ನೀಳ್ಗಥೆ – ಪವಿತ್ರಾ ಬದ್ರಿನಾಥ್
ತೀರಾ ಆದರ್ಶವಾದಿಯಾದ ಭಾರತಿ ತಾನಿರುವ ಕಡೆ ಎಲ್ಲೆಲ್ಲೂ ಸೌಹಾರ್ದ ವಾತಾವರಣ ಇರಬೇಕೆಂದು ಬಹಳ ಶ್ರಮಿಸುತ್ತಿದ್ದಳು. ಶಾಲೆಯ ಪರಿಸರದಲ್ಲಿ ಸಂಕುಚಿತ ವಾತಾವರಣ ಇರಬಾರದು ಎಂದು ಸ್ವಭಾತಃ ಅದನ್ನು ರೂಢಿಸಿ ತೋರಿಸಿದಳು. ಇದರಿಂದ ಅಲ್ಲಿನ ವಾತಾವರಣದಲ್ಲಿ ಬದಲಾವಣೆ ಮೂಡಲು ಸಾಧ್ಯವಾಯಿತೇ……?
ಅಂದು ಬೆಳಗ್ಗೆ ಸಮಯ 9 ಗಂಟೆಯಾಗಿತ್ತು. ಗಾಢವಾದ ಹೆಚ್ಚು ಜನಸಂಚಾರವಿದ್ದ ರಸ್ತೆಯಲ್ಲಿ ಶಿವನ ಗುಡಿ, ಚರ್ಚ್ ಮತ್ತು ಮಸೀದಿ ಒಂದೇ ಕಡೆ ಇದ್ದವು. ಬೀಸುತ್ತಿದ್ದ ತಂಪು ಗಾಳಿ ಮನಸ್ಸನ್ನು ಹಗುರಗೊಳಿಸುವ ಹಸಿರು ಗಿಡಮರಗಳು ಎಂಥವರನ್ನೂ ಪ್ರಶಾಂತತೆಯ ಕಡೆಗೆ ಕರೆದೊಯ್ಯು ತಾಣವದು.
ಅಂದು ಹಿಂದೂಗಳು ಮಾತ್ರ ಭಕ್ತಿಭಾವದಿಂದ ಗುಡಿಗೆ ಹೋಗಿ ಪ್ರಾರ್ಥಿಸುತ್ತಿದ್ದರು. ಅವರು ಚರ್ಚ್ ಮತ್ತು ಮಸೀದಿ ಕಡೆ ತಿರುಗಿಯೂ ನೋಡುತ್ತಿರಲಿಲ್ಲ…. ಅದೇ ರೀತಿ ಕ್ರೈಸ್ತರು ಚರ್ಚ್ ಗೂ ಮತ್ತು ಮುಸ್ಲಿಮರು ಮಸೀದಿಗೂ ಹೋಗುತ್ತಿದ್ದರು. ಯಾರೂ ಅವರವರ ಧಾರ್ಮಿಕ ಆಚರಣೆಯನ್ನು ಬಿಟ್ಟು ಬೇರೆ ಧರ್ಮದ ಆಚಾರವನ್ನು ಪಾಲಿಸುತ್ತಿರಲಿಲ್ಲ.
ಅದೇ ಸಮಯಕ್ಕೆ ಒಂದು ದೊಡ್ಡ ಮರದ ಕೆಳಗೆ ಬ್ಯಾನರ್ ಒಂದರಲ್ಲಿ ಮನುಷ್ಯರೆಲ್ಲರಿಗೂ ವಿಶ್ವಚೈತನ್ಯ ಶಕ್ತಿ ಹರಿಯುತ್ತಿರುವ ಚಿತ್ರ, ಅದರ ಜೊತೆಗೆ `ವೀ ಆಲ್ ಆರ್ ಸೋಲ್ ಮೇಟ್ಸ್’ ಎಂಬ ಒಂದು ಸಾಲಿನ ಆಧ್ಯಾತ್ಮಿಕ ಸಂದೇಶವಿದ್ದ ಬ್ಯಾನರ್ ನ್ನು ಅಲ್ಲಿ ಪ್ರಕಟಿಸಲಾಗಿತ್ತು.
ಹದಿನಾಲ್ಕು ವರ್ಷದ ಹುಡುಗಿಯಾದ ಆದ್ಯಾ, ಕುತ್ತಿಗೆಯಲ್ಲಿ ಯೇಸುವಿನ ಶಿಲುಬೆ, ಬುರ್ಖಾ ಹಾಕಿಕೊಂಡು, ಕೈಯಲ್ಲಿ ರುದ್ರಾಕ್ಷಿ ಜಪಮಾಲೆಯನ್ನು ಹಿಡಿದು ಚಾಪೆಯ ಮೇಲೆ ಕುಳಿತು, ಮುಖವನ್ನು ಮುಚ್ಚಿಕೊಳ್ಳದೆ, ಹಣೆಗೆ ಕುಂಕುಮ ಹಚ್ಚಿಕೊಂಡು, `ನಮಃ ಶಿವಾಯ’ ಎಂದು ಕಣ್ಮುಚ್ಚಿಕೊಂಡು ಜಪ ಮಾಡುತ್ತಿದ್ದಳು!
ಅವಳ ಪಕ್ಕದಲ್ಲಿ ಚಾಂದಿನಿ ಬಹಳಷ್ಟು ಸೊಗಸಾಗಿ ಇಂಪಾದ ಸಂಗೀತದ ನಾದ ಮೀಟುವ ಹಾಗೆ ಕೊಳಲನ್ನು ನುಡಿಸುತ್ತಿದ್ದಳು. ಆ ಸೊಗಸಾದ ಸಂಗೀತ ಕೇಳಲು ಕೆಲವರು ಆ ಸ್ಥಳಕ್ಕೆ ಬಂದು, ಹುಡುಗಿಯರ ಮುಂದೆ ನಿಂತು ಅವರನ್ನು ವಿಚಿತ್ರವಾಗಿ ನೋಡಿದರು! `ಇವಳು ಯಾವ ಜಾತಿಯ ಹುಡುಗಿ ಇರಬಹುದು….? ಇವಳು ಹಿಂದೂ, ಮುಸ್ಲಿಂ ಅಥವಾ ಕ್ರಿಶ್ಚಿಯನ್…..’ ಎಂದು ಕೆಲವರು ಮನಸ್ಸಿನಲ್ಲಿ ಯೋಚಿಸಿ, ಹಾಗೇ ಸುಮ್ಮನಾದರು.
ಇನ್ನೂ ಕೆಲವರು, “ಈಗಿನ ಕಾಲದ ಮಕ್ಕಳಿಗೆ ಅದೇನು ಹುಚ್ಚು ಹಿಡಿದಿದೆಯೋ…? ಯಾಕೆ ಈ ರೀತಿ ವಿಚಿತ್ರವಾಗಿ ವರ್ತಿಸುತ್ತಾರೆ? ಯಾಕೆ ಇವರು ಈ ರೀತಿ ಆಗಿದ್ದಾರೆ….?” ಎಂದು ತಲೆಕೊಡವಿಕೊಂಡು ಅಲ್ಲಿಂದ ಹೋದರು.
ಆದ್ಯಾಳ ಗೆಳತಿ ಚಾಂದಿನಿ ಕೊಳಲು ನುಡಿಸುತ್ತಲೇ ಎಲ್ಲರನ್ನೂ ಗಮನಿಸುತ್ತಿದ್ದಳು. ಯಾರಿಗೂ ಕಾಣದ ಹಾಗೆ ಕ್ಯಾಮೆರಾವನ್ನು ಇಟ್ಟುಕೊಂಡು ಶೂಟ್ ಮಾಡುತ್ತಿದ್ದರು.
ಇಬ್ಬರು ಹುಡುಗಿಯರು ಈ ರೀತಿ ಮಾಡುತ್ತಿರುವ ವಿಷಯ ಹತ್ತು ನಿಮಿಷದಲ್ಲಿ ಅಲ್ಲಿನ ಜನರಿಗೆಲ್ಲಾ ವ್ಯಾಪಿಸಿತು. ಆ ಸ್ಥಳಕ್ಕೆ ಮುಸ್ಲಿಮ್, ಹಿಂದೂ ಮತ್ತು ಕ್ರಿಶ್ಚಿಯನ್ ಹುಡುಗರು ಬಂದು, “ಯಾರು ನೀವಿಬ್ಬರು…..?! ನಮ್ಮ ಏರಿಯಾಗೆ ಬಂದು ಏನು ಮಾಡೋಕೆ ಹೊರಟಿದ್ದೀರಿ….?! ಮೊದಲು ಇದನ್ನೆಲ್ಲ ಕಿತ್ತು ಬಿಸಾಕಿ ಇಲ್ಲಿಂದ ಹೋದ್ರೇ ಸರಿ…… ಇಲ್ಲಾಂದ್ರೆ ನಿಮ್ಮಿಬ್ಬರಿಗೂ ಒಂದು ಗತಿ ಕಾಣಿಸ್ತೀವಿ…..! ಮೊದಲೇ ಇಲ್ಲಿ ಜನರು ಯಾರೂ ಸರಿಯಿಲ್ಲ….. ಇದರ ಪರಿಣಾಮ ನೆಟ್ಟಗಿರೋಲ್ಲ…. ಇಲ್ಲಿಂದ ಹೋಗ್ತಾ ಇರಿ!” ಎಂದು ಅವರು ಹಾಕಿದ್ದ ಬ್ಯಾನರ್ ಎಲ್ಲವನ್ನೂ ಹರಿದು ನೆಲಕ್ಕೆ ಎಸೆದು, ಬೆಂಕಿ ಅಂಟಿಸಿದರು.
ಅವರನ್ನು ಕಂಡು ಹೆದರಿದ ಆದ್ಯಾ, “ಅಯ್ಯೋ ಅಣ್ಣಾ….. ಹೀಗೆಲ್ಲಾ ಮಾಡಬೇಡಿ ಪ್ಲೀಸ್. ನಾವು ಯಾವುದೋ ಒಂದು ಕಾನ್ಸೆಪ್ಟ್ ಇಟ್ಟುಕೊಂಡು ರೀಲ್ಸ್ ಮಾಡೋಕೆ ಹೊರಟಿದ್ದೇವೆ ಅಷ್ಟೇ…. ಇದು ಬೇರೆ ಯಾವ ಉದ್ದೇಶಕ್ಕೂ ಅಲ್ಲ…. ಒಂದೊಳ್ಳೆ ಮೆಸೇಜ್ ಜನರಿಗೆ ತಲುಪಿಸಬೇಕಿತ್ತು. ಈ ಏರಿಯಾದಲ್ಲಿ ಮಾತ್ರವೇ ಎಲ್ಲಾ ಧರ್ಮದವರೂ ಒಂದೇ ಕಡೇ ಬಂದು ಸೇರುತ್ತಾರೆ, ಅವರ ಅಭಿಪ್ರಾಯವನ್ನು ತಿಳಿದುಕೊಂಡಂತೆ ಆಗುತ್ತದೆ ಎಂದು ನಾವು ಇಲ್ಲಿಗೆ ಬಂದ್ವಿ,” ಎಂದು ಅವರ ಮುಂದೆ ಕೈ ಮುಗಿದಳು.

ಅಷ್ಟರಲ್ಲಿ ಮುಂಗೋಪಿಯಾದ ಚಾಂದನಿ, “ಏಯ್ ಯಾಕ್ರೋ ಹೀಗೆ ಹುಚ್ಚು ಹಿಡಿದವರ ಹಾಗೆ ಆಡ್ತಿದೀರಾ…..? ನಾವೇನಾದ್ರೂ ನಿಮ್ಮನೆ ಮುಂದೆ ಬಂದು ಹೀಗೇನೂ ಮಾಡ್ತಿಲ್ಲಾ…. ನೀವೆಲ್ಲಾ ಜಾತಿ ಜಾತಿ ಅಂತ ಸಾಯ್ತೀರಾ…. ನಿಮಗೆಲ್ಲಾ ತಲೆ ಕೆಟ್ಟಿದೆ. ಅದಕ್ಕೆ ನಾವು ಈ ರೀತಿ ಮಾಡೋದು ನಿಮಗೆ ಅರ್ಥ ಆಗ್ತಾ ಇಲ್ಲ…. ನಾವೆಲ್ಲರೂ ಸೋಲ್ ಮೇಟ್ಸ್. ಆ ವಿಷಯ ನಿಮಗೆ ಏನಾದರೂ ಗೊತ್ತಿದ್ಯಾ….? ಆ ಪರಮಾತ್ಮನಿಂದ ಬಂದಿರುವ ನಾವೆಲ್ಲಾ ಒಂದೇ ಕುಟುಂಬದವರು ಅಂದ ಮೇಲೆ ಈ ಜಾತಿಗಳೆಲ್ಲ ಯಾಕೆ ಬೇಕು….? ಎಲ್ಲರೂ ಅವರವರ ಕೆಲಸಗಳನ್ನು ಕರ್ತವ್ಯ ನಿಷ್ಠೆಯಿಂದ ಮಾಡ್ಕೊಂಡು ಹೋಗ್ತಾ ಇದ್ರೆ ಯಾವ ಅಡ್ಡಿ ಆತಂಕಗಳೂ ಇರುವುದಿಲ್ಲ. ಜನರಲ್ಲಿ ನಾನು ಮೇಲು, ನೀನು ಕೀಳು ಎಂಬ ತಾರತಮ್ಯ ಇರುವುದಿಲ್ಲ,’ ಎಂದು ಬೆರಳು ತೋರಿಸಿ ಜೋರಾಗಿ ಕಿರುಚಿ ಮಾತನಾಡಿದಳು.
ಆ ಹುಡುಗರೆಲ್ಲ ಮೊದಲೇ ಜಾತಿ, ಧರ್ಮಗಳಲ್ಲಿ ಮುಳುಗಿ ಹೋಗಿದ್ದರು. ಈ ರೀತಿಯ ರೊಚ್ಚಿಗೇಳುವ ಹೇಳಿಕೆ ಕೇಳಿ ಅವರಿಂದ ಸಹಿಸಿಕೊಳ್ಳಲು ಆಗಲಿಲ್ಲ. ಅವರಿಬ್ಬರಿಗೂ ಕಪಾಳಕ್ಕೆ ಹೊಡೆದು, ಜುಟ್ಟು ಹಿಡಿದು, “ಏಯ್…. ಯಾರೇ ನೀವಿಬ್ರೂ…. ಇಲ್ಲೇನೋ ಬಂದ್ಬಿಟ್ಟು ತಮಾಷೆ ಮಾಡೋಕೆ ಹೊರಟಿದ್ದೀರಾ….? ಬಾಯ್ಮುಚ್ಕೊಂಡು ಇಲ್ಲಿಂದ ಹೋಗ್ತಾ ಇರಿ…. ಇಲ್ಲಾ ಅಂದ್ರೆ ಅಷ್ಟೇ…. ನಿಮ್ಮಿಬ್ಬರ ಕಥೆ ಮುಗಿಯಿತು ಅಂದ್ಕೊಳ್ಳಿ,” ಎನ್ನುತ್ತಾ ಅವರು ತಂದಿಟ್ಟಿದ್ದ ವಸ್ತುಗಳೆಲ್ಲವನ್ನೂ ಚೆಲ್ಲಾಪಿಲ್ಲಿ ಮಾಡಿ, ಅವರ ಕೈಗಳನ್ನು ಪರಚಿ ಅಮಾನುಷವಾಗಿ ಪ್ರವರ್ತಿಸಿದರು.
ಆದ್ಯಾ ಮತ್ತು ಚಾಂದನಿ ಕೂಡ ಆ ಹುಡುಗರಿಗೆ ಸರಿಯಾಗಿ ಹೊಡೆದರು. ಆದರೆ ಅವರು ನಾಲ್ಕು ಮಂದಿ ಇದ್ದುದರಿಂದ ಇವರ ಶಕ್ತಿ ಅವರ ಮುಂದೆ ಕಡಿಮೆಯಾಯಿತು. ಇಬ್ಬರೂ ಅಸಹಾಯಕರಾದರು.
ಅಲ್ಲಿದ್ದ ಮೂರು ಧಾರ್ಮಿಕ ಗುಡಿಗಳಲ್ಲಿ ದೇವರ ದರ್ಶನ ಮಾಡಿಕೊಂಡು ಬರುತ್ತಿದ್ದ ಅಪ್ಪಟ ಭಾರತೀಯ ನಾರಿಯಂತೆ ಆ ಸ್ಥಳಕ್ಕೆ ಅಕಸ್ಮಾತ್ ಆಗಿ ಬಂದ ಮೂವತ್ತೈದರ ಪ್ರಾಯದ ಭಾರತಿ ಎಂಬಾಕೆ ಈ ಮಕ್ಕಳ ಜಗಳವನ್ನು ನೋಡಿದಳು. ಅವಳು ಅವರ ಮಧ್ಯೆ ಹೋಗಿ ಅವರ ಜಗಳ ಬಿಡಿಸಿ, “ನಿಲ್ಸಿ ಯಾಕಿಂಗೆ ಜಗಳ ಆಡ್ತಿದೀರಾ….? ಏನಾಯ್ತು….? ಈ ಹೆಣ್ಣುಮಕ್ಕಳು ಯಾಕೆ ಹೀಗೆ ಅಳ್ತಾ ಇದ್ದಾರೆ….? ನೀವೇನಾದ್ರೂ ಇವರ ಜೊತೆ ತಪ್ಪಾಗಿ ನಡ್ಕೊಂಡ್ರಾ…? ಏನ್ರಮ್ಮಾ….. ಏನಾಯ್ತು…..?” ಎಂದು ಕೇಳಿದಳು.
ಅಲ್ಲಿದ್ದ ಹುಡುಗ ಹುಡುಗಿಯರು ಎಲ್ಲರೂ ರೊಚ್ಚಿಗೆದ್ದು ಒಟ್ಟಿಗೆ ಕಿರುಚಾಡಲು ಪ್ರಾರಂಭಿಸಿದರು. `ಮೇಡಂ, ಇವನು ಸರಿಯಿಲ್ಲ… ಇವಳು ಸರಿಯಿಲ್ಲ….. ಇವನದ್ದೇ ತಪ್ಪು….. ಇವಳದ್ದೇ ತಪ್ಪು’ ಎಂದು ಒಬ್ಬರ ಮೇಲೊಬ್ಬರು ತಪ್ಪು ಹೊರಿಸುತ್ತಾ ಕೂಗಾಡತೊಡಗಿದರು.
“ಎಲ್ಲರೂ ಸುಮ್ಮನೆ ಇರಿ….. ಇಲ್ಲಿ ಏನು ನಡೆಯಿತೋ ಅದನ್ನು ಯಾರಾದರೂ ಒಬ್ಬರು ಸರಿಯಾಗಿ ಹೇಳಿ. ಇಲ್ಲಾಂದ್ರೆ ನಾನು ಈಗೀ ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ….” ಎಂದು ಭಾರತಿ ರೇಗಿದಳು.

ಅಷ್ಟರಲ್ಲಿ ಆ ನಾಲ್ಕು ಜನ ಹುಡುಗರಲ್ಲಿ ಒಬ್ಬ ಚಾಂದಿನಿಯ ಹಿಂದಿನಿಂದ ಬಂದು ಒಂದು ಕೈಯಿಂದ ಅವಳ ಬಾಯನ್ನು ಬಲವಾಗಿ ಮುಚ್ಚಿ, ಇನ್ನೊಂದು ಕೈಯಲ್ಲಿ ಅವಳ ಕುತ್ತಿಗೆಗೆ ಚಾಕು ಇಟ್ಟು, “ನೋಡಿ ನೀವೆಲ್ಲಾ ಯಾರಾದರೂ ಒಂದು ಹೆಜ್ಜೆ ಮುಂದೆ ಬಂದರೆ, ಈ ಹುಡುಗಿಯನ್ನು ಶಿವ ಅಂತ ಅನ್ಸಿಬಿಡ್ತೀನಿ…. ಎಲ್ರೂ ಇಲ್ಲಿಂದ ಹೋಗಿ,” ಅಂತ ಎಲ್ಲರನ್ನೂ ಗುರಾಯಿಸಿಕೊಂಡು ನೋಡಿದ.
ಆದರೂ ಅವನ ಬಳಿ ಇದ್ದಿದ್ದು ಯಾವುದೇ ಕೆಲಸಕ್ಕೆ ಬಾರದೆ ಇದ್ದ ಚಾಕುವಾಗಿತ್ತು. ಅವನು ಬೂಟಾಟಿಕೆಗಾಗಿ ಯಾವಾಗಲೂ ಅದನ್ನು ತನ್ನ ಬಳಿ ಇಟ್ಟುಕೊಂಡು ಎಲ್ಲರಿಗೂ ಬೆದರಿಕೆ ಹಾಕುವ ಹುಚ್ಚು ಅವನದಾಗಿತ್ತು. ಚಾಂದಿನಿ ಅದು ನಿಜವಾದ ಚಾಕು ಎಂದು ಹೆದರಿದಳು. ಆಗ ಭಾರತಿಗೆ ಅಲ್ಲಿನ ವಾತಾವರಣ ಏನು ಎಂಬುದು ತಕ್ಕಮಟ್ಟಿಗೆ ಊಹಿಸಿದ್ದಳು. ಅವಳು ತನ್ನ ಬಳಿಯಿದ್ದ ಪೆಪ್ಪರ್ ಸ್ಪ್ರೇ ತೆಗೆದು ಹುಡುಗರ ಮೇಲೆ ತೂರಿದಳು. ನಂತರ ಅತಿ ತೀಕ್ಷ್ಣವಾದ ಬ್ಲೇಡುಗಳನ್ನು ಒಟ್ಟಿಗೆ ಅವರೆಲ್ಲರ ಕಾಲಿಗೆ ಹಾಕಿ ಚುಚ್ಚಿದಳು.
ಈ ಎಲ್ಲಾ ದೃಶ್ಯಾವಳಿಗಳೂ ಅವರ ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿತ್ತು. ಆ ಹುಡುಗಿಯರು ತಂದಿದ್ದ ಎಲ್ಲಾ ವಸ್ತುಗಳನ್ನು ಅಲ್ಲಿಂದ ಬೇಗ ಬೇಗ ಎತ್ತಿಕೊಂಡು ಹೋದರು. ಭಾರತಿ ಆ ಇಬ್ಬರು ಹುಡುಗಿಯರ ಕೈ ಹಿಡಿದುಕೊಂಡು ಅಲ್ಲಿಂದ ಆಟೋದಲ್ಲಿ ಆಸ್ಪತ್ರೆಗೆ ಹೊರಟರು. ಆ ಹುಡುಗರು ಅಲ್ಲೇ ಒದ್ದಾಡುತ್ತಿದ್ದರು. ಅವರು ಹುಡುಗಿಯರ ಮೇಲೆ ಕೋಪದಿಂದ ಕೆರಳಿದ್ದರು.
ಅವರು ಆಟೋದಲ್ಲಿ ಹೋಗುವಾಗ, “ಮೇಡಂ…. ಇವತ್ತು ನೀವೇನಾದ್ರೂ ಅಲ್ಲಿಗೆ ಬರಲ್ಲಿಲ್ಲಾಂದ್ರೆ ಇವತ್ತು ನಮ್ಮಿಬ್ಬರ ಗತಿ ಏನಾಗ್ತಾ ಇತ್ತು ಅಂತಾನೇ ಗೊತ್ತಿಲ್ಲ…. ನೋಡಿ ಮೇಡಂ ಆ ಹುಡುಗರು ನಮ್ಮ ಕೈಗಳನ್ನು ಎಷ್ಟು ಗಾಯ ಮಾಡಿದಾರೆ…. ನಾವೇನೋ ಜನಕ್ಕೆ ಒಳ್ಳೆಯ ಮೆಸೇಜ್ ತಿಳಿಸೋಣ ಅಂತ ವಿಭಿನ್ನವಾಗಿರುವ ಕಂಟೆಂಟ್ ಇಟ್ಕೊಂಡು ರೀಲ್ಸ್ ಮಾಡೋದಕ್ಕೆ ಅಂತ ಇಲ್ಲಿಗೆ ಬಂದಿದ್ವಿ ಮೇಡಂ,” ಎಂದು ಆದ್ಯಾ ನಡೆದ ಘಟನೆಯನ್ನೆಲ್ಲಾ ವಿವರಿಸಿದಳು. ಚಾಂದಿನಿ ಕೂಡ ಆದ್ಯಾಳ ಜೊತೆ ಕೋಪದಿಂದ ತನ್ನ ದನಿಗೂಡಿಸಿದಳು.
“ಸಮಾಧಾನ ಮಾಡ್ಕೊಳ್ಳಿ ಮಕ್ಕಳಾ….. ನೀವಿನ್ನೂ ಚಿಕ್ಕ ವಯಸ್ಸಿನವರು. ಈ ಸಮಯದಲ್ಲಿ ನಿಮಗೆ ಇಷ್ಟು ಕೋಪ ಬರುವುದು ಸಹಜ. ನನಗೆ ನಿಮ್ಮಿಬ್ಬರ ಪರಿಸ್ಥಿತಿ ನೋಡಿದಾಗಲೇ ಅಲ್ಲಿ ಯಾವುದೋ ಅನಾಚರ ನಡೆದಿರಬಹುದು ಎಂದು ನಾನು ಈ ರೀತಿ ಮಾಡಿದೆ. ನನಗೆ ಆ ಮೂಮೆಂಟ್ ನಲ್ಲಿ ನಿಮ್ಮಿಬ್ಬರನ್ನು ಹೇಗಾದರೂ ಮಾಡಿ ಸೇಫಾಗಿ ಅಲ್ಲಿಂದ ಕರೆತರಬೇಕೆಂದು ನಿರ್ಧಾರ ಮಾಡಿ, ಈ ಸಾಹಸಕ್ಕೆ ಕೈ ಹಾಕಿದೆ.
“ಹೇಗೋ ದೇವರ ಕೃಪೆಯಿಂದ ನಾನು ಅಂದುಕೊಂಡ ಹಾಗೆ ನಡೆಯಿತು. ಆದರೆ ಇನ್ನು ಮುಂದೆ ಧರ್ಮದ ಕುರಿತು ಇಂಥ ಜನಕ್ಕೆ ವಿಷಯ ತಲುಪಿಸಿದಾಗ ನೀವು ಬಹಳ ಜಾಗರೂಕತೆಯಿಂದ ಮಾಡಿ. ಭಾರತ ದೇಶದಲ್ಲಿ ಇನ್ನೂ ಸಾಕಷ್ಟು ಕಡೆ ಜಾತಿಮತ, ಮೇಲುಕೀಳು ಎಂಬ ವಿಭಿನ್ನ ವಿಚಾರವಾದಿಗಳು ನಮ್ಮೊಂದಿಗೆ ಇದ್ದಾರೆ. ಆದ್ದರಿಂದ ಜೋಪಾನವಾಗಿರಿ,” ಎಂದು ಭಾರತಿ ಆ ಹುಡುಗಿಯರಿಬ್ಬರ ಬೆನ್ನು ತಟ್ಟಿ ಧೈರ್ಯ ಹೇಳಿದಳು.
ಹುಡುಗಿಯರಿಬ್ಬರಿಗೂ ಭಾರತೀಯ ಕಣ್ಣುಗಳಲ್ಲಿ ಕಾಣುತ್ತಿದ್ದ ಧೈರ್ಯ ಮತ್ತು ಭರವಸೆ ಇಬ್ಬರಿಗೂ ನವಚೈತನ್ಯ ತುಂಬುವಂತೆ ಮಾಡಿತು.
“ಸರಿ ಮೇಡಂ….. ಖಂಡಿತವಾಗಿಯೂ ಹಾಗೆ ಮಾಡುತ್ತೇವೆ. ಆದರೆ ಅದಕ್ಕೆ ಮೊದಲು ನಿಮ್ಮನ್ನೂ ಕರೆಯುತ್ತೇವೆ. ಆಗ ನಮಗೆ ಯಾವ ಚಿಂತೆ, ಭಯ ಇರುವುದಿಲ್ಲ. ನಿಮ್ಮ ನಂಬರ್ ಕೊಡ್ತೀರಾ,” ಎಂದು ಆದ್ಯಾ ನಗುತ್ತಾ ಕೇಳಿದಳು.

“ನಾನು ಈಗಲೇ ರೆಡಿಯಾಗಿದ್ದೇನೆ. ಆದರೆ ನಂಬರ್ ಮಾತ್ರ ಕೇಳಬೇಡಿ,” ಎಂದು ಮಂದಹಾಸ ಬೀರಿದ ಭಾರತಿ, ಆಸ್ಪತ್ರೆಯಲ್ಲಿ ಅವರಿಬ್ಬರಿಗೂ ಚಿಕಿತ್ಸೆ ಕೊಡಿಸಿ, ಬಿಲ್ ನ್ನು ತಾನೇ ಕಟ್ಟಿ ಅಲ್ಲಿಂದ ಹೊರಟುಹೋದಳು. ಚಾಂದಿನಿ ಮತ್ತು ಆದ್ಯಾರ ಜೀವನದಲ್ಲಿ ಭಾರತಿ ಮರೆಯಲಾಗದ ವ್ಯಕ್ತಿಯಾಗಿ ಉಳಿದಳು.
ಅದೇ ಊರಿನಲ್ಲಿ ಇದ್ದ `ಟ್ರಿನಿಟಿ ಎಜುಕೇಶನ್ ಸ್ಕೂಲ್’ನಲ್ಲಿ ಬಹಳಷ್ಟು ಶಿಸ್ತಿನ ಆಚರಣೆಗಳನ್ನು ಮಕ್ಕಳೊಂದಿಗೆ ರೂಢಿಸಿದ್ದರು. ಅದು ಕ್ರಿಶ್ಚಿಯನ್ ಧರ್ಮದ ಮೌಲ್ಯಗಳನ್ನು ಸಾಕಾರಗೊಳಿಸುವ ಸಂಸ್ಥೆಯಾಗಿದ್ದು, ಬೈಬಲ್ ನ ತತ್ವಗಳ ಪ್ರಕಾರ ಬದುಕಲು ಶ್ರಮಿಸುವ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗಳ ಸಮುದಾಯವನ್ನು ಪೋಷಿಸುತ್ತಿದ್ದರು.
ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ಸಮವಸ್ತ್ರಗಳನ್ನು ಧರಿಸುತ್ತಿದ್ದರು. ಅಲ್ಲಿನ ಶಿಕ್ಷಕರು ಮಾದರಿ ವ್ಯಕ್ತಿಗಳು, ಸ್ನೇಹಿತರು, ಮಾರ್ಗದರ್ಶನ, ಬೆಂಬಲ ಮತ್ತು ಪ್ರೋತ್ಸಾಹವನ್ನು ಒದಗಿಸುತ್ತಿದ್ದರು. ಅವರು ಸುರಕ್ಷಿತ, ಅಂತರ್ಗತ ಮತ್ತು ಪೋಷಿಸುವ ವಾತಾವರಣವನ್ನು ಸೃಷ್ಟಿಸುತ್ತಿದ್ದು, ಅಲ್ಲಿನ ವಿದ್ಯಾರ್ಥಿಗಳು ಮೌಲ್ಯಯುತರು, ಗೌರವಾನ್ವಿತರು ಮತ್ತು ಸ್ನೇಹಜೀವಿಗಳಾಗಿದ್ದರು.
ಆ ಶಾಲೆಯು ನಿಖರತೆಯೊಂದಿಗೆ ಕಾರ್ಯನಿರ್ವಹಿಸಿ, ಉತ್ತಮವಾಗಿ ರಚನಾತ್ಮಕ ವೇಳಾಪಟ್ಟಿಯನ್ನು ಅನುಸರಿಸುತ್ತಿದ್ದರು. ತರಗತಿಗಳು ಸಮಯಕ್ಕೆ ಸರಿಯಾಗಿ ಪ್ರಾರಂಭವಾಗಿ ಮತ್ತು ಕೊನೆಗೊಳ್ಳುತ್ತಿತ್ತು. ಅಲ್ಲಿನ ವಿದ್ಯಾರ್ಥಿಗಳು ಸಂತೋಷದಿಂದ ಒಮ್ಮೊಮ್ಮೆ ದುಃಖದವರೆಗೆ ವಿವಿಧ ಭಾವನೆಗಳನ್ನು ಪ್ರದರ್ಶಿಸುತ್ತಿದ್ದರು. ಶಾಲೆಯು ಈ ಭಾವನೆಗಳನ್ನು ಅಂಗೀಕರಿಸಿ ಮತ್ತು ಮೌಲ್ಯೀಕರಿಸಿ, ಮಕ್ಕಳಿಗೆ ಅವರ ಭಾವನೆಗಳನ್ನು ಆರೋಗ್ಯಕರ ಮತ್ತು ರಚನಾತ್ಮಕ ರೀತಿಯಲ್ಲಿ ಗುರುತಿಸಲು, ಅರ್ಥ ಮಾಡಿಕೊಳ್ಳಲು ಮತ್ತು ನಿರ್ವಹಿಸಲು ಕಲಿಸಲು ಆಗುತ್ತಿರಲಿಲ್ಲ! ಆ ಶಾಲೆಯ ಮಕ್ಕಳು ತುಂಬಾ ತರಲೆ ಮಾಡಿಕೊಂಡಿದ್ದರು. ಅವರನ್ನು ನಿಭಾಯಿಸುವುದು ಶಿಕ್ಷಕರಿಗೆ ಬಹಳ ಕಷ್ಟವಾಗುತ್ತಿತ್ತು.
ಒಮ್ಮೊಮ್ಮೆ ಎಷ್ಟು ಕಟ್ಟುನಿಟ್ಟಾದ ರೀತಿ ನೀತಿಗಳನ್ನು ಮಕ್ಕಳೊಂದಿಗೆ ಹೇಳಿದರು. ಅವುಗಳೆಲ್ಲಾ ಅವರಿಗೆ ಒಮ್ಮೆಲೇ ಅರ್ಥವಾಗದೆ ಅಡಚಣೆಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚು ಇರುತ್ತಿತ್ತು. ನರ್ಸರಿ ಮಕ್ಕಳು ಶಾಲೆಗೆ ಹೋದ ಮೇಲೆ ಏನಾದರೂ ಜ್ವರದಿಂದ ಬಳಲುತ್ತಿದ್ದರೆ ಪೋಷಕರು ಶಾಲೆಗೆ ಬಂದು ಶಿಕ್ಷಕರನ್ನು ಪ್ರಶ್ನಿಸುತ್ತಿದ್ದರು, ಅಲ್ಲಿನ ಶಿಕ್ಷಕರ ಅಸಡ್ಡೆಯಿಂದ ಅವರ ಮಕ್ಕಳು ಅನಾರೋಗ್ಯಕ್ಕೆ ಗುರಿಯಾಗುತ್ತಿದ್ದಾರೆ ಎಂದು ನಿಂದಿಸಿ, ಕೆಲವರು ಬಯ್ಯುತ್ತಿದ್ದರು. ಆಗ ಶಿಕ್ಷಕರು ತಬ್ಬಿಬ್ಬಾದರು!

“ನೋಡಿ ಮೇಡಂ/ಸರ್ ನಾವು ಇಲ್ಲಿ ನಿಮ್ಮ ಮಕ್ಕಳನ್ನು ಬಹಳ ಜೋಪಾನವಾಗಿ ನೋಡ್ಕೋತೀವಿ ಹಾಗೆ ಬೇಕಾಬಿಟ್ಟಿ ಅಲ್ಲ. ನಿಮ್ಮ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ನಿಮಗೂ ಇದೆ. ಮಕ್ಕಳಿಗೆ ಜ್ವರ ಬರಲು ಶಾಲೆ ಒಂದೇ ಕಾರಣವಾಗುವುದಿಲ್ಲ! ನಾವು ಇಲ್ಲಿ ಅವರಿಗೆ ಬಹಳ ಕೇರ್ ಫುಲ್ ಆಗಿ ನೋಡ್ಕೋಂತ ಇದ್ದೀವಿ. ಜ್ವರ ಬಂದಿದೆ ಅಂತ ಹೇಳಿದ್ರೆ ಶಾಲೆಗೆ ಯಾಕ್ರೀ ಕಳಿಸ್ತೀರಾ? ಸುಮ್ಮನೆ ಮನೇಲಿ ಅವರು ರೆಸ್ಟ್ ಮಾಡಲಿ. ಅದೇ ಮಕ್ಕಳು ಶಾಲೆಗೆ ಬಂದ ನಂತರ, ಅವರಿಂದ ಬೇರೆ ಮಕ್ಕಳಿಗೂ ಜ್ವರ ಬರುತ್ತದೆ. ನಿಮ್ಮ ಮಗೂನ ಈಗಲೇ ಮನೆಗೆ ಕರ್ಕೊಂಡು ಹೋಗಿ,” ಎಂದು ಸಾರಾ ಪೋಷಕರ ಬಳಿ ಕೋಪದಿಂದ ಉತ್ತರಿಸಿದಳು.
ಆಗ ಆ ಪೋಷಕರು ಏನೂ ಮಾತನಾಡದೆ ಸುಮ್ಮನೆ ಅವರ ಮಗುವನ್ನು ಕರೆದುಕೊಂಡು ಹೋದರು. ಆಗ ಸಾರಾ ಮುಗುಳ್ನಕ್ಕಳು. ಇದನ್ನು ಥಾಮಸ್ ದೂರದಿಂದ ಗಮನಿಸಿದರು.
ಅಂದು ಬೆಳಗ್ಗೆ 11 ಗಂಟೆಯ ಸಮಯ. ಪ್ರಿನ್ಸಿಪಾಲ್ ಥಾಮಸ್, ಒಬ್ಬ ಧರ್ಮನಿಷ್ಠ ಕ್ರಿಶ್ಚಿಯನ್. ತನ್ನ ಕಛೇರಿಯಲ್ಲಿ ನಿಂತು ಸಂಭಾವ್ಯ ಕನ್ನಡ ಶಿಕ್ಷಕರ ರೆಸ್ಯೂಮ್ ಗಳನ್ನು ಸ್ಕ್ಯಾನ್ ಮಾಡುತ್ತಿದ್ದರು. ಅವರಿಗೆ ಒಂದು ನಿರ್ದಿಷ್ಟವಾದ ಅವಶ್ಯಕತೆ ಇತ್ತು. ಶಿಕ್ಷಕರು ಕ್ರಿಶ್ಚಿಯನ್ ಆಗಿದ್ದರೆ ಆ ಶಾಲೆಗೆ ಅವರು ಅನುಗುಣವಾಗಿ ಅನುಸರಿಸಿಕೊಂಡು ಹೋಗುತ್ತಾರೆಂಬ ಭಾವನೆ ಅವರದಾಗಿತ್ತು. ಏಕೆಂದರೆ ಅಲ್ಲಿ ಶಿಕ್ಷಕರಾಗಿದ್ದ ಎಲ್ಲರೂ ಕ್ರೈಸ್ತರಾಗಿದ್ದರು.
ಹಲವಾರು ವಿಫಲ ಸಂದರ್ಶನಗಳ ನಂತರ, ಥಾಮಸ್ ಇಷ್ಟವಿಲ್ಲದೆ ಕ್ರೈಸ್ತೇತರ ಅಭ್ಯರ್ಥಿಗಳನ್ನು ಪರಿಗಣಿಸಲು ನಿರ್ಧರಿಸಿದರು. ಯಾರೂ ಕನ್ನಡದ ಅಭಿಮಾನದೊಂದಿಗೆ ಶಿಕ್ಷಕಿಯಾಗಿ ಅರಿಗೆ ಪರಿಚಯವಾಗಲಿಲ್ಲ! ಹೀಗೆ ಹಲವು ದಿನಗಳು ಕಳೆದವು. ಭಾರತಿ ಕನ್ನಡದ ಶಿಕ್ಷಕಿಯಾಗಿ ಅದೇ ಶಾಲೆಗೆ ಇಂಟರ್ ವ್ಯೂ ಅಟೆಂಡ್ ಮಾಡಲು ಬಂದಿದ್ದಳು. ಅವರು ಅರ್ಹ ಮತ್ತು ಉತ್ಸಾಹಭರಿತ ಹಿಂದೂ ಆಗಿದ್ದ ಭಾರತಿಯನ್ನು ಭೇಟಿಯಾದರು. ಕನ್ನಡ ಶಿಕ್ಷಕಿ ಯಾವ ರೀತಿಯಲ್ಲಿ ಇರಬೇಕು ಎಂದು ಥಾಮಸ್ ಬಯಸಿದ್ದರೋ ಶೇ.70ರಷ್ಟು ಅದೇ ರೀತಿಯ ಗುಣಗಳು ಭಾರತಿಯಲ್ಲಿತ್ತು.
“ನೋಡಮ್ಮ ಭಾರತಿ, ನಿಮಗೆ ಇಲ್ಲಿ ಕೆಲಸ ನಿರ್ವಹಿಸಲು ಸ್ವಲ್ಪ ವಿಭಿನ್ನತೆ ಕಾಣಬಹುದು. ಏಕೆಂದರೆ ಇಲ್ಲಿ ಇವರು ಎಲ್ಲಾ ಶಿಕ್ಷಕರು ಕ್ರೈಸ್ತ ಧರ್ಮೀಯರು. ನೀವು ಹಿಂದೂ ಧರ್ಮಕ್ಕೆ ಸೇರಿದರು. ನಿಮಗೆ ಇಲ್ಲಿ ಕನ್ನಡ ಭಾಷೆಯ ಶಿಕ್ಷಕಿಯಾಗಿ ಕೆಲಸ ಮಾಡಲು ಯಾವ ಅಡ್ಡಿ ಆಂತಕಗಳು ಇಲ್ಲವಾದರೆ, ನೀವು ಇಲ್ಲಿ ಶಿಕ್ಷಕಿಯಾಗಿ ನಿಮ್ಮ ಸ್ಥಾನವನ್ನು ಮುಂದುವರಿಸಿರಿ. ನಿಮಗೆ ಯಾವ ತರಹದ ಅಸಮಾಧಾನವಾದರೂ ನನ್ನೊಂದಿಗೆ ಹಂಚಿಕೊಳ್ಳಿ. ನಿಮಗೆ ಇಲ್ಲಿ ಕೆಲಸ ಮಾಡಲು ಮನಃಸ್ಛೂರ್ತಿಯಾಗಿ ಇಷ್ಟವಿದ್ದರೆ ಮಾತ್ರ ನಾಳೆಯಿಂದ ಕೆಲಸಕ್ಕೆ ಜಾಯಿನ್ ಆಗಬಹುದು,” ಎಂದು ಥಾಮಸ್ ಆತ್ಮೀಯವಾಗಿ ಮಾತನಾಡಿದರು.
“ಹೌದು ಸರ್. ನೀವು ಹೇಳುತ್ತಿರುವ ಮಾತುಗಳು ಅಕ್ಷರಶಃ ನಿಜವೇ. ಇಲ್ಲಿನ ವಾತಾವರಣ ನನಗೆ ಪೂರ್ತಿಯಾಗಿ ಹೊಸದಾಗಿದೆ ಎನಿಸುತ್ತದೆ. ನನಗೆ ಧರ್ಮದ ಭೇದಭಾವಗಳಿಲ್ಲ. ನಾವೆಲ್ಲರೂ ಭಾರತೀಯರು ಎನ್ನುವ ಹೆಮ್ಮೆ ಇದೆ. ನಾವು ಎಲ್ಲೇ ಕೆಲಸ ಮಾಡಿದರೂ ಅದಕ್ಕೆ ತಕ್ಕ ಹಾಗೆ ಹೊಂದಿಕೊಂಡು, ಕರ್ತವ್ಯನಿಷ್ಠೆಯಿಂದ ಪರಿಪಾಲಿಸಿದರೆ ಆ ಕೆಲಸ ಪರಿಪೂರ್ಣವಾಗುತ್ತದೆ ಎಂಬ ನಂಬಿಕೆ ನನಗಿದೆ. ಇಂತಹ ಒಳ್ಳೆಯ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುವುದೆಂದರೆ ನನಗೂ ಅಚ್ಚುಮೆಚ್ಚು. ನೀವು ಧರ್ಮದ ಬಗ್ಗೆ ಚಿಂತೆ ಬಿಟ್ಟುಬಿಡಿ. ನಾನು ನನ್ನತನವನ್ನು ಎಂದಿಗೂ ಬಿಟ್ಟುಕೊಡದೆ ಶ್ರದ್ಧೆಯಿಂದ ಕೆಲಸ ಮಾಡುತ್ತೇನೆ. ನನ್ನ ಮೇಲೆ ನೀವು ನಂಬಿಕೆ ಇಡಿ. ಸರ್…. ನಾನು ನಾಳೆಯಿಂದ ಕನ್ನಡ ಶಿಕ್ಷಕಿಯಾಗಿ ಬರುತ್ತೇನೆ. ನನಗೆ ಕೆಲಸ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು,” ಎಂದು ವಿನಯದಿಂದ ಹೇಳಿ ಅಲ್ಲಿಂದ ಹೊರಟಳು.
ಮರುದಿನ ಭಾರತಿಗೆ ಶಾಲೆಯಲ್ಲಿ ಮೊದಲ ದಿನ ಕುತೂಹಲದಿಂದ ಕೂಡಿತ್ತು! ಅವಳು ಸಿಬ್ಬಂದಿ ಕೊಠಡಿ ಪ್ರವೇಶಿಸುತ್ತಿದ್ದಂತೆ ಇಡೀ ಕೊಠಡಿ ಮೌನವಾಯಿತು. ಅಲ್ಲಿದ್ದ ಶಿಕ್ಷಕರೆಲ್ಲ ಅವಳನ್ನೇ ದಿಟ್ಟಿಸಿ ನೋಡತೊಡಗಿದರು. ಭಾರತಿ ಎಲ್ಲರನ್ನೂ ನೋಡಿ ಮಂದಹಾಸ ಬೀರುತ್ತಾ, “ಎಲ್ಲರಿಗೂ ಶುಭೋದಯ. ನಾನು ಭಾರತಿ, ಇಂದಿನಿಂದ ನಿಮ್ಮೊಂದಿಗೆ ನಾನೂ ಒಬ್ಬ ಟೀಚರ್ ಆಗಿ ಇರುತ್ತೇನೆ,” ಎಂದು ತಣ್ಣನೆಯ ಸ್ವಾಗತದಿಂದ ವಿಚಲಿತಳಾಗದೆ ಹೇಳಿದಳು.
ಕೊಠಡಿ ಮೌನವಾಗಿತ್ತು. ಇತರ ಶಿಕ್ಷಕರು ಅನಾನೂಕೂಲ ನೋಟಗಳನ್ನು ವಿನಿಮಯ ಮಾಡಿಕೊಂಡರು. ಮನಸ್ಸಿನಲ್ಲಿ ನೂರಾರು ಪ್ರಶ್ನೆಗಳು ಮೂಡಿದರೂ, ಯಾರೂ ಅದನ್ನು ವ್ಯಕ್ತಪಡಿಸದೆ ಅರೆ ಮನಸ್ಸಿನಿಂದ ಭಾರತಿಯನ್ನು ಐವರು ಶಿಕ್ಷಕಿಯರು ಕೈಕುಲಕಿ ಸ್ವಾಗತಿಸಿದರು.
ಎಮಿಲಿ ವಿಲ್ಸನ್ ಇಂಗ್ಲಿಷ್ ಶಿಕ್ಷಕಿ, ರೇಚಲ್ ಗಣಿತ ಶಿಕ್ಷಕಿ, ಸಾರಾ ವಿಜ್ಞಾನ ಶಿಕ್ಷಕಿ, ವೆನಿಲಾ ಇತಿಹಾಸ ಮತ್ತು ಕ್ರಾಫ್ಟ್ ಶಿಕ್ಷಕಿ, ಒಲಿವಿಯಾ ಮಾರ್ಟಿನ್ ಭೂಗೋಳ ಶಿಕ್ಷಕಿ. ಇವರೆಲ್ಲಾ ಮೊದಲ ದಿನ ಮಾತ್ರ ಭಾರತಿಯನ್ನು ಸ್ವಾಗತಿಸಿದರು.
ಮಧ್ಯಾಹ್ನ ಊಟದ ಸಮಯವಾಗಿತ್ತು. ಈ ಐದೂ ಮಂದಿ ಶಿಕ್ಷಕಿಯರು ಒಂದೇ ಕಡೆ ಮಾತನಾಡಿಕೊಂಡು ಊಟಕ್ಕೆ ಕುಳಿತಿದ್ದರು. ಅದೇ ಸಮಯಕ್ಕೆ ಭಾರತಿ ಅವರ ಮಧ್ಯೆ ಹೋಗಿ, “ನಾನು ನಿಮ್ಮೊಟ್ಟಿಗೆ ಕೂತ್ಕೊಂಡು ಊಟ ಮಾಡ್ತೀನಿ. ನನಗೊಬ್ಬಳಿಗೇ ತಿನ್ನಬೇಕು ಅಂದ್ರೆ ಬೇಜಾರಾಗುತ್ತೆ ಪ್ಲೀಸ್. ನಾನು ದೇವಸ್ಥಾನದಿಂದ ಲಡ್ಡು ತಂದಿದ್ದೀನಿ ತಗೊಳ್ಳಿ. ಪ್ರಸಾದ ತಿನ್ನೋಕೆ ಏನೂ ಪರವಾಗಿಲ್ಲ ತಾನೇ….?” ಎಂದಳು.
ಅವರೆಲ್ಲರೂ ಲಡ್ಡುವನ್ನು ತೆಗೆದುಕೊಳ್ಳದೆ, ಮುಖ ತಿರುಗಿಸಿ ಆ ಜಾಗವನ್ನು ಬಿಟ್ಟು ಬೇರೆ ಜಾಗಕ್ಕೆ ಹೋಗಿ ಅಲ್ಲಿ ಕುಳಿತು ಊಟ ಮಾಡಿದರು. ಭಾರತಿಗೆ ಅವರೆಲ್ಲರೂ ಮಾಡಿದ ಅವಮಾನ ಬಹಳ ನೋವು ಉಂಟು ಮಾಡಿತು. ಆದರೂ ಅದನ್ನು ಸಹಿಸಿಕೊಂಡು ಒಬ್ಬಳೇ ಕುಳಿತು ಊಟ ಮಾಡಿದಳು. ಅವರೆಲ್ಲರೂ ಭಾರತಿಯನ್ನು ನೋಡಿ ಗುಸುಗುಸು ಮಾತಾಡಿಕೊಂಡರು.
ಭಾರತಿ ದಿನ ಅಪ್ಪಟ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಾಗೆಯೇ ಸುಶೀಲವಂತೆಯಾಗಿಯೂ, ಸಂಸ್ಕಾರವಂತಳಾಗಿಯೂ ಅವಳ ವಸ್ತ್ರಾಲಂಕಾರ ಇರುತ್ತಿತ್ತು.
ಹೀಗೆ ದಿನಗಳು ಕಳೆಯುತ್ತಿದ್ದವು. ಭಾರತಿ ಇತರರಿಗೆ ಶುಭಾಶಯ, ಹಿತನುಡಿಗಳನ್ನು ನೀಡುತ್ತಲೇ ಇದ್ದಳು. ಆದರೆ ಬೇರೆ ಶಿಕ್ಷಕರ ಅಸಡ್ಡೆ ಮಾತ್ರ ಕಡಿಮೆಯಾಗಲಿಲ್ಲ. ಹಗೆತನದ ಹೊರತಾಗಿಯೂ, ಅವಳು ತನ್ನ ವಿದ್ಯಾರ್ಥಿಗಳ ಮೇಲೆ ಗಮನ ಕೇಂದ್ರೀಕರಿಸಿದಳು. ಅವಳು ತನ್ನ ಆಕರ್ಷಕ ಬೋಧನ ಶೈಲಿ ಮತ್ತು ಮನರಂಜನಾ ಕಥೆಗಳನ್ನು ಹೇಳಿ ಮಕ್ಕಳನ್ನು ಪ್ರೋತ್ಸಾಹಪಡಿಸುತ್ತಿದ್ದಳು.
ಎರಡನೇ ತರಗತಿಯ ಮಕ್ಕಳ ಬಳಿ ಭಾರತಿ, “ಈ ಒಗಟನ್ನು ಯಾರು ಪರಿಹರಿಸುತ್ತೀರಿ…? ಯಾವುದರಲ್ಲಿ ಕೀಲಿಗಳಿವೆ, ಆದರೆ ಬೀಗಗಳನ್ನು ತೆರೆಯಲು ಸಾಧ್ಯವಿಲ್ಲ….?” ಎಂದು ಕೇಳಿದಳು.
ಗಿರೀಶ್ ಎದ್ದು ನಿಂತು, “ಹ್ಞಾಂ ಮೇಡಂ…. ಹೌದು ನಮ್ಮನೇಲಿ ಯಾವುದೊ ಒಂದು ಬೀಗ ಇದೆ. ಆದರೆ ಅದರ ಕೀ ಎಲ್ಲೂ ಕಾಣ್ತಾ ಇಲ್ಲ. ಮೋಸ್ಟಲಿ ನೀವು ಅದನ್ನು ಕೇಳುತ್ತಿದ್ದೀರಾ ಅಂತ ಅನಿಸುತ್ತೆ. ನಮ್ಮನೆ ವಿಷಯ ನಿಮಗೆ ಹೇಗೆ ಗೊತ್ತಾಯ್ತು ಮೇಡಂ?” ಎಂದು ಪ್ರಶ್ನೆ ಕೇಳಿದ.
ಅಲ್ಲಿರುವ ಮಕ್ಕಳೆಲ್ಲಾ ಗೊಳ್ ಎಂದು ನಕ್ಕರು. ಆ ಹುಡುಗ ತಲೆ ತಗ್ಗಿಸಿಕೊಂಡು ಸುಮ್ಮನೆ ಕುಳಿತುಕೊಂಡ.
“ಗಿರೀಶ್ ಬಾ ಇಲ್ಲಿ, ಚಾಕ್ ಪೀಸ್ ತೆಗೆದುಕೊಂಡು ನಾನು ಹೇಳೋದನ್ನು ಬೋರ್ಡ್ ಮೇಲೆ ಬರಿ,” ಎಂದಳು ಭಾರತಿ.
ಅವನು ಬೋರ್ಡ್ ಬಳಿ ಬಂದು ಟೀಚರ್ ಹೇಳಿದ ಹಾಗೆ ಬರೆಯಲು ಪ್ರಯತ್ನಿಸಿದ.
“ಒಂದು ಟೇಬಲ್ ಮೇಲೆ ಬಾಟಲಲ್ಲಿ ನೀರು ಇಟ್ಟಿದ್ದಾರೆ. ಆದರೆ ಅದು ಚೆಲ್ಲಿ ಹೋಗಿದೆ. ಇದನ್ನು ನೀನು ಬರೆಯಬೇಕು,” ಎಂದು ಭಾರತಿ ಹೇಳಿದಳು.
ಗಿರೀಶ್ ಟೇಬಲ್, ಚೇರು, ಖಾಲಿ ಬಾಟಲ್ ಮತ್ತು ನೆಲದ ಮೇಲೆ ಪೂರ್ತಿಯಾಗಿ ನೀರು ಚೆಲ್ಲಿರುವುದನ್ನು ಚಿತ್ರವಾಗಿ ಬಿಡಿಸಿದ. ಆಗ ಭಾರತಿ, “ಮಕ್ಕಳೇ, ನೀವು ಗಿರೀಶನನ್ನು ನೋಡಿ ನಕ್ಕಿದ್ರಿ. ಆದರೆ ಅವನ ಆಲೋಚನೆಗಳು ಬಹಳ ವಿಭಿನ್ನವಾಗಿವೆ. ಎಲ್ಲರ ಹಾಗೆ ಅವನು ಯೋಚಿಸುವುದಿಲ್ಲ. ಅವನು ಕೋಣೆ ತುಂಬಾ ನೀರು ತುಂಬಿಸಿದ್ದಾನೆ. ಎಲ್ಲರೂ ತಿಳಿದುಕೊಳ್ಳುವುದು ಬಾಟಲ್ ನಿಂದ ನೀರು ಟೇಬಲ್ ಮೇಲೆ ಚೆಲ್ಲಿದೆ ಅಂತ. ನಾನು ಒಗಟನ್ನು ಕೇಳಿದಾಗ ಪಾಪ ಅವನಿಗೆ, ಅವರ ಮನೆಯ ಚಿಂತೆ ಬಂದು ಆ ರೀತಿ ಹೇಳಿದ್ದಾನೆ ಅಷ್ಟೆ. ಇದರಲ್ಲಿ ನಗುವುದೇನೂ ಇಲ್ಲ,” ಎಂದು ಮಕ್ಕಳಿಗೆ ತಿಳಿ ಹೇಳಿದಳು.
ತಕ್ಷಣ ಗಿರೀಶ್, “ಮೇಡಂ, ನೀವು ಕೇಳಿದ ಪ್ರಶ್ನೆಗೆ ಉತ್ತರ ಕೀಬೋರ್ಡ್ ತಾನೇ,” ಎಂದು ಉತ್ತರಿಸಿದ.
ತರಗತಿಯಲ್ಲಿ ನಗು ಮತ್ತು ಚಪ್ಪಾಳೆಗಳ ಶಬ್ದ ಕೇಳಿತು. ಭಾರತಿ ಹೆಮ್ಮೆಯಿಂದ, “ನೋಡಿ ಮಕ್ಕಳೇ, ಗಿರೀಶ್ ಬುದ್ಧಿವಂತ ಅಂತ ಈಗ ಗೊತ್ತಾಯ್ತಾ…..? ಇನ್ನು ಮೇಲೆ ಯಾರೂ ಬೇರೆಯವರ ಬಗ್ಗೆ ಕೀಳಾಗಿ ನೋಡೋದನ್ನು ಬಿಡಿ. ಅವರಲ್ಲಿ ಇವರು ಒಳ್ಳೆತನ ಗುರುತಿಸಬೇಕು ಗೊತ್ತಾಯ್ತಾ….” ಎಂದು ಕೇಳಿದಳು.
“ಓ.ಕೆ….. ಟೀಚರ್,” ಎಂದು ಮಕ್ಕಳೆಲ್ಲರೂ ಒಕ್ಕೊರಲಿನಿಂದ ಹೇಳಿದರು.
ಮಕ್ಕಳೆಲ್ಲರೂ ಭಾರತಿಯ ಮಾತುಗಳನ್ನು ಒಪ್ಪಿದ್ದಕ್ಕೆ ಮನಸ್ಸಿಗೆ ಸಮಾಧಾನವಾಯಿತು. ಹೀಗೆ ಭಾರತಿ ತನ್ನ ವಿಭಿನ್ನತೆಯಿಂದ ಶಾಲೆಯಲ್ಲಿ ನಿಧಾನವಾಗಿ ಪ್ರಸಿದ್ಧಿಯಾಗುತ್ತಾ ಮಕ್ಕಳ ಬಾಯಲ್ಲಿ ತನ್ನ ಬಗ್ಗೆ ಇರುವ ಗೌರವವನ್ನು ವ್ಯಕ್ತಪಡಿಸುತ್ತಾ ಬಂದಳು. ಬೇರೆ ಶಿಕ್ಷಕರಿಗೆ ಭಾರತಿಯ ಜನಪ್ರಿಯತೆಯ ಬಗ್ಗೆ ಹೆಚ್ಚು ಹೆಚ್ಚು ಅಸೂಯೆ ಉಂಟಾಯಿತು.
“ವಿದ್ಯಾರ್ಥಿಗಳು ಭಾರತಿಯನ್ನು ಏಕೆ ಇಷ್ಟೊಂದು ಪ್ರೀತಿಸುತ್ತಾರೆಂದು ನನಗೆ ಅರ್ಥವಾಗುತ್ತಿಲ್ಲ. ನಾವೆಲ್ಲಾ ಐದಾರು ವರ್ಷಗಳಿಂದ ಇದೇ ಶಾಲೆಯಲ್ಲಿ ಇದ್ದೀವಿ. ಆದರೆ ನಮಗೆಲ್ಲಾ ಮಕ್ಕಳು ಒಂದು ದಿನ ಕೂಡ ಈ ರೀತಿ ಸ್ಪಂದಿಸಿರಲಿಲ್ಲವಲ್ಲ….. ಅವಳು ಏನೋ ಕುತಂತ್ರ ಮಾಡುತ್ತಿರಬೇಕು. ಅದನ್ನು ಕಂಡುಹಿಡಿಯಲೇಬೇಕು,” ಎಂದು ಸಾರಾ ಬೇರೆ ಶಿಕ್ಷಕಿಯರೊಂದಿಗೆ ದೂರಿದಳು. ಗುಂಪುಗಾರಿಕೆಯಲ್ಲಿ ಶಿಕ್ಷಕರು ಭಾರತಿಯ ಬಗ್ಗೆ ಚರ್ಚೆ ಮಾಡತೊಡಗಿದರು.
ಸಾರಾ ಪ್ರಾಂಶುಪಾಲರಾದ ಥಾಮಸ್ ಬಳಿ ಬಂದು, “ಸರ್ ನಾನು ನಿಮ್ಮ ಬಳಿ ಒಂದು ವಿಷಯ ಮಾತಾಡಲೇಬೇಕು. ಐದು ನಿಮಿಷ ನನಗೋಸ್ಕರ ಸ್ವಲ್ಪ ಫ್ರೀ ಮಾಡಿಕೊಳ್ಳಿ,” ಎಂದಳು.
“ಏನ್ ಹೇಳಿ ಸಾರಾ,” ಎಂದು ಥಾಮಸ್ ಕುತೂಹಲದಿಂದ ಪ್ರಶ್ನಿಸಿದರು.
“ಸರ್ ನಮ್ಮ ಶಾಲೆಗೆ ಒಂದು ವರ್ಷದ ಹಿಂದೆ ಅಪಾಯಿಂಟ್ ಮೆಂಟ್ ಆಗಿರುವ ಕನ್ನಡ ಶಿಕ್ಷಕಿ ಭಾರತಿ ಮಕ್ಕಳೊಂದಿಗೆ ತುಂಬಾ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ. ಅವರು ಬೇಕೆಂತಲೇ ಹಿಂದೂ ಧರ್ಮ ತುಂಬಾ ಗ್ರೇಟ್. ಅದನ್ನು ನೀವೆಲ್ಲರೂ ಅಳವಡಿಸಿಕೊಳ್ಳಿ ಅಂತ ನಮ್ಮ ಶಾಲೆ ಮಕ್ಕಳಿಗೆ ಪಾಠದ ನಂತರ ಹೇಳಿಕೊಡುತ್ತಿದ್ದಾರೆ. ಅವರಿಗೆ ನಮ್ಮ ಧರ್ಮದಲ್ಲಿ ನಂಬಿಕೆ ಇಲ್ಲ ಎಂದು ಕಾಣುತ್ತೆ…. ಅದನ್ನು ನಾನು ನನ್ನ ಕಿವಿಯಾರೆ ಕೇಳಿಸಿಕೊಂಡಿದ್ದೇನೆ. ನೀವು ಅವರನ್ನು ಈ ಶಾಲೆಯಿಂದ ತೆಗೆದುಹಾಕಿ ಪ್ಲೀಸ್. ಇದು ಯಾಕೋ ಸರಿ ಹೋಗುತ್ತಿಲ್ಲ ಅಂತ ನಮಗೆಲ್ಲಾ ಅನಿಸ್ತಾ ಇದೆ,” ಭಾರತಿ ಮೇಲಿನ ಹೊಟ್ಟೆಕಿಚ್ಚಿಗೆ ಬೇಕೆಂತಲೇ ಇಲ್ಲ ಸಲ್ಲದ ಅಪವಾದಗಳನ್ನು ಹೊರಿಸಲು ಪ್ರಯತ್ನಿಸಿದಳು.
“ಸಾರಾ…. ಸಾಕು ಬಾಯಿ ಮುಚ್ಚಿ! ನಾನು ಒಂದು ವರ್ಷದಿಂದ ನಿಮ್ಮೆಲ್ಲರನ್ನೂ ಗಮನಿಸ್ತಾನೆ ಇದ್ದೀನಿ. ನೀವೆಲ್ಲಾ ಭಾರತಿ ಜೊತೆಗೆ ಹೇಗೆ ನಡ್ಕೋತಿದ್ದೀರಾ ಅಂತ ನನಗೂ ಗೊತ್ತಿದೆ. ನೀವೆಲ್ಲಾ ಗುಂಪಗಾರಿಕೆ ಮಾಡ್ಕೊಂಡು ಭಾರತಿಯನ್ನು ಪಕ್ಕದಲ್ಲಿ ಕೂರಿಸಿಕೊಳ್ಳುವುದಿಲ್ಲ. ಸಹೊದ್ಯೋಗಿ ಎಂಬ ಭಾವನೆಯೂ ಇಲ್ಲದೆ ಮಾತನಾಡಿಸುವುದಿಲ್ಲ! ಅವರು ಹಿಂದೂ, ನಾವು ಕ್ರಿಶ್ಚಿಯನ್ ಎಂಬ ಭೇಧಭಾವದಲ್ಲಿ ಇರುವಿರಿ.
“ಆದರೆ ಭಾರತಿಯಲ್ಲಿ ನಾನು ಯಾವ ಕೀಳರಿಮೆಯನ್ನೂ ಕಂಡಿಲ್ಲ. ನಾನು ಇದನ್ನೆಲ್ಲಾ ಪರಿಶೀಲಿಸಿಯೇ ಆಕೆಯನ್ನು ನಮ್ಮ ಶಾಲೆಗೆ ಶಿಕ್ಷಕಿಯಾಗಿ ಸೇರಿಸಿಕೊಂಡಿದ್ದು. ಆಕೆಯ ಮುಗ್ಧತೆ ಮತ್ತು ಸಂಸ್ಕಾರಗಳು ಎಲ್ಲರಿಗೂ ಮೆಚ್ಚಿಗೆಯಾಗುವ ವ್ಯಕ್ತಿತ್ವ ಅವರದ್ದು. ನಮ್ಮ ಶಾಲೆಯಲ್ಲಿ ಮಕ್ಕಳೆಲ್ಲಾ ಕನ್ನಡ ಎಂದರೆ ಇಷ್ಟಪಡುತ್ತಿರಲಿಲ್ಲ. ಜೊತೆಗೆ ಕೇವಲ 20% ಮಕ್ಕಳಷ್ಟೇ ಕನ್ನಡ ಸಬ್ಜೆಕ್ಟ್ ನಲ್ಲಿ ಪಾಸ್ ಆಗುತ್ತಿದ್ದರು. ಆದರೆ ಈಗ 80% ಮಕ್ಕಳು ಉತ್ತೀರ್ಣರಾಗುತ್ತಿದ್ದಾರೆ!
“ಇದರಲ್ಲಿಯೇ ಗೊತ್ತಾಗುತ್ತೆ ಆಕೆ ತನ್ನ ಕೆಲಸದಲ್ಲಿ ಎಷ್ಟು ಶ್ರದ್ಧೆ ಇಟ್ಟು ಮಕ್ಕಳಲ್ಲಿ ಆಸಕ್ತಿ ತುಂಬಿಸಿ ಓದಿನ ಕಡೆ ಕಾಳಜಿ ವಹಿಸುತ್ತಿದ್ದಾರೆಂದು. ಆದರೆ ನೀವೆಲ್ಲಾ ಇಷ್ಟು ವರ್ಷಗಳಲ್ಲಿ ಇಲ್ಲೇ ಇದ್ದು ಕೆಲಸ ನಿರ್ವಹಿಸಿ ಮಕ್ಕಳಲ್ಲಿ ಯಾವ ರೀತಿಯ ಬದಲಾವಣೆ ತರಲು ಪ್ರಯತ್ನಿಸಿದ್ದೀರಿ….? ನಿಮ್ಮ ಸಬ್ಜೆಕ್ಟ್ ಗಳಲ್ಲಿ ಮಾತ್ರ ನೀವು ಫೋಕಸ್ ಮಾಡಿ ಮಕ್ಕಳನ್ನು ತಿದ್ದಿ ಬುದ್ಧಿ ಹೇಳಿದ್ದೀರಾ….?
“ಅದೂ ಅಲ್ಲದೇ ಯಾವುದಾದರೂ ಮಗೂಗೆ ಹುಷಾರಿಲ್ಲ ಅಂದ್ರೆ ಆ ಮಗೂನ ಹೇಗೆ ನೋಡ್ಕೊಬೇಕು ಅಂತ ನಿಮಗೆ ಗೊತ್ತಿಲ್ಲಾ….? ಶಿಕ್ಷಕರಂದ್ರೆ ಮಕ್ಕಳನ್ನು ದೂರದಿಂದ ಬರೀ ಬಾಯಿ ಮಾತಿಗೆ ಹೇಳಿ ಸುಮ್ಮನೆ ಇರುವ ಉದ್ದೇಶವಲ್ಲ. ಆ ನರ್ಸರಿ ಮಕ್ಕಳು ಶಿಕ್ಷಕರಲ್ಲಿ ತಾಯಿ ಪ್ರೀತಿಯನ್ನು ಬಯಸುತ್ತಾರೆ. ನಾನು ಭಾರತಿಯನ್ನು ಗಮನಿಸ್ತಾ ಇದ್ದೀನಿ. ಆಕೆ ಯಾವುದಾದ್ರೂ ಮಗು ಬಿದ್ದುಬಿಟ್ಟರೆ, ಮೊದಲು ಅದನ್ನು ಎತ್ತಿ, ಅದಕ್ಕಾದ ಗಾಯವನ್ನು ಒರೆಸಿ, ಕ್ಲೀನ್ ಮಾಡಿ ಔಷಧಿ ಹಚ್ಚಿ, ಅದನ್ನು ಗಟ್ಟಿಯಾಗಿ ಅಪ್ಪಿಕೊಂಡು, ಧೈರ್ಯ ಭರವಸೆ ಕೊಟ್ಟು, `ನೀನು ಗುಣಮುಖ ಆಗ್ತೀಯಾ,’ ಅಂತ ಹೇಳ್ತಾರೆ.
“ಆಗ ಆ ಮಗುವಿಗೆ ಶಿಕ್ಷಕರೆಂದರೆ, ಒಂದು ರೀತಿ ಪ್ರೀತಿ ಮತ್ತು ಗೌರವ ಹುಟ್ಟುತ್ತೆ. ನನ್ನ ಇಷ್ಟು ವರ್ಷಗಳ ಸರ್ವೀಸ್ ನಲ್ಲಿ ನಾನು ಯಾವತ್ತೂ ನೀವುಗಳು ಹಾಗೆ ನಡಕೊಂಡಿದ್ದನ್ನು ನೋಡೇ ಇಲ್ಲ. ಆದರೆ ಭಾರತಿ ಕೆಲಸಕ್ಕೆ ಸೇರಿದ ದಿನದಿಂದಲೂ ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು ಬಂದೆ, ಆಕೆ ಮನಸ್ಸಿಗೆ ಅನುಸಾರವಾಗಿ ಮಕ್ಕಳೊಂದಿಗೆ ಒಂದೊಂದು ದಿನ ವಿಭಿನ್ನ ರೀತಿಯಲ್ಲಿ ಪಾಠಗಳನ್ನು ಹೇಳಿಕೊಡುತ್ತಾರೆ. ನನಗೆ ಯಾರು ಹೇಗೆ ಅಂತ ತಿಳಿದಿದೆ…..
“ಇನ್ನು ಮೇಲಾದರೂ ನೀವೆಲ್ಲರೂ ಎಚ್ಚೆತ್ತುಕೊಂಡು ಭಾರತಿಯೊಂದಿಗೆ ಪ್ರೀತಿಯಿಂದ ವರ್ತಿಸಬೇಕು. ಇಲ್ಲವಾದರೆ ಪರಿಣಾಮ ನೆಟ್ಟಗೆ ಇರುವುದಿಲ್ಲ,” ಎಂದು ಕೋಪದಿಂದ ಕೂಗಾಡಿದರು.
ಪ್ರಾಂಶುಪಾಲರು ಹೇಳಿದ ಕಹಿಯಾದ ಮಾತುಗಳು ಸಾರಾಳ ಮನಸ್ಸಿಗೆ ಬಹಳ ನೋವು ಉಂಟು ಮಾಡಿತು. ಅವುಳು ಏನೂ ಹೇಳದೆ ಆಯಿತು ಎಂಬಂತೆ ತಲೆಯಾಡಿಸಿ ಅಲ್ಲಿಂದ ಹೋದಳು.
ಅದೇ ದಿನ ಸಂಜೆ ಶಾಲೆ ಬಿಟ್ಟ ಮೇಲೆ, ಸಾರಾ ಥಾಮಸ್ ಹೇಳಿದ ಮಾತುಗಳನ್ನು ನೆನಪು ಮಾಡಿಕೊಳ್ಳುತ್ತಾ ಬೇಸರದಿಂದ ಗಾಡಿ ಓಡಿಸಿಕೊಂಡು ಮನೆಗೆ ಹೋಗುತ್ತಿದ್ದಾಗ, ಹಿಂದಿನಿಂದ ಬೇರೊಂದು ಗಾಡಿಯಲ್ಲಿ ಬರುತ್ತಿದ್ದ ಒಬ್ಬ ಕಳ್ಳ ಸಾರಾಳ ಕುತ್ತಿಗೆಗೆ ಕೈ ಹಾಕಿ ಅವಳ ತಾಳಿ ಸರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ. ಅದೇ ಸಮಯಕ್ಕೆ ಭಾರತಿ ಸಹ ಅದೇ ಮಾರ್ಗವಾಗಿ ಹೋಗುತ್ತಿದ್ದಳು. ಅವಳು ತನ್ನ ಬಳಿ ಇದ್ದ ಪೆಪ್ಪರ್ ಸ್ಪ್ರೇಯನ್ನು ಕಳ್ಳನ ಕಣ್ಣುಗಳಿಗೆ ರಭಸದಿಂದ ಸ್ಪ್ರೇ ಮಾಡಿದಳು. ಕಣ್ಣು ಬಿಡುವುದು ಅಸಾಧ್ಯವಾಗಿ, ಕಣ್ಣುರಿಯಿಂದ ಅವನಿಗೆ ಗಾಡಿಯ ಮೇಲಿದ್ದ ಹತೋಟಿ ತಪ್ಪಿ, ರಸ್ತೆ ಬದಿಯಲ್ಲಿ ಜಾರಿ ಬಿದ್ದುಬಿಟ್ಟ. ಸಾರಾ ಮತ್ತು ಭಾರತಿ ಇಬ್ಬರೂ ಅಲ್ಲಿಂದ ವೇಗವಾಗಿ ಹೋದರು. ಅವರು ಮುಂದೆ ಸ್ವಲ್ಪ ದೂರದಲ್ಲಿದ್ದ ಒಂದು ಕೆಫೆಯಲ್ಲಿ ಕುಳಿತುಕೊಂಡರು. ಮೊದಲಿಗೆ ಸಾರಾ ಭಾರತಿ ಮುಂದೆ ತಲೆ ತಗ್ಗಿಸಿ, ಅವಳ ಕೈಯಿಹಿಡಿದು, “ಭಾರತಿ, ಐ ಆ್ಯಮ್ ಸಾರಿ…. ನನಗೆ ನೀವು ಇಷ್ಟು ಒಳ್ಳೆಯವರು ಅಂತ ಈಗಷ್ಟೇ ಗೊತ್ತಾಗಿದೆ. ನಾವೆಲ್ಲ ನಿಮ್ಮನ್ನು ಎಷ್ಟು ಅವಮಾನ ಮಾಡಿದ್ರೂ ನೀವು ಅದೇ ಮಂದಹಾಸದಿಂದ ನಮ್ಮೊಂದಿಗೆ ಮಾತನಾಡಿಸ್ತಿದ್ರೀ…. ಇವತ್ತು ನೀವು ನನ್ನನ್ನು ಕಾಪಾಡಲಿಲ್ಲ ಅಂದ್ರೆ ನಾನು ಈ ಚಿನ್ನದ ತಾಳಿಸರವನ್ನು ಕಳ್ಕೊತ್ತಿದ್ದೆ.
“ನನ್ನ ಯಜಮಾನರಿಗೆ ಮೈ ತುಂಬಾ ಸಾಲ. ಆದ್ದರಿಂದ ನನ್ನ ಬಳಿ ಇದ್ದ ಎಲ್ಲಾ ಒಡವೆಗಳನ್ನು ಕಳ್ಕೊಂಡು ಬಿಟ್ಟಿದೀವಿ. ಈಗ ನನ್ನ ಬಳಿ ಈ ಚಿನ್ನದ ತಾಳಿ ಚೈನ್ ಒಂದೇ ಇರುವುದು. ನನಗೆ ಈ ತರಹ ಒಂದು ದುರ್ಘಟನೆ ಸಂಭವಿಸಿದ ಮೇಲೆ ನಾನು ಇದನ್ನು ಭದ್ರವಾಗಿ ಎತ್ತಿಡುತ್ತೀನಿ. ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಕಡಿಮೆಯೇ…..
“ನಾವು ಒಮ್ಮೊಮ್ಮೆ ಜೀವನವನ್ನು ಎಷ್ಟು ತಪ್ಪಾಗಿ ತೊಗೊಂಡು ಹೋಗ್ತೀವಿ. ಆದ್ರೆ ನಿಮ್ಮಂಥವರು ಮೌನಿಯಾಗಿದ್ದು, ನೋವುಗಳನ್ನು ಸಹಿಸಿಕೊಂಡು, ಎಲ್ಲವನ್ನೂ ಮೆಟ್ಟಿ ನಿಂತು ನಮ್ಮೆಲ್ಲರಿಗೂ ಬದುಕಲು ಮಾದರಿಯಾರಿದ್ದೀರಿ…..! ಇನ್ನು ಮೇಲೆ ಬೇಜಾರಿಲ್ಲ ಅಂದ್ರೆ ನಾನು ಶಾಲೆಯಲ್ಲಿ ನಿಮ್ಮ ಜೊತೆ ಊಟ ಮಾಡ್ತೀನಿ,” ಎಂದು ಕಣ್ತುಂಬಾ ನೀರು ತುಂಬಿಕೊಂಡು ಪಶ್ಚಾತ್ತಾಪದಿಂದ ಕೇಳಿಕೊಂಡಳು.
“ಈ ರೀತಿ ಚಿಕ್ಕ ಮಗು ತರ ಅಳ್ಬೇಡಿ ಸಾರಾ. ಜೀವನ ತುಂಬಾ ದೊಡ್ಡದು. ನಾವು ದೊಡ್ಡ ಮನಸ್ಸಿನಿಂದ ನೋಡಿದ್ರೆ, ಅದು ವಿಶಾಲವಾಗಿ ಕಾಣುತ್ತೆ ಅಷ್ಟೇ. ನಾನು ಮಾಡಿದ್ದು ಅದನ್ನೆ. ಇದಕ್ಕೂ ಮೇಲೆ ನಾನು ಬೇರೇನೂ ಮಾಡಿಲ್ಲ. ನಾವೆಲ್ಲ ಒಂದೇ ಕಡೆ ಇದ್ದು ಕೆಲಸ ಮಾಡುತ್ತಿದ್ದೇವೆ. ಅಂದ ಮೇಲೆ ಒಂದೇ ಕುಟುಂಬದಲ್ಲಿ ಇರೋ ಹಾಗೆ ಅಲ್ವಾ…..
“ಒಂದು ಕುಟುಂಬ ಅಂದ್ಮೇಲೆ ಮನಸ್ತಾಪ, ಭಿನ್ನಾಭಿಪ್ರಾಯಗಳು ಬರೋದು ಸಹಜ. ನಾವು ಇದನ್ನು ಇನ್ನೂ ದೊಡ್ಡದು ಮಾಡಿಕೊಂಡ್ರೆ ನಮಗೆ ಮನಶ್ಶಾಂತಿ ಅನ್ನೋದು ಸಿಗೋದಿಲ್ಲ….. ಅದರಿಂದ ನಮ್ಮ ಕೆಲಸದಲ್ಲಿ ನಾವು ಗಮನ ಕೊಡೋದು ಕಡಿಮೆ ಆಗುತ್ತೆ. ನಮ್ಮ ಜೀವನದಲ್ಲಿ ಜಿಗುಪ್ಸೆ ಬರೋಕೆ ಶುರುವಾಗುತ್ತೆ. ಅದಕ್ಕೆ ನಾವೇ ಬಾಗಿಲು ತೆಗೆದು ಅದನ್ನು ಸ್ವಾಗತಿಸಿದಂಗೆ ಅಲ್ವಾ…. ಮುಂದಾಲೋಚನೆಯಿಂದ ನಾವು ಜಾಗರೂಕತೆಯಿಂದ ಇದ್ದರೆ ಅದು ನಮಗೆ ಶ್ರೇಯಸ್ಸು.
“ಮೇಲಾಗಿ ಮಕ್ಕಳು ನಾವು ಹೇಳಿದ್ದನ್ನು ಕೇಳೋದಿಲ್ಲ, ನಾವು ಮಾಡೋದನ್ನು ಮಾತ್ರವೇ ಅವರು ಅಳವಡಿಸಿಕೊಳ್ಳುತ್ತಾರೆ. ನಾವು ಅವರಿಗೆ ಮಾದರಿಯಾಗಿ ನಿಲ್ಲಬೇಕೇ ಹೊರತು, ನಮ್ಮನ್ನು ನೋಡಿ ಅವರು ದೂರ ಹೋಗೋ ತರಹ ಮಾಡ್ಕೋಬಾರದು. ಅದೇನೇ ಇರ್ಲಿ, ಅಂತೂ ನಿಮ್ಮ ಮನಸ್ಸಿಗೆ ನಾನು ಸರಿಯಾಗಿದ್ದೀನಿ ಅಂತ ಅನ್ಸಿದೆ, ನನಗೆ ಈಗ ಸ್ವಲ್ಪ ಸಮಾಧಾನ ಆಯ್ತು.
“ನಾಳೆಯಿಂದ ಏನು ಇವತ್ತಿನಿಂದಲೇ…. ನಾವಿಬ್ರೂ ಜೊತೇಲಿ ಇದ್ದು ಭಾವನೆಗಳನ್ನು ಹಂಚಿಕೊಂಡು ಒಂದೇ ಕಡೆ ಇದ್ದೀವಲ್ಲ ಅದೇ ದೊಡ್ಡ ಸಾಕ್ಷಿ,” ಎನ್ನುತ್ತಾ ಸಾರಾಳ ಕಣ್ಣುಗಳನ್ನು ಒರೆಸಿದಳು.
“ಅಬ್ಬಾ…. ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ, ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ. ಅದಕ್ಕೆ ಮಕ್ಕಳಿಗೂ ಹೀಗೆ ಏನೋ ಒಂದು ಹೇಳಿ ಮೋಡಿ ಮಾಡಿದ್ದೀರಿ ಅಂತ ಕಾಣುತ್ತೆ….. ನೀವು ಬರುವ ಮೊದಲು ಕನ್ನಡ ಸಬ್ಜೆಕ್ಟ್ ಅಂದ್ರೆ ಮಕ್ಕಳು ಯಾರೂ ಇಷ್ಟು ಉತ್ಸಾಹ ತೋರಿಸುತ್ತಿರಲಿಲ್ಲ. ಆದರೆ ಈಗ ಮಕ್ಕಳನ್ನೆಲ್ಲಾ ನೀವು ಬದಲಾಯಿಸಿಬಿಟ್ಟಿದ್ದೀರೀ…..!
“80% ಮಕ್ಕಳು ಕನ್ನಡ ಸಬ್ಜೆಕ್ಟ್ ನಲ್ಲಿ ಪಾಸ್ ಆಗುತ್ತಿದ್ದಾರೆ. ಮಕ್ಕಳು ನಿಮ್ಮ ಕ್ಲಾಸ್ ಗಾಗಿ ಎದುರು ನೋಡ್ತಾ ಇರ್ತಾರೆ. ನಾನೂ ಸ್ವಲ್ಪ ನಿಮ್ಮ ಸೀಕ್ರೆಟ್ ತಿಳ್ಕೊಂಡೆ. ನನಗೀಗ ಮನಸ್ಸು ಹುಗುರ ಆಯ್ತು. ಭಾರತಿ, ಅದಕ್ಕಾಗಿ ಇವತ್ತಿನ ಟ್ರೀಟ್ ನನ್ನ ಕಡೆಯಿಂದ. ನಿಮಗೆ ಏನು ಇಷ್ಟವೇ ಅದನ್ನೇ ಆರ್ಡರ್ ಮಾಡ್ತೀನಿ. ಹೇಳಿ ನಿಮಗೇನು ಇಷ್ಟ,” ಎಂದಳು ಪ್ರೀತಿಪೂರ್ವಕವಾಗಿ ಮುಗುಳ್ನಕ್ಕಳು.
ಭಾರತಿ ತನ್ನ ಕೈಗಳನ್ನು ಸಾರಾಳ ಕೈಯಲ್ಲಿಟ್ಟು ಕಣ್ಣು ಮಿಟುಕಿಸಿದಳು. ಇಬ್ಬರೂ ಕಾಫಿ ಕುಡಿದು ಅಲ್ಲಿಂದ ಹೊರಟರು. ಇಬ್ಬರ ಮಧ್ಯೆ ಬಾಂಧವ್ಯದ ಬೆಸುಗೆ ಶುರುವಾಯಿತು.
ಸಾರಾ ಮತ್ತು ಭಾರತಿ ಇಬ್ಬರೂ ದಿನೇ ದಿನೇ ಆಪ್ತ ಸ್ನೇಹಿತರಾಗುತ್ತಾ ಹೋದರು. ಒಬ್ಬರ ಮೇಲೆ ಒಬ್ಬರಿಗೆ ಗೌರವ, ಪ್ರೀತಿ, ವಿಶ್ವಾಸ ಮೂಡುತ್ತಾ ಹೋಯಿತು. ಮಿಕ್ಕ ಶಿಕ್ಷಕಿಯರು ಇವರಿಬ್ಬರ ಸ್ನೇಹವನ್ನು ಕಂಡು ಮತ್ತಷ್ಟು ಅಸೂಯೆ ಪಡುತ್ತಿದ್ದರು. ಆದರೆ ಮೇಲ್ನೋಟಕ್ಕೆ ಅವರ ಬಗ್ಗೆ ಪ್ರೀತಿ ಇರುವ ಹಾಗೆ ನಟಿಸುತ್ತಿದ್ದರು. ಹೀಗೆ ಸ್ವಲ್ಪ ದಿನಗಳ ಕಾಲ ಕಳೆಯಿತು.
ಅಂದು ಭಾನುವಾರವಾಗಿತ್ತು. ಭಾರತಿ ಚರ್ಚ್ ನಲ್ಲಿ ಪ್ರೇಯರ್ ಮುಗಿಸಿಕೊಂಡು ಆಚೆ ಬರುತ್ತಿದ್ದಾಗ, ಎದುರುಗಡೆ ರಸ್ತೆಯಲ್ಲಿ ಶಿಕ್ಷಕಿ ರೇಚಲ್ ಮತ್ತು ಅವಳ ಮಗಳು ಆದ್ಯಾ ಬರುತ್ತಿದ್ದರು. ಆದ್ಯಾ ಭಾರತಿಯನ್ನು ನೋಡಿ ತಕ್ಷಣವೇ ಅವಳ ಬಳಿಗೆ ಓಡಿದಳು.
“ಹಾಯ್ ಮೇಡಂ ಹೇಗಿದ್ದೀರಾ…..? ತುಂಬಾ ದಿನ ಆಯ್ತು ನಿಮ್ಮನ್ನು ನೋಡಿ. ಆಲ್ ಮೋಸ್ಟ್ ಒಂದು ವರ್ಷ ಆಗಿರಬೇಕು ಅನಿಸುತ್ತೆ. ನಿಮ್ಮನ್ನು ಮತ್ತೆ ಯಾವಾಗ ಭೇಟಿ ಮಾಡಬಹುದು ಅಂತ ಕಾಯ್ತಾ ಇದ್ದೆ. ಇವತ್ತು ನೋಡಿ ದೇವರ ತರಹ ಪ್ರತ್ಯಕ್ಷ ಆಗಿಬಿಟ್ಟಿದ್ದೀರಾ….? ನೀವು ಇಲ್ಲಿ ಹೇಗೆ ಮೇಡಂ…..?” ಎಂದು ಬಹಳ ಉತ್ಸಾಹದಿಂದ ಪ್ರಶ್ನಿಸಿದಳು.
“ಹಾಯ್ ಆದ್ಯಾ…. ನಾನು ಚೆನ್ನಾಗಿದ್ದೀನಿ. ನೀನು ಹೇಗಿದ್ದೀಯಾ….? ಅಂದಹಾಗೆ ನನ್ನ ನೆನಪು ಮಾಡ್ಕೊಂಡಿದ್ದೀಯಾ ಅಂದ್ಮೇಲೆ ನೀನು, ನಿನ್ನ ಫ್ರೆಂಡ್ ಚಾಂದಿನಿ ಮತ್ಯಾವುದೋ ಸಾಹಸಕ್ಕೆ ಕೈ ಹಾಕಿದ್ದೀರಿ ಅನ್ಸುತ್ತೆ. ಏನು ವಿಷಯಾ….?” ಅವಳ ಗಲ್ಲವನ್ನು ಮುಟ್ಟಿ, ಹೆಗಲ ಮೇಲೆ ಕೈಹಾಕಿ ಪ್ರೀತಿಯಿಂದ ಮಾತನಾಡಿಸಿದಳು ಭಾರತಿ. ಅಷ್ಟರಲ್ಲಿ ಅಲ್ಲಿಗೆ ಬಂದ ರೇಚಲ್, “ಹಾಯ್ ಭಾರತಿ ಮೇಡಂ…. ನೀವಿಲ್ಲಿ ಹೇಗೆ….? ಅದು ಸರಿ ನನ್ನ ಮಗಳು ನಿಮಗೆ ಹೇಗೆ ಪರಿಚಯ….? ನೀವಿಬ್ಬರೂ ಹೀಗೆ ಅನ್ಯೋನ್ಯವಾಗಿ ಮಾತಾಡ್ತಿದ್ದೀರಾ ಅಂದ್ಮೇಲೆ ನಿಮಗಿಬ್ಬರಿಗೂ ಮೊದಲೇ ಪರಿಚಯ ಇರಬೇಕಲ್ವಾ…?” ಕುತೂಹಲದಿಂದ ಪ್ರಶ್ನಿಸಿದಳು.
“ಅಮ್ಮಾ…. ನಾನು ನಿನಗೆ ಒಂದು ವರ್ಷದ ಹಿಂದೆ ರೀಲ್ ಮಾಡೋಕೆ ಹೋಗಿ ಏನೇನೋ ಅನರ್ಥಗಳು ಆಯ್ತು ಅಂತ ಹೇಳಿದ್ದೆ ಅಲ್ವಾ….? ಆಗ ಈ ಮೇಡಂ ದೇವರ ತರಹ ಬಂದು ನಮ್ಮಿಬ್ಬರನ್ನು ಕಾಪಾಡಿದ್ದು. ನನಗೆ ಆ ಗಡಿಬಿಡಿಯಲ್ಲಿ ಇವರ ಹೆಸರು ಕೇಳಲಿಲ್ಲ, ಏನು ಕೆಲಸ ಮಾಡ್ತಾರೋ ಎಲ್ಲಿದ್ದಾರೋ ಒಂದೂ ಗೊತ್ತಿರಲಿಲ್ಲ.
“ನಮ್ಮಿಬ್ಬರಿಗೂ ಸಾಕ್ಷಾತ್ ದುರ್ಗಾ ಮಾತೆ ಬಂದು ಕಾಪಾಡಿರೋ ಹಾಗೆ ಕಾಣಿಸಿದ್ರು. ಇವರು ತಮ್ಮ ವಿಳಾಸ ಹೆಸರೂ ಏನೂ ಹೇಳದೆ ಎಲ್ಲೋ ಮಾಯವಾಗ್ಬಿಟ್ರು. ನಾವಿಬ್ರೂ ಇವರನ್ನು ಯಾವಾಗ ನೋಡ್ತೀವೋ ಏನೋ ಅಂತ ಕಾಯ್ತಾ ಇದ್ವಿ. ಇವತ್ತು ಸಿಕ್ಕಿದ್ದಾರೆ. ಅವತ್ತು ನಮಗಾಗಿದ್ದ ನೋವು ಮತ್ತು ಗಾಬರಿಯಿಂದ ಇವರಿಗೆ ಒಂದು ಥ್ಯಾಂಕ್ಸ್ ಕೂಡ ಹೇಳಲೇ ಇಲ್ಲ,” ಎಂದು ಆದ್ಯಾ ತನ್ನ ತಾಯಿಗೆ ಹೇಳಿ, “ಮೇಡಂ ಮನಃಸ್ಛೂರ್ತಿಯಾಗಿ ನಿಮಗೆ ವಂದನೆಗಳು. ನಿಮ್ಮಂಥವರು ಪ್ರಪಂಚದಲ್ಲಿ ಎಲ್ಲೇ ಇದ್ದರೂ ಅಲ್ಲಿ ಸುಭಿಕ್ಷವಾಗಿ ಇರುತ್ತೆ ಅಲ್ವಾ ಮೇಡಂ….” ಎಂದು ಮುಗುಳ್ನಗುತ್ತಾ ಹೇಳಿದಳು.
“ಹೌದು ಆದ್ಯಾ, ಅಂದು ನಿಮ್ಮಿಬ್ಬರನ್ನು ಕಾಪಾಡಿದ ಆ ಮೇಡಂ ಯಾರು…? ಅವರನ್ನು ಡೈರೆಕ್ಟ್ ಆಗಿ ನೋಡೋಣ ಅಂತ ಅನಿಸ್ತಾ ಇತ್ತು. ಆದರೆ ಅದು ಸಾಧ್ಯ ಆಗ್ಲಿಲ್ಲಾ…. ಈಗ ನೋಡು ನಾನು ದಿನಾ ಇವರನ್ನು ನಮ್ಮ ಶಾಲೆಯಲ್ಲಿ ನೋಡ್ತಾನೇ ಇರ್ತೀನಿ. ಏಕೆಂದರೆ ಇವರು ಭಾರತಿ ಅಂತ. ನಮ್ಮ ಶಾಲೆಯಲ್ಲಿ ಕನ್ನಡ ಶಿಕ್ಷಕಿ. ಬಹಳ ಅದ್ಭುತವಾಗಿ ಪಾಠ ಮಾಡುತ್ತಾರೆ,” ಎಂದು ರೇಚಲ್ ಹೇಳಿದಳು.
ರೇಚಲ್ ಳ ಮಾತನ್ನು ಕೇಳಿ ಆಶ್ಚರ್ಯಚಕಿತಳಾದ ಭಾರತಿಗೆ ಮಾತುಗಳೇ ಹೊರಡಲಿಲ್ಲ. ಆದರೆ ಭಾರತಿಯನ್ನು ಕಣ್ಣೆತ್ತಿ ನೋಡಲು ರೇಚಲ್ ಳಿಂದ ಆಗಲಿಲ್ಲ. ಏಕೆಂದರೆ ಅವಳಿಗೆ ಪಾಪಪ್ರಜ್ಞೆ ಕಾಡುತ್ತಿತ್ತು. ಇಂತಹ ಒಳ್ಳೆ ಮನಸ್ಥಿತಿಯಿರುವ ವ್ಯಕ್ತಿಗೆ ನಾವೆಲ್ಲ ಒಂದು ವರ್ಷದಿಂದ ಕಾಟ ಕೊಟ್ಟಿದ್ದೇವೆ ಎನ್ನುವ ಭಾವನೆಗಳು ಕಾಡತೊಡಗಿದವು.
“ಅಮ್ಮಾ….. ನಾನು ನಿನಗೆ ಎಷ್ಟು ಬಾರಿ ಕೇಳಿಕೊಂಡೆ, ಆ ವಿಡಿಯೋ ನೋಡು ಅಂತ. ಆದರೆ ನೀನೇ ನನ್ನ ಮಾತು ಕೇಳಲಿಲ್ಲ. ನೀನು ಅವತ್ತೇ ಆ ವಿಡಿಯೋ ನೋಡಿದ್ದಿದ್ರೆ ನಿನಗೆ ಒಳ್ಳೆಯ ಫ್ರೆಂಡ್ ಸಿಕ್ತಾ ಇದ್ರು ಗೊತ್ತಾ…. ಹೋಗ್ಲಿ ಬಿಡು, ಇನ್ನೇನು ಆರಾಮವಾಗಿ ನೀನು ಈ ಮೇಡಂನ ಫ್ರೆಂಡ್ ಮಾಡಿಕೊಂಡು ಬಿಡು. ಅವರು ಕೊಡೋ ಮೋಟಿವೇಶನ್ ಹೇಗಿರುತ್ತೆ ಗೊತ್ತಾ….? ಎಂಥವರಿಗೂ ಮೈಂಡ್ ಚೇಂಜ್ ಆಗಿಬಿಡುತ್ತೆ. ನೀನು ಅವರನ್ನು ನೋಡಿ ಏನಾದರೂ ಕಲಿಯಬಹುದು.
“ಹ್ಞಾಂ ಮೇಡಂ…. ನಾವು ಎಷ್ಟು ಕಷ್ಟಪಟ್ಟು ಹೊಸ ರೀತಿಯ ಕಂಟೆಂಟ್ ಗಳ ರೀಲ್ ಅಪ್ ಲೋಡ್ ಮಾಡಬೇಕು ಅಂದುಕೊಂಡಿದ್ವಿ. ಆದರೆ ಶುರು ಮಾಡಿದಾಗಲೇ ಇಷ್ಟೊಂದು ಅವಾಂತರ ಆಗಿದ್ದರಿಂದ ನಾವು ಅದನ್ನು ಯಾರ ಹತ್ರನೂ ಹೇಳಲೂ ಇಲ್ಲ…. ಎಲ್ಲೂ ಅಪ್ ಲೋಡ್ ಮಾಡಲೂ ಇಲ್ಲ ಮೇಡಂ. ಹಾಗಾಗಿ ಇದರ ವಿಷಯ ಯಾರಿಗೂ ಗೊತ್ತಾಗಲಿಲ್ಲ.
“ಅದೂ ಅಲ್ಲದೆ ಆ ಹುಡುಗರೇನಾದ್ರೂ ಪುನಃ ಬಂದು ನಮಗೆ ತೊಂದರೆ ಕೊಡುತ್ತಾರೋ ಏನೋ ಅಂತ ಭಯ ಆಗಿ ಹಾಗೆಯೇ ಬಿಟ್ಟುಬಿಟ್ವಿ. ನಮ್ಮಿಬ್ಬರಿಗೆ ಬೇಕಾದಾಗೆಲ್ಲ ಆ ವಿಡಿಯೋನಾ ನೋಡ್ತಾ ಇರ್ತೀವಿ ಅಷ್ಟೇ,” ಎಂದು ಆದ್ಯಾ ತುಸು ಬೇಸರದಿಂದ ಹೇಳಿದಳು.
“ನೋಡು ಆದ್ಯಾ…. ಈ ತರಹ ಚಿಕ್ಕ ವಿಷಯಗಳಿಗೆಲ್ಲಾ ನಾವು ಹೆದರಿಕೊಳ್ಳಬಾರದು. ಮುನ್ನುಗುತ್ತಾ ಇರಬೇಕು. ಏನೇ ಬಂದರೂ ಧೈರ್ಯದಿಂದ ಎದುರಿಸಿಕೊಂಡು ಹೋಗಬೇಕು. ಆಗಲೇ ನಮಗೆ ನಮ್ಮ ಬಗ್ಗೆ ಹೆಮ್ಮೆಯಾಗಿ ಆತ್ಮವಿಶ್ವಾಸ ಹೆಚ್ಚುತ್ತದೆ. ನೀನು ಇವತ್ತೇ ಮನೆಗೆ ಹೋಗಿ ಅದನ್ನು ನೀಟಾಗಿ ಎಡಿಟಿಂಗ್ ಮಾಡಿ ಇನ್ ಸ್ಟಾಗ್ರಾಂ, ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡು. ಆದರೆ ಆ ಹುಡುಗರು ಬಂದಿದ್ದನ್ನು ಕಟ್ ಮಾಡಿ ನೀವಿಬ್ಬರೇ ಇರೋದನ್ನು ಮಾತ್ರ ಎಡಿಟ್ ಮಾಡಿ ಹಾಕೋದು ನಿನಗೆ ಗೊತ್ತಿದೆ ಅಂತ ಅಂದ್ಕೋತೀನಿ.
“ಹೌದು ಪುಟ್ಟಾ, ಆಲ್ ರೆಡಿ ನಾನು ನಿಮ್ಮ ಮಮ್ಮಿ ಎಲ್ಲಾ ಒಳ್ಳೆಯ ಸ್ನೇಹಿತರು. ಶಾಲೆಯಲ್ಲಿ ನಾವೆಲ್ಲ ಎಷ್ಟು ಚೆನ್ನಾಗಿ ಇರ್ತೀವಿ ಗೊತ್ತಾ….? ಸರಿ ನಾನು ಹೊರಡಬೇಕು,” ಎಂದು ಇಬ್ಬರಿಗೂ ಬೈ ಹೇಳಿ ಅಲ್ಲಿಂದ ಮನೆಗೆ ಹೋದಳು.
ರೇಚಲ್ ಗೆ ಮಗಳು ಆಡಿದ ಮಾತುಗಳನ್ನು ಕೇಳಿ ಮುಖಕ್ಕೆ ಹೊಡೆದ ಹಾಗಾಯಿತು. ಮಗಳಿಗೆ ಇರುವ ಪರಿಜ್ಞಾನ ತನಗೆ ಇಲ್ಲವೆಂದು ಭಾಸವಾಗಿ ತಾನು ಮಾಡಿದ ತಪ್ಪಿನ ಅರಿವಾಯ್ತು. ಅದೂ ಅಲ್ಲದೆ ಭಾರತಿ ಕೂಡ ತನ್ನನ್ನು ಸ್ನೇಹಿತೆ ಎಂದು ಮಗಳ ಮುಂದೆ ಹೇಳಿದ್ದು ಅವಳಿಗೆ ಆಶ್ಚರ್ಯವಾಗಿತ್ತು.
ಭಾರತಿ ಎಲ್ಲರೊಂದಿಗೆ ತೋರುವ ಸಹಾನುಭೂತಿ, ಕರುಣೆ, ಪ್ರಿತಿ, ದಯೆ, ಸ್ನೇಹ ಮನೋಭಾವದ ವ್ಯಕ್ತಿತ್ವ ಅಲ್ಲಿ ಇರುವ ವಾತಾವರಣವನ್ನೇ ಬದಲಾಯಿಸುತ್ತಿತ್ತು. ಅವಳು ಧರ್ಮದಿಂದ ಇದ್ದು ಒಳ್ಳೆಯ ಉದ್ದೇಶದಿಂದ ಸ್ವಇಚ್ಛೆಯಿಂದ ಸಹಾಯ ಮಾಡಿಕೊಂಡು ಅದೇ ರೀತಿಯಲ್ಲಿ ಅವರೊಂದಿಗೆ ನಡೆದುಕೊಳ್ಳುವ ಮಹಾನ್ ವ್ಯಕ್ತಿತ್ವದ ಭಾರತಿ, ನಮ್ಮ ಸುತ್ತಲೂ ಇದ್ದರೆ ಅಲ್ಲಿನ ತಾಣ ದೇವಾಲಯವಾಗುತ್ತವೆ ಎಂದು ಅವಳು ಅರಿತುಕೊಂಡಳು.
ಮರುದಿನದಿಂದ ಆ ಶಾಲೆಯಲ್ಲಿ ಇರುವ ಎಲ್ಲಾ ಶಿಕ್ಷಕರು ಜಾತಿಮತಗಳ ಭೇದಭಾವಗಳನ್ನು ಬಿಟ್ಟು ಭಾರತಿಯೊಂದಿಗೆ ಬಹಳ ಪ್ರೀತಿ, ಗೌರವ ಮತ್ತು ಸ್ನೇಹಮನೋಭಾವದಿಂದ ಕೂಡಿ ಎಲ್ಲರೂ ಒಂದೇ ಕುಟುಂಬದವರಂತೆ ಸಮನ್ವಯದಿಂದ ವರ್ತಿಸತೊಡಗಿದರು. ಆ ಶಾಲೆಯಲ್ಲಿ ಮಕ್ಕಳೂ ಸಹ ಶಿಕ್ಷಕರನ್ನು ಮಾದರಿ ಮಾಡಿಕೊಂಡು ಹಲವು ವಿಧದ ವ್ಯಕ್ತಿತ್ವ ವಿಕಸನ ಹೊಂದಿ ಉನ್ನತ ಜೀವನದ ಮಾರ್ಗವನ್ನು ಕಂಡುಕೊಂಡರು.





