ಮುಂಬೈನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಮನ್ಖುರ್ದ್ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಆರು ಮಂದಿ ಮೃತಪಟ್ಟಿದ್ದಾರೆ. ಒಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಇನ್ನೊಬ್ಬರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಅವರನ್ನು ಪತ್ತೆಹಚ್ಚಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಮುಂಬೈ ಅಗ್ನಿಶಾಮಕ ದಳ, ಬೃಹನ್‌ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಹಾಗೂ ಪೊಲೀಸ್ ಸಿಬ್ಬಂದಿ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಭಾನುವಾರ ರಾತ್ರಿ ಸುಮಾರು 8.30ರ ವೇಳೆಗೆ ಮನ್ಖುರ್ದ್’ನ ಜನತಾ ನಗರದಲ್ಲಿರುವ ಹನುಮಾನ್ ಮಂದಿರದ ಹಿಂಭಾಗದ ನೆಲಮಹಡಿ ಸೇರಿ ಮೂರು ಮಹಡಿಗಳ ಕಟ್ಟಡದ ಒಂದು ಭಾಗ ಕುಸಿದಿದೆ. ಕಟ್ಟಡ ಕುಸಿಯುತ್ತಿದ್ದಂತೆ ಸ್ಥಳೀಯರು ರಕ್ಷಣಾ ಕಾರ್ಯ ಆರಂಭಿಸಿದ್ದು, ಬಳಿಕ ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್ ಹಾಗೂ ಬಿಎಂಸಿ ತಂಡಗಳು ಸ್ಥಳಕ್ಕೆ ಧಾವಿಸಿ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಿದವು.
ಬಿಎಂಸಿ ಅಧಿಕಾರಿಗಳ ಮಾಹಿತಿ ಪ್ರಕಾರ, ಅವಶೇಷಗಳಡಿಯಿಂದ ನಾಲ್ವರು ಮಹಿಳೆಯರು ಮತ್ತು ಒಬ್ಬ ಪುರುಷನನ್ನು ಹೊರತೆಗೆಯಲಾಗಿದ್ದು, ಅವರು ಮೃತಪಟ್ಟಿದ್ದರು. ಮತ್ತೊಬ್ಬ ವ್ಯಕ್ತಿ ಆಸ್ಪತ್ರೆಗೆ ಸಾಗಿಸಿದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗಾಯಗೊಂಡ ಮತ್ತೊಬ್ಬರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇನ್ನೂ ಒಬ್ಬರು ಅವಶೇಷಗಳಡಿ ಸಿಲುಕಿರುವ ಶಂಕೆ ಇದ್ದು, ಭಾರೀ ಮಳೆಯ ನಡುವೆಯೇ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಮಳೆಯಿಂದ ಮುಂಬೈ ನಗರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸಂಚಾರ ಹಾಗೂ ಸಾರ್ವಜನಿಕ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಹಲವು ಪ್ರದೇಶಗಳಲ್ಲಿ ನೀರು ನಿಂತ ಪರಿಣಾಮ ಜನರು ಪರದಾಡುವಂತಾಗಿದೆ. ಅನೇಕ ಕಡೆಗಳಲ್ಲಿ ಮರಗಳು ಧರೆಗುರುಳಿವೆ.
ಭಾರೀ ಮಳೆ, ಬಿರುಗಾಳಿ ಹಾಗೂ ಮರಗಳು ಕುಸಿದ ಕಾರಣ ಭಾನುವಾರ ಬೆಳಗ್ಗೆ ಸುಮಾರು ಒಂದು ಗಂಟೆ ಕಾಲ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಬೆಳಗ್ಗೆ 10.17ರಿಂದ 11.17ರವರೆಗೆ ವಿಮಾನಗಳ ಹಾರಾಟ ಮತ್ತು ಲ್ಯಾಂಡಿಂಗ್‌ಗೆ ತಡೆ ವಿಧಿಸಲಾಗಿತ್ತು. ಹವಾಮಾನ ಸುಧಾರಿಸಿದ ಬಳಿಕ ಸೇವೆ ಪುನರಾರಂಭವಾದರೂ, ಹಲವು ವಿಮಾನಗಳ ವೇಳಾಪಟ್ಟಿ ಅಸ್ತವ್ಯಸ್ತಗೊಂಡಿತ್ತು.
ಮಳೆ ಸಂಬಂಧಿತ ಮತ್ತೊಂದು ದುರಂತದಲ್ಲಿ ಕುರ್ಲಾ ಪ್ರದೇಶದಲ್ಲಿ ಮರವೊಂದು ಅಂಗಡಿಯ ಮೇಲೆ ಬಿದ್ದ ಪರಿಣಾಮ 63 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಮಹಾರಾಷ್ಟ್ರದ ನವಿ ಮುಂಬೈನ ವಾಶಿ ಸೆಕ್ಟರ್-11ರಲ್ಲಿ ರಾಮ ನಿವಾಸ್ ಕಟ್ಟಡದ ಎರಡನೇ ಮಹಡಿಯ ಬಾಲ್ಕನಿಯ ಕಾಂಕ್ರೀಟ್ ಸ್ಲ್ಯಾಬ್ ಕುಸಿದು ಮೂವರು ಗಾಯಗೊಂಡಿದ್ದಾರೆ. ಅವರಲ್ಲಿ 35 ವರ್ಷದ ರಾಜೇಶ್ ಶೆಟ್ಟಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಇಬ್ಬರು ಮಹಿಳೆಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭೀವಂಡಿಯ ಕಂವರಿ ನದಿಯಲ್ಲಿ ಸ್ನೇಹಿತರೊಂದಿಗೆ ಏಡಿಗಳನ್ನು ಹಿಡಿಯಲು ತೆರಳಿದ್ದ 17 ವರ್ಷದ ಬಾಲಕ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ. ಆತನಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಥಾಣೆಯ ದಿವಾ ಪ್ರದೇಶದಲ್ಲಿ ಎರಡು ಅಂತಸ್ತಿನ ಕಟ್ಟಡದ ಮೆಟ್ಟಿಲಿನ ಕಾಂಕ್ರೀಟ್ ಸ್ಲ್ಯಾಬ್ ಕುಸಿದ ಪರಿಣಾಮ ಐವರು ಕಟ್ಟಡದೊಳಗೆ ಸಿಲುಕಿಕೊಂಡಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಪಾಲ್ಘರ್ ಜಿಲ್ಲೆಯ ವಸೈ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ವಸತಿ ಸಮುಚ್ಚಯದ ಕಾಂಪೌಂಡ್ ಗೋಡೆ ಕುಸಿದು ಪಕ್ಕದಲ್ಲಿದ್ದ ವಸತಿ ಪ್ರದೇಶದ ಮೇಲೆ ಬಿದ್ದಿದೆ. ಘಟನೆಯಲ್ಲಿ ಸುಮಾರು 15 ದ್ವಿಚಕ್ರ ವಾಹನಗಳು ಜಖಂಗೊಂಡಿವೆ.
ಕಳೆದ 24 ಗಂಟೆಗಳಲ್ಲಿ ಹಲವು ಪ್ರದೇಶಗಳಲ್ಲಿ 200 ಮಿ.ಮೀ.ಗಿಂತ ಹೆಚ್ಚು ಮಳೆಯಾಗಿದ್ದು, ಕೆಲವು ಭಾಗಗಳಲ್ಲಿ ಸುಮಾರು 300 ಮಿ.ಮೀ. ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಮುಂಬೈಗೆ ಭಾನುವಾರ ನೀಡಿದ್ದ ರೆಡ್ ಅಲರ್ಟ್ ಮುಂದುವರಿಸಲಾಗಿದ್ದು, ಸೋಮವಾರಕ್ಕೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮುಂದಿನ 24 ಗಂಟೆಗಳ ಕಾಲ ಭಾರೀ ಮಳೆ, ಬಿರುಗಾಳಿ ಹಾಗೂ ಜಲಾವೃತ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಇಲಾಖೆ ಎಚ್ಚರಿಸಿದೆ.
ಮಳೆಯ ತೀವ್ರತೆ ಮತ್ತು ಹವಾಮಾನ ಮುನ್ಸೂಚನೆಯನ್ನು ಗಮನದಲ್ಲಿಟ್ಟುಕೊಂಡು ಮುಂಬೈನ ಎಲ್ಲಾ ಸರ್ಕಾರಿ, ಖಾಸಗಿ ಹಾಗೂ ಬಿಎಂಸಿ ಶಾಲೆ ಮತ್ತು ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ. ಆದರೆ, ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಅಗತ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರಬರಬೇಕು ಹಾಗೂ ಅಧಿಕಾರಿಗಳ ಸೂಚನೆಗಳನ್ನು ಪಾಲಿಸಬೇಕು ಎಂದು ಬಿಎಂಸಿ ಸಾರ್ವಜನಿಕರಿಗೆ ಮನವಿ ಮಾಡಿದೆ.





