– ರಾಘವೇಂದ್ರ ಅಡಿಗ ಎಚ್ಚೆನ್.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದಿಂದ ಮತ್ತೊಂದು ರೋಮ್ಯಾಂಟಿಕ್ ವೀಡಿಯೋ ಹಾಡು ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಈಗಾಗಲೇ ‘ತಬಾಹಿ’ ಹಾಡಿನ ಮೂಲಕ ಸಿನಿಪ್ರಿಯರ ಮನಗೆದ್ದಿದ್ದ ಚಿತ್ರತಂಡ, ಇದೀಗ ‘ಮನಮೋಹಕ’ ಎಂಬ ಮಾಂಟಾಜ್ ಶೈಲಿಯ ಡ್ಯುಯೆಟ್ ಹಾಡನ್ನು ಬಿಡುಗಡೆ ಮಾಡಿ ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಹೊಸ ಹಾಡಿನಲ್ಲಿ ಯಶ್ ಹಾಗೂ ತಾರಾ ಸುತಾರಿಯಾ ನಡುವಿನ ನವಿರಾದ ಪ್ರೀತಿ, ರೊಮ್ಯಾಂಟಿಕ್ ಕ್ಷಣಗಳು ಮತ್ತು ಸ್ಟೈಲಿಷ್ ಲುಕ್ ಪ್ರಮುಖ ಆಕರ್ಷಣೆಯಾಗಿವೆ. ಜೊತೆಗೆ ಯಶ್ ಅವರ ಸಹೋದರಿ ಪಾತ್ರದಲ್ಲಿ ನಟಿಸಿರುವ ನಯನತಾರಾ ಹಾಗೂ ಪ್ರೇಯಸಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಿಯಾರಾ ಅಡ್ವಾಣಿ ಅವರ ಝಲಕ್‌ಗಳು ಹಾಡಿನ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ.
ಈ ಮನಮೋಹಕ ಗೀತೆಗೆ ಕನ್ನಡದ ಖ್ಯಾತ ಗೀತರಚನೆಕಾರ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದು, ತನಿಷ್ಕ್ ಬಾಗ್ಚಿ, ಫಹೀನ್ ಅಬ್ದುಲ್ಲಾ ಮತ್ತು ಅರ್ಸ್ಲಾಂ ನಿಝಾಮಿ ಸಂಗೀತ ಸಂಯೋಜಿಸಿದ್ದಾರೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಏಕಕಾಲಕ್ಕೆ ಹಾಡು ಬಿಡುಗಡೆಯಾಗಿದೆ.
ಈಗಾಗಲೇ ಬಿಡುಗಡೆಯಾದ ‘ತಬಾಹಿ’ ಸೇರಿದಂತೆ ಚಿತ್ರದ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇನ್ನೂ ಮೂರು ವಿಶೇಷ ಹಾಡುಗಳನ್ನು ಚಿತ್ರತಂಡ ಬಿಡುಗಡೆಗೆ ಕಾಯ್ದಿರಿಸಿದೆ. ಸಿನಿಮಾ ತೆರೆಗೆ ಬರುವ ಮುನ್ನ ಹಂತ ಹಂತವಾಗಿ ಅವುಗಳನ್ನು ಅನಾವರಣಗೊಳಿಸುವ ಯೋಜನೆ ಚಿತ್ರತಂಡದ್ದಾಗಿದೆ.





