್ನಿ : ರೀ, ಇವತ್ತಿನ ಸುದ್ದಿ ಗಮನಿಸಿದ್ರಾ?
ಪುಢಾರಿ : ಬೇಕಾದಷ್ಟಿವೆ, ಯಾವುದು ಹೇಳ್ತಿದ್ದಿ?
ಪತ್ನಿ : ಯುವರಾಜನ ವರ್ಚಸ್ಸು ಹೆಚ್ಚಿಸಲು ಪಕ್ಷದ ವತಿಯಿಂದ ಬಹಳಷ್ಟು ಖರ್ಚಾಗುತ್ತದೆ ಅಂತ…..
ಪತಿ : ಸರಿ, ಅದಕ್ಕೇನೀಗ?
ಪತ್ನಿ : ನಿಮ್ಮ ಮುಖಂಡರ ವರ್ಚಸ್ಸು ಹೆಚ್ಚಿಸಲು ಕೋಟ್ಯಂತರ ಖರ್ಚು ಮಾಡ್ತೀರಂತೆ, ಹೆಂಡತಿಯ ವರ್ಚಸ್ಸು ಹೆಚ್ಚಿಸಲು ಅವಳ ಮೇಕಪ್ ಗಾಗಿ ಒಂದಿಷ್ಟು ಸಾವಿರ ಖರ್ಚು ಮಾಡಲು ಆಗದೇ….?
ಟೀಚರ್ : ಬಸ್ ಡ್ರೈವರ್ ಗೂ, ಕಂಡೆಕ್ಟರ್ ಗೂ ವ್ಯತ್ಯಾಸವೇನು?
ಗುಂಡ : ಮೇಡಂ, ಕಂಡಕ್ಟರ್ ಮಲಗಿದ್ರೆ ಯಾರೂ ಟಿಕೆಟ್ ತಗೊಳೋಕೆ ಆಗಲ್ಲ… ಆದರೆ ಡ್ರೈವರ್ ಮಲಗಿದ್ರೆ ಎಲ್ಲರೂ ಟಿಕೆಟ್ ತಗೋತಾರೆ……
ಮದುವೆಯಾದ 5 ವರ್ಷಗಳ ನಂತರ ವ್ಯಾಲೆಂಟೈನ್ಸ್ ಡೇ ಬಂದಾಗ ಮೋಹನ್ ತನ್ನ ಪತ್ನಿ ರಾಧಾಳಿಗೆ ಒಂದು ದೊಡ್ಡ ಬಿಳಿಯ ಗುಲಾಬಿ ತಂದುಕೊಟ್ಟ.
ರಾಧಾ : ಇದೇನ್ರಿ ಬಿಳಿ ಗುಲಾಬಿ ತಂದಿದ್ದೀರಿ? ವ್ಯಾಲೆಂಟೈನ್ಸ್ ಡೇ ಅಂದ್ರೆ ಕೆಂಪು ಗುಲಾಬಿ ಕೊಡ್ತಾರಲ್ವಾ?
ಮೋಹನ್ : ಅದಕ್ಕೆ ಕಾರಣ ಇದೆ. ಈಗ ನಮಗೆ ಪ್ರೇಮಕ್ಕಿಂತಲೂ ಶಾಂತಿ ಸೌಹಾರ್ದತೆಯ ಅಗತ್ಯ ಜಾಸ್ತಿ ಇದೆ.
ಅಫಿಶಿಯಲ್ ಟೂರ್ ಎಂದು ಗುಂಡ 15 ದಿನಗಳ ನಂತರ ದೆಹಲಿಯಿಂದ ಮನೆಗೆ ಮರಳಿದ್ದ.
ಗುಂಡ : ನೀನು ಏನೇ ಹೇಳು, ದೆಹಲಿಯಲ್ಲಿ ವಿಪರೀತ ಚಳಿ. ನಮ್ಮ ಬೆಂಗಳೂರು ಹಾಗಲ್ಲ ಬಿಡು.
ರತ್ನಿ : ಅದಿರಲಿ, ನೀವು ಅಲ್ಲಿ ನೆಟ್ಟಿಗಿದ್ದಿರೋ, ಊರು ಸುತ್ತಲು ಹೋಗಿದ್ದಿರೋ….?
ಗುಂಡ : ಏನೇ ಹಾಗಂದ್ರೆ…? ನಾನೆಂಥ ಒಳ್ಳೆ ಗಂಡ ಅಂತ ನಿನಗೆ ಗೊತ್ತಿಲ್ವೇ? ನಾನು ಹೇಳಿದ್ದು ಏನಾದರೂ ಸುಳ್ಳಾಗಿದ್ದರೆ ಈಗಲೇ ನನ್ನ ಪ್ರಾಣ ಹೋಗಲಿ! ಅದಿರಲಿ, ನಾನಿಲ್ಲದಾಗ ನೀನು ನಿನ್ನ ಕಸಿನ್ ಪರಮೇಶಿ ಮನೆಗೆ ಹೋಗಿಲ್ಲ ತಾನೇ?
ರತ್ನಿ : ಅಯ್ಯೋ ನಿಮ್ಮ! ನಾನೆಂಥ ಒಳ್ಳೆಯವಳು ಅಂತ ನಿಮಗೆ ಗೊತ್ತಿಲ್ವಾ? ನಾನು ಸುಳ್ಳಾಡಿದ್ದರೆ ಈಗಲೇ ನನಗೆ ವೈಧವ್ಯ ಪ್ರಾಪ್ತವಾಗಲಿ!
ರಮಾ ತನ್ನ ಕಸಿನ್ ಮದುವೆಗೆಂದು ಬಂದಿದ್ದಳು. ಅವಳ ಗಂಡ ರಮಣ ಸ್ವಲ್ಪ ಹೊತ್ತಾದ ಮೇಲೆ ಅಲ್ಲಿಗೆ ಬಂದ. ಮದುವೆಯ ಕಾರ್ಯಕಲಾಪಗಳು ಭರದಿಂದ ನಡೆಯುತ್ತಿದ್ದವು.
10 ನಿಮಷ ಬಿಟ್ಟು ರಮಾ ನೋಡುತ್ತಾಳೆ, ರಮಣ ನಸುನಗುತ್ತಾ ಯಾರೋ ಹೆಂಗಸಿನೊಡನೆ ಹರಟುತ್ತಿದ್ದ. ಆಗ ಅವಳು ಗಂಡನ ಬಳಿಗೆ ಧಡಬಡಿಸಿ ಬಂದು, ವ್ಯಾನಿಟಿ ಬ್ಯಾಗಿನಿಂದ ಒಂದು ಅಮೃತಾಂಜನದ ಬಾಟಲ್ ತೆಗೆದು ತೋರಿಸುತ್ತಾ, “ಮನೆಗೆ ಹೋದ ತಕ್ಷಣ ನಾನು ಇದನ್ನು ನಿಮ್ಮ ತಲೆಗೆ ತಿಕ್ಕುತ್ತೇನೆ,” ಎಂದಳು.
ರಮಣ : ಆದರೆ…. ನನಗೆ ತಲೆನೋವು ಎಂದು ನಾನು ನಿನಗೆ ಯಾವಾಗ ಹೇಳಿದೆ?
ರಮಾ : ನಾವಿನ್ನೂ ಮನೆಗೆ ಹೋಗಿಲ್ಲವಲ್ಲ….. ಅಲ್ಲಿಗೆ ಹೋದ ಮೇಲೆ ತಾನೇ ನೀವು ಯಾವಳ ಜೊತೆ ಏನೇನು ಹರಟುತ್ತಿದ್ರಿ ಅಂತ ನಾನು ವಿಚಾರಿಸೋದು?
ಭಿಕಾರಿ : ನೋಡಿ ತಾಯಿ, ನಿಮ್ಮ ಅಕ್ಕಪಕ್ಕದ ಮನೆಯವರು ಏನೇನೋ ತಿಂಡಿ ತಿನಿಸು ಕೊಟ್ಟಿದ್ದಾರೆ. ನೀವೇನು ಕೊಡ್ತೀರೋ ನೋಡಿ…..
ಗೃಹಿಣಿ : ಇರಲಿ, ಈ ಹಾಜ್ಮೋಲಾ ಮಾತ್ರೆ ತಗೋ ಅವರೆಲ್ಲ ಕೊಟ್ಟಿದ್ದು ಜೀರ್ಣವಾಗಲು ಇದು ತುಂಬಾ ಸಹಾಯ ಮಾಡುತ್ತದೆ.
ಗುಂಡ : ಹೋ ಪಮ್ಮಿ ಡಿಯರ್…. ಹೇಗಿದ್ದಿ!
ಹುಡುಗಿ : ಹೂ ಆರ್ ಯೂ ಐ ಸೇ….
ಗುಂಡ : ನಾನು ನಿನ್ನ ಪ್ರಿಯತಮ ಡಿಯರ್!
ಹುಡುಗಿ : ನೀನು ಪರಮೇಶಿ ತಾನೇ?
ಗುಂಡ : ಎಸ್, ಆದರೆ ನಿನಗೆ ಹೇಗೆ ಗೊತ್ತಾಯ್ತು?
ಹುಡುಗಿ : ನೀನು ಶಂಕರಪ್ಪನರ ಮಗ ಪರಮೇಶಿ ತಾನೇ?
ಗುಂಡ : ಎಸ್, ಅದೇ ನಿನಗೆ ಹೇಗೆ ಗೊತ್ತಾಯ್ತು, ಅಂತ ಕೇಳಿದೆ ಡಿಯರ್….
ಹುಡುಗಿ : ನೀನು ಸೋಮಪ್ಪನವರ ಮೊಮ್ಮಗ ತಾನೇ….?
ಗುಂಡ : ಎಸ್…ಎಸ್…. ಇದೆಲ್ಲ ನಿನಗೆ ಹೇಗೆ ಗೊತ್ತಾಯ್ತು ಡಿಯರ್?
ಹೆಂಗಸು : ಲೋ ಗುಂಡಾ…. ನಾನು ಕಣೋ ನಿಮ್ಮಮ್ಮ…. ನೀನು ಪಮ್ಮೀಗಲ್ಲ…. ಮಮ್ಮೀಗೆ ಫೋನ್ ಮಾಡಿದ್ದೀಯಾ ಭಂಡಾ!
ಮನೆಗೆ ಬಾ ಕಾಲು ಮುರೀತೀನಿ…..
ಪತ್ನಿ : ಎದುರಿನ ಮರದಲ್ಲಿ ನೋಡ್ರಿ, 2 ಹಕ್ಕಿಗಳು ಎಷ್ಟು ಪ್ರೀತಿಯಿಂದ ಕುಳಿತಿವೆ, ಹಾಯಾಗಿ ಸಂತೋಷದಿ, ನಲಿಯುತ್ತಿವೆ. ನಾವು ಇದ್ದೀವಿ, ಎಲ್ಲದಕ್ಕೂ ಯಾವಾಗಲೂ ಕಿತ್ತಾಡುತ್ತಾ ಇರ್ತೀವಿ!
ಪತಿ : ನೀನು ಅದರಲ್ಲಿ ಒಂದು ಮುಖ್ಯ ವ್ಯತ್ಯಾಸ ಗಮನಿಸಿದೆಯಾ? ಇಲ್ಲಿರುವ ಹಕ್ಕಿಗಳಲ್ಲಿ ಗಂಡು ಮಾತ್ರ ಅದೇ ಇರುತ್ತದೆ, ಹೆಣ್ಣು ಬದಲಾಗುತ್ತಲೇ ಇರುತ್ತದೆ!
ಪ್ರೊಫೆಸರ್ : ಏನ್ರಯ್ಯ… ಸಾಕ್ರಟೀಸ್ ಯಾರು ಗೊತ್ತೇ?
ವಿದ್ಯಾರ್ಥಿಗಳು : ಖಂಡಿತಾ ಇಲ್ಲ ಸಾರ್.
ಪ್ರೊಫೆಸರ್ : ಕಾಲೇಜಿಗೆ ಬಂದು ಯಾವ ಕಾಲವಾಯ್ತು, ಅಷ್ಟಾದರೂ ತಿಳಿದುಕೊಳ್ಳುವುದು ಬೇಡವೇ?
ವಿದ್ಯಾರ್ಥಿಗಳು : ನಿಮಗೆ ರಾಜು, ರಾಹುಲ್, ಮೋಹನ್, ಬಂಟಿ…. ಇವರೆಲ್ಲಾ ಗೊತ್ತಾ?
ಪ್ರೊಫೆಸರ್ : ಇಲ್ಲವಲ್ಲ… ಯಾರಿವರೆಲ್ಲ?
ವಿದ್ಯಾರ್ಥಿಗಳು : ನಿಮ್ಮ ಮಗಳು ವಯಸ್ಸಿಗೆ ಬಂದು ಯಾವ ಕಾಲವಾಯ್ತು? ಅವಳು ಯಾರ ಯಾರ ಜೊತೆ ಸುತ್ತಾಡುತ್ತಿರುತ್ತಾಳೆ ಅನ್ನೋದಾದರೂ ನಿಮಗೆ ತಿಳಿಯುವುದು ಬೇಡವೇ….?
ಪತ್ನಿ : ಮದುವೆಗೆ ಮೊದಲು ನನ್ನ ಫಿಗರ್ ಬಿಲ್ ಕುಲ್ ಕೋಕ್ ಬಾಟಲ್ ತರಹವೇ ಇತ್ತು.
ಪತಿ : ಅದು ಈಗಲೂ ಹಾಗೆಯೇ ಇದೆ. ವ್ಯತ್ಯಾಸ ಅಂದ್ರೆ ಹಿಂದೆ ಅದು 300 ಮಿ.ಲೀ. ಆಗಿತ್ತು, ಈಗ ಒಂದೂವರೆ ಲೀ. ಬಾಟಲಿನದ್ದಾಗಿದೆ!
ಪತಿ : `ಸ’ಯಿಂದ ಎಷ್ಟೊಂದು ಪದಗಳಿವೆ ನೋಡು…. ಸೂರ್ಯೋದಯ, ಸಕಾಲದಿ ಪರಿಣಯ, ಸಪರಿವಾರ ಇತ್ಯಾದಿ.
ಪತ್ನಿ : ಹಾಗೆಯೇ `ಸಂಸಾರ ಶುರುವಾದರೆ ಸರ್ವನಾಶ’ ಅಂತಲೂ ಇದೆ, ನೋಡ್ಕೊಳ್ಳಿ!





