ಚಿತ್ರ: ಲವ್ ಸೀಸನ್ಸ್
ನಿರ್ದೇಶನ: ಕೃತ್ವಿಕ್ ಶೆಟ್ಟಿ
ನಿರ್ಮಾಣ: ಮಂಜುನಾಥ ನೀಲೇರಿ
ತಾರಾಗಣ: ಮುಕುಂದ ರಾಮಸ್ವಾಮಿ, ದಿಯಾ ಕೀರ್ತಿ, ಚಂದನಾ ಗೌಡ, ರಾಜೇಶ್ ನಟರಂಗ, ಮಂಡ್ಯ ರಮೇಶ್ ಮೊದಲಾದವರು.
ರೇಟಿಂಗ್: 3/5 ***
– ರಾಘವೇಂದ್ರ ಅಡಿಗ ಎಚ್ಚೆನ್.
ಅದು ಪೀಟರ್ ಮತ್ತು ಮರಿಯಾ ದಂಪತಿಯ ಮನೆ. ಪೀಟರ್ ಒಬ್ಬ ಕುಡುಕ. ಪೀಟರ್ ಮೂರು ಹೊತ್ತು ಕೂಡ ಕುಡಿಯುತ್ತಿರುತ್ತಾನೆ. ಫ್ಯಾಕ್ಟರಿ ಕೆಲಸಕ್ಕೆ ಹೋಗುವಾಗಲೂ ಕುಡಿದೇ ಹೋಗುತ್ತಾನೆ. ಅದೇ ಮನೆಯಲ್ಲೇ ಕಥಾ ನಾಯಕ ರಾಮ್ (ಮುಕುಂದ ರಾಮಸ್ವಾಮಿ) ಕೂಡ ಇರುತ್ತಾನೆ. ಪೀಟರ್ ನನ್ನು ಅಪ್ಪಾ ಎಂದು ಮರಿಯಾಳನ್ನು ಅಮ್ಮ ಎಂದು ಕರೆಯುತ್ತಿರುತ್ತಾನೆ. ಆತನಿಗೆ ಆಗಾಗ ಮೇರಿ ಎನ್ನುವ ಹುಡುಗಿಯ ಕನಸು ಬೀಳುತ್ತದೆ. ಇನ್ನು ರಾಮ್ ಹೈಸ್ಕೂಲ್ ಓದುವಾಗಲೇ ಪ್ರೀತಿಯಲ್ಲಿ ಬೀಳುತ್ತಾನೆ. ನಂತರ ಡಿಗ್ರಿ ಓದುವಾಗ ಮತ್ತೊಬ್ಬಳ ಜೊತೆ ಪ್ರೀತಿ ಚಿಗುರುತ್ತದೆ. ವಿದ್ಯಾಭ್ಯಾಸ ಮುಗಿಸಿ ಕೆಲಸ ಮಾಡುವ ವೇಳೆ ಆತನ ಜೀವನಕ್ಕೆ ಇನ್ನೊಬ್ಬಳ ಪ್ರವೇಶ ಆಗುತ್ತದೆ. ಈ ಮೂರೂ ಪ್ರೀತಿಯಿಂದ ರಾಮ್ ಬದುಕಿನಲ್ಲಿ ಹಲವು ಬದಲಾವಣೆಗಳು ಆಗುತ್ತವೆ. ಇಷ್ಟಕ್ಕೂ ಮೇರಿ ಯಾರು? ರಾಮ್ ಯಾಕೆ ಪೀಟರ್ ಮನೆಯಲ್ಲಿದ್ದಾನೆ? ಅಂತಿಮವಾಗಿ ರಾಮ್ ಕೈ ಹಿಡಿಯುವ ಹುಡುಗಿ ಯಾರು ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು. ‘

ಕನ್ನಡದಲ್ಲಿ ಈಗಾಗಲೇ ‘ಮೈ ಆಟೋಗ್ರಾಫ್’, ‘ಲವ್ ಮಾಕ್ಟೇಲ್’ ಇಂತಹಾ ಸಿನಿಮಾದಲ್ಲಿ ಕಥಾನಾಯಕನಿಗೆ ಜೀವನದ ಬೇರೆ ಬೇರೆ ಕಾಲಘಟ್ಟದಲ್ಲಿ ಬೇರೆ ಬೇರೆ ಹುಡುಗಿಯರ ಮೇಲೆ ಲವ್ ಆಗುವ ಕಥೆ ಹೇಳಲಾಗಿದೆ. ಆದರೆ . ‘ಲವ್ ಸೀಸನ್ಸ್’ ಇದಕ್ಕಿಂತ ಸ್ವಲ್ಪ ಭಿನ್ನವಾಗಿದೆ.ಶೀರ್ಷಿಕೆಗೆ ತಕ್ಕಂತೆಯೇ ಈ ಸಿನಿಮಾದಲ್ಲಿ ಬರುವ ಪ್ರೇಮಕಥೆಗಳು ಚಳಿಗಾಲ, ಮಳೆಗಾಲ, ಬೇಸಿಗೆ ಕಾಲದ ರೀತಿ ಭಿನ್ನವಾಗಿವೆ. ಆ ಎಲ್ಲ ಕಾಲಕ್ಕೂ ರಾಮ್ ಮೈವೊಡ್ಡಿ ನಿಲ್ಲುತ್ತಾನೆ. ನಂಬಿಕೆ, ಮೋಸ, ಕರ್ಮ ಇತ್ಯಾದಿ ಅಂಶಗಳು ಕೂಡ ಈ ಕಥೆಯಲ್ಲಿ ಬೆರೆತಿವೆ. ಒಟ್ಟು ಕಥೆ ಚೆನ್ನಾಗಿದೆ.

ಕೃತ್ವಿಕ್ ಶೆಟ್ಟಿ. ತಮ್ಮ ಈ ಚಿತ್ರದಲ್ಲಿ ಮೂರು ಪ್ರೇಮ ಕಥೆಗಳೊಂದಿಗೆ ನೈಜ ಪ್ರೀತಿಯ ಸೂತ್ರವನ್ನು ಸಹ ಉತ್ತಮವಾಗಿ ತೋರಿಸಿಕೊಟ್ಟಿದ್ದಾರೆ.
ಹೊಸ ನಟರು ಅಭಿನಯಿಸಿದ್ದು ಚಿತ್ರದಲ್ಲಿ ಹೊಸ ಫೀಲ್ ಕೊಡುತ್ತದೆ.ವೀರ್ ಸಮರ್ಥ್ ಅವರ ಸಂಗೀತ, ಹಾಡುಗಳು ಉತ್ತಮವಾಗಿ ಮೂಡಿ ಬಂದಿದೆ. ಸಂಭಾಷಣೆಯಲ್ಲಿ ಗಟ್ಟಿತನ ಇದೆ.

ಹಾಡಿನ ಸಾಹಿತ್ಯ ಕೂಡ ಮನಮುಟ್ಟುವಂತಿದೆ. ಸಂಗೀತ ಮತ್ತೆ ಮತ್ತೆ ಆಲಿಸುವಂತಿದೆ. ಆದರೆ ಚಿತ್ರದಲ್ಲಿ ಕಾಮಿಡಿ ದೃಶ್ಯಗಳು ಕ್ಲಿಕ್ ಆಗಿಲ್ಲ. ದ್ವಿತೀಯಾರ್ಧದ ರೀತಿಯೇ ಮೊದಲಾರ್ಧದಲ್ಲಿ ಕೂಡ ಚಿತ್ರಕಥೆ ಬಿಗಿಯಾಗಿ, ಇನ್ನೂ ಚೆಂದವಾಗಿ ಹೇಳಲು ನಿರ್ದೆಶಕರಿಗೆ ಅವಕಾಶ ಇತ್ತು.
ಇನ್ನು ಮುಕುಂದ ರಾಮಸ್ವಾಮಿ, ಚಂದನಾ ಗೌಡ, ದಿವ್ಯಾ ಕೀರ್ತಿ, ಶ್ವೇತಾ ಕೋಗ್ಲೂರು ಮುಂತಾದ ಹೊಸ ಕಲಾವಿದರ ದಂಡೇ ಇದೆ ಅವರೆಲ್ಲ ತಮ್ಮ ಪಾತ್ರವನ್ನು ಜೀವತುಂಬಿ ಅಭಿನಯಿಸಿದ್ದಾರೆ. ರಾಜೇಶ್ ನಟರಂಗ, ಮಂಡ್ಯ ರಮೇಶ್, ಸಂಗೀತಾ ಅವರಂತಹ ಹಿರಿಯ ಕಲಾವಿದರು ಸಹ ಅವರಿಗೆ ಜೊತೆ ಆಗಿದ್ದಾರೆ.
ಕುಟುಂಬ ಸಮೇತ ನೋಡಬಹುದಾದ ಸಿನಿಮಾ ಇದು. ಅಲ್ಲದೆ ಹೊಸಬರ ಪ್ರಯತ್ನವಾಗಿ ‘ಲವ್ ಸೀಸನ್ಸ್’ ಸಿನಿಮಾ ಗಮನ ಸೆಳೆಯುವ ಚಿತ್ರ.





