ಹೆಂಗಸರ ಲೈಂಗಿಕ ಬಯಕೆಗಳ ಕುರಿತಾಗಿ ಪರಂಪರಾಗತ ರೂಢಿವಾದಿ ಆಲೋಚನೆಗಳನ್ನು ಹಿಂದಿಕ್ಕಲು, ಹೆಂಗಸರಲ್ಲಿ ಮುಕ್ತ ಮಾತುಕಥೆ ಅತ್ಯಗತ್ಯ ಅಲ್ಲವೇ......?
ಲೈಂಗಿಕ ಬಯಕೆ ಪ್ರತಿ ವ್ಯಕ್ತಿಯ ಸಹಜ, ಸ್ವಾಭಾವಿಕ, ಮೌಲಿಕ ಅಗತ್ಯವಾಗಿದೆ, ಅದು ಗಂಡು ಯಾ ಹೆಣ್ಣು ಯಾರೇ ಆಗಿರಬಹುದು. ಆದರೆ ನಮ್ಮ ಸಮಾಜದಲ್ಲಿ ಹೆಂಗಸರ ಲೈಂಗಿಕ ಬಯಕೆಗಳನ್ನು ಅನಾದಿ ಕಾಲದಿಂದಲೇ ಕಡೆಗಾಣಿಸಲಾಗಿದೆ. ಈ ವಿಷಯ ಎಷ್ಟು ವರ್ಜಿತ ಎಂದರೆ, ಬಹುತೇಕ ಕುಟುಂಬಗಳಲ್ಲಿ ಈಗಿನ ಆಧುನಿಕ ಕಾಲದಲ್ಲೂ ಸಹ, ಯಾರೂ ಮುಕ್ತವಾಗಿ ಈ ಬಗ್ಗೆ ಮಾತನಾಡಲು ಮುಂದೆ ಬರುವುದಿಲ್ಲ.
ಇಂದಿನ ಆಧುನಿಕ ಕಾಲದಲ್ಲೂ ಇದೆಂಥ ಕಂದಾಚಾರ?
ಹೆಂಗಸರ ಲೈಂಗಿಕ ಬಯಕೆಗಳ ಕುರಿತಾಗಿ ಸಹಜವಾಗಿ ಏಕೆ ಸ್ವೀಕರಿಸಬಾರದು? ಅದನ್ನು ಕೇವಲ ತಿಳಿದುಕೊಳ್ಳುವುದಷ್ಟೇ ಅಲ್ಲ, ಈ ಕುರಿತಾಗಿ ಹೆಂಗಸರು ತಮ್ಮ ತಮ್ಮಲ್ಲೇ ಮುಕ್ತವಾಗಿ ಚರ್ಚಿಸಬೇಕಾದ ಅಗತ್ಯವಿದೆ. ಇಂಥ ಮುಕ್ತ ಮಾತುಕಥೆಗಳಿಂದ ಮಾತ್ರ ಪ್ರತ್ಯೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಅಂದರೆ ಹೆಂಗಸರು ಈ ಮೂಲಕ ತಮ್ಮ ಸಂಗಾತಿ, ಕುಟುಂಬದ ಇತರ ಮಹಿಳೆಯರು, ಗೆಳತಿಯರ ಜೊತೆ ಈ ಬಗ್ಗೆ ನಿಸ್ಸಂಕೋಚವಾಗಿ ಚರ್ಚಿಸಿ, ಆ ವಿಷಯದಲ್ಲಿ ತಮಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಮುಕ್ತ ಮಾತುಕಥೆ ಏಕೆ ಅವಶ್ಯಕ? : ನಮ್ಮ ಸಮಾಜದಲ್ಲಿ ಇಂಥ ಯಾವುದೇ ಸಮಸ್ಯೆಯ ಬಗ್ಗೆ, ಆ ಕುರಿತು ಮಾಹಿತಿ ತಿಳಿದುಕೊಳ್ಳಬೇಕೆಂದರೆ, ಅದು ಲೈಂಗಿಕತೆಗೆ ಸಂಬಂಧಪಟ್ಟಿರುವುದರಿಂದ ಇನ್ನಷ್ಟು ಕ್ಲಿಷ್ಟಕರ ಕಗ್ಗಂಟಾಗುತ್ತದೆ. ಹೆಂಗಸರ ಈ ಲೈಂಗಿಕ ಬಯಕೆಗಳ ಕುರಿತಾಗಿ ಪರಂಪರಾಗತ ರೂಢಿವಾಡಿ ಆಲೋಚನೆಗಳನ್ನು ಹಿಂದಿಕ್ಕಲು, ಅನಾದಿ ಕಾಲದ ಕಂದಾಚಾರ ತೊರೆದು, ವೈಜ್ಞಾನಿಕ ನಿಲುವಿನಿಂದ ಗೆಳತಿಯರು, ಸಮಯಸ್ಕರ ನಡುವೆ ಮುಕ್ತ ಮಾತುಕಥೆ ಹಂಚಿಕೊಳ್ಳುವುದೇ ಸರಿ.
ಗೆಳತಿಯರೊಂದಿಗೆ ಮಾತುಕಥೆಯ ಅಗತ್ಯ : ಸಾಮಾನ್ಯವಾಗಿ ಮೈ ನೆರೆದ ಹೆಣ್ಣುಮಕ್ಕಳಿಗೆ, ಗಂಡಸರೆಂದರೆ ಅತಿ ಜೋಪಾನವಾಗಿರಬೇಕು, ಅವರೊಂದಿಗೆ ಸಲುಗೆ ಬೇಡವೇ ಬೇಡ ಎಂಬುದಷ್ಟೇ ಸಲಹೆಗಳನ್ನು ಕುಟುಂಬದ ಹಿರಿಯ ಹೆಂಗಸರು, ತರುಣಿಯರಿಗೆ ಹೇಳಿ ಸುಮ್ಮನಾಗಿಬಿಡುತ್ತಾರೆ. ಇಂದಿನ ಅತ್ಯಾಧುನಿಕ ಕಾಲದಲ್ಲಿ ಇಷ್ಟೆಲ್ಲ ಎಕ್ಸ್ ಪೋಶರ್ ಇರುವ ಹೆಣ್ಣುಮಕ್ಕಳಿಗೆ, ಲೈಂಗಿಕ ಬಯಕೆಗಳ ಕುರಿತಾಗಿ ಹಂಚಿಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಮನೆಯ ಹಿರಿಯ, ಸಮವಯಸ್ಕ ಹೆಂಗಸರ ಬಳಿ ಇದನ್ನು ಚರ್ಚಿಸಲು ಆಗದಿದ್ದ ಮೇಲೆ, ಮನವರಿಯುವ ಸಹಪಾಠಿ, ಗೆಳತಿಯರ ಬಳಿ ಇದನ್ನು ಚರ್ಚಿಸಿ ತಿಳಿಯಬಹುದಲ್ಲವೇ?
ಈ ಬಗ್ಗೆ ಮಾತನಾಡುವುದೇ ಒಂದು ಅಪರಾಧ, ಇದೆಲ್ಲ ಪೋಲಿ ಮಾತು, ಹಾಗೆ ನಡೆದುಕೊಳ್ಳುವುದು ಕುಸಂಸ್ಕಾರ ಎಂಬುದಷ್ಟೇ ನಮ್ಮ ತರುಣಿಯರಿಗೆ ಗೊತ್ತು. ಇದರ ಬದಲು ಗೆಳತಿಯರಿಂದ ಸ್ವಸ್ಥ ಲೈಂಗಿಕ ತಿಳಿವಳಿಕೆ ಪಡೆಯುವುದು ಎಷ್ಟೋ ಮೇಲು. ಹಾಗಾಗಿ ಅವರೊಂದಿಗೆ ಮುಕ್ತ ಮಾತುಕಥೆ ಅನಿವಾರ್ಯ.
ಸಮಾಜದ ದೃಷ್ಟಿಕೋನ ಬದಲಾಗಬೇಕಾದುದು ಅನಿವಾರ್ಯ : ನಮ್ಮ ಸಮಾಜ ಈ ಆಧುನಿಕ ಕಾಲದಲ್ಲಾದರೂ ಮಡಿವಂತಿಕೆ, ಕಂದಾಚಾರ ತೊರೆಯುವುದು ಲೇಸು. ಹೆಂಗಸರ ಲೈಂಗಿಕ ಬಯಕೆ ಸಹಜ, ನೈಸರ್ಗಿಕವಾದುದು. ಹೀಗಾಗಿ ಹೆಣ್ಣುಮಕ್ಕಳಿಗೆ ಪ್ರೌಢಶಾಲಾ ಮಟ್ಟದಿಂದಲೇ (ಈ ಹೊತ್ತಿಗೆ ಖಂಡಿತಾ ಅವರು ಪುಷ್ಪವತಿಯರಾಗಿ ಅದರ ಸಾಧಕ/ಬಾಧಕ, ಸಮಸ್ಯೆಗಳ ಬಗ್ಗೆ ಅರಿತಿರುತ್ತಾರೆ). ತಜ್ಞರಿಂದ ಸೂಕ್ತ ಲೈಂಗಿಕ ಶಿಕ್ಷಣ ಕೊಡಿಸಬೇಕಾದುದು ಅನಿವಾರ್ಯ. ಸಿನಿಮಾ, ಟಿವಿ ಧಾರಾವಾಹಿಗಳಲ್ಲಿ ಈ ವಿಷಯವನ್ನು ಅಶ್ಲೀಲವಾಗಿ ಪ್ರದರ್ಶಿಸು ಬದಲು, ಒಂದು ಸಹಜ ಸ್ವಾಭಾವಿಕ ಅಗತ್ಯದ ರೂಪದಲ್ಲಿ ತೋರಿಸಬೇಕು. ಗಂಡುಹೆಣ್ಣು ಇಬ್ಬರಿಗೂ ಸಮಾನ ರೂಪದಲ್ಲಿ ಈ ವಿಷಯದಲ್ಲಿ ಶಿಕ್ಷಣ ನೀಡಬೇಕಾಗಿದೆ.





