ನೀಟ್​​ ಪ್ರಶ್ನೆಪತ್ರಿಕೆ ಸೋರಿಕೆಗೆ ಸರ್ಕಾರ ಹೊಣೆ ಹೊತ್ತಿಕೊಳ್ಳಬೇಕೆಂದು ಹೋರಾಟ ನಡೆಸಲು ದೇಶಾದ್ಯಂತದ ಸಾವಿರಾರು ವಿದ್ಯಾರ್ಥಿಗಳು ದೆಹಲಿಯ ಜಂತರ್ ಮಂತರ್​​ಗೆ ಬಂದಿದ್ದರು. ಕೇವಲ ಹುಡುಗರು ಮಾತ್ರವಲ್ಲ, ಈ ಹೋರಾಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಹುಡುಗಿಯರು ನೆರೆದಿದ್ದರು. ಆದರೆ ಈ ಪ್ರತಿಭಟನೆಯಲ್ಲಿ ಸಿನಿಮಾವನ್ನೇ ಮೀರಿಸುವ ಲವ್​ಸ್ಟೋರಿ ಸಾಕಷ್ಟು ಸದ್ದು ಮಾಡುತ್ತಿದೆ.

ಪ್ರತಿಭಟನೆಗೆಂದು ಬಂದ ಯುವಕ-ಯುವತಿ ಪರಸ್ಪರ ಪ್ರೀತಿಯಲ್ಲಿ ಬಿದ್ದು, ಮದುವೆಯಾಗಿ ಮನೆಗೆ ಮರಳಿದ್ದಾರೆ. ಈ ಲವ್​​ ಸ್ಟೋರಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ನೀಟ್ ಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಿಹಾರದ ಯುವಕನೊಬ್ಬ ದೆಹಲಿಯ ವಿದ್ಯಾರ್ಥಿನಿಯನ್ನು ಭೇಟಿಯಾಗಿದ್ದಾನೆ. ಈ ಭೇಟಿ ಕೆಲವೇ ದಿನಗಳಲ್ಲಿ ಈ ಸ್ನೇಹಕ್ಕೆ, ನಂತರ ಪ್ರೀತಿಯಾಗಿ ಬದಲಾಗಿದೆ. ಕೊನೆಗೆ, ಇಬ್ಬರೂ ದೇವಸ್ಥಾನಕ್ಕೆ ಹೋಗಿ ಮದುವೆಯಾಗಿದ್ದಾರೆ ಎಂದು ಎನ್​ಡಿಟಿವಿ ಮರಾಠಿ ವರದಿ ಮಾಡಿದೆ.

*ಊಟದಿಂದ ಪ್ರೀತಿಯ ಬಲೆಗೆ*
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಹಲವು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಬಿಹಾರದ ಮೋಹನ್ ಶ್ರೀವಾಸ್ತವ ಎಂಬ ಯುವಕ ಭಾಗವಹಿಸಿದ್ದರು. ಪ್ರತಿಭಟನಾ ಸ್ಥಳದಲ್ಲಿ ಸಾಕಷ್ಟು ಆಹಾರ ಮತ್ತು ನೀರಿನ ಸೌಲಭ್ಯಗಳ ಕೊರತೆಯಿಂದಾಗಿ ಅನೇಕ ವಿದ್ಯಾರ್ಥಿಗಳು ತೊಂದರೆ ಎದುರಿಸುತ್ತಿದ್ದರು. ಹಸಿವಿನಿಂದ ಕಂಗೆಟ್ಟಿದ್ದ ಮೋಹನ್​​ಗೆ ದೆಹಲಿಯ ವಿದ್ಯಾರ್ಥಿನಿಯೊಬ್ಬಳು ತಾನು ತಂದಿದ್ದ ಊಟವನ್ನು ಹಂಚಿಕೊಂಡಿದ್ದಾಳೆ. ನಂತರ ಆಕೆ ಮೋಹನ್​ಗಾಗಿ ಪ್ರತಿದಿನ ಊಟ ತರಲು ಶುರು ಮಾಡಿದ್ದಾಳೆ.

ಇದು ಹಲವು ದಿನಗಳ ಕಾಲ ಮುಂದುವರಿದಿದೆ. ಒಂದು ದಿನ ಮೋಹನ್ ಆ ವಿದ್ಯಾರ್ಥಿನಿಗೆ ತಮಾಷೆಯಾಗಿ, “ಬರೀ ತಿನ್ನಲು ಮಾತ್ರ ಕೊಡುತ್ತಿದ್ದೀರಾ? ಕುಡಿಯಲು ನೀರು ಯಾರು ಕೊಡುತ್ತಾರೆ?” ಎಂದು ಕೇಳಿದನಂತೆ. ಅದಕ್ಕೆ ಆ ಯುವತಿ ಮಾರನೆಯ ದಿನ ಅವನಿಗೆ ನೀರನ್ನೂ ತಂದುಕೊಟ್ಟಿದ್ದಾರೆ. ನಂತರ ಅವರಿಬ್ಬರ ನಡುವೆ ಒಳ್ಳೆಯ ಸ್ನೇಹ ಬೆಳೆಯಿತು. ಇಬ್ಬರ ನಡುವಿನ ಸಂಭಾಷಣೆ ಹೆಚ್ಚಾಗಿದೆ. ವಿಶೇಷ ಏನೆಂದರೆ, ಆ ಯುವತಿ ‘ನೀಟ್’ (NEET) ಪರೀಕ್ಷೆ ಬರೆದಿದ್ದಳು. ಪ್ರಶ್ನೆಪತ್ರಿಕೆ ಸೋರಿಕೆಯಾದ ಕಾರಣ ಆಕೆಯೂ ಸಹ ಈ ಹೋರಾಟದಲ್ಲಿ ಭಾಗವಹಿಸಿದ್ದಳು. ಯುವತಿ ದೆಹಲಿಯ ನಿವಾಸಿಯಾಗಿದ್ದಾಳೆ.

*ಗಾಢ ಪ್ರೀತಿಗೆ ಕಾರಣವಾಯ್ತು ಲಾಠಿ ಚಾರ್ಜ್!​*

ಆದರೆ ನಂತರ ಒಂದು ಟ್ವಿಸ್ಟ್ ಎದುರಾಯಿತು. ಪ್ರತಿಭಟನೆಯ ಸಮಯದಲ್ಲಿ, ಪೊಲೀಸರು ಲಾಠಿಚಾರ್ಜ್ ಮಾಡಿದರು. ಇದರಲ್ಲಿ ಮೋಹನ್ ತಲೆಗೆ ಪೆಟ್ಟುಬಿದ್ದು ಗಾಯಗೊಂಡಿದ್ದಾರೆ. ಪೊಲೀಸರ ಏಟಿನಿಂದ ಮೋಹನ್ ಅದೇ ಸ್ಥಳದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಆ ವಿದ್ಯಾರ್ಥಿನಿ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾಳೆ. ಚಿಕಿತ್ಸೆಯ ಸಮಯದಲ್ಲಿ ಆ ಹುಡುಗಿಯೇ ಮೋಹನ್​​ನನ್ನು ನೋಡಿಕೊಂಡಳು. ಮೋಹನ್ ಪ್ರಜ್ಞೆ ಮರಳಿದ ನಂತರ, ವಿದ್ಯಾರ್ಥಿನಿಯೇ ಮೊದಲು ತನ್ನ ಮನಸ್ಸಿನಲ್ಲಿದ್ದ ಪ್ರೇಮವನ್ನು ವ್ಯಕ್ತಪಡಿಸಿದ್ದಾಳೆ. “ನೀನಿಲ್ಲದೆ ನಾನು ಬದುಕಲು ಸಾಧ್ಯವಿಲ್ಲ” ಎಂದು ಹೇಳಿದ್ದಾಳೆ. ಅದಕ್ಕೆ ಮೋಹನ್ ಕೂಡ, “ನಾನು ನಿನ್ನನ್ನು ಪ್ರೀತಿಸುತ್ತಿದ್ದೆ, ಆದರೆ ಹೇಳಲು ಹೆದರುತ್ತಿದ್ದೆ” ಎಂದು ಹೇಳಿದ್ದಾನೆ.

ದೇವಾಲಯದಲ್ಲಿ ವಿವಾಹ

ಆದರೆ ಈಗ ಮುಂದೆ ಏನು ಮಾಡುವುದು ಎಂಬ ಪ್ರಶ್ನೆ ಎದುರಾಗಿತ್ತು. ಇಬ್ಬರೂ ಸಮಯ ವ್ಯರ್ಥ ಮಾಡದೆ ದೇವಸ್ಥಾನಕ್ಕೆ ಹೋಗಿ ಮದುವೆಯಾಗಿದ್ದಾರೆ. ನಂತರ ಮೋಹನ್ ಅವಳನ್ನು ಕರೆದುಕೊಂಡು ಬಿಹಾರಕ್ಕೆ ಬಂದಿದ್ದಾನೆ. ಮನೆಯಿಂದ ಹೊರಡುವಾಗ ಅವನು ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯಲು ಹೊರಟಿದ್ದ. ಆದರೆ ಹಿಂತಿರುಗಿ ಬರುವಾಗ ಮನೆಗೆ ಸೊಸೆಯನ್ನು (ವಧುವನ್ನು) ಕರೆದುಕೊಂಡು ಬಂದಿದ್ದನ್ನು ಕಂಡು ಕುಟುಂಬ ಮತ್ತು ನೆರೆಹೊರೆಯವರೆಲ್ಲಾ ಮೂಕವಿಸ್ಮಿತರಾಗಿದ್ದಾರೆ. ಜೆನ್-ಜಿ (Gen-Z) ಕಾಲದಲ್ಲಿ ಮಾತ್ರ ಇಂತಹದ್ದೆಲ್ಲಾ ನಡೆಯಲು ಸಾಧ್ಯ. ಈ ಲವ್​ಸ್ಟೋರಿಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಈ ಲವ್​ ಸ್ಟೋರಿ ಬಗ್ಗೆ ಕೇಳಿದಾಗ, ವಿದ್ಯಾರ್ಥಿನಿ, “ಪ್ರೀತಿಗೆ ಯಾವುದೇ ಯೋಜನೆ ಎಂಬುದು​ ಇರುವುದಿಲ್ಲ. ಅದು ಎಲ್ಲಿ, ಯಾವಾಗ ಮತ್ತು ಹೇಗೆ ಸಂಭವಿಸುತ್ತದೆ ಎಂದು ನೀವು ಹೇಳಲು ಸಾಧ್ಯವಿಲ್ಲ” ಎಂದು ಹೇಳಿದ್ದಾಳೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ