– ರಾಘವೇಂದ್ರ ಅಡಿಗ ಎಚ್ಚೆನ್.
ಬೆಂಗಳೂರು, ಜುಲೈ 9-ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಚಿಕವೀರರಾಜೇಂದ್ರ ,ಚಾರಿತ್ರಿಕ ಸತ್ಯ ಹಾಗೂ ಕಾಲ್ಪನಿಕ ಮೆರಗು ಮಿಳಿತಗೊಂಡ ಕನ್ನಡದ ಶ್ರೇಷ್ಠ ಕಾದಂಬರಿಗಳಲ್ಲಿ ಒಂದು ಎಂದು ಡಾ.ಚನ್ನಪ್ಪ ಕಟ್ಟಿ ಹೇಳಿದರು.

ಅವರು ಇಂದು ಕನ್ನಡ ಪುಸ್ತಕ ಪ್ರಾಧಿಕಾರ ಜಯನಗರದ ರಾಣಿ ಸರಳಾದೇವಿ ವಿದ್ಯಾಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಅಂಗಳದಲ್ಲಿ ತಿಂಗಳ ಪುಸ್ತಕ ಕಾರ್ಯಕ್ರಮದಲ್ಲಿ ಚಿಕವೀರರಾಜೇಂದ್ರ ಕೃತಿ ಕುರಿತು ಮಾತನಾಡುತ್ತಿದ್ದರು. ಯಾವುದೇ ಒಂದು ಚಾರಿತ್ರಿಕ ಕಾದಂಬರಿ ಸತ್ಯದ ಹಾಗೂ ಚಾರಿತ್ರಿಕ ಆಧಾರಗಳ ಅಂಶಗಳ ಮೇಲೆ ರೂಪುಗೊಂಡಿರುತ್ತದೆ ,ಇಲ್ಲಿ ಕಾಲ್ಪನಿಕ ಚಿತ್ರಣದ ಅವಶ್ಯಕತೆ ಇದ್ದರೂ ,ಅದು ವಿಜೃಂಭಿಸಿ ಚಾರಿತ್ರಿಕ ಸತ್ಯವನ್ನು ಮರೆಮಾಚುವಂತಾಗಬಾರದು, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಈ ವಿಚಾರದ ಬಗ್ಗೆ ಸಾಕಷ್ಟು ಎಚ್ಚರವಹಿಸಿ ತುಂಬಾ ಅಧ್ಯಯನ ಮಾಡಿ ಈ ಕಾದಂಬರಿ ರಚಿಸಿದ್ದಾರೆ ಎಂದರು. ಒಬ್ಬ ವ್ಯಕ್ತಿ ತಾನು ದುರ್ಬಲನಾಗಿದ್ದು ಅನೇಕ ದೌರ್ಬಲ್ಯಗಳಿಂದ ಕೂಡಿದ್ದಾಗ ತನ್ನನ್ನು ಸೇರಿದಂತೆ ತನ್ನ ಪರಿಸರ, ತನ್ನ ಕುಟುಂಬ, ವ್ಯವಸ್ಥೆ ಹಾಗೂ ಒಂದು ರಾಜ್ಯವನ್ನು ಹೇಗೆ ಪತನದತ್ತ ಕೊಂಡೊಯ್ಯಬಹುದು ಎಂಬುದಕ್ಕೆ ಈ ಕಾದಂಬರಿ ಉತ್ಕೃಷ್ಟ ಉದಾರಣೆ ಆಗಿದೆ ಎಂದು ಅವರು ಹೇಳಿದರು.

ಕೊಡಗಿನ ಹಾಲೇರಿ ವಂಶಸ್ಥ ಚಿಕರಾಜೇಂದ್ರ ಹೇಗೆ ತನ್ನ ಲೊಲುಪತೆಯಿಂದ ರಾಜ್ಯದ ಅವನತಿಗೆ ಕಾರಣವಾಗುತ್ತಾನೆ, ಅವನ ಸುತ್ತ ನಡೆಯುವ ಪಿತೂರಿಗಳು, ಅವನ ಸ್ತ್ರೀ ದೌರ್ಬಲ್ಯ, ಕೋಪಿಷ್ಟ ಬುದ್ಧಿ ಮತ್ತು ದುಡುಕಿನ ನಿರ್ಧಾರಗಳು ಹೇಗೆ ಒಂದು ರಾಜ ಮನೆತನವನ್ನು ಕೊನೆಗಾಣಿಸುತ್ತವೆ ಎಂಬುದನ್ನು ಮಾಸ್ತಿ ವೆಂಕಟೇಶ ಅಯ್ಯಂಗಾರ್ ತುಂಬ ಸೊಗಸಾಗಿ ಈ ಕಾದಂಬರಿಯಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ಚನ್ನಪ್ಪ ಕಟ್ಟಿ ಹೇಳಿದರು. ಡಾ. ಯು ಆರ್ ಅನಂತಮೂರ್ತಿಯವರಿಂದ ಹಿಡಿದು ಅನೇಕರು ಈ ಕಾದಂಬರಿಯನ್ನು ತುಂಬಾ ಪ್ರಶಂಶಿಸಿದ್ದಾರೆ ಹಾಗೆಯೇ ಸಾಕಷ್ಟು ಟೀಕೆಗಳು ಈ ಕಾದಂಬರಿಗೆ ಬಂದಿದೆ. ಟೀಕೆ ಮತ್ತು ಹೊಗಳಿಕೆ ಎರಡು ಇದ್ದಾಗಲೇ ಒಂದು ಕೃತಿಯ ಸಾಹಿತ್ಯಕ ಶ್ರೇಷ್ಠತೆಯ ನೈಜ ಅರಿವು ಉಂಟಾಗುತ್ತದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅವರು ಸಾಹಿತ್ಯ ಕೃತಿಗಳನ್ನು ಯಾಕೆ ಓದಬೇಕು ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ವಿದ್ಯಾರ್ಥಿಗಳು ಪಠ್ಯವನ್ನು ಓದಬೇಕು ಹಾಗೆಯೇ ಸಾಹಿತ್ಯವನ್ನು ತಿಳಿದುಕೊಳ್ಳಬೇಕು, ಪಠ್ಯ ನಿಮ್ಮ ಪರೀಕ್ಷೆಯನ್ನು ಪಾಸು ಮಾಡಲು ಅಗತ್ಯ, ಆದರೆ ಸಾಹಿತ್ಯ ಕೃತಿ ನಿಮ್ಮ ಬದುಕಿನ ಪರೀಕ್ಷೆಯನ್ನು ಪಾಸು ಮಾಡಲು ಅವಶ್ಯ ಎಂದು ಕಿವಿಮಾತು ಹೇಳಿದರು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಿಮ್ಮ ಸಂಪಾದನೆಯ ಎರಡು ರೂಪಾಯಿಗಳಲ್ಲಿ ಒಂದು ರೂಪಾಯಿಯನ್ನು ಪುಸ್ತಕಕ್ಕೆ ಖರ್ಚು ಮಾಡಿ ಮತ್ತೊಂದು ರೂಪಾಯಿಯನ್ನು ನಿಮ್ಮ ಆಹಾರಕ್ಕೆ ಬಳಸಿ ಒಂದು ಹೊಟ್ಟೆಯ ಹಸಿವನ್ನು ನೀಗಿಸಿದರೆ ಮತ್ತೊಂದು ಜ್ಞಾನದ ಹಸಿವನ್ನು ನೀಗಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೈಸೂರು ಬ್ಯಾಂಕ್ ಎಂಪ್ಲಾಯೀಸ್ ಎಜುಕೇಶನ್ ಇನ್ಸ್ಟಿಟ್ಯೂಟ್ ನ ಉಪಾಧ್ಯಕ್ಷ ಕೆ ಲಕ್ಷ್ಮಿಶ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷರಾದ ಬಿ ಕೋದಂಡ ರಾಮ, ಪ್ರಾಂಶುಪಾಲರಾದ ಸುನಿಲ್ ಬಾಬು ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ ಬಿ ಕಿರಣ್ ಸಿಂಗ್ ಉಪಸ್ಥಿತರಿದ್ದರು





