ಹಬ್ಬದ ಸಂದರ್ಭಗಳಲ್ಲಿ ಆಫ್‌ ಲೈನ್‌ ಶಾಪಿಂಗ್‌ ಮಾಡಲು ನೆರವಾಗುವ ಈ ಸಲಹೆಗಳು ನಿಮಗೆ ಎಷ್ಟೋ ಹಿತ ನೀಡುತ್ತವೆ!

ಹಬ್ಬಗಳ ಸೀಸನ್‌ ನಲ್ಲಿ ಪ್ರತಿ ಮನೆಯಲ್ಲೂ ಶಾಪಿಂಗ್‌ ನ ಸಡಗರ ಸಂಭ್ರಮ ಹೆಚ್ಚಿರುತ್ತದೆ. ಯುಗಾದಿ, ಗೌರಿಗಣೇಶ, ದಸರಾ, ದೀಪಾವಳಿ ಸಂದರ್ಭಗಳಲ್ಲಿ ತಮ್ಮ ಮನೆಗೆ ಮಾತ್ರವಲ್ಲದೆ, ಹಬ್ಬಕ್ಕೆ ಬರುವ ಅತಿಥಿಗಳಿಗಾಗಿಯೂ ಹಲವಾರು ಗಿಫ್ಟ್ ಕೊಳ್ಳುವ ಪದ್ಧತಿ ಇದ್ದೇ ಇದೆ. ಅದು ಗಿಫ್ಟ್, ಹೊಸ ಬಟ್ಟೆ, ಪಾತ್ರೆಪಡಗ, ಜ್ಯೂವೆಲರಿ ಇತ್ಯಾದಿ ಏನೇ ಕೊಳ್ಳುವುದಿದ್ದರೂ ನಾವು ಈಗ ಸುಲಭವಾಗಿ ಆಫ್‌ ಲೈನ್‌ ಶಾಪಿಂಗ್‌ ಮಾಡಬಹುದಾಗಿದೆ. ಅಂದಹಾಗೆ ಹೊರಗೆ ಹೋಗಿ, ನಗರವೆಲ್ಲ ಸುತ್ತಾಡಿ, ಬೇಕಾದ್ದನ್ನು ಆರಿಸಿ ನೋಡಿ, ಚೌಕಾಸಿ ಮಾಡಿ ಖರೀದಿಸಿದರೆ, ಅದೇ ಚೆಂದ ಎನಿಸುತ್ತದೆ. ಆದರೆ ಈಗ ಕಾಲ ಬದಲಾಗಿದೆ, ಹೀಗಾಗಿ ಆನ್‌ ಲೈನ್‌ ಶಾಪಿಂಗ್‌ ಮಾಮೂಲಿ ಆಗಿಹೋಗಿದೆ.

ಆದರೂ ಒಮ್ಮೊಮ್ಮೆ ಚೇಂಜ್‌ ಗಾಗಿ ಆಫ್‌ ಲೈನ್‌ ಶಾಪಿಂಗಾಗಿ ಹೊರಗೆ ಸುತ್ತಾಡುವುದರಲ್ಲಿ ಮಜಾ ಇದೆ ಎನ್ನುವುದರಲ್ಲಿ ಸಂದೇಹವಿಲ್ಲ. ಹಿಂದೆಲ್ಲ 80-90ರ ದಶಕದಲ್ಲಿ ಈ ರೀತಿ ಹೊರಗಿನ ಶಾಪಿಂಗ್‌ ಎಲ್ಲರಿಗೂ ಬಹಳ ಖುಷಿ ನೀಡುತ್ತಿತ್ತು. ಜೊತೆಗೆ ಹೊರಗಿನ ಊಟತಿಂಡಿಯ ಮಜಾ ಸಹ! ಎಷ್ಟೋ ಸಲ ನೆಂಟರು ಯಾವ ಫ್ರೆಂಡ್ಸ್ ಜೊತೆ ಹೀಗೆ ಆಫ್‌ ಲೈನ್‌ ಶಾಪಿಂಗ್‌ ಎಂದು ಸುತ್ತಾಡಿದ್ದುಂಟು. ಅದನ್ನೆಲ್ಲ ಈಗ ಮತ್ತೊಮ್ಮೆ ಮಾಡೋಣ ಅನಿಸುತ್ತದೆ, ಅಲ್ಲವೇ? ಎಷ್ಟೋ ಸಲ ಇಂಥ ಶಾಪಿಂಗ್‌ ಅಗ್ಗ ಸಹ ಹೌದು. ಒಮ್ಮೊಮ್ಮೆ ಅಗ್ಗದ ಆಸೆಗೆ ಮುಗ್ಗಲು ಮಾಲು ಕೊಂಡು ಏಮಾರುವುದೂ ಉಂಟು. ಅಂಥದ್ದನ್ನು ಕಸಿನ್ಸ್ ಜೊತೆ ಹಂಚಿಕೊಳ್ಳುವುದರಲ್ಲಿನ ಆನಂದವೇ ಬೇರೆ!

ಲೋಕಲ್ ಮಾರ್ಕೆಟ್‌ ವಾತಾರಣ :  ಲೋಕಲ್ ಮಾರ್ಕೆಟ್‌ ನಲ್ಲಿ ಶಾಪಿಂಗ್‌ ಮಾಡುವ ಅನುಭವವೇ ರೋಚಕ! ಇಲ್ಲಿ ಇಂತಿಂಥ ಬ್ರಾಂಡ್‌ ನದ್ದೇ ಮಾಲು ಸಿಗುತ್ತದೆ ಎಂದೇನಿಲ್ಲ. ಆದರೆ ಇಲ್ಲಿ ಸಿಗುವ ಮಾಲು ಬಲು ವೆರೈಟಿಯದು. ಇದರ ರೇಟ್‌ ದೊಡ್ಡ ದೊಡ್ಡ ಅಂಗಡಿಗಳಲ್ಲಿ ಖಂಡಿತಾ ಸಿಗದು. ಇಲ್ಲಿ ನೀವು ಪ್ಲಾನ್‌ ಮಾಡಿಕೊಳ್ಳದೆ ಒಂದು ವಸ್ತು ಕೊಳ್ಳಲು ಹೋಗಿ 4-5 ವಸ್ತು ಹಿಡಿದು ಬರುತ್ತೀರಿ. ಹೀಗಾಗಿ ದೊಡ್ಡ ದೊಡ್ಡ ಹೈಫೈ ಅಂಗಡಿ ಬದಲು, ಲೋಕಲ್ ಬಜಾರಿನಿಂದಲೇ ಕೊಂಡುಕೊಳ್ಳಬಹುದು. ಇಲ್ಲಿ ಸಿಕ್ಕಾಪಟ್ಟೆ ಚೌಕಾಸಿ ನಡೆಯುತ್ತದೆ ಎಂಬುದಂತೂ ನಿಜ. ಅದರಲ್ಲೂ ವಿಶೇಷವಾಗಿ ಹ್ಯಾಂಡ್‌ ಮೇಡ್‌ಪಾರಂಪರಿಕ ಸಾಮಗ್ರಿ ಕೊಳ್ಳಲು ಲೋಕಲ್ ಮಾರ್ಕೆಟ್‌ ಎಲ್ಲಕ್ಕಿಂತ ಉತ್ತಮ.

ಚೌಕಾಸಿಯ ಮಜಾ : ಎಲ್ಲಿಯವರೆಗೂ ನಾವು ಇಂಥ ಲೋಕಲ್ ಮಾರ್ಕೆಟ್‌ ಗೆ ಹೋಗಿ, ಅವರು ಹೇಳಿದ ರೇಟಿಗಿಂತ ಎಷ್ಟೋ ಪಟ್ಟು ಕಡಿಮೆ ಕೊಟ್ಟು ಕೊಂಡರೆ ಮಾತ್ರ ನಮಗೆ ನೆಮ್ಮದಿ! ಇಲ್ಲದಿದ್ದರೆ ಶಾಪಿಂಗ್‌ ನ ಮಜಾ ಹಾಳಾದೀತು. ಯಾಕೆ ಹೀಗೆ ಮಾಡುವುದು? ನಮ್ಮ ಫ್ರೆಂಡ್ಸ್ ಮಧ್ಯೆ ಆಗ ಹೆಮ್ಮೆಯಿಂದ ಹೇಳಿಕೊಳ್ಳಬಹುದು, `ನೋಡು, ಇದೇ ಡ್ರೆಸ್‌ ಗೆ ನೀನು 800/ ಕೊಟ್ಟಿದ್ದರೆ ನಾನು ಕೇವಲ 650/ ಕ್ಕೆ ತೆಗೆದುಕೊಂಡಿದ್ದೇನೆ!’ ಅಂತ. ನೀವು ಕೇಳಿದ ರೇಟಿಗೆ ಅವರು ಕೊಸರಾಡಿ ಕೊನೆಗೂ ಒಪ್ಪಿಕೊಂಡು ಕೊಟ್ಟರೆ, ಅದಕ್ಕಿಂತ ಮಿಗಿಲಾದ ಆನಂದವಿಲ್ಲ. ಆದರೆ ಆನ್‌ ಲೈನ್‌ ಶಾಪಿಂಗ್‌ ನಲ್ಲಿ ಈ ಮಜಾ ಎಲ್ಲಿಂದ ಬಂದೀತು? ಇರಲಿ, ಎರಡೂ ಬಗೆಯ ಶಾಪಿಂಗ್‌ ನಮಗೆ ಅತ್ಯಗತ್ಯ ಎಂಬುದಂತೂ ನಿಜ.

ಕ್ಲಿಯರೆನ್ಸ್ ಸೇಲ್ ‌: ಗಮನವಿರಲಿ! : ಹಬ್ಬಗಳ ಸಂದರ್ಭಗಳಲ್ಲಿ ತಮ್ಮ ಮಾಲು ಖರ್ಚಾಗಲಿ ಎಂದು ಹಲವಾರು ಅಂಗಡಿಗಳು ಸ್ಟಾಕ್‌ ಕ್ಲಿಯರೆನ್ಸ್ ಸೇಲ್ ‌ಗೆ ಮುಂದಾಗುತ್ತವೆ. ಈ ಸಂದರ್ಭದ ಲಾಭ ಪಡೆದು ನೀವು, ಉತ್ತಮ ಗುಣಮಟ್ಟದ ವಸ್ತುಗಳನ್ನು ಅಗ್ಗವಾಗಿ ಗಿಟ್ಟಿಸಬಹುದು. ಈ ರೀತಿ ಮಾಡುವುದರಿಂದ ಶಾಪಿಂಗ್‌ ನಲ್ಲಿ ನಿಮಗೆ ಹೆಚ್ಚಿನ ಲಾಭ ಸಿಗುತ್ತದೆ. ಈ ಸಂದರ್ಭದಲ್ಲಿ ಅಂಗಡಿಯವನು ತನ್ನ ಓಲ್ಡ್ ಸ್ಟಾಕ್‌ ಕ್ಲಿಯರ್‌ ಮಾಡಿಕೊಳ್ಳಲು, ಉತ್ತಮ ಡಿಸ್‌ ಕೌಂಟ್‌ ನೀಡಲು ಸಿದ್ಧನಾಗುತ್ತಾನೆ. ಹೀಗಾಗಿ ಎಷ್ಟೋ ಅಗ್ಗದಲ್ಲಿ ನಿಮಗೆ ಉತ್ತಮ ಗುಣಮಟ್ಟದ ವಸ್ತು ಸಿಗುತ್ತದೆ. ಅಂಗಡಿಯವನಿಗೆ ಅದು ಓಲ್ಡ್ ಸ್ಟಾಕ್‌, ನಿಮಗಂತೂ ಅದು ಹೊಸ ಡ್ರೆಸ್‌ ತಾನೇ?

ಫ್ರೆಂಡ್ಸ್ ಜೊತೆ ಔಟಿಂಗ್‌ ಹೊರಡಲು ಒಂದು ನೆಪ : ಶಾಪಿಂಗ್‌ ಎಂದರೆ ಕೇವಲ ಒಂದಷ್ಟು ಸಾಮಗ್ರಿ ಕೊಂಡು ತರುವುದಷ್ಟೇ ಅಲ್ಲ, ಫ್ರೆಂಡ್ಸ್ ಜೊತೆ ಮಜವಾಗಿ ಟೈಂಪಾಸ್‌ ಮಾಡುವುದೂ ಕೂಡ! ಇದಕ್ಕೆ ಶಾಪಿಂಗ್‌ ಒಂದು ನೆಪವಷ್ಟೆ. ಫ್ರೆಂಡ್ಸ್ ಜೊತೆ ಔಟಿಂಗ್ ಅಂದ್ರೆ ಎಂಥ ವಯಸ್ಸಿನವರಿಗಾದರೂ ಇಷ್ಟವೇ! ಇದರಿಂದಾಗಿ ಶಾಪಿಂಗ್‌ ಜೊತೆ ಜೊತೆಗೆ ಫ್ರೆಂಡ್ಸ್ ಬಳಿ ಟ್ರೀಟ್‌ ಕೇಳುವ ಸದವಕಾಶ ಸಿಗುತ್ತದೆ. ಜೊತೆಗೆ ಇಡೀ ಬಜಾರಿನ ಬೀದಿ ಬೀದಿ ಸುತ್ತಾಡುವುದರ ಆನಂದ ಪಡೆಯಬಹುದು.

ಫ್ರೆಂಡ್ಸ್ ಜೊತೆ ಶಾಪಿಂಗ್‌ ನಲ್ಲಿ ಹೋಲ್ ಸೇಲ್ ರೇಟ್‌ ಗೆ ಕೊಳ್ಳಲು ಮರೆಯದಿರಿ : ಬೆಂಗಳೂರು, ಮೈಸೂರು ಯಾವ ಊರೇ ಇರಲಿ, ಆಯಾ ಸ್ಥಳೀಯರಿಗೆ ಎಲ್ಲೆಲ್ಲಿ ತಮ್ಮ ಊರಿನ ಅತ್ಯುತ್ತಮ, ಅಗ್ಗದ ಲೋಕಲ್ ಮಾಲು ಸಿಗುತ್ತದೆ ಎಂದು ಗೊತ್ತೇ ಇರುತ್ತದೆ. ಇಲ್ಲಿ ಪೂರ್ತಿ ಬಂಡಲ್ಸ್ ಪಡೆದು ಗೆಳತಿಯರೆಲ್ಲ ನಂತರ ಹಂಚಿಕೊಳ್ಳಿ. ಅತಿ ಕನಿಷ್ಠ ದರಕ್ಕೆ ಸಿಗುವಾಗ 22 ಸಲ ಪರೀಕ್ಷಿಸಿ ಆರಿಸಲು ಮರೆಯದಿರಿ. ಹೀಗಾಗಿ ಮೊದಲೇ ಮಾತನಾಡಿಕೊಂಡು, ದೊಡ್ಡ ಪ್ರಮಾಣದಲ್ಲಿ ಬೇಕಾದ್ದನ್ನು ಕೊಂಡು, ನಂತರ ನಮ್ಮನಮ್ಮಲ್ಲೇ ಹಂಚಿಕೊಳ್ಳುವುದೇ ಸರಿ. ಹೀಗೆ ಲೋಕಲ್ ನ ಲೋ ಆಫರ್‌ ಮಜಾ ಪಡೆಯಿರಿ. ನಂತರ ಮನೆಗೆ ಹೋಗಿ ಎಲ್ಲರೂ ಕೂಡಿ ಹಂಚಿಕೊಳ್ಳಬಹುದು. ಒಂದಂತೂ ನಿಜ, ಇಂಥ ಶಾಪಿಂಗ್‌ ಗಳಲ್ಲಿ ಕೊಂಡದ್ದನ್ನು ನಿಮ್ಮ ಕಣ್ಣೆದುರೇ ಪ್ಯಾಕಿಂಗ್‌ ಮಾಡಿಸಿ. ಯಾರನ್ನೋ ನಂಬಲು ಹೋಗಿ, ನೀವು ಹಾನಿ ಮಾಡಿಕೊಳ್ಳಬೇಡಿ.

ಆಫ್‌ ಲೈನ್‌ ನಲ್ಲೂ ದೊಡ್ಡ ಡಿಸ್‌ ಕೌಂಟ್‌ ಪಡೆಯಿರಿ : ಹಬ್ಬಗಳ ಸಂದರ್ಭದಲ್ಲಿ, ಅಂಗಡಿಯವರು ವಿಶೇಷ ಸೋಡಿ ಹಾಗೂ ಆಫರ್ಸ್ ಕೊಟ್ಟೇ ಕೊಡುತ್ತಾರೆ. ಹೀಗಾಗಿ ನೀವು ಶಾಪಿಂಗ್‌ ಗೆ ಹೊರಡುವ ಮೊದಲೇ ಏನೇನು ಕೊಳ್ಳಬೇಕೆಂಬುದರ ಒಂದು ಪಟ್ಟಿ ಮಾಡಿಡಿ. ಹಾಗೆಯೇ ಏನೆಲ್ಲ ಆಫರ್ಸ್‌ ಲಭ್ಯ ಎಂಬುದನ್ನೂ ಗಮನಿಸಿಕೊಳ್ಳಿ. ಒಂದೇ ಡ್ರೆಸ್‌ ಗೆ ಬೇರೆ ಬೇರೆ ಅಂಗಡಿಗಳಲ್ಲಿ ಬೇರೆ ಬೇರೆ ರೇಟ್‌ ಇರುತ್ತದೆ. ಹೀಗಾಗಿ ಇವೆಲ್ಲವುಗಳತ್ತ ಸೂಕ್ಷ್ಮವಾಗಿ ಕಣ್ಣಾಡಿಸಿ.

ಉತ್ತಮ ಗುಣಮಟ್ಟಕ್ಕೆ ಮೊದಲ ಆದ್ಯತೆ ಇರಲಿ : ಎಷ್ಟೋ ಸಲ ಅಂಗಡಿಯವರು, ಉತ್ತಮ ಗುಣಮಟ್ಟದ ಸ್ಯಾಂಪಲ್ ತೋರಿಸುತ್ತಾರೆ, ಆದರೆ ಆ ಮಾಲ್ ‌ನ್ನು ಬಿಚ್ಚಿ ನೋಡುವುದು ಬೇಡ ಎಂದು ತಡೆಯುತ್ತಾರೆ. ಅದನ್ನು ನಂಬಿ, ದುಡ್ಡು ಕೊಟ್ಟು ಮನೆಗೆ ತಂದ ಮೇಲೆ, ಅದನ್ನು ಬಿಚ್ಚಿ ನೋಡಿದಾಗ, ನೀವು ಕೊಂಡ ವಸ್ತು ನಿಮ್ಮ ಅಪೇಕ್ಷಿತ ಗುಣಮಟ್ಟ ಖಂಡಿತಾ ಹೊಂದಿರುವುದಿಲ್ಲ. ಆದರೆ ನಂತರ ಅದೇ ಅಂಗಡಿಗೆ ಹೋದರೆ, ಎಕ್ಸ್ ಚೇಂಜ್‌ ಯಾ ರೀಫಂಡ್‌ ಗೆ ಅವನು ಖಂಡಿತಾ ಒಪ್ಪಿಕೊಳ್ಳುವುದಿಲ್ಲ. ಲೋಕಲ್ ಮಾರ್ಕೆಟ್‌ ನಲ್ಲಿ, ಗುಂಪಿನ ಜನರನ್ನು ಕಂಡು, ಅಂಗಡಿಯವರು ಹೀಗೆ ರ್ದುಲಾಭ ಪಡೆಯಲು ಯತ್ನಿಸುತ್ತಾರೆ. ಹೀಗಾಗಿ ಎಷ್ಟೇ ಗುಂಪಿರಲಿ, ಜನದಟ್ಟಣೆ ಇರಲಿ, ನೀವು ನಮಗೆ ಬೇಕಾದ ವಸ್ತುವನ್ನು ಕೂಲಂಕಶವಾಗಿ ಪರೀಕ್ಷಿಸದೆ ಕೊಂಡು ತರಲೇ ಬೇಡಿ.

ಬೆಲೆ ತೀರಾ ಹೆಚ್ಚಲ್ಲ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ : ದೊಡ್ಡ ಹಬ್ಬಗಳ ಸೀಸನ್‌ ನಲ್ಲಿ ಬೇಕೆಂದೇ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನ ಮುಟ್ಟುತ್ತದೆ. ಹೀಗಾಗಿಯೇ ಅಂಗಡಿಯವರು ಇಂಥ ಗ್ರಾಹಕರನ್ನು ಸಾಧ್ಯವಾದಷ್ಟು ಏಮಾರಿಸುತ್ತಾರೆ. ಕಡಿಮೆ ಬೆಲೆಯ ವಸ್ತುಗಳನ್ನು 2 ಪಟ್ಟು ಹೆಚ್ಚು ಬೆಲೆಗೇ ಮಾರುತ್ತಾರೆ. ಹೀಗಾಗಿ ನೀವು ಕೊಳ್ಳಲಿರುವ ಯಾವುದೇ ವಸ್ತುಗಳನ್ನು ಇತರ ಅಂಗಡಿಗಳಲ್ಲಿ ಹೋಲಿಸಿ ನೋಡಿ, ಬೆಲೆ ತೀರಾ ಹೆಚ್ಚಲ್ಲ ತಾನೇ ಎಂದು ಖಾತ್ರಿಪಡಿಸಿಕೊಂಡೇ ಅಂಥ ಅಂಗಡಿಯಲ್ಲಿ ಖರೀದಿಸಿ. ಇದರಿಂದ ನಿಮಗೆ ಆಗಬಹುದಾದ ಹಾನಿ ಎಷ್ಟೋ ತಪ್ಪುತ್ತದೆ.

ಶಾಪಿಂಗ್‌ ಲಿಸ್ಟ್ ಖಂಡಿತಾ ರೆಡಿ ಮಾಡಿ : ಎಷ್ಟೋ ಸಲ ನಮಗೆ ಅಗತ್ಯ ಇಲ್ಲದಿದ್ದರೂ, ಇರಲಿ ಇರಲಿ ಅಂತ ಒಂದರ ಬದಲಿಗೆ ಇನ್ನೊಂದು ಎಂದು ಹಲವಾರು ವಸ್ತು ಕೊಂಡುಕೊಳ್ಳುತ್ತೇವೆ. ಮನೆಗೆ ಹೋಗಿ ನೋಡಿದಾಗ, ಅಂಥದ್ದು ನಮ್ಮ ಬಳಿ ಮೊದಲೇ ಇತ್ತು ಎಂದು ನಂತರ ತಿಳಿಯುತ್ತದೆ. ಹೀಗಾಗಿ ಇಂಥ ಜಂಜಾಟಕ್ಕೆ ಸಿಲುಕದಿರಲು, ಯಾವ ಯಾವ ವಸ್ತುಗಳು ಅತ್ಯಗತ್ಯವೋ, ಅಂಥವನ್ನು ಮಾತ್ರ ಕೊಂಡುಕೊಳ್ಳಿ. ಅದಕ್ಕಾಗಿ ಮೊದಲೇ ಒಂದು ಪಟ್ಟಿ ತಯಾರಿಸಿಟ್ಟುಕೊಂಡು, ಕೇವಲ ಅಷ್ಟನ್ನು ಮಾತ್ರ ಖರೀದಿಸಿ. ಇದರ ಪ್ರಕಾರ, ಆಫರ್‌ ಯಾ ಸೇಲ್ಸ್ ಇದ್ದಾಗ, ನಿಮಗೆ ಬೇಕಾದ್ದನ್ನು ನೋಡಿ ತಿಳಿದುಕೊಳ್ಳಿ. ಹೀಗೆ ಫೋಕಸ್ಡ್ ಆಗಿ ನೀವು ಶಾಪಿಂಗ್‌ ಕಡೆ ಗಮನಹರಿಸಿ, ಆಗ ನಿಮಗೆ ಅನಗತ್ಯ ವಸ್ತುಗಳು ಸೇರುವುದಿಲ್ಲ, ಹಣ ಉಳಿಯುತ್ತದೆ.

ಹತ್ತಿರದಲ್ಲಿನ ಆಫರ್ಸ್‌/ಸೇಲ್ಸ್ ಕಡೆಯೂ ಗಮನವಿರಲಿ : ಆನ್‌ ಲೈನ್‌ ಆಫರ್‌ ಗಿಂತಲೂ ಎಷ್ಟೋ ಸಲ ನಿಮಗೆ ಲೋಕಲ್ ಮಾರ್ಕೆಟ್‌ ನಲ್ಲೇ ಅಗ್ಗವಾಗಿ ಮಾಲು ಸಿಗುತ್ತದೆ. ಇಂಥ ಹಬ್ಬಗಳಲ್ಲಿ ಮನೆಗೆ ಬೇಕಾದ ವಸ್ತುಗಳ ಮೇಲೆಯೇ ಕೇಂದ್ರಿತ ಆಗಿರುತ್ತವೆ. ಉದಾ: ಪಾತ್ರೆಪಡಗ, ಅಡುಗೆಮನಿಯ ಡಬ್ಬಿಗಳು, ಅಲಂಕಾರಿಕ ವಸ್ತು ಇತ್ಯಾದಿ. ಹೀಗಾಗಿ ಲೋಕಲ್ ಅಂಗಡಿಗಳಲ್ಲಿ ಉತ್ತಮ ಗುಣಮಟ್ಟದ, ಕನಿಷ್ಠ ಬೆಲೆಯ ಮಾಲು ನೋಡಿ, ಕೊಳ್ಳಿರಿ!

– ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ