ನಿಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ದೀಪಾವಳಿ ಹಬ್ಬ ಆಚರಿಸುವ ಖುಷಿಯೇ ವಿಭಿನ್ನವಾದ ಅನುಭವ ನೀಡುತ್ತದೆ……
ಇತ್ತೀಚಿನ ದಿನಗಳಲ್ಲಿ ಗಂಡಹೆಂಡತಿ ಉದ್ಯೋಗಸ್ಥರಾಗಿರುತ್ತಾರೆ. ಹಾಗಾಗಿ ದೀಪಾವಳಿಯ ಸಂದರ್ಭದಲ್ಲಿ ಇಬ್ಬರಿಗೂ ರಜೆ ಸಿಗುವುದು ಕಷ್ಟಕರವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ದೀಪಾವಳಿಯನ್ನು ಸ್ನೇಹಿತರೊಂದಿಗೆ ಆಚರಿಸಬಹುದು ಮತ್ತು ಮನೆಯಿಂದ ದೂರವಿದ್ದರೂ ಹಬ್ಬವನ್ನು ಆನಂದಿಸಬಹುದು.
ಹಬ್ಬ ಯಾವುದೇ ಇರಲಿ, ಅದನ್ನು ಆಚರಿಸುವ ನಿಜವಾದ ಖುಷಿ ಸಿಗುವುದು ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಒಟ್ಟಿಗೆ ಸೇರಿ ಸಮಯ ಕಳೆಯುವುದೇ ಆಗಿದೆ. ಇನ್ನು ದೀಪಾವಳಿಯ ವಿಷಯಕ್ಕೆ ಬಂದಾಗ, ಈ ಹಬ್ಬವನ್ನು ಒಂಟಿಯಾಗಿ ಆಚರಿಸಲು ಸಾಧ್ಯವೇ ಇಲ್ಲ. ಈ ಹಬ್ಬದ ಖುಷಿ, ಮಜಾ ಎಲ್ಲರೂ ಒಟ್ಟಿಗೆ ಸೇರಿ ಆಚರಿಸಿದಾಗ ಮಾತ್ರ ಹೆಚ್ಚುತ್ತದೆ.
ದೀಪಾವಳಿಯನ್ನು ಮಕ್ಕಳು, ಹಿರಿಯರು, ಕಿರಿಯರು, ಮಹಿಳೆಯರು, ಪುರುಷರು ಎಲ್ಲರೂ ಬಹಳ ಸಂತೋಷದಿಂದ ಹಾಗೂ ಉತ್ಸಾಹದಿಂದ ಆಚರಿಸುತ್ತಾರೆ.
ಪಾರ್ಟಿಯಲ್ಲಿ ಜಾಗರೂಕರಾಗಿರಿ
ತೆರೆದ ಸ್ಥಳಗಳಲ್ಲಿ ಪಟಾಕಿಗಳನ್ನು ಹಚ್ಚಿ, ಹೆಚ್ಚು ಶಬ್ದ ಮಾಡುವ ಪಟಾಕಿಗಳನ್ನು ಬಳಸಬೇಡಿ.
ಪರಿಸರಸ್ನೇಹಿ ಪಟಾಕಿಗಳನ್ನು ಬಳಸಿ.
ಮಕ್ಕಳು ಪಟಾಕಿ ಸಿಡಿಸುತ್ತಿದ್ದರೆ, ಅವರನ್ನು ಒಂಟಿಯಾಗಿ ಬಿಡಬೇಡಿ ಮತ್ತು ಅವರೊಂದಿಗೆ ಇರಿ.
ಮಾದಕ ವಸ್ತುಗಳ ಸೇವನೆಯನ್ನು ತಪ್ಪಿಸಿ.
ಆಹಾರ ವ್ಯರ್ಥವಾಗದಂತೆ ನೋಡಿಕೊಳ್ಳಿ.
ಮೋಜು ಮತ್ತು ಆನಂದದ ವಾತಾವರಣದಲ್ಲಿ ಯಾರ ಭಾವನೆಗಳನ್ನೂ ನೋಯಿಸಬೇಡಿ ಮತ್ತು ಯಾವುದೇ ರೀತಿಯ ಅಸಭ್ಯತೆ ನಡೆಯದಂತೆ ನೋಡಿಕೊಳ್ಳಿ.
ಪ್ರತಿಯೊಂದು ಮನೆಯಲ್ಲೂ ಮಹಿಳೆಯರು ಪಾರ್ಟಿ ಮಾಡುವುದನ್ನು ಹೆಚ್ಚು ಇಷ್ಟಪಡುತ್ತಾರೆ ಹಾಗೂ ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಹೊಸ ಹೊಸ ನೆಪಗಳನ್ನು ಹುಡುಕುತ್ತಲೇ ಇರುತ್ತಾರೆ. ಕೆಲವು ಮಹಿಳೆಯರು ಪ್ರತಿ ತಿಂಗಳು ಕಿಟಿ ಪಾರ್ಟಿಗಳನ್ನು ಸಹ ಆಯೋಜಿಸುತ್ತಾರೆ. ಇದರಿಂದ ಅವರು ತಮ್ಮ ಸ್ನೇಹಿತರೊಂದಿಗೆ ಸ್ವಲ್ಪ ಸಮಯ ಕಳೆಯುತ್ತಾ, ಮೋಜು, ಮಸ್ತಿ ಮಾಡಬಹುದು.
ಆದ್ದರಿಂದ ವರ್ಣರಂಜಿತ ದೀಪ, ಪಟಾಕಿಗಳನ್ನು ಹಚ್ಚುವ, ಸಿಹಿತಿಂಡಿಗಳನ್ನು ಸವಿಯುವ ಹಾಗೂ ಸಾಮರಸ್ಯದ ಈ ದೀಪಾವಳಿಯ ಹಬ್ಬದಲ್ಲಿ ಪಾರ್ಟಿ ಮಾಡುವ ಅವಕಾಶವನ್ನು ಕಳೆದುಕೊಳ್ಳಬೇಡಿ.
ಬನ್ನಿ, ಈ ಹೊಸ ಆಲೋಚನೆಗಳೊಂದಿಗೆ ಸ್ನೇಹಿತರು ಮತ್ತು ಕುಟುಂಬದೊಂದಿಗೆ ದೀಪಾವಳಿ ಆಚರಿಸೋಣ. ಇದಕ್ಕಾಗಿ ಮೊದಲು ಪ್ಲಾನಿಂಗ್ ಮಾಡುವುದು ಬಹಳ ಮುಖ್ಯ. ಪಾರ್ಟಿ ಏನೇ ಇರಲಿ, ಕೊನೆಯ ಕ್ಷಣದಲ್ಲಿ ಯಾವುದೇ ಗಡಿಬಿಡಿ ಇಲ್ಲದಂತೆ ಮತ್ತು ಯಾವುದೇ ಸಮಸ್ಯೆ ಇಲ್ಲದಂತೆ ಚೆನ್ನಾಗಿ ಆಯೋಜಿಸಲು ಮತ್ತು ಎಲ್ಲರೂ ಪಾರ್ಟಿಯನ್ನು ಆನಂದಿಸಲು ಯೋಜನೆ ಬಹಳ ಮುಖ್ಯ.
ಸ್ಥಳದ ಆಯ್ಕೆ
ಪಾರ್ಟಿ ಯಾವುದೇ ಇರಲಿ, ಪಾರ್ಟಿಯ ಸ್ಥಳದ ಯೋಜನೆ ಬಹಳ ಮುಖ್ಯ. ಇದಕ್ಕಾಗಿ, ಎಲ್ಲರೂ ಸುಲಭವಾಗಿ ತಲುಪಬಹುದಾದ ಸ್ಥಳವನ್ನು ಆರಿಸಿಕೊಳ್ಳಿ. ಆ ಸ್ಥಳ ತುಂಬಾ ದೂರದಲ್ಲಿರಬಾರದು. ಸಾಕಷ್ಟು ತೆರೆದ ಸ್ಥಳ ಮತ್ತು ಸಾಕಷ್ಟು ಒಳಾಂಗಣವಿರಬೇಕು. ಅಂದರೆ ಅದು ಜನದಟ್ಟಣೆಯಿಂದ ಕೂಡಿರಬಾರದು. ಅಲ್ಲಿ ಆಹಾರ, ಪಾನೀಯ ಮತ್ತು ಸಂತಸವನ್ನು ಸಂಪೂರ್ಣವಾಗಿ ಆನಂದಿಸುವಂತಿರಲಿ. ಜೊತೆಗೆ ಎಲ್ಲರೂ ಆಟ, ಸಂಗೀತ ಮತ್ತು ಪಟಾಕಿಗಳಲ್ಲಿ ಸಹ ಪಾಲ್ಗೊಳ್ಳುವಂತಿರಲಿ.
ವಸ್ತುಗಳ ಪಟ್ಟಿ ತಯಾರಿಸಿ
ಪಾರ್ಟಿ ಯಾರದ್ದಾದರೂ ಮನೆಯಲ್ಲಿರಲಿ ಅಥವಾ ಹೊರಗಿರಲಿ, ಪಾರ್ಟಿಗೆ ಬೇಕಾದ ಎಲ್ಲಾ ವಸ್ತುಗಳ ಪಟ್ಟಿಯನ್ನು ಮುಂಚಿತವಾಗಿ ಮಾಡಿದರೆ, ಕೊನೆಯ ಕ್ಷಣದಲ್ಲಿ ಉಂಟಾಗಬಹುದಾದ ಯಾವುದೇ ಸಮಸ್ಯೆಗಳನ್ನು ತಪ್ಪಿಸಬಹುದು. ಪಾರ್ಟಿಗೆ ಎಷ್ಟು ಜನರು ಬರುತ್ತಾರೆ ಎಂಬುದನ್ನು ಮೊದಲೇ ನಿರ್ಧರಿಸಿ.
ಇದರಿಂದ ಆಹಾರ, ಪಾನೀಯ, ಆಸನಗಳಂಥ ಎಲ್ಲಾ ವ್ಯವಸ್ಥೆಗಳನ್ನು ಅದಕ್ಕೆ ತಕ್ಕಂತೆ ಮಾಡಬಹುದು ಮತ್ತು ಆ ಸಮಯದಲ್ಲಿ ಯಾವುದೇ ಸಮಸ್ಯೆಗಳೂ ಇರುವುದಿಲ್ಲ.
ರಂಗೋಲಿಯ ಚಿತ್ತಾರ
ರಂಗೋಲಿ ಇಲ್ಲದೆ ದೀಪಾವಳಿ ಹಬ್ಬ ಅಪೂರ್ಣ ಎನಿಸುತ್ತದೆ. ಆದ್ದರಿಂದ ನೀವು ಎಲ್ಲೇ ಪಾರ್ಟಿ ಮಾಡಿದರೂ ಅಲ್ಲಿ ರಂಗೋಲಿ ಹಾಕಿ. ಇದಕ್ಕಾಗಿ, ಸಾಧ್ಯವಾದಷ್ಟು ನೈಸರ್ಗಿಕ ಬಣ್ಣಗಳನ್ನು ಬಳಸಿ. ಇದರಿಂದ ಚರ್ಮದ ಮೇಲೆ ಯಾವುದೇ ಸೋಂಕು ಅಥವಾ ಅಲರ್ಜಿಯನ್ನು ತಪ್ಪಿಸಬಹುದು. ನೀವು ಬಯಸಿದರೆ ಹೂಗಳಿಂದಲೂ ರಂಗೋಲಿಯನ್ನು ಸಿಂಗರಿಸಬಹುದು. ಇದಕ್ಕಾಗಿ ನೀವು ವರ್ಣರಂಜಿತ, ನೈಸರ್ಗಿಕ ಅಥವಾ ಕೃತಕ ಹೂಗಳನ್ನು ಬಳಸಬಹುದು.
ಪಾರ್ಟಿಯ ಡ್ರೆಸ್ ಕೋಡ್
ನಿಮ್ಮ ಎಲ್ಲಾ ಸ್ನೇಹಿತರು ಅಥವಾ ಕುಟುಂಬದವರು ಒಂದೇ ರೀತಿಯ ಉಡುಪಿನಲ್ಲಿ ಬರಬೇಕೆಂದು ನೀವು ಬಯಸಿದರೆ, ಪಾರ್ಟಿಗೆ ಡ್ರೆಸ್ ಕೋಡ್ ನ್ನು ಸಹ ನಿರ್ಧರಿಸಬಹುದು. ಇದಕ್ಕಾಗಿ, ನೀವು ಪುರುಷರಿಗೆ ಪೈಜಾಮ ಅಥವಾ ಯಾವುದೇ ಸಾಂಪ್ರದಾಯಿಕ ಉಡುಪು, ಮಹಿಳೆಯರಿಗೆ ಸಲ್ವಾರ್, ಕುರ್ತಾ ಅಥವಾ ಸೀರೆಯಂತಹ ಯಾವುದೇ ಸಾಂಪ್ರದಾಯಿಕ ಉಡುಪು ಅಥವಾ ಇನ್ಯಾವುದನ್ನಾದರೂ ಇಟ್ಟುಕೊಳ್ಳಬಹುದು. ಇದರಿಂದ ಪುರುಷರು ಹಾಗೂ ಮಹಿಳೆಯರು ವಿಭಿನ್ನವಾಗಿ ಕಾಣುತ್ತಾರೆ. ನೀವು ಸಹ ಸ್ಟೈಲಿಶ್ ಆಗಿ ಕಾಣುವಂಥದ್ದನ್ನು ಧರಿಸಬಹುದು. ಆಗ ಎಲ್ಲರೂ ದೀಪಾವಳಿಯನ್ನು ಪರಸ್ಪರ ಆರಾಮವಾಗಿ ಆಚರಿಸಬಹುದು. ಅಂದರೆ ಎಲ್ಲರಿಗೂ ಆರಾಮದಾಯಕವಾಗಿ ಪಾರ್ಟಿಯನ್ನು ಆನಂದಿಸಬಹುದಾದ ಡ್ರೆಸ್ ಕೋಡ್ ನ್ನು ಆರಿಸಿಕೊಳ್ಳಿ. ಇನ್ನು ಮಕ್ಕಳಿಗೆ ಇಂಥದ್ದೇ ಬಟ್ಟೆಗಳನ್ನು ಧರಿಸುವಂತೆ ಒತ್ತಾಯಿಸಬೇಡಿ. ಅವರು ನಿಮ್ಮ ಆಯ್ಕೆಯ ಪ್ರಕಾರ ಡ್ರೆಸ್ ಮಾಡಲು ಬಯಸದಿದ್ದರೆ ಪರವಾಗಿಲ್ಲ. ಅವರು ಸಂತೋಷವಾಗಿರಲು ಅವರ ಆಯ್ಕೆಯ ಬಟ್ಟೆಗಳನ್ನು ಧರಿಸಲಿ.
ಇದರೊಂದಿಗೆ, ನೀವು ಬಯಸಿದರೆ, ಕೆಂಪು, ನೀಲಿ, ಹಳದಿ, ಬಿಳಿ, ಹಸಿರು ಮುಂತಾದ ಪ್ರತಿಯೊಂದು ಕುಟುಂಬಕ್ಕೂ ಸೂಕ್ತವಾದ ಉಡುಪಿನ ಬಣ್ಣವನ್ನು ಸಹ ನಿರ್ಧರಿಸಬಹುದು. ಉದಾಹರಣೆಗೆ, ನೀವು ಯಾವುದೇ ಕುಟುಂಬಕ್ಕೆ ಕೆಂಪು ಬಣ್ಣದ ಉಡುಪಿನ ಬಣ್ಣವನ್ನು ನಿರ್ಧರಿಸಿದ್ದರೆ, ಕುಟುಂಬದ ಪ್ರತಿಯೊಬ್ಬ ಸದಸ್ಯರೂ ಕೆಂಪು ಬಣ್ಣದ ಉಡುಪನ್ನು ಧರಿಸಬೇಕು.
ಇದರಿಂದ ನೀವು ಈ ಬೆಳಕಿನ ಹಬ್ಬದಲ್ಲಿ ವರ್ಣಮಯವಾಗಿ ಕಾಣುತ್ತೀರಿ ಹಾಗೂ ವರ್ಣರಂಜಿತ ರಂಗೋಲಿ, ಪಟಾಕಿ ಮತ್ತು ದೀಪಗಳ ಹಬ್ಬವನ್ನು ವರ್ಣರಂಜಿತ ಬಟ್ಟೆಗಳನ್ನು ಧರಿಸಿ ಆಚರಿಸಬಹುದು.
ಊಟದ ಮೆನುವನ್ನು ವಿಭಿನ್ನವಾಗಿಸಲು ಬಯಸಿದರೆ, ನೀವು ಉಡುಪಿನ ಬಣ್ಣ ಅಥವಾ ಸಾಂಪ್ರದಾಯಿಕ ಉಡುಪಿಗೆ ಹೊಂದಿಕೆಯಾಗುವ ಆಹಾರ ಪದಾರ್ಥಗಳನ್ನು ಆಯ್ಕೆ ಮಾಡಬಹುದು. ಉದಾಹರಣೆಗೆ, ನೀವು ಒಂದು ಕುಟುಂಬಕ್ಕೆ ಉಡುಪಿನ ಬಣ್ಣ ಕೆಂಪು ಎಂದು ನಿರ್ಧರಿಸಿದ್ದರೆ, ಆ ಕುಟುಂಬಕ್ಕೆ ಅದೇ ಬಣ್ಣದ ಆಹಾರ ಭಕ್ಷ್ಯಗಳನ್ನು ತಯಾರಿಸಲು ಹೇಳಿ. ಅಂದರೆ, ನಿಮ್ಮ ಪ್ರತಿಯೊಂದು ಖಾದ್ಯದ ಬಣ್ಣ ನಿಮ್ಮ ಉಡುಪಿನ ಬಣ್ಣಕ್ಕೆ ಹೊಂದಿಕೆಯಾಗಬೇಕು.
ಹೀಗೆ ಮಾಡುವುದರಿಂದ ದೀಪಾವಳಿ ಹಬ್ಬ ನಿಮಗೆ ಹೆಚ್ಚು ವಿಶೇಷವಾಗಿರುತ್ತದೆ. ವರ್ಣರಂಜಿತ ಭಕ್ಷ್ಯಗಳೊಂದಿಗೆ, ಇದು ಹೆಚ್ಚು ಆಸಕ್ತಿಕರವಾಗುತ್ತದೆ. ಅಲ್ಲದೆ, ಆಹಾರ ಪದಾರ್ಥಗಳ ವೈವಿಧ್ಯತೆಯೂ ಹೆಚ್ಚುತ್ತದೆ. ಇದರಿಂದ ನೀವು ಹಲವಾರು ವರ್ಣರಂಜಿತ ಭಕ್ಷ್ಯಗಳನ್ನೂ ಸವಿಯಬಹುದು.
ಪಾರ್ಟಿಗೆ ಸಾಂಪ್ರದಾಯಿಕ ಉಡುಪನ್ನು ಆರಿಸಿದರೆ, ಆ ಕುಟುಂಬಕ್ಕೆ ಅವರ ಸಾಂಪ್ರದಾಯಿಕ ಖಾದ್ಯವನ್ನು ತಯಾರಿಸಲು ಅಥವಾ ತರಲು ಹೇಳಿ. ಉದಾಹರಣೆಗೆ, ಒಂದು ಕುಟುಂಬ ಮಹಾರಾಷ್ಟ್ರದಿಂದ ಬಂದಿದ್ದರೆ, ಅವರನ್ನು ಮರಾಠಿ ಉಡುಪಿನಲ್ಲಿ ಬಂದು ಮಹಾರಾಷ್ಟ್ರದ ಖಾದ್ಯವನ್ನು ತಯಾರಿಸಲು ಅಥವಾ ತರಲು ಹೇಳಿ. ಅದೇ ರೀತಿ, ಒಂದು ಕುಟುಂಬ ದಕ್ಷಿಣದಿಂದ ಬಂದವರಾಗಿದ್ದರೆ, ಅವರನ್ನು ದಕ್ಷಿಣ ಭಾರತದ ಉಡುಪಿನಲ್ಲಿ ಬಂದು ದಕ್ಷಿಣ ಭಾರತದ ಖಾದ್ಯಗಳನ್ನು ತಯಾರಿಸಲು ಅಥವಾ ತರಲು ಹೇಳಿ.
ಹೀಗೆ ಮಾಡುವುದರಿಂದ ಪಾರ್ಟಿಯ ಮೋಜು ದ್ವಿಗುಣಗೊಳ್ಳುತ್ತದೆ ಹಾಗೂ ನೀವು ಒಟ್ಟಿಗೆ ಅನೇಕ ಬಗೆಯ ಭಕ್ಷ್ಯಗಳನ್ನು ಆನಂದಿಸಲು ಸಾಧ್ಯವಾಗುತ್ತದೆ ಮತ್ತು ಆ ಸ್ಥಳದ ಸಾಂಪ್ರದಾಯಿಕ ಭಕ್ಷ್ಯಗಳೊಂದಿಗೆ ನೀವು ಪರಿಚಯ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಡುಗೆ ಮಾಡಲು ಸಾಕಷ್ಟು ಸಮಯವಿಲ್ಲದಿದ್ದರೆ, ನೀವು ಹೊರಗಿನಿಂದ ಆಹಾರವನ್ನು ಆರ್ಡರ್ ಮಾಡಬಹುದು.
ಹಾಡು ಪ್ಲೇ ಮಾಡಿ
ಸಂಗೀತ, ಡ್ಯಾನ್ಸ್ ಇಲ್ಲದಿದ್ದರೆ ದೀಪಾವಳಿ ಹಬ್ಬ ಪೂರ್ಣ ಎನಿಸುವುದಿಲ್ಲ. ಆದ್ದರಿಂದ ಒಂದು ಕುಟುಂಬಕ್ಕೆ ಒಂದು ಮಧುರ ಅಥವಾ ದೀಪಾವಳಿ ಹಾಡುಗಳ ಪಟ್ಟಿಯನ್ನು ಮಾಡಲು ಹೇಳಿ. ನಂತರ ನೀವು ಮತ್ತು ಮಕ್ಕಳು ಅದರಲ್ಲಿ ನೃತ್ಯ ಮಾಡುವುದನ್ನು ಆನಂದಿಸಬಹುದು.
ನಿಮ್ಮ ಪಾರ್ಟಿ ಯಾರಿಗೂ ತೊಂದರೆಯಾಗದಂತೆ ಧ್ವನಿಯನ್ನು ಹೆಚ್ಚು ಜೋರಾಗಿ ಹಾಕಬಾರದು ಎಂದು ನೆನಪಿರಲಿ. ಯಾರಾದರೂ ತಮ್ಮ ಆಯ್ಕೆಯ ಹಾಡನ್ನು ಹಾಡಲು ಸಾಧ್ಯವಾದರೆ, ಅದನ್ನೂ ಆನಂದಿಸಿ. ಯಾವುದೇ ಮಗುವಿಗೆ ವಿಶೇಷ ರೀತಿಯ ಪ್ರತಿಭೆ ಇದ್ದರೆ ಅಥವಾ ಅವರನ್ನು ನೋಡಲು ಬಯಸಿದರೆ ಖಂಡಿತವಾಗಿಯೂ ಅವರಿಗೆ ಅವಕಾಶ ನೀಡಿ ಹಾಗೂ ಪಾರ್ಟಿಯನ್ನು ಪೂರ್ಣವಾಗಿ ಆನಂದಿಸಿ.
ಆಟ ಮತ್ತು ಪಟಾಕಿಗಳನ್ನು ಆನಂದಿಸಿ
ದೀಪಾವಳಿಯಂದು ಕುಟುಂಬದೊಂದಿಗೆ ಆಟವಾಡುವುದು ಮತ್ತು ಪಟಾಕಿಗಳನ್ನು ಸಿಡಿಸುವುದು ಸಹ ಖುಷಿ ನೀಡುತ್ತದೆ. ಎಲ್ಲರೂ ಒಟ್ಟಿಗೆ ಆಡಬಹುದಾದ ಆಟಗಳನ್ನು ಆರಿಸಿ ಮತ್ತು ಹೆಚ್ಚು ಮಜಾ ಮಾಡಿ. ಪ್ರಕಾಶಮಾನವಾದ ಕ್ರ್ಯಾಕರ್ಸ್ ಮತ್ತು ಕಡಿಮೆ ಮಾಲಿನ್ಯದ ಕ್ರ್ಯಾಕರ್ಸ್ ಬಳಸಿ ಮತ್ತು ಅವುಗಳನ್ನು ತೆರೆದ ಸ್ಥಳಗಳಲ್ಲಿ ಹಚ್ಚು ಮೂಲಕ ಆನಂದಿಸಿ.
ನೆನಪುಗಳನ್ನು ಸೆರೆಹಿಡಿಯಿರಿ
ದೀಪಾವಳಿಯ ಮೋಜು ಫೋಟೊಗಳಿಲ್ಲದೆ ಅಪೂರ್ಣ ಎನಿಸುತ್ತದೆ. ಈ ಸಂದರ್ಭದಲ್ಲಿ ವರ್ಣರಂಜಿತ ಮತ್ತು ಸಾಂಪ್ರದಾಯಿಕ ಉಡುಪಿನೊಂದಿಗೆ ಸೆಲ್ಛಿ, ಗ್ರೂಪ್ ಫೋಟೋ, ಕುಟುಂಬದ ಫೋಟೋಗಳನ್ನು ತೆಗೆದುಕೊಳ್ಳಿ. ಈ ದೀಪಾವಳಿಯ ವರ್ಣರಂಜಿತ ನೆನಪುಗಳನ್ನು ನಿಮ್ಮ ಕ್ಯಾಮೆರಾದಲ್ಲಿ ಶಾಶ್ವತವಾಗಿ ಸೆರೆಹಿಡಿಯಲು ಮರೆಯಬೇಡಿ.
ಮಕ್ಕಳಿಗೆ ಜವಾಬ್ದಾರಿ ನೀಡಿ
ಪಾರ್ಟಿಯಲ್ಲಿ ಮಕ್ಕಳು ಪಾಲ್ಗೊಳ್ಳುತ್ತಿದ್ದರೆ, ಅವರಿಗೆ ಊಟದ ಟೇಬಲ್ ಅಲಂಕರಿಸುವುದು, ಫೋಟೋ ಕ್ಲಿಕ್ಕಿಸುವುದು, ವೀಡಿಯೋಗಳನ್ನು ಮಾಡುವುದು ಇತ್ಯಾದಿ ಜವಾಬ್ದಾರಿಗಳನ್ನು ನೀಡಿ. ಇದರಿಂದ ಅವರು ಕಾರ್ಯನಿರತರಾಗಿರುತ್ತಾರೆ.
– ಶೋಭಾ ರಾವ್





