Sj*
ಕನ್ನಡ ಡಿಜಿಟಲ್ ಮನರಂಜನಾ ಲೋಕದಲ್ಲಿ ಇದೇ ಮೊದಲ ಬಾರಿಗೆ ಲಾಂಗ್ ಫಾರ್ಮ್ ಮಾದರಿಯ ರೋಮ್ಯಾಂಟಿಕ್ ಡ್ರಾಮಾ ವೆಬ್ ಸರಣಿಯೊಂದು ಸಿದ್ಧವಾಗಿದ್ದು, 'ಕಾರ್ಪೊರೇಟ್ ಲವ್ ಸ್ಟೋರಿ' ಇದೇ ನವೆಂಬರ್ 27ರಿಂದ Zee5 ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗಲಿದೆ. ಬೆಂಗಳೂರಿನ ಸ್ಟಾರ್ಟ್‌ಅಪ್ ಸಂಸ್ಕೃತಿ ಹಾಗೂ ಕಾರ್ಪೊರೇಟ್ ಜಗತ್ತಿನ ಹಿನ್ನೆಲೆಯಲ್ಲಿ ಹೆಣೆಯಲಾಗಿರುವ ಈ ಸರಣಿಯನ್ನು ಪನ್ನಗ ಭರಣ ನಿರ್ದೇಶಿಸಿದ್ದಾರೆ.
ಡೇಟಿಂಗ್ ಆ್ಯಪ್ ಸ್ಟಾರ್ಟ್‌ಅಪ್ ಒಂದರಲ್ಲಿ ಕೆಲಸ ಮಾಡುವ ಇಬ್ಬರು ಸಹೋದ್ಯೋಗಿಗಳು ತಮ್ಮ ವೃತ್ತಿಜೀವನದ ಮಹತ್ವಾಕಾಂಕ್ಷೆ, ಕೌಟುಂಬಿಕ ಒತ್ತಡ ಮತ್ತು ಪ್ರೀತಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದೇ ಈ ಕಥೆಯ ಜೀವಾಳವಾಗಿದೆ. ಒಟ್ಟು 30 ಎಪಿಸೋಡ್‌ಗಳನ್ನು ಹೊಂದಿರುವ ಈ ಸರಣಿಯಲ್ಲಿ ಪ್ರಿಯಾಂಕಾ ಉಪೇಂದ್ರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರಣವ್ ಶ್ರೀಧರ್ ಮತ್ತು ಸಿತಾರಾ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಪ್ರತಿ ಶುಕ್ರವಾರ ಐದು ಹೊಸ ಸಂಚಿಕೆಗಳು ಪ್ರಸಾರವಾಗಲಿವೆ.

ಸರಣಿಯ ಕುರಿತು ಮಾತನಾಡಿದ ನಿರ್ಮಾಪಕಿ ರಾಜಶ್ರೀ ಪೊನ್ನಪ್ಪ , "ಮಾಧ್ಯಮ ಮಿತ್ರರು ಪ್ರೀತಿಯಿಂದ ನನ್ನನ್ನು 'ಫಿಲ್ಮಿ' ಎನ್ನುತ್ತಿದ್ದ ಕಾರಣಕ್ಕಾಗಿಯೇ ನನ್ನ ಸಂಸ್ಥೆಗೆ 'ಫಿಲ್ಮಿ ಫೆಲೋ ಸ್ಟುಡಿಯೋಸ್' ಎಂದು ಹೆಸರಿಟ್ಟಿದ್ದೇನೆ. ಇಂದು ಎಲ್ಲರೂ ಕೊರಿಯನ್ ಡ್ರಾಮಾಗಳನ್ನು (K-Drama) ಇಷ್ಟಪಡುತ್ತಾರೆ. ಕನ್ನಡದಲ್ಲೂ ಅಂತಹದ್ದೇ ಒಂದು ಹೊಸ ಫಾರ್ಮ್ಯಾಟ್ ತರಬೇಕು ಎಂಬ ಆರ್‌ಜೆ ಪ್ರದೀಪ್ ಅವರ ಕನಸಿಗೆ ನನ್ನ ಸ್ನೇಹಿತರಾದ ಪನ್ನಗ ಭರಣ, ದಿಗಂತ್ ಸೇರಿದಂತೆ ಅನೇಕರು ಬೆಂಬಲವಾಗಿ ನಿಂತರು. ಎಮ್ಮಿ ನಾಮನಿರ್ದೇಶನಗೊಂಡಿರುವ ಅಧೀರ್ ಭಟ್ ಈ ಸರಣಿಗೆ ಕಥೆ ಬರೆದಿದ್ದು, ಬಾಲಿವುಡ್‌ನಲ್ಲಿ ಕೆಲಸ ಮಾಡಿರುವ ಚೈತನ್ಯ ಕುಂಭಕೋಣಂ ಕೂಡ ಕೈಜೋಡಿಸಿದ್ದಾರೆ. Zee5 ತಂಡದ ಹಗಲು-ರಾತ್ರಿ ಶ್ರಮ ಮತ್ತು ಪ್ರಿಯಾಂಕಾ ಉಪೇಂದ್ರ ಅವರ ಸಹಕಾರದಿಂದ ಕನ್ನಡದಲ್ಲಿ ಇಂತಹದೊಂದು ವಿನೂತನ ಪ್ರಯತ್ನ ಸಾಧ್ಯವಾಗಿದೆ" ಎಂದು ಹರ್ಷ ವ್ಯಕ್ತಪಡಿಸಿದರು.
ನಿರ್ದೇಶಕ ಪನ್ನಗ ಭರಣ ಮಾತನಾಡಿ, "ನಾನು ಮಾರಿಷಸ್‌ನಲ್ಲಿ ಚಿತ್ರೀಕರಣದಲ್ಲಿದ್ದಾಗ ಈ ಪ್ರಾಜೆಕ್ಟ್‌ಗಾಗಿ ಕರೆ ಬಂತು. ವೇದಿಕೆ ಥಿಯೇಟರ್ ಆಗಿರಲಿ, ಟಿವಿ ಅಥವಾ ಮೊಬೈಲ್ ಆಗಿರಲಿ, ಕಥೆಯನ್ನು ದೃಶ್ಯರೂಪದಲ್ಲಿ ಪರಿಣಾಮಕಾರಿಯಾಗಿ ಹೇಳುವುದೇ ಮುಖ್ಯ. ಕನ್ನಡದಲ್ಲಿ ಹೊಸ ಫಾರ್ಮ್ಯಾಟ್‌ಗಳು ಏಕೆ ಬರುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರವಾಗಿ ನಾವು ಈ ಮೊದಲ ಹೆಜ್ಜೆ ಇಟ್ಟಿದ್ದೇವೆ. ಸಿನಿಮಾ ಶೈಲಿಯಲ್ಲೇ ಕಡಿಮೆ ಅವಧಿಯಲ್ಲಿ 30 ಎಪಿಸೋಡ್‌ಗಳನ್ನು ಚಿತ್ರೀಕರಿಸುವುದು ಸವಾಲಾಗಿತ್ತು. Zee5 ತಂಡ ಹಾಗೂ ನನ್ನ ನಿರ್ದೇಶನ ತಂಡದ ಬೆಂಬಲದಿಂದ ಇದು ಅಚ್ಚುಕಟ್ಟಾಗಿ ಮೂಡಿಬಂದಿದೆ. ಕೊರಿಯನ್ ಸರಣಿಗಳನ್ನು ನೋಡುವ ಪ್ರೇಕ್ಷಕರಿಗೆ ಈಗ ಕನ್ನಡದಲ್ಲೇ ಒಂದು ಮುದ್ದಾದ ಪ್ರೇಮಕಥೆಯನ್ನು ನೀಡುತ್ತಿದ್ದೇವೆ" ಎಂದರು.
ನಾಯಕ ನಟ ಪ್ರಣವ್ ಶ್ರೀಧರ್ ತಮ್ಮ ಪಾತ್ರದ ಬಗ್ಗೆ ವಿವರಿಸುತ್ತಾ, "ಒಟಿಟಿ ತೆರೆದಾಗಲೆಲ್ಲಾ ಕನ್ನಡ ಕಲಾವಿದರಿಗೆ ಇಂತಹ ವೆಬ್ ಸರಣಿಗಳು ಏಕಿಲ್ಲ ಎನಿಸುತ್ತಿತ್ತು. ಆ ಕನಸು ಈಗ ನನಸಾಗಿದೆ. ಇಲ್ಲಿ ನಾನು ಪಾಂಡವಪುರದ ರೈತನ ಮಗ 'ಅರ್ಜುನ್' ಪಾತ್ರ ಮಾಡಿದ್ದೇನೆ. ಬೆಂಗಳೂರಿನಲ್ಲಿ ಏನಾದರೂ ಸಾಧಿಸಬೇಕೆಂದು ಕಾರ್ಪೊರೇಟ್ ಕಂಪನಿಗೆ ಸೇರುವ ಆತನ ಜೀವನದಲ್ಲಿ 'ನಿತ್ಯಾ' ಬಂದಾಗ ಏನಾಗುತ್ತದೆ ಎಂಬುದೇ ಕಥೆ. ಪ್ರಿಯಾಂಕಾ ಉಪೇಂದ್ರ ಅವರು ಬಾಸ್ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದು, ಪನ್ನಗ ಸರ್ ರೊಮ್ಯಾಂಟಿಕ್ ದೃಶ್ಯಗಳನ್ನು ಬಹಳ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ" ಎಂದರು.





