ಈ ಬಾರಿಯ ದೀಪಾವಳಿಯ ಸಂದರ್ಭದಲ್ಲಿ ನಿಮ್ಮ ಮನೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಈ ಹಬ್ಬವನ್ನು ಸ್ಮರಣೀಯ ಆಗಿಸುವಂಥ ಏನನ್ನಾದರೂ ಏಕೆ ಮಾಡಬಾರದು…..?
ದೀಪಾವಳಿ ಎಂದರೆ ದೀಪಗಳ ಹಬ್ಬ. ಉತ್ಸಾಹ ಮತ್ತು ಮೋಜು ಮಸ್ತಿ, ಢಂ, ಢಮಾರ್ ಎನ್ನುವ ಪಟಾಕಿಗಳನ್ನು ಸಿಡಿಸುವ ಬಣ್ಣ ಬಣ್ಣದ ಹೂಕುಂಡಗಳು, ತರಹೇವಾರಿ ಸಿಡಿಮದ್ದುಗಳನ್ನು ಸಿಡಿಸುವ ಹಾಗೂ ಪ್ರೀತಿಪಾತ್ರರೊಂದಿಗೆ ಒಡನಾಡುವ ಹಬ್ಬ. ಇದರೊಂದಿಗೆ ದೀಪಾವಳಿ ನಿಮ್ಮಲ್ಲಿರುವುದನ್ನು ಪ್ರದರ್ಶಿಸುವ ಅಥವಾ ತೋರಿಸಿಕೊಳ್ಳುವ ಬೆಡಗಿನ ಆಡಂಬರ ವೈಭವದ ಹಬ್ಬ ಕೂಡ.
ಇತ್ತೀಚಿನ ದಿನಗಳಲ್ಲಿ ನಿಮ್ಮ ದುಬಾರಿ ಆಭರಣಗಳು ಮತ್ತು ಸೊಗಸಾದ ಉಡುಪುಗಳನ್ನು ಪ್ರದರ್ಶಿಸಲು ಮತ್ತು ಇತರರು ಆಸೂಯೆ ಪಡುವಂತೆ ಪ್ರದರ್ಶನ ಮಾಡಿಕೊಳ್ಳುವ ಸಂದರ್ಭಗಳಾದರೂ ಎಲ್ಲಿ ಸಿಗುತ್ತವೆ? ಇಂದಿನ ದಿನಗಳಲ್ಲಿ ಮದುವೆ ಅಥವಾ ಅಂತಹ ದೊಡ್ಡ ಸಂದರ್ಭಗಳು ಮನೆಗಳಲ್ಲಿ ನಡೆಯುವುದು ಬಹಳ ವಿರಳವಾಗಿ ಇರುವುದರಿಂದ, ಈ ಹಬ್ಬದ ಸಂದರ್ಭವನ್ನು ಮನೆ ಅಲಂಕಾರಕ್ಕಾಗಿ ಮಾತ್ರವಲ್ಲದೆ ಇದಕ್ಕೂ ಸಹ ಬಳಸಿಕೊಳ್ಳಬಹುದು.
ಹಿಂದೆ ಅವಿಭಕ್ತ ಕುಟುಂಬಗಳಿದ್ದವು. ಮನೆಯಲ್ಲಿ ಒಂದಲ್ಲಾ ಒಂದು ಮದುವೆ, ಮುಂಜಿ, ಸೀಮಂತ ಮುಂತಾದ ಶುಭ ಕಾರ್ಯಗಳು ನಡೆಯುತ್ತಿದ್ದವು. ಆಗ ಜನರು ತಮ್ಮ ಎಲ್ಲಾ ಆಸೆಗಳನ್ನು ಪೂರೈಸಿಕೊಳ್ಳುತ್ತಿದ್ದರು. ಆದರೆ ಇಂದು ಇಡೀ ಕುಟುಂಬದಲ್ಲಿ 2-3 ಅಥವಾ 3-4 ಸದಸ್ಯರು ಮಾತ್ರ ಇರುತ್ತಾರೆ. ಅವರೂ ಸಹ ತಮ್ಮ ತಮ್ಮ ಕೋಣೆಗಳಲ್ಲಿಯೇ ಇದ್ದುಕೊಂಡು ಮೊಬೈಲ್ ಫೋನ್, ಕಂಪ್ಯೂಟರ್ ಗಳಲ್ಲಿ ಮಗ್ನರಾಗಿರುತ್ತಾರೆ.
ಕುಟುಂಬದಲ್ಲಿ ಯಾರಾದರೂ ಇದ್ದರೆ 10-15 ವರ್ಷಕ್ಕೆ ಒಂದು ಮದುವೆಯಾಗುತ್ತದೆ. ನಮ್ಮ ಮನೆಗಳಲ್ಲಿ, ಸ್ವಂತ ಕುಟುಂಬದಲ್ಲಿ ನಡೆಯು ಮದುವೆಯಲ್ಲಿ ಸಿಗುವ ಸಂಭ್ರಮವೇ ವಿಭಿನ್ನವಾಗಿರುತ್ತದೆ. ಆಗ ಒಬ್ಬ ವ್ಯಕ್ತಿ ನೂರಾರು ಜನರು ನೋಡುವಂತೆ ಅತ್ಯುತ್ತಮವಾದ ಬಟ್ಟೆಗಳನ್ನು ಖರೀದಿಸುತ್ತಾನೆ. ಸ್ಟೈಲಿಶ್ ಹಾಗೂ ದುಬಾರಿ ಬಟ್ಟೆಗಳನ್ನು ಖರೀದಿಸಿ ಸುಂದರವಾದ ಆಭರಣಗಳನ್ನು ಧರಿಸಿ, ರಾಜರಾಣಿಯರಂತೆ ಸುತ್ತಾಡುತ್ತಾರೆ. ಈಗಲೂ ಮನೆಯನ್ನು ಅಲಂಕರಿಸುತ್ತಾರೆ, ದುಬಾರಿ ವಸ್ತುಗಳನ್ನು ಖರೀದಿಸುತ್ತಾರೆ. ಆದರೆ, ಮದುವೆ ಸಂಭ್ರಮದ ಸಂದರ್ಭ ಬರುವುದೇ 10-12 ವರ್ಷಗಳ ನಂತರವೇ.
ಇಂತಹ ಪರಿಸ್ಥಿತಿಯಲ್ಲಿ, ದೀಪಾವಳಿ ಎಲ್ಲರ ಮನೆಯಲ್ಲಿ ಆಚರಿಸುವ ದೊಡ್ಡ ಹಬ್ಬ. ಇದು ಯಾವುದೇ ವ್ಯಕ್ತಿ ಅಥವಾ ಒಂದು ಜಾತಿಗೆ ಸೀಮಿತವಾದ ಹಬ್ಬವಲ್ಲ. ನಾವು ವಾರ್ಷಿಕೋತ್ಸವ ಅಥವಾ ಹುಟ್ಟುಹಬ್ಬವನ್ನು ಆಚರಿಸುವ ವೈಯಕ್ತಿಕ ಸಂದರ್ಭ ಅಲ್ಲ. ಎಲ್ಲರೂ ಒಟ್ಟಾಗಿ ಸೇರಿ ಆಚರಿಸುತ್ತಿದ್ದರೆ, ಈ ಸಂದರ್ಭದಲ್ಲಿ ನಿಮಗಾಗಿ, ನಿಮ್ಮ ಮನೆಗಾಗಿ ಮತ್ತು ನಿಮ್ಮ ಪ್ರೀತಿಪಾತ್ರರಿಗಾಗಿ ಏನಾದರೂ ಸ್ಮರಣೀಯವಾದದ್ದು ಅಥವಾ ವಿಶೇಷವಾದದ್ದನ್ನು ಏಕೆ ಮಾಡಬಾರದು?
ಮನಸ್ಸಿಗೆ ಮುದ ನೀಡುವಷ್ಟು ಶಾಪಿಂಗ್
ನಿಮ್ಮ ಮನಸ್ಸಿಗೆ ಇಷ್ಟವಾಗುವಷ್ಟು ಶಾಪಿಂಗ್ ಮಾಡಿ ಎಂದರೆ, ಇಡೀ ಅಂಗಡಿಯನ್ನೇ ನೀವು ಖರೀದಿಸಬೇಕು ಎಂದಲ್ಲ. ಇದರರ್ಥ ನೀವು ಇಷ್ಟಪಡುವ ಮಕ್ಕು ನಿಮ್ಮ ಮನಸ್ಸಿಗೆ ಸಂತೋಷ ನೀಡುವ ವಸ್ತುಗಳನ್ನು ಖರೀದಿಸಿ. ನಿಮಗೆ ಕಂಫರ್ಟ್ ಆಗಿರುವ, ಮನಸ್ಸಿಗೆ ಮುದ ನೀಡುವಂತಹ ಬಟ್ಟೆ, ಆಭರಣ ಹಾಗೂ ಪರಿಕರಗಳನ್ನು ಖರೀದಿಸಿ. ಅವು ನಿಮಗೂ ವಿಶೇಷ ಎನ್ನಿಸಬೇಕು. ಹತ್ತು ಜನ ನಿಮ್ಮನ್ನು ನೋಡಿದಾಗ ಅವರ ಕಣ್ಣು ನಿಮ್ಮನ್ನು ಬಿಟ್ಟು ಬೇರೆ ಕಡೆ ನೋಡಲು ಸಾಧ್ಯವಾಗದಷ್ಟು ವಿಶೇಷವಾಗಿರಬೇಕು.

ನೀವು ಒಂದು ಸೀರೆಯನ್ನಾದರೂ ಖರೀದಿಸಿ ಅಥವಾ ಒಂದು ಗೌನ್ ಅಥವಾ ಯಾವುದೇ ಉಡುಪನ್ನು ಖರೀದಿಸಬಹುದು. ಅದನ್ನು ಧರಿಸಿದಾಗ ನೋಡಿದ ಜನ ಮೆಚ್ಚಿ ಹೊಗಳುವಂತಿರಬೇಕು. ಹೆಚ್ಚಿನ ಹಣ ಖರ್ಚು ಮಾಡಲು ಹಿಂಜರಿಯಬೇಡಿ. ಏಕೆಂದರೆ, ಪ್ರದರ್ಶನಕ್ಕೆ ಇದೊಂದು ಒಳ್ಳೆಯ ಅವಕಾಶ. ಇಂತಹ ಸಂದರ್ಭಗಳು ಮತ್ತೆ ಮತ್ತೆ ಸಿಗುವುದಿಲ್ಲ. ವಿಶೇಷ ವಿನ್ಯಾಸವಿಲ್ಲದ ಸರಳ ಅಥವಾ ಮಂದ ಬಣ್ಣದ ಉಡುಪುಗಳನ್ನು ಖರೀದಿಸಬೇಡಿ. ಬದಲಿಗೆ ಸ್ವಲ್ಪ ಜರಿ ಇರುವ ಅಥವಾ ವಿಶೇಷ ಕುಸುರಿ ಕೆಲಸ ಮಾಡಿರುವ ಬಟ್ಟೆಗಳನ್ನು ಖರೀದಿಸಿ. ಆ ಉಡುಗೆ ನಿಮಗೆ ಸುಂದರ ಹಾಗೂ ವಿಭಿನ್ನ ಲುಕ್ ನೀಡುವಂತಿರಲಿ. ಇದನ್ನು ನೋಡು ಜನರು ನೀವು ಇದನ್ನು ಎಷ್ಟು ಬೆಲೆಗೆ ಖರೀದಿಸಿದ್ದೀರಿ, ಪ್ರಿಂಟಿಂಗ್, ಕುಸುರಿ ಕೆಲಸ, ಬಣ್ಣ ಇತ್ಯಾದಿಗಳ ಬಗ್ಗೆ ನಿಮ್ಮನ್ನು ಕೇಳುತ್ತಲೇ ಇರಬೇಕು. ಅಂಥ ಡ್ರೆಸೆಸ್ ಖರೀದಿಸಿ.
ಸ್ವಲ್ಪ ಭಿನ್ನವಾಗಿ ಕಾಣಲು
ದೀಪಾವಳಿಯ ದಿನ ಸುಂದರವಾಗಿ ಹಾಗೂ ವಿಭಿನ್ನವಾಗಿ ಕಾಣಲು ಬಯಸಿದರೆ, ನೀವು ಈ ರೀತಿಯ ಉಡುಪುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ದೀಪಾವಳಿಗೆ ಫ್ಲೋರ್ ಲೆಂತ್ ಇರುವ ಗೌನ್ ಖರೀದಿಸಬಹುದು. ಯಾವುದೇ ಸಂದರ್ಭವಿರಲಿ, ಗೌನ್ ಯಾವಾಗಲೂ ಸುಂದರವಾಗಿ ಕಾಣುತ್ತದೆ. ಈ ದೀಪಾವಳಿಗೆ ಜರಿ ಅಥವಾ ಸ್ಟೋನ್ ವರ್ಕ್ ಇರುವ ತಿಳಿ ಪ್ರಕಾಶಮಾನ ಬಣ್ಣದ ಗೌನ್ ಆರಿಸಿ. ನೀವು ಅದನ್ನು ಹಬ್ಬಕ್ಕೆ ಅಥವಾ ಪಾರ್ಟಿಗೂ ಧರಿಸಬಹುದು.
ನೀವು ಇನ್ನಷ್ಟು ವಿಭಿನ್ನವಾಗಿ ಕಾಣಲು ಬಯಸಿದರೆ, ಕ್ರಾಪ್ ಟಾಪ್ ಅಥವಾ ಸ್ಕರ್ಟ್ ಧರಿಸಬಹುದು. ಇದು ನಿಮ್ಮ ಎಥ್ನಿಕ್ ಉಡುಪಿಗೆ ಆಧುನಿಕ ಸ್ಪರ್ಶ ನೀಡುತ್ತದೆ. ನಿಮ್ಮ ಲುಕ್ ನ್ನು ಹೆಚ್ಚಿಸಿಕೊಳ್ಳಲು ಇನ್ನಷ್ಟು ಮಿನುಗುವ ದುಪಟ್ಟಾದಿಂದ ಅಲಂಕರಿಸಿಕೊಳ್ಳಿ. ಹಬ್ಬದ ಸೀಸನ್ ನಲ್ಲಿ ಲೆಹಂಗಾಗಳು ಯಾವಾಗಲೂ ಟ್ರೆಂಡ್ ನಲ್ಲಿರುತ್ತವೆ. ಹೆವಿ ಮಿರರ್ ವರ್ಕ್ ಇರುವ ಬಟ್ಟೆಗಳು ಇನ್ನಷ್ಟು ಸುಂದರವಾಗಿರುತ್ತವೆ. ಅಲ್ಲದೆ, ನೀವು ಧೋತಿ ಸ್ಟೈಲ್ ಡ್ರೆಸ್ ಸಹ ಆಯ್ಕೆ ಮಾಡಬಹುದು. ಈ ಲುಕ್ ಕಂಟೆಪುರಿ ಜೊತೆಗೆ ಟ್ರೆಡಿಷನಲ್ ಆಗಿಯೂ ಇರುತ್ತದೆ.
ಸೀರೆಯಲ್ಲಿ ಮಹಿಳೆಯರು ಎಷ್ಟು ಸುಂದರವಾಗಿ ಕಾಣುತ್ತಾರೆ ಎಂದರೆ ಎಲ್ಲರ ಗಮನ ಅವರ ಕಡೆಗೇ ಇರುತ್ತದೆ. ಈ ದೀಪಾವಳಿಗೆ ನೀವು ಸೀರೆ ಸಹ ಉಡಬಹುದು. ಮಾರುಕಟ್ಟೆಯಲ್ಲಿ ಹಲವಾರು ಬಗೆಯ ವಿಭಿನ್ನ, ಡಿಸೈನ್ಸ್ ಇರುವ ಬಣ್ಣದ ಸೀರೆಗಳು ಸಿಗುತ್ತವೆ. ಗುಜರಾತಿ, ರಾಜಸ್ಥಾನಿ ಸೀರೆಗಳಂತೆ ರೇಷ್ಮೆ , ಮೈಸೂರು ಸಿಲ್ಕ್, ಬನಾರಸಿ ಇತ್ಯಾದಿ ಸೀರೆಗಳು ದೊರೆಯುತ್ತವೆ.
ನೀವು ಸೂಟ್ ಗಳನ್ನು ಧರಿಸಲು ಇಷ್ಟಪಡುವವರಾಗಿದ್ದರೆ, ಪ್ಲಾರೋ ಸೂಟ್ ದೀಪಾವಳಿಗೆ ಸೂಕ್ತ ಉಡುಗೆಯಾಗಿದೆ. ನೀವು ಅದನ್ನು ಹಲವು ವಿಧಗಳಲ್ಲಿ ಧರಿಸಬಹುದು. ಮಾರುಕಟ್ಟೆಯಲ್ಲಿ ಫ್ಲಾರೋದೊಂದಿಗೆ ಮಧ್ಯದ ಕಟ್ ಹೊಂದಿರುವ ಸುಂದರವಾದ ಹತ್ತಿ ಅಥವಾ ರೇಷ್ಮೆ ಕುರ್ತಿಗಳನ್ನು ಹಲವು ವಿಧಗಳಲ್ಲಿ ಕಾಣಬಹುದು. ಇದರ ಹೊರತಾಗಿ ನೀವು ಲೆಗ್ಗಿಂಗ್ಸ್, ಫ್ಲಾಝೋ ಪ್ಯಾಂಟ್ ಗಳು. ಜೀನ್ಸ್ ಅಥವಾ ಸ್ವಾರ್ ಇತ್ಯಾದಿಗಳೊಂದಿಗೆ ಅಂತಹ ವಿನ್ಯಾಸಗೊಳಿಸಿದ ಕುರ್ತಿಗಳೊಂದಿಗೆ ವಿಭಿನ್ನವಾಗಿ ಕಾಣಿಸಿಕೊಳ್ಳಬಹುದು.
ಆಭರಣಗಳು ವಿಶೇಷವಾಗಿರಲಿ
ವರ್ಷವಿಡೀ ಯಾವುದೇ ದೊಡ್ಡ ಸಮಾರಂಭಕ್ಕೆ ಧರಿಸಬಹುದಾದಂಥ ಆಭರಣಗಳನ್ನು ಖರೀದಿಸಿ. ದೀಪಾವಳಿಯಂದು ನೀವು ಆ ಆಭರಣಗಳನ್ನು ಧರಿಸಿ ಹೊರಗೆ ಹೋದಾಗ ಅಥವಾ ಯಾರಾದರೂ ಮನೆಗೆ ಭೇಟಿ ನೀಡಿದಾಗ ಅಥವಾ ನಿಮ್ಮನ್ನು ಯಾರಾದರೂ ಭೇಟಿ ಮಾಡಲು ಬಂದಾಗ, ಅವರ ಕಣ್ಣು ನಿಮ್ಮ ಆಭರಣಗಳ ಮೇಲೇ ಕೇಂದ್ರೀಕೃತವಾಗಿರಬೇಕು. ಅಷ್ಟು ಆಕರ್ಷಣೀಯವಾಗಿರುವ ಆಭರಣಗಳನ್ನು ಖರೀದಿಸಿ. ಆಗ ಜನ ಈ ಆಭರಣಗಳನ್ನು ಎಲ್ಲಿ ಖರೀದಿಸಿದ್ದೀರಿ ಎಂದು ಕೇಳುತ್ತಲೇ ಇರುತ್ತಾರೆ.
ವಾಟ್ಸ್ ಆ್ಯಪ್ ಸ್ಟೇಟಸ್ ನಲ್ಲಿ ನಿಮ್ಮ ಫೋಟೋವನ್ನು ಹಾಕಿದರೆ, ಜನರು ನಿಮ್ಮ ಆಯ್ಕೆಯನ್ನು ನೋಡಿ ಹೊಗಳುತ್ತಿರುತ್ತಾರೆ. ನೆರೆಹೊರೆಯವರಾಗಲಿ, ಸ್ನೇಹಿತರಾಗಲಿ ಅಥವಾ ಸಂಬಂಧಿಕರಾಗಿರಲಿ, ನಿಮ್ಮನ್ನು ನೋಡು ಯಾರೇ ಆಗಲಿ ನಿಮ್ಮನ್ನು ನೋಡುತ್ತಲೇ ಇರುತ್ತಾರೆ.
ಈ ದಿನ, ನಿಮ್ಮ ಉಡುಪಿಗೆ ಸರಿಹೊಂದುವ ಚೋಕರ್ ನೆಕ್ಲೇಸ್, ಸ್ಟೇಟ್ ಮೆಂಟ್ ಕಿವಿಯೋಲೆ, ಸ್ಟೋನ್ ಸ್ಟಡ್ ಆಭರಣದ ಸೆಟ್ ಇತ್ಯಾದಿಗಳನ್ನು ನೀವು ಧರಿಸಬಹುದು. ನೀವು ಕೆಲವು ದುಬಾರಿ ಚಿನ್ನ ಅಥವಾ ವಜ್ರದ ಆಭರಣಗಳನ್ನು ಖರೀದಿಸಬಹುದು. ಇದರಲ್ಲಿ ನೆಕ್ಲೇಸ್, ಬಳೆ, ಕಿವಿಯೋಲೆ ಮತ್ತು ಉಂಗುರಗಳು ಇತ್ಯಾದಿ ಸೇರಿವೆ. ನೀವು ವಿವಿಧ ವಿನ್ಯಾಸಗಳಿಂದ ಅಲಂಕರಿಸಲ್ಪಟ್ಟ ಮತ್ತು ವರ್ಣರಂಜಿತ ರತ್ನಗಳಿಂದ ಅಲಂಕರಿಸಲ್ಪಟ್ಟ ಕುಂದನ್, ಪೋಲ್ಕಿ, ಮೀನಾಕಾರಿ ಆಭರಣಗಳನ್ನು ಆಯ್ಕೆ ಮಾಡಬಹುದು. ನೀವು ಮಾಣಿಕ್ಯ, ಪಚ್ಚೆ, ನೀಲಮಣಿ ಅಥವಾ ಇತರೆ ಅಮೂಲ್ಯವಾದ ಕಲ್ಲುಗಳಿಂದ ಮಾಡಿದ ಆಭರಣಗಳನ್ನು ಧರಿಸಬಹುದು.
ಒಂಬತ್ತು ವಿಭಿನ್ನ ರತ್ನಗಳಿಂದ ಮಾಡಿದ ನವರತ್ನ ಆಭರಣಗಳನ್ನು ಅಂದರೆ ಅದ್ಭುತವಾದ ಆಭರಣಗಳನ್ನು ಖರೀದಿಸಿ ಧರಿಸಿದರೆ, ಎಲ್ಲರ ನಡುವೆ ಎದ್ದು ಕಾಣುತ್ತೀರಿ. ಪೋಲ್ಕಿ ಹುದುಗಿಸಿದ ಭಾರವಾದ ಚಿನ್ನದ ಉಂಗುರಗಳನ್ನು ಖರೀದಿಸಬಹುದು. ಬಿಳಿ ಅಥವಾ ಹಳದಿ ಚಿನ್ನದಲ್ಲಿ ಕೆತ್ತಿದ ಮಾಣಿಕ್ಯ ಮತ್ತು ವಜ್ರದ ಹಾರವನ್ನು ಧರಿಸಿ. ಆದಕ್ಕೆ ಸಾಂಪ್ರದಾಯಿಕ ಉಡುಪು ಧರಿಸಿ ಅಥವಾ ರಾತ್ರಿ ಸಮಯದಲ್ಲಾದರೆ ಅದಕ್ಕೆ ಹೊಂದು ರೇಷ್ಮೆ ಸೀರೆ ಧರಿಸಿ.
ಈ ಆಭರಣ ಚಂದ್ರನ ಬೆಳಕಿನಲ್ಲಿ ಪರಿಪೂರ್ಣ ಹೊಳಪಿನೊಂದಿಗೆ ಕಂಗೊಳಿಸುವುದರಿಂದ ನೀವು ಅದ್ಭುತವಾಗಿ ಕಾಣುತ್ತೀರಿ. ಈ ದೀಪಾವಳಿಗೆ ಚಿನ್ನದ ಚಾಂದ್ ಬಲಿ ಕಿವಿಯೋಲೆ ಮತ್ತೊಂದು ಆಕರ್ಷಕ ಆಭರಣವಾಗಬಹುದು. ಚಾಂದ್ ಬಲಿ ಕಿವಿಯೋಲೆಗಳು ಅರ್ಧಚಂದ್ರಾಕಾರದ ಕಿವಿಯೋಲೆಗಳಾಗಿದ್ದು, ಇವುಗಳನ್ನು ಸಾಮಾನ್ಯವಾಗಿ ಪೋಲ್ಕಿ ಮತ್ತು ಇತರ ಅಮೂಲ್ಯ ಕಲ್ಲುಗಳಿಂದ ಅಲಂಕರಿಸಲಾಗುತ್ತದೆ. ಚಾಂದ್ ಬಲಿ ನಿಮಗೆ ದಿವಾ ಲುಕ್ ನೀಡಲು ಸಹಾಯ ಮಾಡುತ್ತದೆ.
ದೀಪಾವಳಿಯ ದಿನದಂದು ನೀವು ಖಂಡಿತವಾಗಿಯೂ ನಿಮ್ಮ ದುಬಾರಿ ಬಟ್ಟೆ, ಪರಿಕರಗಳು ಅಥವಾ ಗೃಹೋಪಯೋಗಿ ವಸ್ತುಗಳನ್ನು ಪ್ರದರ್ಶಿಸಬಹುದು. ಆದರೆ ಈ ಪ್ರದರ್ಶನ ಸ್ಥಾನಮಾನಕ್ಕೆ ಸಂಬಂಧಿಸಿದ ಪ್ರದರ್ಶನವಲ್ಲ. ಇದು ವರ್ಷವಿಡೀ ಹಬ್ಬದ ಸಂತೋಷದ ಪ್ರದರ್ಶನವಾಗಿದೆ. ಇದರಲ್ಲಿ ನೀವು ನಿಮಗಾಗಿ ಪ್ರದರ್ಶಿಸುತ್ತಿದ್ದೀರಿ. ಶೋ ಆಫ್ ಮಾಡಲು, ನಿಮಗೆ ನೀವು ಚೆಂದ ಕಾಣಲು ಪ್ರದರ್ಶಿಸುತ್ತಿದ್ದೀರಿ.
ಇದರಿಂದಾಗಿ ನಿಮ್ಮ ಜೀವನದಲ್ಲಿ ಹೊಸ ಉತ್ಸಾಹ, ಹೊಸ ಭರವಸೆ ಮೂಡುತ್ತದೆ.
ಶೋಆಫ್ ಗಾಗಿ ಮನೆಯನ್ನು ಅಲಂಕರಿಸುವಲ್ಲಿ ಯಾವುದೇ ಕೊರತೆ ಇಲ್ಲದಂತೆ ನೋಡಿಕೊಳ್ಳಿ. ಅದಕ್ಕಾಗಿ ಹೆಚ್ಚು ಹಣ ಖರ್ಚಾಗುತ್ತಿದೆ ಎಂದು ಭಾವಿಸಬೇಡಿ. ನೀವು ನೋಡಿರುವ ಅಲಂಕಾರಿಕ ವಸ್ತು ಸುಂದರವಾಗಿ ಇರುವುದರ ಜೊತೆಗೆ ದುಬಾರಿಯಾಗಿದ್ದರೆ, ಅದನ್ನು ಬಿಟ್ಟು ಸಾಮಾನ್ಯವಾದದ್ದನ್ನು ಖರೀದಿಸಲು ಹೋಗಬೇಡಿ. ಇದು ವರ್ಷಕ್ಕೊಮ್ಮೆ ಸಂಭ್ರಮಿಸುವಂಥ ಹಬ್ಬ. ಆರಾಮವಾಗಿ ಖರೀದಿಸಿ. ನಿಮ್ಮ ಮನೆಗೆ ಭೇಟಿ ನೀಡಿದವರು ಇದು ಎಷ್ಟು ಅದ್ಭುತವಾಗಿದೆ! ಇದನ್ನು ಎಲ್ಲಿಂದ ಖರೀದಿಸಿ ತಂದಿರಿ ಎಂದು ಕೇಳುವಷ್ಟು ಅದ್ಭುತವಾಗಿರಲಿ.

ಮನೆಯನ್ನು ಹೀಗೆ ಅಲಂಕರಿಸಿ
ಇತ್ತೀಚಿನ ದಿನಗಳಲ್ಲಿ ದೀಪಾವಳಿ ಹಾಗೂ ಇತರ ಹಬ್ಬಗಳ ಸಂದರ್ಭದಲ್ಲಿ ಮನೆಯನ್ನು ಅಲಂಕರಿಸಲು ನಾನಾ ಬಗೆಯ ವಸ್ತುಗಳು ಲಭ್ಯವಿವೆ. ಹೂಮಾಲೆ, ವಿದ್ಯುತ್ ದೀಪ, ಸ್ಟಿಕ್ಕರ್ ನಂತಹ ರಂಗೋಲಿ, ವಾಲ್ ಪೇಪರ್, ಹರಳು ಮತ್ತು ಮಣಿಗಳಿಂದ ಮಾಡಿದ ರಂಗೋಲಿ, ತೇಲುವ ಪರಿಮಳಯುಕ್ತ ಮೇಣದಬತ್ತಿ, ಗಾಜಿನ ಕಂದೀಲುಗಳು ಸೇರಿದಂತೆ ಹಲವಾರು ಡಿಸೈನ್ ಹೊಂದಿರುವ ವಸ್ತುಗಳು ದೊರೆಯುತ್ತವೆ.
ದೀಪಾವಳಿಯ ಈ ಸಂದರ್ಭದಲ್ಲಿ ನಿಮ್ಮ ಮನೆಯನ್ನು ವಿಭಿನ್ನ ಶೈಲಿಯಲ್ಲಿ ಅಲಂಕರಿಸಲು ಹಲವಾರು ಮಾದರಿಗಳನ್ನು ಹೊಂದಿರುವ ವಿದ್ಯುತ್ ದೀಪಗಳು ಸಹ ಮಾರುಕಟ್ಟೆಯಲ್ಲಿ ಲಭ್ಯವಿವೆ.
ಪ್ರವೇಶ ದ್ವಾರದಲ್ಲಿ ನಿರಂತರವಾಗಿ ಉರಿಯುತ್ತಿರುವ ನೀಲಿ, ಹಸಿರು, ಬಿಳಿ ಅಥವಾ ಕೆಂಪು ಬಣ್ಣದ ಲೈಟ್ ಗಳನ್ನು ಹಾಕಬಹುದು. ಆದರೆ ಬಗೆ ಬಗೆ ಬಣ್ಣದ ದೀಪಗಳು ಸಹ ಪ್ರಕಾಶಮಾನವಾಗಿ, ಸುಂದರವಾಗಿ ಕಾಣುತ್ತವೆ. ಇವುಗಳಲ್ಲದೆ, ನಿಮ್ಮ ಮನೆಯ ವಿವಿಧ ಭಾಗಗಳನ್ನು ಗೋಲ್ಡನ್ ಕಲರ್ ನ ದೀಪಗಳಿಂದ ಅಲಂಕರಿಸಬಹುದು.
ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಮೇಣದಬತ್ತಿಗಳು ಲಭ್ಯವಿವೆ. ನೀವು ಪರಿಮಳಯುಕ್ತ, ಬಣ್ಣ ಬದಲಾಯಿಸುವ ಮೇಣದ ಬತ್ತಿಯನ್ನು ಬೆಳಗಿಸಬಹುದು. ಈ ದೀಪಗಳು ರಿಮೋಟ್ ಆಧಾರಿತ ಅಥವಾ ವಿದ್ಯುತ್ ನಿಂದಲೂ ಹೊತ್ತಿಸಬಹುದು. ಇವು ಬಣ್ಣವನ್ನು ಬದಲಾಯಿಸುವ ಆಯ್ಕೆಯನ್ನು ಸಹ ಹೊಂದಿರುತ್ತವೆ. ಇವು ಮನೆಯ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡುತ್ತವೆ. ಅಲಂಕಾರಿಕ ಲ್ಯಾಂಟರ್ನ್ ಗಳೊಂದಿಗೆ ಮನೆಯ ಅಲಂಕಾರಕ್ಕೆ ನೀವು ಬಯಸಿದ ಲುಕ್ ನೀಡಬಹುದು.
ಬಹಳಷ್ಟು ಅಲಂಕಾರಿಕ ವಸ್ತುಗಳನ್ನು ಖರೀದಿಸುವ ಬದಲು ಕೆಲವು ವಿಶೇಷ ಉತ್ಪನ್ನಗಳನ್ನು ಖರೀದಿಸಿ. ನಿಮ್ಮ ಮನೆ ಚಿಕ್ಕದಾಗಿದ್ದರೂ ಸಹ, ಅದು ಅತ್ಯಂತ ಸುಂದರವಾಗಿ ಕಾಣಬೇಕು. ಆಗ ಹತ್ತು ಜನ ನಿಮ್ಮ ಮನೆಯನ್ನು ದಿಟ್ಟಿಸಿ ನೋಡುತ್ತಿರುತ್ತಾರೆ ಮತ್ತು ನೀವು ಅಂತಹ ಅಲಂಕಾರಿಕ ವಸ್ತುಗಳನ್ನು ಖರೀದಿಸಿದ್ದೀರಿ ಎಂದು ಆಶ್ಚರ್ಯಪಡುತ್ತಿರುತ್ತಾರೆ.
ಸ್ವಾಗತ ಉತ್ತಮವಾಗಿರಲಿ
ಇಷ್ಟೇ ಅಲ್ಲ, ನಿಮ್ಮ ಬಳಿ ಹಣವಿದ್ದಾಗ ಖರೀದಿಸುತ್ತೇನೆ ಎಂದು ಯೋಚಿಸಿ ಹಲವು ತಿಂಗಳುಗಳಿಂದ ಮುಂದೂಡುತ್ತಿದೆ. ಮನೆಗೆ ಏನಾದರೂ ಬೆಲೆಬಾಳುವ ವಸ್ತು ಇರಬೇಕು. ನೀವು ಅಂತಹ ಶಾಪಿಂಗ್ ಮಾಡಬೇಕಾದ ಸಮಯ ಇದು. ನಿಮಗೆ ದೀಪಾವಳಿಯಂದು ಬೋನಸ್ ಸಿಕ್ಕಿರಬಹುದು ಅಥವಾ ಸಿಗದಿದ್ದರೂ ಸಹ. ನೀವು ಒಂದು ವರ್ಷದಲ್ಲಿ ಇಷ್ಟು ಖರ್ಚು ಮಾಡಬಹುದು. ಇದರಿಂದ ನೀವು ಜೀವನದಲ್ಲಿ ಒಂದಷ್ಟು ಉತ್ಸಾಹ ಹಾಗೂ ಉಲ್ಲಾಸದ ಕ್ಷಣಗಳನ್ನು ಅನುಭವಿಸಬಹುದು ಮತ್ತು ದೀಪಾವಳಿಯಂದು ನಾವು ಈ ಅದ್ಭುತ ವಸ್ತುವನ್ನು ಖರೀದಿಸಿದ್ದೇವೆ ಎಂದು ಇತರರಿಗೆ ತೋರಿಸಬಹುದು. ಈ ದಿನದಂದು ನಿಮ್ಮ ಮನೆಗೆ ಬರುವ ಅತಿಥಿಗಳನ್ನೂ ಸಹ ಉತ್ತಮ ರೀತಿಯಲ್ಲಿ ಸ್ವಾಗತಿಸಿ. ಆ ಸ್ವಾಗತ ಅದ್ಧೂರಿಯಾಗಿರಲಿ. ನೀವು ಹೊಸ ದುಬಾರಿ ಸೋಫಾಸೆಟ್ ಅಥವಾ ಸ್ವಯಂಚಾಲಿತ ವಾಷಿಂಗ್ ಮೆಷಿನ್ ಅಥವಾ ಹೊಸ ಬೈಕ್ ಖರೀದಿಸಲು ಬಯಸುವವರಾಗಿದ್ದರೆ, ದೀಪಾವಳಿ ಸಂದರ್ಭದಲ್ಲಿ ಅದನ್ನು ಖರೀದಿಸಿ. ನಂತರ ನಿಮ್ಮ ಸ್ನೇಹಿತರು, ಸಂಬಂಧಿಕರನ್ನು ಆಹ್ವಾನಿಸಿ ಹಾಗೂ ಪಾರ್ಟಿಯನ್ನು ಎಂಜಾಯ್ ಮಾಡಿ. ನಿಮ್ಮಲ್ಲಿನ ಹೊಸ ವಸ್ತುಗಳನ್ನು ಪ್ರದರ್ಶಿಸಬಹುದು.
ದೊಡ್ಡ ಪಾರ್ಟಿ ಮಾಡಿ
ದೀಪಾವಳಿಯಂದು ಹೆಚ್ಚಿನ ಜನರ ಮನೆಯಲ್ಲಿ ಪಾರ್ಟಿಗಳನ್ನು ಆಯೋಜಿಸುತ್ತಾರೆ ಅಥವಾ ಬೇರೆಯವರ ಮನೆಗೆ ಹೋಗುತ್ತಾರೆ. ನಿಮ್ಮ ವಸ್ತು, ಆಭರಣ, ಬಟ್ಟೆ, ನಿಮ್ಮ ಮನೆಯ ಅಲಂಕಾರ ಮತ್ತು ದುಬಾರಿ ವಸ್ತುಗಳನ್ನು ಪ್ರದರ್ಶಿಸಲು ನಿಮ್ಮ ಮನೆಯಲ್ಲಿ ಪಾರ್ಟಿಯನ್ನು ಸಹ ಆಯೋಜಿಸಬಹುದು. ನೀವು ಮಾಡುವ ಪಾರ್ಟಿಯಲ್ಲಿ ಜನರು ಬಂದು, ತಿಂದು, ತಮಾಷೆ ಮಾಡಿ ಹೊರಟು ಹೋಗುವಷ್ಟು ಸರಳವಾಗಿ ಇಡಬೇಡಿ. ಪಾರ್ಟಿಗೆ ಏನಾದರೂ ಆಸಕ್ತಿದಾಯಕ ಥೀಮ್ ಇರಲಿ.
ಡೆಕ್ ನಲ್ಲಿ ಹಾಡುಗಳನ್ನು ಹಾಕಿ, ಆ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ನೃತ್ಯವನ್ನೂ ಮಾಡಬಹುದು. ಕೆಲವು ನೃತ್ಯದ ಆಟಗಳನ್ನೂ ಆಡಿ. ಮನರಂಜನಾ ಚಟುವಟಿಕೆಗಳನ್ನೂ ಮಾಡಿ. ಟ್ರೂತ್ ಅಂಡ್ ಡೇರ್ ನಂಥ ಆಟಗಳನ್ನು ಆಡಿ ಮತ್ತು ಗದ್ದಲವನ್ನು ಸೃಷ್ಟಿಸಿ ಹಾಗೂ ಆನಂದಿಸಿ.
ನೆರೆಹೊರೆಯವರೆಲ್ಲರೂ ನಿಮ್ಮ ಮನೆಯಲ್ಲಿ ಪಾರ್ಟಿ ಇದೆ ಎಂದು ತಿಳಿದುಕೊಳ್ಳುತ್ತಾರೆ. ನಂತರ ಆ ದಿನ ಸಂತೋಷವನ್ನು ಹೆಚ್ಚಿಸಲು ನಿಮ್ಮ ಮನಸ್ಸಿಗೆ ತೃಪ್ತಿಯಾಗುವಷ್ಟು ತಿಂದು, ಕುಡಿದು ಸಂತಸಪಡಿ. ದೀಪಾವಳಿಯನ್ನು ಬಹಳ ಉತ್ಸಾಹದಿಂದ ಆಚರಿಸುವುದು ಅನಿವಾರ್ಯವಲ್ಲ. ನೀವು ಆ ದಿನವೇ ಪಾರ್ಟಿ ಮಾಡಬಹುದು ಅಥವಾ ಅದಕ್ಕೂ ಒಂದೆರಡು ದಿನಗಳ ಮೊದಲೂ ಕೂಡ ನೀವು ಪಾರ್ಟಿ ಮಾಡಬಹುದು.
ನಿಮಗೆ ಸಮಯ ಸಿಕ್ಕಾಗ ಅಥವಾ ರಜೆ ತೆಗೆದುಕೊಳ್ಳಲು ಸಾಧ್ಯವಾದಾಗ ಅಥವಾ ನಿಮ್ಮ ರಜಾದಿನಗಳು ಪ್ರಾರಂಭವಾದಾಗ ನಿಮ್ಮ ಸ್ನೇಹಿತರನ್ನು ಆಹ್ವಾನಿಸಿ. ನಿಮ್ಮ ಸುತ್ತಮುತ್ತಲಿನ ಸಂಬಂಧಿಕರನ್ನು ಸಹ ಆಹ್ವಾನಿಸಿ. ನಿಮ್ಮ ಆಪ್ತರು, ನೆರೆಹೊರೆಯವರನ್ನು ಸಹ ಆಹ್ವಾನಿಸಿ, ಒಂದು ಅತ್ಯುತ್ತಮವಾದ ಸಮಯವನ್ನು ಅವರೊಂದಿಗೆ ಕಳೆಯಿರಿ.
ಇದರಿಂದ ಆ ದಿನದ ಚಿತ್ರಗಳು ನೆನಪುಗಳಾಗಿ ಬದಲಾಗುತ್ತವೆ. ಅಲ್ಲದೆ, ವರ್ಷಪೂರ್ತಿ ಆ ದಿನಗಳು ನಿಮ್ಮ ಮನಸ್ಸಿನಲ್ಲಿ ಉಳಿಯುತ್ತವೆ. ಆ ಚಿತ್ರಗಳನ್ನು ನಿಮ್ಮ ಸ್ಟೇಟಸ್ ಅಥವಾ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ ಮತ್ತು ಜನರು ಅಸೂಯೆಪಡುವಂತೆ ಮಾಡಿ.
ಪಟಾಕಿಗಳು ಸಹ ಪಕ್ಕದಲ್ಲಿರಲಿ
ದೀಪಾವಳಿಯಲ್ಲಿ ಪಟಾಕಿಗಳಿಲ್ಲದೆ, ಖುಷಿ ಸಿಗುವುದಿಲ್ಲ. ವಿಶೇಷವಾಗಿ ಮಕ್ಕಳಿಗೆ. ಅವರಿಗಾಗಿ ಉತ್ತಮ ಗುಣಮಟ್ಟದ ಪಟಾಕಿಗಳನ್ನು ಖರೀದಿಸಿ. ಸ್ವಲ್ಪ ದುಬಾರಿಯಾಗಿದ್ದರೂ ಬೆಳಕು ಮತ್ತು ಶಬ್ದ ಮಾಡುತ್ತಾ ಮೇಲೆ ಹೋಗುವ ಪಟಾಕಿಗಳು, ಟೆರೇಸ್ ಮೇಲೆ ಅಥವಾ ಬಾಗಿಲ ಹೊರಗೆ ಅವನ್ನು ಸುಟ್ಟಾಗ, ಜನರು ದೂರದಿಂದಲೇ ನೋಡಬಹುದು. ಫ್ಲವರ್ ಪಾಟ್, ರಾಕೆಟ್, ಚಕ್ರ ಮುಂತಾದ ಬೆಳಕು ಹೊರಸೂಸುವ ಪಟಾಕಿಗಳನ್ನು ನೀವು ಒಂದು ಗಂಟೆ ಸುಟ್ಟರೂ ದೀಪಾವಳಿಯ ಸಂಭ್ರಮ ಸಂತೋಷ ದ್ವಿಗುಣಗೊಳ್ಳತ್ತದೆ.
ಪ್ರತಿ ವರ್ಷ ಕೆಲವು ಹೊಸ ರೀತಿಯ ಪಟಾಕಿಗಳು ಮಾರುಕಟ್ಟೆಗೆ ಖಂಡಿತವಾಗಿಯೂ ಬರುತ್ತವೆ. ಅವುಗಳನ್ನು ಪ್ರಯತ್ನಿಸಿ ಹಾಗೂ ಮಕ್ಕಳ ಉತ್ಸಾಹ ಹೆಚ್ಚಿಸಿ! ಓದುಗರೆಲ್ಲರಿಗೂ ಗೃಹಶೋಭಾ ಪರವಾಗಿ ದೀಪಾವಳಿಯ ಹಾರ್ದಿಕ ಶುಭಾಶಯಗಳು!
– ಗಿರಿಜಾ ಪಿ. ಭಟ್
ನಿಮ್ಮ ಮನಸ್ಸಿಗೆ ಇಷ್ಟವಾಗುವಷ್ಟು ಶಾಪಿಂಗ್ ಮಾಡಿ ಅಂದಮಾತ್ರಕ್ಕೆ ನೀವು ಇಡೀ ಅಂಗಡಿಯನ್ನೇ ಖರೀದಿಸಬೇಕು ಎಂದಲ್ಲ. ಇದರರ್ಥ ನೀವು ಇಷ್ಟಪಡುವ ಮತ್ತು ನಿಮ್ಮ ಮನಸ್ಸಿಗೆ ಸಂತೋಷ ನೀಡುವ ವಸ್ತುಗಳನ್ನು ಖರೀದಿಸಿ. ನಿಮಗೆ ಕಂಫರ್ಟ್ ಆಗಿರುವ, ಮನಸ್ಸಿಗೆ ಮುದ ನೀಡುವಂಥ ಬಟ್ಟೆ, ಆಭರಣ ಹಾಗೂ ಪರಿಕರಗಳನ್ನು ಖರೀದಿಸಿ. ಅವು ನಿಮಗೂ ವಿಶೇಷ ಎನಿಸಬೇಕು.
ಬಹುತೇಕ ಜನರು ದೀಪಾವಳಿಯಂದು ಮನೆಯಲ್ಲಿ ಪಾರ್ಟಿಗಳನ್ನು ಆಯೋಜಿಸುತ್ತಾರೆ ಅಥವಾ ಪರಿಚಯಸ್ಥರ ಮನೆಗೆ ಹೋಗುತ್ತಾರೆ. ನೀವು ಸಹ ನಿಮ್ಮ ವಸ್ತು, ಆಭರಣ, ಬಟ್ಟೆ, ಮನೆಯ ಅಲಂಕಾರ ಮತ್ತು ದುಬಾರಿ ವಸ್ತುಗಳನ್ನು ಪ್ರದರ್ಶಿಸಲು ನಿಮ್ಮ ಮನೆಯಲ್ಲಿಯೂ ಪಾರ್ಟಿಯನ್ನು ಆಯೋಜಿಸಬೇಕು. ನಿಮ್ಮ ಮನೆಗೆ ಬರುವ ಜನರು ಊಟ ಮಾಡಿ, ಆನಂದಿಸಿ, ತಮಾಷೆ ಮಾಡಿ ಹೋಗುವಷ್ಟು ನಿಮ್ಮ ಮನೆಯನ್ನು ಸಾಧಾರಣವಾಗಿ ಇಟ್ಟಿರದೆ, ಪಾರ್ಟಿಗೆ ಒಂದು ಆಸಕ್ತಿದಾಯಕ ಥೀಮ್ ಇರಬೇಕು.





