– ರಾಘವೇಂದ್ರ ಅಡಿಗ ಎಚ್ಚೆನ್.
ತುಳು ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ನಾಗ ಕಥೆಯನ್ನು ಕೇಂದ್ರವಾಗಿಟ್ಟುಕೊಂಡು ನಿರ್ಮಾಣವಾಗಿರುವ ಬಹುನಿರೀಕ್ಷಿತ ‘ಬನ’ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ. ಕರಾವಳಿ ಸಂಸ್ಕೃತಿ, ನಾಗಾರಾಧನೆ ಮತ್ತು ಜನಪದ ನಂಬಿಕೆಗಳನ್ನು ಆಧರಿಸಿದ ಈ ಸಿನಿಮಾ ಅಕ್ಟೋಬರ್ 23ರಂದು ತುಳು ಹಾಗೂ ಕನ್ನಡ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಬಹಳ ವರ್ಷಗಳ ಬಳಿಕ ನಾಗಾರಾಧನೆಯ ಹಿನ್ನೆಲೆಯ ಕಥೆಯನ್ನು ಬೆಳ್ಳಿತೆರೆಗೆ ತರುತ್ತಿರುವ ಈ ಚಿತ್ರ ಈಗಾಗಲೇ ಸಿನಿಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ. ಕರಾವಳಿ ಭಾಗದ ಸಂಸ್ಕೃತಿ ಮತ್ತು ಪರಂಪರೆಯನ್ನು ವಿಭಿನ್ನವಾಗಿ ತೆರೆ ಮೇಲೆ ತರುವ ಪ್ರಯತ್ನ ಇದಾಗಿದೆ ಎಂದು ಚಿತ್ರತಂಡ ತಿಳಿಸಿದೆ.
ಚಿತ್ರದ ಮತ್ತೊಂದು ವಿಶೇಷವೆಂದರೆ, ನಾಗರ ಪಂಚಮಿ ಹಬ್ಬದ ಪ್ರಯುಕ್ತ ‘ಬನ’ ಚಿತ್ರದ ಟ್ರೇಲರ್ ಬಿಡುಗಡೆಗೊಳ್ಳಲಿದೆ. ಟ್ರೇಲರ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಈ ಸಿನಿಮಾದ ಮೂಲಕ ಹಿರಿಯ ಪತ್ರಕರ್ತ ಜಯಪ್ರಕಾಶ್ ಶೆಟ್ಟಿ ಮೊದಲ ಬಾರಿಗೆ ತುಳು ಸಿನಿಮಾದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಇತ್ತೀಚೆಗೆ ಬಿಡುಗಡೆಯಾದ ಅವರ ಫಸ್ಟ್‌ಲುಕ್ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಿನಿರಸಿಕರ ಗಮನ ಸೆಳೆದಿದೆ. ಅವರೊಂದಿಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ರೂಪ ವರ್ಕಡಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
‘ಈಶಿ ಪ್ರೊಡಕ್ಷನ್’ ಬ್ಯಾನರ್ ಅಡಿಯಲ್ಲಿ ಮನೋಹರ್ ರೈ ವೈಪಾಲ ಈ ಚಿತ್ರವನ್ನು ನಿರ್ಮಿಸಿದ್ದು, ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ತುಳು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ‘ಬನ’ ಸಿನಿಮಾ ಕರಾವಳಿ ಭಾಗದ ಸಂಸ್ಕೃತಿ, ನಾಗಾರಾಧನೆ ಹಾಗೂ ಜನಪದ ಕಥೆಗಳನ್ನು ಪ್ರೇಕ್ಷಕರಿಗೆ ಹೊಸ ಅನುಭವದೊಂದಿಗೆ ಪರಿಚಯಿಸುವ ನಿರೀಕ್ಷೆ ಮೂಡಿಸಿದ್ದು, ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆಯುವ ವಿಶ್ವಾಸವನ್ನು ಚಿತ್ರತಂಡ ವ್ಯಕ್ತಪಡಿಸಿದೆ.





