ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಸ್ಮೃತಿ ಮಂಧನಾ, ಹರ್ಮನ್‌ಪ್ರೀತ್ ಕೌರ್ ಅವರಿಂದ ತಂಡದ ನಾಯಕತ್ವ ವಹಿಸಿಕೊಳ್ಳಲು ಸಿದ್ಧ ಎಂದಿದ್ದಾರೆ.
ತಂಡದಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರ್ತಿಯಾಗಿರುವ ಮಹಾರಾಷ್ಟ್ರದ ಈ ಬ್ಯಾಟರ್, ಉಪನಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹರ್ಮನ್‌ಪ್ರೀತ್ ಭಾರತೀಯ ತಂಡದ ನಾಯಕಿಯಾಗಿ ಹತ್ತು ವರ್ಷಗಳು ಕಳೆದಿವೆ ಮತ್ತು ಇದೀಗ ಅವರ ನಿವೃತ್ತಿಯ ಸುತ್ತ ಮಾತುಗಳು ಕೇಳಿಬರುತ್ತಿವೆ.
ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ನಾಯಕತ್ವ ಬದಲಾವಣೆಯ ಮಾತುಕತೆಗಳ ನಡುವೆ ನಾಯಕತ್ವ ಸ್ವೀಕರಿಸುವ ಇಚ್ಛೆಯ ಕುರಿತಾದ ಪ್ರಶ್ನೆಗೆ ಮಂಧಾನ, ‘ಹೌದು, ಖಂಡಿತ. ನಾನು ಸಿದ್ಧ’ ಎಂದು ಪ್ರತಿಕ್ರಿಯಿಸಿದ್ದಾರೆ.
ಸ್ಮೃತಿ 4 ODI ಮತ್ತು 18 T20I ಗಳಲ್ಲಿ ಭಾರತದ ಮಹಿಳಾ ತಂಡವನ್ನು ಮುನ್ನಡೆಸಿದ್ದಾರೆ. ನಾಯಕಿಯಾಗಿ ಅವರು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (WPL) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಎರಡು ಬಾರಿ WPL ಪ್ರಶಸ್ತಿಗಳಿಗೆ (2024 ಮತ್ತು 2026) ಮುನ್ನಡೆಸಿದ್ದಾರೆ.
ಈಮಧ್ಯೆ, ಕಳೆದ ವರ್ಷ ಭಾರತ ತಂಡವನ್ನು ತಮ್ಮ ಮೊದಲ ಏಕದಿನ ವಿಶ್ವಕಪ್ ಪ್ರಶಸ್ತಿಗೆ ಕೌರ್ ಮುನ್ನಡೆಸಿದ್ದರು. ಈ ವರ್ಷದ ಜೂನ್ ಆರಂಭದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸೋತ ನಂತರ ಗುಂಪು ಹಂತದಲ್ಲಿಯೇ ಭಾರತ ಟೂರ್ನಿಯಿಂದ ಹೊರಬಿತ್ತು.
ಭಾರತದ ಟಿ20 ವಿಶ್ವಕಪ್ ಅಭಿಯಾನದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಸ್ಮೃತಿ, ತಂಡವು ಹಿಂದೆ ಮಾಡಿದ ತಪ್ಪುಗಳನ್ನೇ ಪುನರಾವರ್ತಿಸಿದೆ ಮತ್ತು ಅವುಗಳನ್ನು ತಿದ್ದಿಕೊಳ್ಳುವಲ್ಲಿ ವಿಫಲವಾಗಿದೆ. ಇದರಿಂದಾಗಿ ಅಭಿಯಾನವು ಹಳಿ ತಪ್ಪಿದೆ ಎಂದು ಅಭಿಪ್ರಾಯಪಟ್ಟರು. 2028ರ ಮುಂದಿನ ಟಿ20 ವಿಶ್ವಕಪ್‌ಗೆ ಸಿದ್ಧವಾಗಲು ಸ್ಪಷ್ಟವಾದ ಕಾರ್ಯಯೋಜನೆಯ ಅಗತ್ಯವಿದೆ ಎಂದು ಹೇಳಿದ್ದಾರೆ.
‘ಆತ್ಮಾವಲೋಕನ ಮಾಡಿಕೊಳ್ಳುವುದು ಮತ್ತು ತಪ್ಪುಗಳಿಂದ ಪಾಠ ಕಲಿಯುವುದು ಮುಖ್ಯ. ದುರದೃಷ್ಟವಶಾತ್, ನಾವು ನಮ್ಮ ಹಿಂದಿನ ತಪ್ಪುಗಳಿಂದ ಸಾಕಷ್ಟು ಪಾಠ ಕಲಿತಿಲ್ಲ ಮತ್ತು ಅವುಗಳನ್ನೇ ಪುನರಾವರ್ತಿಸುತ್ತಾ ಬಂದಿದ್ದೇವೆ. ಮುಂದಿನ ದಿನಗಳಲ್ಲಿ, ಈ ಮಾದರಿಯನ್ನು ನಾವು ಹೇಗೆ ನಿಭಾಯಿಸಬೇಕು ಮತ್ತು ತಂಡವಾಗಿ ನಾವೇನು ಮಾಡಬೇಕು ಎಂಬುದರ ಕುರಿತು 2028ರ ಟಿ20 ವಿಶ್ವಕಪ್‌ವರೆಗಿನ ಸ್ಪಷ್ಟ ಕಾರ್ಯಯೋಜನೆಯ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.





