ಮನೆಗೆ ಅನಿರೀಕ್ಷಿತ ಅತಿಥಿಗಳು ಅಪರೂಪಕ್ಕೆ ಬಂದಾಗ, ಅವರಿಗೆ ಸಿಂಪಲ್ ಸ್ನಾಕ್ಸ್ ಬದಲಿಗೆ, ಇಂಥ ಟೇಸ್ಟಿ ಟೇಸ್ಟಿ ಸ್ನಾಕ್ಸ್ ಇರಲಿ! ಚೀಸ್, ಬ್ರೆಡ್, ಅಣಬೆಗಳ ಈ ಸ್ನಾಕ್ಸ್ ಟ್ರೈ ಮಾಡಿ ನೋಡಿ!
ಚೀಸ್ ಚಿಲೀ ಟೋಸ್ಟ್

ಸಾಮಗ್ರಿ : 5-6 ಬ್ರೆಡ್ ಸ್ಲೈಸ್, ಒಂದಿಷ್ಟು ತುರಿದ ಮೋಜರೆಲಾ ಚೀಸ್, ಹೆಚ್ಚಿದ ಕ್ಯಾಪ್ಸಿಕಂ, ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಬೆಣ್ಣೆ.
ವಿಧಾನ : ಒಂದು ಬೇಸನ್ನಿಗೆ ಚೀಸ್ ಹರಡಿಕೊಳ್ಳಿ. ನಂತರ ಇದಕ್ಕೆ ಕ್ಯಾಪ್ಸಿಕಂ, ಹಸಿಮೆಣಸು ಸೇರಿಸಿ. ಆಮೇಲೆ ಉಪ್ಪು, 2 ಬಗೆ ಖಾರ ಸೇರಿಸಿ. ಇವನ್ನೆಲ್ಲ ಒಟ್ಟಾಗಿ ಚೆನ್ನಾಗಿ ಕಲಸಿಕೊಳ್ಳಿ. ಇದೀಗ ಚೀಸ್ ಚಿಲೀ ಮಿಶ್ರಣ ರೆಡಿ! ಇದನ್ನು ಸ್ವಲ್ಪ ಹೊತ್ತು ಹಾಗೇ ಮುಚ್ಚಿಡಿ. ಒಂದು ತವಾ ಬಿಸಿ ಮಾಡಿ, ಅದಕ್ಕೆ ತುಸು ಬೆಣ್ಣೆ ಹಾಕಿಡಿ. ಇದಕ್ಕೆ ಬ್ರೆಡ್ ಸ್ಲೈಸ್ ಹಾಕಿ, ಒಂದು ಬದಿ ಗರಿಗರಿ ಟೋಸ್ಟ್ ಮಾಡಿ. ಇದನ್ನು ತಿರುವಿ ಹಾಕಿ ಇನ್ನೊಂದು ಬದಿಗೂ ಬೆಣ್ಣೆ ಸವರಿಡಿ. ಇದರ ಮೇಲೆ ಒಂದು ಪದರ ಚೀಸ್ ಚಿಲೀ ಮಿಶ್ರಣ ಹರಡಿಕೊಳ್ಳಿ. ಅದು ಪೂರ್ತಿ ಕವರ್ ಮಾಡುವಂತಿರಲಿ. ಚೀಸ್ ಕರಗುವವರೆಗೂ ಇದನ್ನು ಬಿಸಿ ಮಾಡಿ. ಇದೀಗ ಗರಿಗರಿ ಟೋಸ್ಟ್ ರೆಡಿ ಆಯ್ತು. ಇದನ್ನು ಕೆಳಗಿಳಿಸಿ ತ್ರಿಕೋನಾಕಾರವಾಗಿ ಕತ್ತರಿಸಿ. ಇದನ್ನು ಟೊಮೇಟೊ ಸಾಸ್ ಜೊತೆ ಬಿಸಿ ಬಿಸಿಯಾಗಿ ಸವಿಯಲು ಕೊಡಿ.
ಚೀಸ್, ಬಟರ್, ಗಾರ್ಲಿಕ್ ಫ್ಲೇವರ್ ನ ಬ್ರೆಡ್ ರುಚಿ ಟ್ರೈ ಮಾಡಿ, ಸವಿದು ನೋಡಿ!
ಗಾರ್ಲಿಕ್ ಬ್ರೆಡ್ ವಿತ್ ಚೀಸ್
ಸಾಮಗ್ರಿ : 5-6 ಬ್ರೆಡ್ ಸ್ಲೈಸ್, 1 ಕಪ್ ಗಟ್ಟಿ ಹಾಲು, ಹೆಚ್ಚಿದ ತುಸು ಕ್ಯಾಪ್ಸಿಕಂ, ಹೂಕೋಸು, ಈರುಳ್ಳಿ (ಒಟ್ಟಾರೆ 1 ಬಟ್ಟಲು), 4 ಚಮಚ ಗೋಧಿಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಓರಿಗ್ಯಾನೋ, ಚಿಲೀ ಫ್ಲೇಕ್ಸ್, ಬೆಳ್ಳುಳ್ಳಿ ಪೇಸ್ಟ್, ಅಗತ್ಯಕ್ಕೆ ತಕ್ಕಷ್ಟು ರೀಫೈಂಡ್ ಎಣ್ಣೆ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು.
ವಿಧಾನ : ಮೊದಲು ಬಾಣಲೆಯಲ್ಲಿ ತುಸು ಬೆಣ್ಣೆ ಬಿಸಿ ಮಾಡಿ, ಇದಕ್ಕೆ ಗೋಧಿಹಿಟ್ಟು ಹಾಕಿ ಘಮ್ಮೆನ್ನುವಂತೆ ಹುರಿಯಿರಿ. ನಂತರ ಇದಕ್ಕೆ ಹಾಲು ಬೆರೆಸಿ, ಮಂದ ಉರಿಯಲ್ಲಿ ಕೆದಕಬೇಕು. ಗಂಟಾಗದಂತೆ ನೋಡಿಕೊಳ್ಳಿ. ನಂತರ ಇದಕ್ಕೆ ಒಂದೊಂದಾಗಿ ಹೆಚ್ಚಿದ ತರಕಾರಿ ಹಾಕಿ ಬಾಡಿಸಬೇಕು. ನಂತರ ಇದಕ್ಕೆ ಉಪ್ಪು, ಮೆಣಸು, ಹಾಕಿ ಮತ್ತಷ್ಟು ಬಾಡಿಸಿ. ಇದೀಗ ಬ್ರೆಡ್ ಗೆ ಬೇಕಾದ ಪೇಸ್ಟ್ ರೆಡಿ ಆಯ್ತು. ನಂತರ ಬ್ರೆಡ್ ಗೆ ಬೆಣ್ಣೆ ಸವರಿಕೊಂಡು, ಅದರ ಮೇಲೆ ಬೆಳ್ಳುಳ್ಳಿ ಪೇಸ್ಟ್ ಸವರಬೇಕು. ಇದರ ಮೇಲೆ ಒಂದು ಪದರ ತರಕಾರಿ ಮಿಶ್ರಣ ಬರಲಿ. ಆಮೇಲೆ ಚಿಲೀ ಫ್ಲೇಕ್ಸ್, ಮೆಣಸು, ಓರಿಗ್ಯಾನೋ ಉದುರಿಸಿ. ಕೊನೆಯಲ್ಲಿ ಇದರ ಮೇಲೆ ತುರಿದ ಚೀಸ್ ಉದುರಿಸಿ. ಈ ತರಹ ಎಲ್ಲಾ ಬ್ರೆಡ್ ಸ್ಲೈಸ್ ರೆಡಿ ಮಾಡಿ. ನಂತರ ತವಾ ಮೇಲೆ ತುಸು ಬೆಣ್ಣೆ ಬಿಸಿ ಮಾಡಿ, ಈ ಸ್ಲೈಸ್ ಗಳನ್ನು ಮತ್ತೆ ಬಿಸಿ ಮಾಡಿ. ಚೀಸ್ ಕರಗಿದಂತೆ, ಇದನ್ನು ಬಿಸಿಯಾಗಿ ಕಾಫೀ/ಟೀ ಜೊತೆ ಸವಿಯಲು ಕೊಡಿ.





