– ರಾಘವೇಂದ್ರ ಅಡಿಗ ಎಚ್ಚೆನ್.
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಜೀವನದ ಅತ್ಯಂತ ಕಠಿಣ ಹೋರಾಟವನ್ನು ಅನಾವರಣಗೊಳಿಸುವ ‘ಸರ್ವೈವರ್’ ಸಾಕ್ಷ್ಯಚಿತ್ರದ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಅನಾರೋಗ್ಯ, ಚಿಕಿತ್ಸೆ ಮತ್ತು ಚೇತರಿಕೆಯ ಸಂಪೂರ್ಣ ಪಯಣವನ್ನು ಈ ಡಾಕ್ಯುಮೆಂಟರಿಯಲ್ಲಿ ಮೊದಲ ಬಾರಿಗೆ ಅಭಿಮಾನಿಗಳ ಮುಂದೆ ತೆರೆದಿಡಲಾಗಿದೆ.
‘ಗೀತಾ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಸಾಕ್ಷ್ಯಚಿತ್ರದಲ್ಲಿ ಶಿವರಾಜ್‌ಕುಮಾರ್ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್, ಮಧು ಬಂಗಾರಪ್ಪ, ನಿವೇದಿತಾ ಶಿವರಾಜ್‌ಕುಮಾರ್ ಸೇರಿದಂತೆ ಕುಟುಂಬದವರು ಹಾಗೂ ಆಪ್ತರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಕಿಚ್ಚ ಸುದೀಪ್, ಕಮಲ್ ಹಾಸನ್, ನಾಗಾರ್ಜುನ, ಸಾಯಿ ಕುಮಾರ್, ದುನಿಯಾ ವಿಜಯ್, ಡಾಲಿ ಧನಂಜಯ ಸೇರಿದಂತೆ ಹಲವು ಸಿನಿತಾರೆಯರು ಶಿವಣ್ಣ ಅವರ ವ್ಯಕ್ತಿತ್ವ, ಹೋರಾಟ ಮತ್ತು ಆತ್ಮವಿಶ್ವಾಸದ ಬಗ್ಗೆ ಮಾತನಾಡಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರ ಅನುಭವಗಳಿಗೂ ಸಾಕ್ಷ್ಯಚಿತ್ರದಲ್ಲಿ ಸ್ಥಾನ ನೀಡಲಾಗಿದೆ.
ವಿದೇಶದಲ್ಲಿ ಚಿಕಿತ್ಸೆ ಪಡೆದಿದ್ದ ಸಂದರ್ಭದ ಆಸ್ಪತ್ರೆಯೊಳಗಿನ ದೃಶ್ಯಗಳು, ಶಸ್ತ್ರಚಿಕಿತ್ಸೆಯ ಬಳಿಕದ ಕ್ಷಣಗಳು ಹಾಗೂ ಅನಾರೋಗ್ಯದ ನಡುವೆಯೂ ಶಿವಣ್ಣ ತೋರಿದ ಆತ್ಮಸ್ಥೈರ್ಯವನ್ನು ‘ಸರ್ವೈವರ್’ನಲ್ಲಿ ದಾಖಲಿಸಲಾಗಿದೆ.
ಅನಾರೋಗ್ಯವನ್ನು ಮೆಟ್ಟಿ ಮತ್ತೆ ಅದೇ ಉತ್ಸಾಹದೊಂದಿಗೆ ಚಿತ್ರರಂಗಕ್ಕೆ ಮರಳಿರುವ ಶಿವರಾಜ್‌ಕುಮಾರ್ ಅವರ ಬದುಕಿನ ಈ ಅಧ್ಯಾಯ ಅಭಿಮಾನಿಗಳಿಗೆ ಸ್ಫೂರ್ತಿಯಾಗಲಿದ್ದು, ಸಾಕ್ಷ್ಯಚಿತ್ರದ ಸಂಪೂರ್ಣ ಬಿಡುಗಡೆಗಾಗಿ ಈಗ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.





