ಮದುವೆ ಎಂಬುದು ಕೇವಲ ಗಂಡು ಮತ್ತು ಹೆಣ್ಣುಗಳ ಬಂಧವಲ್ಲ. ಅದು ಎರಡು ಕುಟುಂಬಗಳ ನಡುವಿನ ಸಂಬಂಧದ ಬೆಸುಗೆ. ಕೇವಲ ಕುಟುಂಬ ಏಕೆ ? ಹಿಂದೆಲ್ಲಾ ಅದು ಎರಡು ಊರುಗಳನ್ನು ಒಗ್ಗೂಡಿಸುವ ಇಲ್ಲವೇ ಎರಡು ದೇಶಗಳ ನಡುವಿನ ಶತ್ರುತ್ವವನ್ನು ಬಂಧುತ್ವವನ್ನಾಗಿ ಬೆಸೆಯುವ ಕೊಂಡಿಯಾಗಿತ್ತು. ಮದುವೆಯ ಬಗ್ಗೆ ಇಷ್ಟೆಲ್ಲಾ ಏಕೆ ಪೀಠಿಕೆ ಅಂದ್ರಾ, ಅದು ಏನು ಇಲ್ಲಾ ಕಳೆದ ಎರಡು ಮೂರು ದಿನಗಳಿಂದ ನಮ್ಮ ಕುಟುಂಬದ ಮದುವೆಯ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾಗ ಮದುವೆಯಲ್ಲಿ ಆಗುವ ಕೆಲವೊಂದು ಗಂಭಿರವಾದ ವಿಷಯಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳ ಬೇಕೆನಿಸಿದೆ.

ಮದುವೆಯ ವಯಸ್ಸಿಗೆ ಬಂದ ಹೆಣ್ಣುಮಕ್ಕಳು ಮನೆಯಲ್ಲಿದ್ದರೆ ಹೆತ್ತವರಿಗೆ ಒಂದು ರೀತಿಯ ವಿಶೇಷ ಕಾಳಜಿ ಮತ್ತು ಜವಾಬ್ದಾರಿ. ಮಗಳಿಗೆ ಒಳ್ಳೆಯ ಸಂಬಂಧ ಹುಡುಕಿ ಅವಳಿಗೆ ಮದುವೆ ಮಾಡಿ ಕಳುಹಿಸಿಕೊಟ್ಟರೆ ಸಾಕಪ್ಪ ಎನ್ನುತ್ತಿರುತ್ತಾರೆ. ಅದಕ್ಕಾಗಿ ಅಪ್ಪಾ ಮಗಳು ಹುಟ್ಟಿದಾಗಿನಿಂದಲೂ ಪ್ರತೀ ತಿಂಗಳು ಅಲ್ಪ ಸ್ವಲ್ಪ ಹಣವನ್ನು ಜೋಪಾನವಾಗಿ ಮಗಳ ಮದುವೆಗೆಂದೇ ಉಳಿತಾಯ ಮಾಡುತ್ತಿದ್ದರೆ, ತಾಯಿ ಅಲ್ಪ ಸ್ವಲ್ಪವೇ ಉಳಿಸಿ, ಚಿನ್ನದ ಅಂಗಡಿಯಲ್ಲಿ ಚೀಟಿ-ಗೀಟಿ ಹಾಕಿ ಮಗಳ ಮದುವೆಗೆಂದು ಚಿನ್ನಾಭರಣ ಮತ್ತು ಬೆಳ್ಳಿ ಸಾಮಾನುಗಳನ್ನು ತೆಗೆದು ಇಡುತ್ತಾಳೆ. ಹಾಗೆಯೇ, ಸಂಕ್ರಾಂತಿಗೋ ಇಲ್ಲವೇ ಯುಗಾದಿ ಅಥವಾ ಗೌರಿ ಹಬ್ಬಕ್ಕೆ ಪ್ರಿಯದರ್ಶಿನಿ ಇಲ್ಲವೇ ಮೈಸೂರು ಸಿಲ್ಕ್ ನವರು ರಿಯಾಯಿತಿ ದರದಲ್ಲಿ ರೇಶ್ಮೆ ಸೀರೆಯ ಮಾರಾಟವಿದ್ದಲ್ಲಿ, ಮಗಳ ಮದುವೆಗೆ ಬೇಕಿದ್ದ ಸೀರೆಗಳನ್ನು ಎತ್ತಿ ತೆಗೆದಿಡುತ್ತಾಳೆ. ಇನ್ನು ಒಳ್ಳೆಯ ಸಂಬಂಧ ಗೊತ್ತಾದ ಮೇಲಂತೂ ಹುಡುಗಾ ಹುಡುಗಿ ಪಾರ್ಕು, ಸಿನಿಮಾ, ಹೋಟೆಲ್, ಕಾಫೀ ಬಾರ್ ಅಂತಾ ಸುತ್ತಾಡ್ತಾ , ಮೊಬೈಲ್ನಲ್ಲಿ ಗಂಟೆ ಗಟ್ಟಲೆ ಮಾತನಾಡುತ್ತಾ , ವ್ಯಾಟ್ಯಾಪ್, ಇಸ್ಟಾಗ್ರಾಂ ಚಾಟ್ ಮಾಡ್ತಾ ಇದ್ರೇ, ಅಪ್ಪಾ- ಅಮ್ಮಾ ಮದುವೆಗೆ ಖರ್ಚಿಗೆ ಹಣವನ್ನು ಹೊಂಚುತ್ತಾ, ಛತ್ರದವರಿಗೆ, ಅಡುಗೆಯವರಿಗೆ, ಪುರೋಹಿತರಿಗೆ ಮುಂಗಡ ಕೊಟ್ಟು ಪ್ರಿಂಟಿಂಗ್ ಪ್ರೆಸ್ಗೆ ಹೋಗಿ ಆಹ್ವಾನ ಪತ್ರ ಅಚ್ಚು ಹಾಕಿಸುವುದರಲ್ಲಿ ನಿರತರಾಗಿತ್ತಾರೆ.

wedding1

ಪುರೋಹಿತರು ಎಂದು ಹೇಳಿದಾಗ ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ನನ್ನ ಚಿಕ್ಕ ತಂಗಿಯ ಮದುವೆ ಮಾಡಿದ ಸಂದರ್ಭ ಜ್ಞಾಪಕಕ್ಕೆ ಬರ್ತಾ ಇದೆ. ಮದುವೆ ಬೆಂಗಳೂರಿನಲ್ಲಿದ್ದರೂ ಕುಲಪುರೋಹಿತರೆಂದು ಊರಿನ ಪುರೋಹಿತರಿಗೆ ನಾಲ್ಕು ತಿಂಗಳ ಮುಂಚೆಯೇ ವಿಷಯ ತಿಳಿಸಿ ಅವರಂದಲೇ ಲಗ್ನ ಹಾಕಿಸಿಕೊಂಡು ಛತ್ರಕ್ಕೆ ಮುಂಗಡ ಕೊಟ್ಟ ಕೂಡಲೇ ಅವರಿಗೂ ತಿಳಿಸಿ, ಒಂದು ತಿಂಗಳ ಮುಂಚೆಯೇ ಖುದ್ದಾಗಿ ಮುಖತಃ ಭೇಟಿಯಾಗಿ ಅವರಿಗೆ ಆಹ್ವಾನ ಪತ್ರ ಕೊಟ್ಟು, ಮದುವೆಯ ಹಿಂದಿನ ದಿನವೇ ನಾಂದಿಯಿಂದ ಹಿಡಿದು, ವರಪೂಜೆ, ಮಾರನೇ ದಿನ ಧಾರೆ, ನಾಗೋಲಿ ಮತ್ತು ಮೂರನೆಯ ದಿನ ಸತ್ಯನಾರಾಯಣ ಪೂಜೆಗೂ ಅವರಿಗೇ ಒಪ್ಪಿಸಲಾಗಿತ್ತು. ಇಂದಿನ ಹಾಗೆ ಅಂದೆಲ್ಲಾ ಫೋನ್ ಅಥವಾ ಮೊಬೈಲ್ ಇಲ್ಲದಿದ್ದರಿಂದ ಎಲ್ಲವೂ ಅಂಚೆ ಕಾಗದ ಮೂಲಕವೇ ವ್ಯವಹಾರವಾಗಿತ್ತು. ಮದುವೆ ಹಿಂದಿನ ದಿನ ಬೆಳಿಗ್ಗೆ ನಾವೆಲ್ಲರೂ ಛತ್ರಕ್ಕೆ ಹೋಗಿ ಸಾಮಾನು ಸರಂಜಾಮುಗಳನ್ನೆಲ್ಲಾ ಇಳಿಸಿ, ನಮ್ಮ ದೊಡ್ಡಪ್ಪನ ಮಗ ಅಣ್ಣನನ್ನು ಬಸ್ ಸ್ಟಾಂಡಿನಿಂದ ಪುರೋಹಿತರನ್ನು ಕರೆತರಲು ಕಳುಹಿಸಿದ್ದೆವು. ಅಡಿಗೆಯವರು ಬಂದು ತಮ್ಮ ಕೆಲಸ ಆರಂಭಿಸಿ ಎಲ್ಲರಿಗೂ ಕಾಫಿ, ತಿಂಡಿ ಮಾಡಿ ಕೊಟ್ಟರೂ ಪುರೋಹಿತರ ಆಗಮನವಾಗಲೇ ಇಲ್ಲ, ಗಂಟೆ, ಒಂಭತ್ತಾಗಿ, ಹತ್ತಾದರೂ ಪುರೋಹಿತರು ಮತ್ತು ಅವರನ್ನು ಕರೆ ತರಲು ಹೋಗಿದ್ದ ನಮ್ಮ ಅಣ್ಣನ ಸುದ್ದಿಯೇ ಇಲ್ಲವಾದಾಗ ನಮ್ಮ ಎಲ್ಲರಲ್ಲೂ ಆತಂಕವಾದಾಗ, ನಮ್ಮ ಮಾವನ ಮಗ ತನಗೆ ಹತ್ತಿರದಲ್ಲೇ ಪರಿಚಯವಿದ್ದ ದೇವಸ್ಥಾನದ ಅರ್ಚಕರ ಬಳಿ ವಿಚಾರಿಸಿದಾಗ, ಅವರು ನನಗೆ ಮದುವೆ ಪೂರ್ತಿ ಮಾಡಿಸಲು ಬರುವುದಿಲ್ಲ. ಬೇಕಾದರೆ ನಾಂದಿ ಮಾಡಿಸಿ ಕೊಡುತ್ತೇನೆ ಎಂದಾಗ, ಸರಿ ಈಗ ನಾಂದಿ ಮಾಡಿಸಿ ಕೊಡಿ ಮಧ್ಯಾಹ್ನದ ಹೊತ್ತಿಗೆ ನಮ್ಮ ಶಾಸ್ತ್ರಿಗಳು ಬಂದು ಬಿಡಬಹುದು ಎಂದು ಅವರನ್ನು ಕರೆತಂದು ಅವರಿಂದ ನಾಂದಿ ಶಾಸ್ತ್ರ ಮಾಡಿಸಿ, ಮುತ್ತೈದೆಯರಿಗೆ ಹೂವಿಳ್ಯ ಮುಗಿಸಿ ಊಟಕ್ಕೆ ಅಣಿಯಾಗುವ ಹೊತ್ತಿಗೆ ಶಾಸ್ತ್ರಿಗಳನ್ನು ಕರೆತರಲು ಹೋಗಿದ್ದ ಅಣ್ಣ ಬರಿಗೈಯ್ಯಲ್ಲಿ ಬಂದಾಗ , ಇನ್ನು ಕಾಯ್ದು ಪ್ರಯೋಜನವಿಲ್ಲ ಎಂದು ನಿರ್ಧರಿದ ನಮ್ಮ ತಂದೆಯವರು, ಬೇಗನೆ ಊಟದ ಶಾಸ್ತ್ರ ಮುಗಿಸಿ, ನಾನು ಮತ್ತು ನಮ್ಮ ತಂದೆಯವರು ನಮಗೆ ಪರಿಚಯವಿದ್ದ ಒಬ್ಬಬ್ಬರೇ ಪುರೋಹಿತರನ್ನು ಭೇಟಿ ಮಾಡಿದಾಗ ಬಹುತೇಕ ಎಲ್ಲರೂ ಒಂದಲ್ಲಾ ಒಂದು ಕಾರ್ಯಕ್ರಮ ಒಪ್ಪಿಕೊಂಡಿದ್ದರು. ಕಡೆಯ ಪ್ರಯತ್ನವೆಂಬಂತೆ ಹತ್ತಿರದ ಗಣೇಶ ದೇವಸ್ಥಾನದ ಪುರೋಹಿತರ ಮನೆಗೆ ಹೋಗಿ ಅವರನ್ನು ವಿಚಾರಿಸಿದಾಗ, ಅಯ್ಯೋ ರಾಮಾ, ಎಂಥಾ ಕೆಲಸವಾಯಿತು. ಒಂದೆರಡು ದಿನ ಮುಂಚೆ ಹೇಳಿದ್ದರೆ, ದೇವಸ್ಥಾನದ ಪೂಜೆಗೆ ಯಾರನ್ನಾದರೂ ಅಣಿಮಾಡಿ ಬರುತ್ತಿದ್ದೆ. ಈಗ ಹೇಳಿದರೆ ಆಗುವುದಿಲ್ಲವಲ್ಲಾ ಎಂದಾಗ, ಸರಿ ಬೇರೆಯವರನ್ನು ಹುಡುಕೋಣ ಎಂದು ಅವರ ಮನೆಯಿಂದ ಹೊರಗೆ ಬರುತ್ತಿದ್ದಾಗ, ಅವರ ಮಗ ಗೋಪಾಲ, ತನ್ನ ಕೆಲಸ ಮುಗಿಸಿಕೊಂಡು ಮನಗೆ ಬರುತ್ತಿದ್ದ. ನನ್ನನ್ನು ನೋಡಿದ ಕೂಡಲೇ ಓ ಶ್ರೀಕಂಠಾ, ಚೆನ್ನಾಗಿದ್ದೀಯಾ? ಏನು ಸಮಾಚಾರ ಇಷ್ಟು ದೂರ ಬಂದ್ದೀದ್ದೀಯಾ ಎಂದ? ಅವನಿಗೆ ನಡೆದದ್ದೆಲ್ಲವನ್ನೂ ವಿವರಿಸಿ, ದೇವಸ್ಥಾನದ ಪೂಜೆ ಮಾಡಲು ಯಾರೂ ಇಲ್ಲದ ಕಾರಣ ನಿಮ್ಮ ತಂದೆಯವರೂ ಕೂಡಾ ಬರಲು ಒಪ್ಪಿಕೊಳ್ಳಲಿಲ್ಲ ಎಂದೆ. ಅಷ್ಟೇ ತಾನೇ, ನಾನು ಇಲ್ವಾ, ಬನ್ನಿ ಒಳಗೆ ಎಂದು ಕರೆದು, ಅಪ್ಪಾ, ನೀವು ಅವರ ಮನೆಯ ಮದುವೆ ಖಂಡಿತವಾಗಿಯೂ ಮಾಡಿಸಿಕೊಡಲೇ ಬೇಕು. ನಾನು ದೇವಸ್ಥಾನದ ಪೂಜೆ ಮಾಡುತ್ತೇನೆ ಎಂದ. ಆದಕ್ಕೆ ಅವರ ತಂದೆ ಅಲ್ಲಾ ಮಗು ನಿನಗೆ ಕೆಲಸ ಇದೆಯಲ್ಲವೇ ಎಂದಾಗ, ಮದುವೆಯ ಹುಡುಗಿ ಲಕ್ಷ್ಮೀ, ನನ್ನ ಸಹಪಾಠಿ, ಶ್ರೀಕಂಠ ಮತ್ತು ಅವನ ಇನ್ನೊಬ್ಬ ತಂಗಿ ನಮ್ಮ ಅಕ್ಕಂದಿರ ಸಹಪಾಠಿಗಳು ಹಾಗಾಗಿ ಒಬ್ಬ ಸ್ನೇಹಿತನಾಗಿ ಅವರ ಕಷ್ಟಕ್ಕೆ ಆಗುವುದು ನಮ್ಮ ಧರ್ಮ. ನೀವು ಮದುವೆ ಮಾಡಿಸಿಕೊಡಿ ನಾನು ರಜಾ ಹಾಕಿ ದೇವಸ್ಥಾನ ನೋಡಿ ಕೊಳ್ಳುತ್ತೇನೆ ಎಂದಾಗ, ಸರಿಯಪ್ಪಾ. ನನ್ನ ಮಗ ಹೇಳಿದ ಮೇಲೆ ನಾನು ಬರ್ತೀನಿ. ಆದರೆ ನನಗೆ ಓಡಾಲು ಆಗದ ಕಾರಣ ನೀವೇ ಬಂದು ಕರೆದು ಕೊಂಡು ಹೋಗಿ, ಕರೆದು ಕೊಂಡು ಬಿಡಬೇಕು ಎಂದಾಗ, ನಮ್ಮ ತಂದೆಯವರ ಕಣ್ಣಿನಲ್ಲಿ ಆನಂದ ಭಾಷ್ಪ ಉಕ್ಕಿ ಹರಿಯುತ್ತಿತ್ತು. ಅವರನ್ನು ಸಮಾಧಾನ ಪಡಿಸಿ, ಸರಿ ಶಾಸ್ತ್ರಿಗಳೇ, ಆ ಜವಾಬ್ಧಾರಿ ನನಗೆ ಬಿಡಿ. ನಾನು ನಿಮಗೆ ವಾಹನದ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿ. ಗೋಪಾಲನ ಎರಡೂ ಕೈಗಳನ್ನು ಹಿಡಿದು, ಗೋಪಾಲ ನಿನ್ನಿಂದ ಬಾರೀ ಉಪಕಾರವಾಯಿತು. ನಿನ್ನ ಈ ಉಪಕಾರವನ್ನು ನಮ್ಮ ಜೀವಮಾನ ಇರುವ ತನಕ ಮರೆಯುವುದಿಲ್ಲ ಎಂದು ಹೇಳಿದೆ. ಶಾಸ್ತ್ರಿಗಳು ವರಪೂಜೆ ಮತ್ತು ಮದುವೆಯ ಶಾಸ್ತ್ರವನ್ನು ಸಾಂಗೋಪಾಂಗವಾಗಿ ಯಾವುದೇ ಲೋಪವಿಲ್ಲದೆ ನಡೆಸಿಕೊಟ್ಟ ನಂತರ, ಅವರಿಗೆ ಸಂಭಾವನೆ ಎಷ್ಟು ಕೊಡಬೇಕು ಎಂದು ಕೇಳಿದಾಗ, ನೀವು ನಮ್ಮ ಸ್ನೇಹಿತರು ನಿಮ್ಮ ಮನಸ್ಸಿಗೆ ಸಂತೋಷವಾದಷ್ಟು ಕೊಡಿ ಎಂದಾಗ ನಮ್ಮ ತಂದೆಯವರು, ಸಮಯಕ್ಕೆ ಸರಿಯಾಗಿ ಶಾಸ್ತ್ರೋಕ್ತವಾಗಿ ಮದುವೆ ಶಾಸ್ತ್ರ ಮುಗಿಸಿಕೊಟ್ಟು ನಮ್ಮ ಮಾನ ಕಾಪಾಡಿದ ಶಾಸ್ತ್ರಿಗಳಿಗೆ ಉತ್ತಮ ಸಂಭಾವನೆಯ ಜೊತೆಗೆ, ಅವರ ಮಗ ಗೋಪಾಲನಿಗೂ ಒಳ್ಳೆಯ ಶರ್ಟ್ ಪೀಸ್ ಕಾಣಿಕೆ ಕೊಟ್ಟಿದ್ದು ಇನ್ನೂ ನನ್ನ ಮನಸ್ಸಿನಲ್ಲಿ ಹಚ್ಚ ಹಸುರಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ