ತನ್ನ ಸಂಬಂಧಗಳನ್ನು ತನ್ನ ಇಚ್ಛೆಯಂತೆ ನಿರ್ವಹಿಸುವ ಸ್ವಾತಂತ್ರ್ಯ ಎಲ್ಲಾ ಹೆಣ್ಣುಮಕ್ಕಳಿಗೂ ಇದೆಯೇ....?
ಇಂದು ನಾವು 21ನೇ ಶತಮಾನದಲ್ಲಿ ಬದುಕುತ್ತಿದ್ದೇವೆ. ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಮಹಿಳೆಯರು ಗಣನೀಯ ಸಾಧನೆಗಳನ್ನು ಮಾಡುತ್ತಿದ್ದಾರೆ. `ಹೆಣ್ಣು ಅಬಲೆಯಲ್ಲ, ಸಬಲೆ' ಎಂಬ ಮಾತು ಇಂದು ಸಾಮಾನ್ಯವಾಗಿ ಕೇಳಿಬರುತ್ತಿದೆ. ಆದರೂ, ಮಹಿಳೆಯರ ಮೇಲಿನ ಶೋಷಣೆ, ದೌರ್ಜನ್ಯ, ಮಾನಸಿಕ ಹಿಂಸೆ ಹಾಗೂ ಅವರ ಸ್ವಾತಂತ್ರ್ಯದ ಮೇಲಿನ ನಿಯಂತ್ರಣಗಳು ಸಂಪೂರ್ಣವಾಗಿ ಕೊನೆಗೊಂಡಿಲ್ಲ ಎಂಬುದು ವಾಸ್ತವ.
ಮಹಿಳೆಯರ ಸ್ವಾತಂತ್ರ್ಯದ ಬಗ್ಗೆ ಮಾತನಾಡುವಾಗ, ನಾವು ಹೆಚ್ಚಾಗಿ ಶಿಕ್ಷಣ, ಉದ್ಯೋಗ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಮಾತ್ರ ಪರಿಗಣಿಸುತ್ತೇವೆ. ಆದರೆ ಒಬ್ಬ ಮಹಿಳೆಗೆ ನಿಜವಾದ ಸ್ವಾತಂತ್ರ್ಯ ದೊರೆತಿದೆಯೇ ಎಂಬುದನ್ನು ಅಳೆಯಲು ಇವುಗಳಷ್ಟೇ ಸಾಕಾಗುವುದಿಲ್ಲ. ತನ್ನ ಬದುಕಿನ ನಿರ್ಧಾರಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳುವ ಹಕ್ಕು, ತನ್ನ ಭಾವನೆಗಳಿಗೆ ಬೆಲೆ ದೊರೆಯುವುದು ಹಾಗೂ ತನ್ನ ಸಂಬಂಧಗಳನ್ನು ತನ್ನ ಇಚ್ಛೆಯಂತೆ ನಿರ್ವಹಿಸುವ ಅವಕಾಶ ಸ್ವಾತಂತ್ರ್ಯದ ಪ್ರಮುಖ ಭಾಗಗಳಾಗಿವೆ.

ಮನೆಯೊಳಗೆ ಮಹಿಳೆಯ ಸ್ವಾತಂತ್ರ್ಯ : ಇಂದಿಗೂ ಅನೇಕ ಮಹಿಳೆಯರು ಮನೆಯಲ್ಲಿಯೇ ಉಳಿದು ಕುಟುಂಬದ ಒಳಿತಿಗಾಗಿ ತಮ್ಮ ಜೀವನವನ್ನು ಮೀಸಲಿಡುತ್ತಾರೆ. ಮನೆ, ಮಕ್ಕಳು, ಹಿರಿಯರು ಹಾಗೂ ಕುಟುಂಬದ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ತಮ್ಮ ವೈಯಕ್ತಿಕ ಆಸೆ ಆಕಾಂಕ್ಷೆಗಳನ್ನು ಬದಿಗಿಡುತ್ತಾರೆ. ಸೇರಿದ ಮನೆಯ ಪದ್ಧತಿ, ಸಂಪ್ರದಾಯ ಮತ್ತು ರೀತಿ ರಿವಾಜುಗಳಿಗೆ ಹೊಂದಿಕೊಳ್ಳುವ ಪ್ರಕ್ರಿಯೆಯಲ್ಲಿ ಕೆಲವೊಮ್ಮೆ ತಮ್ಮದೇ ಆದ ವ್ಯಕ್ತಿತ್ವವನ್ನು ಮರೆತು ಬದುಕುವ ಪರಿಸ್ಥಿತಿಯೂ ಎದುರಾಗುತ್ತದೆ.
ಹಾಗೆಂದ ಮಾತ್ರಕ್ಕೆ ಯಾವ ಮಹಿಳೆಗೂ ಸ್ವಾತಂತ್ರ್ಯವೇ ಇಲ್ಲ ಎಂದು ಹೇಳಲಾಗುವುದಿಲ್ಲ. ಕೆಲವರಿಗೆ ತಮ್ಮ ಬದುಕಿನಲ್ಲಿ ನಿರ್ಧಾರ ತೆಗೆದುಕೊಳ್ಳುವ ಅವಕಾಶವಿರುತ್ತದೆ. ಕೆಲವರು ತಮ್ಮ ಹಕ್ಕುಗಳನ್ನು ಸ್ವತಃ ಗಳಿಸಿಕೊಂಡಿರುತ್ತಾರೆ. ಆದರೆ ಕುಟುಂಬದ ಪ್ರಮುಖ ಸಂಬಂಧಗಳು ಮತ್ತು ಜವಾಬ್ದಾರಿಗಳ ವಿಚಾರಕ್ಕೆ ಬಂದಾಗ ಅವರ ಸ್ವಾತಂತ್ರ್ಯ ಎಷ್ಟರಮಟ್ಟಿಗೆ ಉಳಿಯುತ್ತದೆ ಎಂಬ ಪ್ರಶ್ನೆ ಮುಖ್ಯವಾಗುತ್ತದೆ.
ಆರ್ಥಿಕ ಸ್ವಾವಲಂಬನೆ ಮಾತ್ರ ಸಾಕೇ? : ಇಂದು ಅನೇಕ ಮಹಿಳೆಯರು ಮನೆಯ ಒಳಗೂ ಹೊರಗೂ ದುಡಿಯುತ್ತಿದ್ದಾರೆ, ಉದ್ಯೋಗ ಮಾಡುತ್ತಿದ್ದಾರೆ. ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ. ಕೆಲವರು ಕುಟುಂಬದ ಪ್ರಮುಖ ಆದಾಯದ ಮೂಲವಾಗಿದ್ದಾರೆ. ಮನೆ ಮತ್ತು ಉದ್ಯೋಗ ಎರಡನ್ನೂ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಆದರೂ ಆರ್ಥಿಕವಾಗಿ ಬಲಿಷ್ಠಳಾದ ಮಹಿಳೆಯೂ ತನ್ನ ಇಚ್ಛೆಯಂತೆ ಜೀವನ ನಡೆಸಲು ಸಾಧ್ಯವಾಗದೆ ಇರುವ ಸಂದರ್ಭಗಳಿವೆ.
ಎಷ್ಟೇ ಸಂಪಾದನೆ ಮಾಡಿದರೂ, ಎಷ್ಟೇ ಸಮರ್ಥಳಾಗಿದ್ದರೂ, ತನ್ನ ತಾಯಿ ತಂದೆ ಅಥವಾ ತನ್ನವರಿಗಾಗಿ ಬೇಕಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ ಆ ಸ್ವಾತಂತ್ರ್ಯ ಪೂರ್ಣ ಎನಿಸಬಹುದೇ?
ಮದುವೆಯಾದ ನಂತರ ಹೆಣ್ಣು ಗಂಡನ ಮನೆಗೆ ಸೇರಿದಳು, ಅವಳ ಜವಾಬ್ದಾರಿ ಮತ್ತು ಸಂಬಂಧಗಳು ಮುಖ್ಯವಾಗಿ ಗಂಡನ ಮನೆಯವರಿಗೆ ಮಾತ್ರ ಸೀಮಿತ ಎಂಬ ಮನೋಭಾವ ಸಮಾಜದಲ್ಲಿ ಇನ್ನೂ ಸಂಪೂರ್ಣವಾಗಿ ಮಾಯವಾಗಿಲ್ಲ. ಇದು ಸಂಪ್ರದಾಯದ ಹೆಸರಿನಲ್ಲಿ ಮುಂದುವರಿಯುತ್ತಿರುವ ನಿಯಂತ್ರಣವೇ ಅಥವಾ ಸಂಬಂಧಗಳ ಮೇಲಿನ ಸ್ವಾಮಿತ್ವದ ಭಾವನೋವು ಎಂಬುದನ್ನು ಸಮಾಜವೇ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.





