ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯಲ್ಲಿ ಪೆಟ್ರೋಲಿಯಂ ಅನಿಲ (LPG) ಸಾಗಿಸುತ್ತಿದ್ದ ಟ್ಯಾಂಕರ್ ಟೋಲ್ ಪ್ಲಾಜಾಗೆ ಡಿಕ್ಕಿ ಹೊಡೆದು ಸ್ಫೋಟಗೊಂಡ ಪರಿಣಾಮ ಐವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯವು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಜೂನ್ 26 ರಂದು ಬೆಳಗ್ಗೆ 6.40 ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. 24 ಸೆಕೆಂಡ್‌ಗಳ ಸಿಸಿಟಿವಿ ದೃಶ್ಯದಲ್ಲಿ ಎರಡು LPG ಟ್ಯಾಂಕರ್‌ಗಳು ಟೋಲ್ ಪ್ಲಾಜಾಕ್ಕೆ ಬರುತ್ತಿರುವುದು ಕಾಣುತ್ತದೆ. ಅವುಗಳಲ್ಲಿ ಒಂದು ಟ್ಯಾಂಕರ್ ಏಕಾಏಕಿ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ನೇರವಾಗಿ ಟೋಲ್ ಬೂತ್‌ಗೆ ನುಗ್ಗಿದೆ. ಡಿಕ್ಕಿ ಹೊಡೆದ ಪರಿಣಾಮ ಟ್ಯಾಂಕರ್‌ನಲ್ಲಿ ಸಂಗ್ರಹವಾಗಿದ್ದ LPG ಅನಿಲವು ಸೋರಿಕೆಯಾಗಲು ಪ್ರಾರಂಭವಾಗಿದೆ. ಕೆಲವೇ ಕ್ಷಣಗಳಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಬೆಂಕಿಯ ಜ್ವಾಲೆಗಳು ಇಡೀ ಪ್ರದೇಶವನ್ನು ಆವರಿದೆ.

ಸ್ಫೋಟದ ತೀವ್ರತೆಗೆ ಬೆಂಕಿಯ ಜ್ವಾಲೆ ಸುಮಾರು ಎರಡು ಕಿಲೋಮೀಟರ್ ದೂರದಿಂದಲೂ ಕಾಣಿಸುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ದಟ್ಟವಾದ ಹೊಗೆ ಮತ್ತು ಬೆಂಕಿ ಟೋಲ್ ಪ್ಲಾಜಾ ಸಮೀಪದ ವಾತಾವರಣವನ್ನು ಸಂಪೂರ್ಣವಾಗಿ ಕತ್ತಲೆಯನ್ನಾಗಿ ಮಾಡಿತ್ತು. ಸ್ಫೋಟದ ಪ್ರಭಾವದಿಂದಾಗಿ ಟೋಲ್ ಪ್ಲಾಜಾ ಸಮೀಪ ನಿಲ್ಲಿಸಿದ್ದ 16 ಬೈಕ್‌ಗಳು ಮತ್ತು ಎರಡು ಕಾರುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಟೋಲ್ ಬೂತ್‌ಗಳಿಗೆ ಭಾರೀ ಹಾನಿಯಾಗಿದೆ.

ಟ್ಯಾಂಕರ್ ಚಾಲಕ ಧರ್ಮೇಂದ್ರ ದುಬೆ (40) ಮತ್ತು ಟೋಲ್ ಪ್ಲಾಜಾ ಸಿಬ್ಬಂದಿ ಅಲೋಕ್ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇತರ ಮೂವರು ಟೋಲ್ ಸಿಬ್ಬಂದಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಹ ಮೃತಪಟ್ಟಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದು, ಅವರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲೆಯ ಎಲ್ಲಾ ಅಗ್ನಿಶಾಮಕ ದಳದ ವಾಹನಗಳು ತಕ್ಷಣ ಸ್ಥಳಕ್ಕೆ ಧಾವಿಸಿ, ಹಲವಾರು ಗಂಟೆಗಳ ಕಾರ್ಯಾಚರಣೆಯ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಬೆಂಕಿ ಇತರ ಟ್ಯಾಂಕರ್‌ಗಳಿಗೆ ಹರಡುವ ಮುನ್ನ ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.

ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋ ವೈರಲ್ ಆದ ಬಳಿಕ ಜನರು ತೀವ್ರ ಆಘಾತ ವ್ಯಕ್ತಪಡಿಸಿದ್ದು,  ಅನೇಕರು ಸ್ಫೋಟದ ಭೀಕರತೆಯನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ