ಅಪ್ಪಟ ಕನ್ನಡ ಪ್ರತಿಭೆ, ಮಲೆನಾಡಿನ ಮಿಂಚಿನ ಬೆಡಗಿ ಮೇದಿನಿಗೆ ಸ್ಯಾಂಡಲ್ ವುಡ್‌ ನಲ್ಲಿ ಅತ್ಯುತ್ತಮ ಅವಕಾಶಗಳು ದೊರಕುತ್ತಿವೆ. ಇವರ ಪ್ರತಿಭೆಗೆ ತಕ್ಕಂತೆ ಭವಿಷ್ಯದಲ್ಲಿ ಇನ್ನಷ್ಟು ವಿಶೇಷ ಅವಕಾಶಗಳು ಸಿಗಲಿ, ಸಿನಿ ಪ್ರಪಂಚದಲ್ಲಿ ನವತಾರೆಯಾಗಿ ಬೆಳಗಲಿ….!

ಕಳೆದ ವರ್ಷ ತೆರೆಕಂಡ ರಿಯಲ್ ಸ್ಟಾರ್‌ ಉಪೇಂದ್ರ ನಿರ್ದೇಶನದ `ಯುಐ’ ಸಿನಿಮಾ ಪ್ರೇಕ್ಷಕರಿಂದ ಭರಪೂರ ಮೆಚ್ಚುಗೆ ಪಡೆದುಕೊಂಡಿದೆ. ಎಲ್ಲಾ ವಿಭಾಗದಿಂದಲೂ ಗಮನಸೆಳೆದ ಈ ಸಿನಿಮಾದಲ್ಲಿ ವಯಸ್ಸಿಗೂ ಮೀರಿದ ಪಾತ್ರದಲ್ಲಿ ನಟಿ ಮೇದಿನಿ ಕೆಳಮನೆ ಮಿಂಚಿದ್ದರು. ಉಪೇಂದ್ರ ತಾಯಿಯಾಗಿ ಸವಾಲಿನ ಪಾತ್ರವನ್ನು ಸೊಗಸಾಗಿ ನಿಭಾಯಿಸಿ ಸಿನಿರಸಿಕರಿಂದ ಸೈ ಎನಿಸಿಕೊಂಡಿದ್ದರು. ಹಾಗಿದ್ದರೆ ಮೇದಿನಿ ಕೆಳಮನೆ ಯಾರು? ಅವರ ಹಿನ್ನೆಲೆ ಏನು? ನೋಡೋಣ ಬನ್ನಿ :

ಮೇದಿನಿ ನಡೆದು ಬಂದ ದಾರಿ

ಮೂಲತಃ ಹೆಗ್ಗೋಡಿನವರಾದ ಮೇದಿನಿ ಕೆಳಮನೆ ನವದೆಹಲಿಯ ನ್ಯಾಷನಲ್ ಸ್ಕೂಲ್ ‌ಆಫ್‌ ಡ್ರಾಮಾದಿಂದ ಪದವಿ ಪಡೆದಿದ್ದಾರೆ. ಕಲೆ ಮತ್ತು ಸಂಸ್ಕೃತಿಯ ವಾತಾವರಣದಲ್ಲಿ ಬೆಳೆದಿದ್ದರಿಂದ ಬಾಲ್ಯದಿಂದಲೇ ನಾಟಕ, ಸಿನಿಮಾದ ಬಗ್ಗೆ ಆಸಕ್ತಿ ಹೊಂದಿದ್ದರು. ಪದವಿಯ ಅವಧಿಯಲ್ಲಿಯೂ ಹಾಗೂ ನಂತರ, ಅನುರಾಧಾ ಕಪೂರ್‌, ಅಭಿಲಾಷ್‌ ಪಿಳ್ಳೈ ಮತ್ತು ಕುಲಿ ಕೊಜಾಕುಲಿ ಮೊದಲಾದ ಪ್ರಖ್ಯಾತ ನಿರ್ದೇಶಕರು ಮತ್ತು ನಾಟಕಕಾರರೊಂದಿಗೆ ವಿವಿಧ ನಾಟಕಗಳಲ್ಲಿ ಅಭಿನಯಿಸಿದ್ದರು.

ಪದವಿಯ ನಂತರ ದೆಹಲಿ ಹಾಗೂ ಮುಂಬೈನಲ್ಲಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ, ಅವರು ಪ್ರಾಯೋಗಿಕ ನಾಟಕಗಳಲ್ಲಿ, ಕಿರುಚಿತ್ರ, ಟಿವಿ ಜಾಹೀರಾತುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಮೇದಿನಿ, ಕ್ಲಿನಿಕ್‌ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ತಮ್ಮ ಸಹೋದರನೊಂದಿಗೆ `ದಾಳಿ’ ಮತ್ತು `ಮುಕ್ತ’ ಎಂಬ ಎರಡು ಕನ್ನಡ ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. `ದಾಳಿ’ ಕಿರುಚಿತ್ರಕ್ಕೆ 2017ರ ಪ್ರಖ್ಯಾತ ಟೋಟೋ ಪ್ರಶಸ್ತಿಗಳು ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.

ಸಿನಿಮಾ ಜರ್ನಿ ಶುರು ಶೈಲಜಾ ಪಡಿಂದಳ ನಿರ್ದೇಶಿಸಿರುವ `ನಾನು ಲೇಡೀಸ್‌’ ಚಿತ್ರದ ಮೂಲಕ ಅವರು ತಮ್ಮ ಸಿನಿಮಾ ಜರ್ನಿ ಶುರು ಮಾಡಿದರು. ಇದರಲ್ಲಿ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು ಇಬ್ಬರು ಹುಡುಗಿಯರ ನಡುವಿನ ಪ್ರೀತಿಯ ಕಥೆಯನ್ನು ವಿವರಿಸುವ ಕನ್ನಡದ ಮೊದಲ ಲೆಸ್ಬಿಯನ್‌ ಸಿನಿಮಾ!

ನಟೇಶ್‌ ಹೆಗ್ಡೆ ನಿರ್ದೇಶನದ, ರಿಷಬ್ ಶೆಟ್ಟಿ ಫಿಲ್ಮ್ಸ್ ನಿರ್ಮಿಸಿ `ಪೆಡ್ರೊ’ ಎಂಬ ಚಿತ್ರದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲಾಗಿದೆ ಮತ್ತು ವಿಶ್ವದಾದ್ಯಂತ ವಿವಿಧ ಪ್ರಶಸ್ತಿ ಮತ್ತು ಮೆಚ್ಚುಗೆಗಳನ್ನು ಪಡೆದಿದೆ. ಇಷ್ಟೇ ಅಲ್ಲದೆ, ವಿನಯ್‌ ರಾಜ್‌ ಕುಮಾರ್‌ ನಟನೆಯ `ಪೆಪೆ’ ಚಿತ್ರದಲ್ಲಿ ಸಹ ಮೇದಿನಿ ಅಭಿನಯ ಗಮನ ಸೆಳೆಯುವಂತಿತ್ತು.

470938495_18323608117092649_5683043546765494001_n

ಬಾಲಿವುಡ್‌ ನಲ್ಲೂ ಮೋಡಿ

ಕನ್ನಡ ಮಾತ್ರವಲ್ಲ, ಬಾಲಿವುಡ್‌ ಅಂಗಳದಲ್ಲಿಯೂ ಮೇದಿನಿ ಮೋಡಿ ಮಾಡಿದ್ದಾರೆ. ಅನುರಾಗ್‌ ಕಶ್ಯಪ್‌ ನಿರ್ದೇಶಿಸಿರುವ `ದೋಬಾರಾ’ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವ ಮೂಲಕ ಮೇದಿನಿ ಬಾಲಿವುಡ್‌ ಅಂಗಳಕ್ಕೂ ಕಾಲಿಟ್ಟಿದ್ದಾರೆ. ಅವರ ಪ್ರಸ್ತುತ ಹಿಂದಿ ಚಿತ್ರ ಹಂಸ್‌ ಮೆಹ್ತಾ ನಿರ್ದೇಶನದ `ಗಾಂಧಿ ಬಿಪೇರ್‌ ಇಂಡಿಯಾ’ ವೆಬ್‌ ಸೀರೀಸ್‌ ಆಗಿದ್ದು, 2025ರ ಅಂತ್ಯದಲ್ಲಿ ಬಿಡುಗಡೆಗೊಳ್ಳಲಿದೆ. ವಿನಯ್‌ ರಾಜ್‌ ಕುಮಾರ್‌ ಅಭಿನಯ ಮತ್ತು ಶ್ರೀವೇಶ್‌ ಎಸ್‌. ನಾಯರ್‌ ನಿರ್ದೇಶಿಸಿದ `ಪೆಪೆ’ ಸಿನಿಮಾದಲ್ಲಿ ಮೇದಿನಿಯವರ `ಪ್ರಭಾ’ ಪಾತ್ರ ವಿಶೇಷವಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. `ಬಿಟಿಎಸ್‌’ ಎಂಬ ಅಂತೋಲಜಿ ಚಿತ್ರದಲ್ಲಿಯೂ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಉಪೇಂದ್ರ ತಾಯಿಯಾಗಿ ಮೇದಿನಿ ಕಳೆದ ಡಿಸೆಂಬರ್‌ 20ರಂದು ಬಿಡುಗಡೆಯಾದ `ಯುಐ’ ಚಿತ್ರದಲ್ಲೂ ಅವರು ಉಪೇಂದ್ರ ತಾಯಿ ಪಾತ್ರ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಮೇದಿನಿ ಈಗಾಗಲೇ ರೂಢಿಗತವಾಗಿಲ್ಲದ ಪಾತ್ರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಡುವುದರ ಮೂಲಕ ನಟನೆಯಲ್ಲಿ ತಮ್ಮದೇ ಆದ ಮಾರ್ಗವನ್ನು ಕಂಡುಕೊಂಡಿದ್ದಾರೆ. ಅವರು ಅಭಿನಯಿಸುವ ಪಾತ್ರಗಳೆಲ್ಲ ಸಂಕೀರ್ಣವಾಗಿರುತ್ತವೆ. ಅವರು ಪಾತ್ರಗಳ ಆಯ್ಕೆಯಲ್ಲಿ ಯಾವುದೇ ಸಾಮಾಜಿಕ ಕಟ್ಟುಪಾಡುಗಳಿಗೆ ಅಂಟಿಕೊಳ್ಳದೆ, ಆ ಪಾತ್ರ ಪ್ರೇಕ್ಷಕರ ಮೇಲೆ ಬೀರುವ ಪರಿಣಾಮದ ಕಡೆಗೆ ಗಮನವನ್ನು ಕೇಂದ್ರೀಕರಿಸುತ್ತಾರೆ.

470952528_18323608090092649_1793358069132500851_n-(1)

ಯುಐ ಸಿನಿಮಾದಲ್ಲಿನ ಪಾತ್ರ

ಯುಐ ಸಿನಿಮಾದಲ್ಲಿನ ಅವರ ಪಾತ್ರ ಮತ್ತು ಪಾತ್ರ ಚಿತ್ರಣ ಬೇರೆಯದೇ ರೀತಿಯಲ್ಲಿದೆ. ಚಿತ್ರೀಕರಣದ ಸಂದರ್ಭದಲ್ಲಿ ಉಪೇಂದ್ರರವರೇ, `ನಟನೆಯಲ್ಲಿನ ಅವರ ಬದ್ಧತೆ ಮತ್ತು ಕೌಶಲ್ಯವನ್ನು ಗಮನಿಸಿಯೇ ನಾನು ಅವರನ್ನು ಆಯ್ಕೆ ಮಾಡಿದ್ದು,’ ಎಂದು ಉದ್ಗರಿಸಿದ್ದು ಅವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ. ಯುಐನಲ್ಲಿನ ಅವರ ಪಾತ್ರವನ್ನು ಆಳವಾಗಿ ನೋಡುತ್ತಾ ಹೋದಂತೆ ಅದು ಒಂದು ರೂಕಪದಂತೆ ಕಾಣುತ್ತದೆ. ಈ ಸಿನಿಮಾದಲ್ಲಿ ಅವರು ಬೇರೆ ಬೇರೆ ವಯೋಮಾನದಲ್ಲಿ ಹಾಗೂ ಬೇರೆ ಬೇರೆ ಲುಕ್‌ ಗೆಟ್‌ ಅಪ್‌ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಇದು, ತಮಗೆ ನೀಡಲಾದ ಪಾತ್ರವನ್ನು ಸಾಧಿಸಲು ಅವರು ಯಾವ ಮಟ್ಟಕ್ಕೂ ಹೋಗಿ ಅದಕ್ಕೆ ಬೇಕಾದ ಪರಿಶ್ರಮ ಹಾಕುತ್ತಾರೆ ಎಂಬುದನ್ನು ಸಾಬೀತುಪಡಿಸುತ್ತದೆ.

470947172_18323608078092649_413485923674713699_n

ಉಪೇಂದ್ರರ ಕುರಿತು ಮಾತುಗಳು

“ಉಪೇಂದ್ರ ಅವರ `ಯುಐ’ ಸಿನಿಮಾ ಟೀಮ್ ಗೆ ಆಯ್ಕೆ ಆದಾಗ, ಇದು ಹೀರೋ ತಾಯಿ ಪಾತ್ರ ಅಂದಿದ್ದರು. ತಾಯಿಯ ಗ್ಯಾಂಗ್‌ ರೇಪ್‌ ಆಗಿರುತ್ತೆ. ಅದರಿಂದ ಹುಟ್ಟೋನೇ ನಾನು ಅಂತ ಉಪ್ಪಿ ಸರ್‌ ನೇರವಾಗಿಯೇ ಹೇಳಿದ್ದರು. “ಆಮೇಲೆ ಅದನ್ನು ಸಿನಿಮಾದಲ್ಲಿ ಸಾಂಕೇತಿಕವಾಗಿ ತೆಗೆದುಕೊಂಡು ಹೋದರು. ಪ್ರಕೃತಿಯ ಮೇಲೆ ಅವ್ಯಾಹತವಾಗಿ ನಡೆಯುವ ದಾಳಿಯನ್ನು ನನ್ನ ಪಾತ್ರ ಸಂಕೇತಿಸುತ್ತದೆ. ಪ್ರಕೃತಿ ಮಾತೆಯನ್ನು ಮನಸ್ಸಿನಲ್ಲಿಟ್ಟು ಹೆಣೆದ ಪಾತ್ರ ನನ್ನದು ಅಂತ ಆಮೇಲೆ ಗೊತ್ತಾಯ್ತು.

“ಮೊದಲಿನಿಂದಲೂ ನಾನು ಉಪ್ಪಿಯ ದೊಡ್ಡ ಫ್ಯಾನ್‌. `ಯುಐ’ ನನ್ನ ಕನಸು ನನಸಾಗಿಸಿದ ಸಿನಿಮಾ. ಈ ಸಿನಿಮಾದಲ್ಲಿ ನಟಿಸುವಾಗ ಉಪ್ಪಿಯವರಿಗೆ ಪ್ರತಿಯೊಂದು ವಿಚಾರದ ಬಗೆಗೂ ಇದ್ದ ಕ್ಲಾರಿಟಿ ಅಚ್ಚರಿ ಮೂಡಿಸುತ್ತಿತ್ತು. ಅವರಿಗೆ ಅವರದೇ ಸ್ಪೀಡ್ ಇದೆ.

“ಆ ಸ್ಪೀಡ್‌ ಗೆ ಮ್ಯಾಚ್‌ ಮಾಡೋದೇ ಚಾಲೆಂಜಿಂಗ್‌. ಏಕಕಾಲಕ್ಕೆ 500-600 ಜನರನ್ನು ಸಂಭಾಳಿಸುತ್ತಾ, ಬೇರೆ ಬೇರೆ ವಿಭಾಗಗಳಲ್ಲೂ ಕೆಲಸ ಮಾಡುತ್ತಿರುತ್ತಾರೆ. ಸೆಟ್‌ ನಲ್ಲಿ ಜಾದೂ ಮಾಡುವವರಂತೆ ಅವರ ಕೈಚಳಕ ನೋಡೋದೇ ರೋಮಾಂಚನ,” ಎಂದು ಮೇದಿನಿ ಹೇಳುತ್ತಾರೆ.

471516822_18323608036092649_7221626727007400611_n

ಕ್ಯಾಮೆರಾ ಮುಂದೆ ನಿಂತಾಗ

“ನಾನು ಕ್ಯಾಮೆರಾ ಮುಂದೆ ನಿಂತಾಗ, `ನಿಮ್ಮ ಮುಖದಲ್ಲೊಂದು ಆತ್ಮವಿಶ್ವಾಸ ಇದೆ. ಒಂದು ಬಗೆಯ ಹಠಮಾರಿತನದ ಆ್ಯಟಿಟ್ಯೂಡ್‌ ಇದೆ. ಅದನ್ನು ಈ ಪಾತ್ರಕ್ಕೂ ಎಳೆದು ತನ್ನಿ,’ ಅಂದಿದ್ದರು. ಅದೊಂದು ಅನಿರೀಕ್ಷಿತ ರಿಯಾಕ್ಷನ್‌. ನನ್ನನ್ನು ನೋಡಿದ ಒಂದೆರಡು ಸಲದಲ್ಲೇ ಇವರು ನನ್ನ ಈ ಸ್ವಭಾವವನ್ನೇ ಗ್ರಹಿಸಿಬಿಟ್ಟರಲ್ಲಾ ಅನಿಸಿತು.

“ಮತ್ತೆ ನನಗೊಂದು ಭಯ ಇತ್ತು. ಅದೇನೆಂದರೆ `ಯುಐ’ನಲ್ಲಿ ನನ್ನ ಪಾತ್ರ ವಯಸ್ಸಾಗಿರುವ ಥರ ಇದೆ, ಈ ಪಾತ್ರದಿಂದ ನನ್ನ ಕೆರಿಯರ್‌ ಗೆ ಹಿನ್ನೆಡೆ ಆಗಬಹುದಾ ಎನ್ನುವ ಆತಂಕ ನನ್ನಲ್ಲಿತ್ತು.

“ಇದನ್ನೂ ಮೀರಿ ಉಪೇಂದ್ರರ ಜೊತೆಗೆ ನಟನೆ ಮಾಡಲೇ ಬೇಕು ಎನ್ನುವುದಿತ್ತು. ಹೀಗಾಗಿ ಆ ಭಯವನ್ನೆಲ್ಲ ಹಿಂದಕ್ಕೆ ಸರಿಸಿ ನಟಿಸಿದೆ. ಆಮೇಲೆ ನೋಡಿದರೆ ಪಾತ್ರದ ರೀತಿಯೇ ಭಿನ್ನವಾಗಿದೆ. ಜನರೂ ಮೆಚ್ಚುಗೆಯಿಂದ ಈ ಪಾತ್ರವನ್ನು ನೋಡುತ್ತಿದ್ದಾರೆ. ಸದ್ಯ ಆ ಭಯದ ಜಾಗದಲ್ಲಿ ನಿರಾಳತೆ, ಖುಷಿ ಇದೆ,” ಎಂದು ಮೇದಿನಿ ಖುಷಿಯಿಂದ ಹೇಳಿಕೊಳ್ಳುತ್ತಾರೆ.

ಇಂತಹ ಅಪ್ಪಟ ಕನ್ನಡ ಪ್ರತಿಭೆ, ಮಲೆನಾಡಿನ ಬೆಡಗಿ ಮೇದಿನಿಗೆ ಭವಿಷ್ಯದಲ್ಲಿ ಇನ್ನಷ್ಟು ವಿಶೇಷ ಅವಕಾಶಗಳು ಸಿಗಲಿ, ಸಿನಿ ಪ್ರಪಂಚದಲ್ಲಿ ನವತಾರೆಯಾಗಿ ಬೆಳಗಲಿ ಎಂದು ಗೃಹಶೋಭಾ ಹಾರೈಸುತ್ತಾಳೆ.

– ರಾಘವೇಂದ್ರ ಅಡಿಗ ಎಚ್ಚೆನ್‌.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ