ಬೆಂಗಳೂರಿನ ಕೆ.ಆರ್. ವೃತ್ತದಲ್ಲಿ ನಿಂತಿದ್ದ ವಾಯು ವಜ್ರ ಬಸ್‌ಗೆ ಹಿಂದಿನಿಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಹಲವು ಪ್ರಯಾಣಿಕರು ಗಾಯಗೊಂಡಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿ, ಸಂಚಾರಕ್ಕೂ ಅಡಚಣೆ ಉಂಟಾಗಿತ್ತು.
ಕೆ.ಆರ್. ವೃತ್ತದ ಸಮೀಪದ ಶೇಷಾದ್ರಿ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ಈ ಅಪಘಾತ ಸಂಭವಿಸಿದ್ದು, ಅನೆಕಲ್ ಕಡೆ ತೆರಳುತ್ತಿದ್ದ ವಾಯು ವಜ್ರ ಬಸ್ ಟ್ರಾಫಿಕ್ ಸಿಗ್ನಲ್ ಬಳಿ ನಿಂತಿದ್ದಾಗ, ಮೆಜೆಸ್ಟಿಕ್‌ನಿಂದ ಅತ್ತಿಬೆಲೆ ಕಡೆಗೆ ತೆರಳುತ್ತಿದ್ದ ಮತ್ತೊಂದು ಬಿಎಂಟಿಸಿ ಬಸ್ ವೇಗವಾಗಿ ಬಂದು ಅದರ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಹಿಂದಿನಿಂದ ಬಂದ ಬಸ್‌ನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ವಾಯು ವಜ್ರ ಬಸ್‌ನ ಹಿಂಭಾಗವೂ ಹಾನಿಗೊಳಗಾಗಿದೆ.
ಅಪಘಾತ ಸಂಭವಿಸಿದಾಗ ವಾಯು ವಜ್ರ ಬಸ್‌ನಲ್ಲಿ ಸುಮಾರು 20 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಹಲವರು ಗಾಯಗೊಂಡಿದ್ದು, ಹಿಂದಿನಿಂದ ಬಂದ ಬಸ್‌ನ ಚಾಲಕನಿಗೆ ತಲೆಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್‌ನ ಮುಂಭಾಗದಲ್ಲಿ ಕುಳಿತಿದ್ದ ಮಹಿಳಾ ಪ್ರಯಾಣಿಕರೊಬ್ಬರ ಕಾಲು ವಾಹನದ ಜಖಂಗೊಂಡ ಭಾಗದಲ್ಲಿ ಸಿಲುಕಿಕೊಂಡ ಪರಿಣಾಮ ಅವರಿಗೆ ಗಂಭೀರ ಗಾಯಗಳಾಗಿವೆ. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ರಕ್ಷಣಾ ಸಾಧನಗಳ ಸಹಾಯದಿಂದ ಬಸ್‌ನ ಕಬ್ಬಿಣದ ಭಾಗವನ್ನು ಕತ್ತರಿಸಿ ಅವರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದರು. ಅವರಿಗೆ ತಲೆಯಲ್ಲೂ ಗಾಯವಾಗಿದೆ. ಇತರ ಗಾಯಾಳುಗಳಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಯಿತು.
ಈ ಕುರಿತು ಮಾತನಾಡಿದ ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ, ಪ್ರಾಥಮಿಕ ತನಿಖೆಯ ಪ್ರಕಾರ ಮುಂಭಾಗದ ಬಸ್ ಟ್ರಾಫಿಕ್ ಸಿಗ್ನಲ್‌ಗೆ ನಿಂತಿದ್ದರೂ, ಹಿಂದಿನಿಂದ ಬಂದ ಬಸ್ ಸಮಯಕ್ಕೆ ನಿಲ್ಲಿಸಲು ಸಾಧ್ಯವಾಗದೆ ಡಿಕ್ಕಿ ಹೊಡೆದಿದೆ ಎಂದಿದ್ದಾರೆ.
ಅಪಘಾತಕ್ಕೀಡಾದ ಕೆಎ-01-ಎಎ-4163 ವಾಯು ವಜ್ರ ಬಸ್ ಮೆಜೆಸ್ಟಿಕ್‌ನಿಂದ ಅನೆಕಲ್ ಕಡೆಗೆ ತೆರಳುತ್ತಿತ್ತು. ಹಿಂದಿನಿಂದ ಡಿಕ್ಕಿ ಹೊಡೆದ ಕೆಎ-51-ಎಜೆ-6163 ಬಿಎಂಟಿಸಿ ಬಸ್ ಮೆಜೆಸ್ಟಿಕ್‌ನಿಂದ ಅತ್ತಿಬೆಲೆ ಮಾರ್ಗದಲ್ಲಿ ಸಂಚರಿಸುತ್ತಿತ್ತು. ಅಪಘಾತದ ಬಳಿಕ ಪೊಲೀಸರು ಹಾನಿಗೊಳಗಾದ ಎರಡೂ ಬಸ್‌ಗಳನ್ನು ತೆರವುಗೊಳಿಸಿ ಸಂಚಾರವನ್ನು ಪುನಃ ಆರಂಭಿಸಿದ್ದಾರೆ.
ಸಾರಿಗೆ ಸಚಿವ ಬೈರತಿ ಸುರೇಶ್, ಸಾರಿಗೆ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್ ಹಾಗೂ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಘುನಂದನ್ ಮೂರ್ತಿ ಅವರು ಸೇಂಟ್ ಮಾರ್ತಾಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಪ್ರಯಾಣಿಕರು ಹಾಗೂ ಚಾಲಕರ ಆರೋಗ್ಯ ವಿಚಾರಿಸಿದ್ದಾರೆ.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೆ.ಆರ್. ಸರ್ಕಲ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ 16 ಜನ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವರ ದಯೆಯಿಂದ ಕೆಲವರು ಡಿಸ್ಚಾರ್ಜ್ ಆಗುತ್ತಿದ್ದಾರೆ. ಮೂವರಿಗೆ ಎಂಆರ್‌ಐ, ಸಿಟಿ ಸ್ಕ್ಯಾನ್ ಮಾಡಿದ್ದಾರೆ. ಗಾಯಾಳುಗಳ ಚಿಕಿತ್ಸಾ ವೆಚ್ಚ ಸರ್ಕಾರದಿಂದ ಭರಿಸುತ್ತೇವೆ ಎಂದು ಹೇಳಿದ್ದಾರೆ.
ಚಾಲಕನ ಅಜಾಗರೂಕತೆ ಇದಕ್ಕೆ ಕಾರಣವೇ ಎಂಬ ಬಗ್ಗೆ ಪರಿಶೀಲನೆ ಮಾಡಲಾಗುವುದು. ಇವಿ ಬಸ್‌ಗಳ ಅಪಘಾತ ಹೆಚ್ಚಾಗುತ್ತಿದ್ದು, ಇದರ ಸ್ಥಿತಿಗತಿ ಬಗ್ಗೆ ವರದಿ ತರಿಸಿಕೊಳ್ಳುತ್ತೇವೆ ಎಂದಿದ್ದಾರೆ.





