–  ರಾಘವೇಂದ್ರ ಅಡಿಗ ಎಚ್ಚೆನ್.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರ ಬೆಪ್ಪತ್ತಕ್ಕಡಿ ಬೋಳೇ ಶಂಕರ ಕೃತಿ ಸಮಾಜವಾದ ಹಾಗೂ ಗಾಂಧಿವಾದದ ಮರುಪರಿಶೀಲನೆ ಮಾಡುವಂತಹ ಮಹತ್ವದ ನಾಟಕವಾಗಿದೆ, ಮಾರ್ಕ್ಸ್ ವಾದವನ್ನು ತನ್ನದೇ ಶೈಲಿಯಲ್ಲಿ ಈ ನಾಟಕದಲ್ಲಿ ಕಂಬಾರರು ಒರೆಹಚ್ಚಿ ನೋಡಿದ್ದಾರೆ ಎಂದು ಡಾ. ವಿಜಯೇಂದ್ರ ಕುಮಾರ್ ಜಿ ಎಲ್ ಹೇಳಿದ್ದಾರೆ.

ಅವರು ಇಂದು ಕನ್ನಡ ಪುಸ್ತಕ ಪ್ರಾಧಿಕಾರ ವಿಜಯ ವಿಭಜಿತ ಪದವಿ ಪೂರ್ವ ಕಾಲೇಜು ಬಸವನಗುಡಿ ಬೆಂಗಳೂರು ಇವರ ಸಹಯೋಗದೊಂದಿಗೆ ಆಯೋಜಿಸಿದ್ದ ಅಂಗಳದಲ್ಲಿ ತಿಂಗಳ ಪುಸ್ತಕ ಕಾರ್ಯಕ್ರಮದಲ್ಲಿ ಡಾ. ಚಂದ್ರಶೇಖರ ಕಂಬಾರ ಅವರ ಬೆಪ್ಪತ್ತಕ್ಕಡಿ ಬೋಳೇ ಶಂಕರ ನಾಟಕವನ್ನು ಕುರಿತು ಮಾತನಾಡುತ್ತಿದ್ದರು.

ಟಾಲ್ಸ್ಟಾಯ್ ಅವರ ಬೆಪ್ಪ ತಕ್ಕಡಿ ಐವಾನ್ ನಾಟಕದ ಸ್ಪೂರ್ತಿಯಿಂದ ರಚನೆಯಾದ ಕಂಬಾರರ ಈ ನಾಟಕ ಯಕ್ಷಗಾನ ಹಾಗೂ ಬಯಲಾಟ ಮಿಳಿತ ಗೊಂಡ ಜಾನಪದ ಶೈಲಿಯ ಮೂಲಕ ರಂಜಿಸುತ್ತದೆ ಎಂದರು.

1001676106

ಕೇವಲ ರಂಜನೀಯ ನಾಟಕ ಶೈಲಿಯಿಂದ ಮಾತ್ರವೇ ಈ ನಾಟಕ ಮುಖ್ಯವಾಗುವುದಿಲ್ಲ ಬದಲಾಗಿ ಮನುಷ್ಯ ಸಂಬಂಧದ ಕಲ್ಪನೆ ಹಾಗೂ ಮಾನವೀಯ ಮೌಲ್ಯಗಳ ರೂಡಿಸಿಕೊಳ್ಳುವಿಕೆ ಒಬ್ಬ ಮನುಷ್ಯನಲ್ಲಿ ಹೇಗೆ ರೂಪುಗೊಳ್ಳಬೇಕು ಎಂಬುದನ್ನು ಈ ನಾಟಕ ಸಮರ್ಥವಾಗಿ ಬಿಂಬಿಸುತ್ತದೆ  ಎಂದು ಅವರು ತಿಳಿಸಿದರು.

ಆದರ್ಶ ರಾಜ್ಯವೆಂದರೆ ಹೇಗಿರಬೇಕು ಎಂಬುದನ್ನು ಈ ನಾಟಕದ ನಾಯಕ ಬೋಳೇಶಂಕರ ಪ್ರತಿಪಾದಿಸುವುದು ಸಮಕಾಲಿನ ಪ್ರಜಾಪ್ರಭುತ್ವ ದೇಶ ಹೇಗಿರಬೇಕು ಎಂಬುದನ್ನು ತಿಳಿಸುತ್ತದೆ, ಸೈನ್ಯವಿಲ್ಲದ ,ಯುದ್ಧ ವಿರೋಧಿ ರಾಜ್ಯ ನಮ್ಮದಾಗಬೇಕು ಎಂದು ಹೇಳುವ ಬೋಳೇಶಂಕರ ಪರಿಸರದ ಪ್ರೇಮದ ಬಗ್ಗೆ ಮಾತನಾಡುತ್ತಲೇ ಒಳ್ಳೆಯತನವೆಂಬುದು ನಮ್ಮ ವ್ಯಕ್ತಿತ್ವದ ಭಾಗವಾಗಿರಬೇಕು ಎಂಬುದನ್ನು ಪ್ರತಿಪಾದಿಸುತ್ತಾನೆ. ಒಂದು ಸಾಮಾನ್ಯ ನೀತಿ ಕಥೆಯನ್ನು ಒಂದು ಕ್ರಾಂತಿಕಾರಕ ಮಹಾನ್ ನಾಟಕವಾಗಿ ಪರಿವರ್ತಿಸುವ ಕಂಬಾರರ ಈ ನಾಟಕ ಸೃಜನಶೀಲ ರೂಪಾಂತರಕ್ಕೆ ಒಂದು ಅತ್ಯುತ್ತಮ ಉದಾಹರಣೆಯಾಗಿದೆ ಎಂದು ವಿಜಯೇಂದ್ರ ಕುಮಾರ್ ಹೇಳಿದರು.

 

ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಯಾವುದೇ ಸಾಹಿತ್ಯ ಕೃತಿ ಮಕ್ಕಳಲ್ಲಿ ಜಾಗೃತಿಯನ್ನು ಉಂಟು ಮಾಡುವುದು ಅದರ ಶಕ್ತಿಗೆ ಸಾಕ್ಷಿಯಾಗುತ್ತದೆ. ಪುಸ್ತಕ ಪ್ರಾಧಿಕಾರ ಮಕ್ಕಳಲ್ಲಿ ಪುಸ್ತಕ ಪ್ರೀತಿಯನ್ನು ಹುಟ್ಟು ಹಾಕಲೆಂದೆ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ ಪ್ರತಿ ಮನೆಯಲ್ಲೂ ಪುಟ್ಟದೊಂದು ಗ್ರಂಥಾಲಯ ಇರುವುದು ಅವಶ್ಯ ,ಆದುದರಿಂದ ಮಕ್ಕಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವುದರ ಜೊತೆಗೆ ಅದನ್ನು ಆಸ್ಪಾದಿಸುವ ಏಕಾಗ್ರತೆಯನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

1001676105

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿ ಹೆಚ್ ಎಸ್ ಉನ್ನತ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ ಎ.ಬಾಲಕೃಷ್ಣ ಅಡಿಗ

ಮಾತನಾಡಿ ವಿದ್ಯಾರ್ಥಿಗಳು ಕನ್ನಡದ ಸಾಹಿತ್ಯ ಕೃತಿಗಳನ್ನು ಹೆಚ್ಚು ಹೆಚ್ಚಾಗಿ ಓದುವ ಅಭ್ಯಾಸ ಮಾಡಿಕೊಳ್ಳಬೇಕು. ಎಂದರು.

1001676104

ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ ಬಿ ಕಿರಣ್ ಸಿಂಗ್ ,ವಿಜಯ ವಿಭಜಿತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಟಿ ಆಶಾಲತಾ, ಉಪ ಪ್ರಾಂಶುಪಾಲರಾದ ಪ್ರೊ. ಬಬಿತಾ ಭೌಮಿಕ್ ಹಾಗೂ ಡಾ. ಎಸ್ ಎಲ್ ಶ್ರೀನಿವಾಸಮೂರ್ತಿ ಉಪಸ್ಥಿತರಿದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ