ಥೈಲ್ಯಾಂಡ್‌ ರಾಜಧಾನಿ ಬ್ಯಾಂಕಾಕ್‌ನಲ್ಲಿ ಸೋಮವಾರ ಮುಂಜಾನೆ ಪಬ್‌ವೊಂದರಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಸುಮಾರು 27 ಮಂದಿ ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬ್ಯಾಂಕಾಕ್‌ನ ಉತ್ತರ ಭಾಗದಲ್ಲಿರುವ ಚತುಚಕ್‌ ಪ್ರದೇಶದಲ್ಲಿನ ಮನರಂಜನಾ ತಾಣವಾಗಿರುವ ರೋಂಗ್ ಬಿಯರ್ ನಾ ಲಾಟ್ ಫ್ರಾವೊ ಪಬ್‌ನಲ್ಲಿ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಭಯಭೀತರಾದ ಜನ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಕ್ಷಣಮಾತ್ರದಲ್ಲೆ ಬೆಂಕಿಯ ತೀವ್ರತೆ ಹೆಚ್ಚಾಗಿದ್ದು, ನೋಡನೋಡುತ್ತಿದ್ದಂತೆ ಬೆಂಕಿ ಹೆಚ್ಚಾಗಿ ಇಡೀ ಪ್ರದೇಶದಲ್ಲಿ ದಟ್ಟವಾದ ಹೊಗೆ ತುಂಬಿಕೊಂಡಿದೆ. ಎಲ್ಲೆಡೆ ಹೊಗೆ ಹರಡಿಕೊಂಡಿದೆ.ತಕ್ಷಣವೇ ಸ್ಥಳಕ್ಕೆ ಸ್ಥಳೀಯ ಅಗ್ನಿಶಾಮಕ ದಳ ದೌಡಾಯಿಸಿ, ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದು, ಸುಮಾರು ಅರ್ಧ ಗಂಟೆಗಳ ಬಳಿಕ ಬೆಂಕಿಯನ್ನು ನಿಯಂತ್ರಣ ತರಲಾಗಿದೆ.

ತತ್ತರಿಸಿದ ಜನ: ಈ ಘಟನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ಪಬ್‌ನ ಮುಂಭಾಗದ ಬಾಗಿಲಿನಿಂದ ಹೊಗೆ ಹೊರಬರುತ್ತಿದ್ದಂತೆ ದೊಡ್ಡ ಬೆಂಕಿ ಹೊತ್ತಿಕೊಳ್ಳುತ್ತಿರುವಂತೆ ಕಾಣಿಸುತ್ತದೆ. ಜನರು ಕಟ್ಟಡದಿಂದ ಓಡಿಹೋಗಲು ಪ್ರಯತ್ನಿಸುತ್ತಿದ್ದಂತೆ ದಟ್ಟ ಕಪ್ಪು ಹೊಗೆ ಆಕಾಶಕ್ಕೆ ಏರುತ್ತಿರುವುದನ್ನು ಕಾಣಬಹುದು. ಅಲ್ಲದೆ, ಬೆಂಕಿಯ ತೀವ್ರತೆ ಹೆಚ್ಚಾಗಿದ್ದು, ಅಲ್ಲಿಂದ ಪಿಠೋಪಕರಣಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.ಘಟನಾ ಸ್ಥಳಕ್ಕೆ ಭೇಟಿ ನೀಡಿದ ಥೈಲ್ಯಾಂಡ್‌ ಪ್ರಧಾನಿ ಅನುತಿನ್ ಚರ್ನ್‌ವಿರಕುಲ್, ಈ ಕುರಿತು ಮಾತನಾಡಿದ್ದು, ” ಅಗ್ನಿ ಅವಘಡದಲ್ಲಿ 27 ಮಂದಿ ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದಾಗ್ಯೂ, ಈ ದುರಂತಕ್ಕೆ ನಿಖರವಾದ ಕಾರಣದ ಕುರಿತು ತನಿಖೆ ನಡೆಯುತ್ತಿದೆ” ಎಂದಿದ್ದಾರೆ.

“ಪಬ್‌ನಲ್ಲಿ ಪ್ರದರ್ಶನ ನೀಡುತ್ತಿದ್ದ ಸಂಗೀತಗಾರನೊಬ್ಬ ವೇದಿಕೆಯ ಬಳಿಯಿದ್ದ ಸರ್ಕ್ಯೂಟ್ ಬ್ರೇಕರ್‌ನಿಂದ ಹೊಗೆ ಬರುತ್ತಿರುವುದನ್ನು ನೋಡಿದೆ. ವಿದ್ಯುತ್ ಕಡಿತಗೊಳ್ಳುವ ಮೊದಲು ಹಾಗೂ ನಂತರ ಸ್ಫೋಟದ ಶಬ್ದ ಕೇಳಿಸಿತು. ದಟ್ಟವಾದ ಹೊಗೆ ಕ್ಷಣ ಮಾತ್ರದಲ್ಲೇ ಆವರಿಸಿತು ಎಂದು ಹೇಳಿದ್ದಾರೆ” ಎಂದು ತಿಳಿಸಿದ್ದಾರೆ.

ಘಟನೆಯಲ್ಲಿ ಈವರೆಗೂ ಸುಮಾರು 27 ಜನ ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಘಟನೆ ವೇಳೆ ಹಲವರು ರಕ್ಷಣೆಗಾಗಿ ಶೌಚಾಲಯದೊಳಗೆ ಹೋಗಿದ್ದು, ಬಹುತೇಕ ಮೃತದೇಹಗಳನ್ನು ಅಲ್ಲಿಂದಲೇ ಹೊರತೆಗೆಯಲಾಗಿದೆ. ಅಷ್ಟೇ ಅಲ್ಲದೆ, ಇನ್ನೂ ಹಲವಾರು ಕಾಣೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ