ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನದಿ ನೀರಿನ ವಿವಾದದ ಕಾವು ಚಿತ್ರರಂಗಕ್ಕೂ ತಟ್ಟಿದೆ. ತಮಿಳಿನ ಬಹುನಿರೀಕ್ಷಿತ ‘ಜನ ನಾಯಗನ್’ ಸಿನಿಮಾಗೆ ಕಾವೇರಿ ವಿವಾದದ ಬಿಸಿ ತಟ್ಟಿದ್ದು, ರಾಜ್ಯದ ಹಲವು ಥಿಯೇಟರ್‌ಗಳಿಂದ ಸಿನಿಮಾ ಎತ್ತಂಗಡಿಯಾಗುತ್ತಿದೆ. ಬೆಂಗಳೂರಿನಲ್ಲಿ ಶೋಗಳ ಸಂಖ್ಯೆ ತೀವ್ರ ಕುಸಿದಿದ್ದು, ಏಕಪರದೆ ಚಿತ್ರಮಂದಿರಗಳಲ್ಲಿ ಹೆಚ್ಚಿನ ಶೋ ತೆಗೆಯಲಾಗುತ್ತಿದೆ.
ಕನ್ನಡ ಪರ ಸಂಘಟನೆಗಳು ಹಾಗೂ ರಕ್ಷಣಾ ವೇದಿಕೆಯ ಕಾರ್ಯಕರ್ತರು ತಮಿಳು ಸಿನಿಮಾ ಪ್ರದರ್ಶನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಚಿತ್ರಮಂದಿರಗಳ ಮಾಲೀಕರು ಪ್ರದರ್ಶನ ರದ್ದುಗೊಳಿಸುತ್ತಿದ್ದಾರೆ.
ಬೆಂಗಳೂರಿನ ಅಂಜನ್ ಥಿಯೇಟರ್‌ನಲ್ಲಿ ‘ಜನನಾಯಗನ್’ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿತ್ತು. ಆದರೆ ರಕ್ಷಣಾ ವೇದಿಕೆಯ ಎಚ್ಚರಿಕೆಯ ಬೆನ್ನಲ್ಲೇ ಥಿಯೇಟರ್‌ನಲ್ಲಿದ್ದ ಪೋಸ್ಟರ್‌ಗಳನ್ನು ತೆರವುಗೊಳಿಸಲಾಗಿದೆ. ಇಂದು ಚಿತ್ರದ ಪ್ರದರ್ಶನವನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಂಜನ್ ಥಿಯೇಟರ್‌ಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಮಿಳು ಸಿನಿಮಾದ ಪ್ರದರ್ಶನ ರದ್ದುಗೊಳಿಸಿರುವ ಚಿತ್ರಮಂದಿರಗಳು ಈಗ ಪರ್ಯಾಯ ಮಾರ್ಗ ಕಂಡುಕೊಂಡಿವೆ. ಅಂಜನ್ ಥಿಯೇಟರ್ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಇಂದು ‘ಜನನಾಯಗನ್’ಬದಲಿಗೆ ಇಂಗ್ಲಿಷ್ ಹಾಗೂ ತೆಲುಗು ಸಿನಿಮಾಗಳನ್ನು ಪ್ರದರ್ಶನ ಮಾಡಲಾಗುತ್ತಿದೆ.
ನಿನ್ನೆ ಬೆಂಗಳೂರು ನಗರದ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ‘ಜನ ನಾಯಗನ್’ ಚಿತ್ರದ 500ಕ್ಕೂ ಹೆಚ್ಚು ಶೋಗಳು ಪ್ರದರ್ಶನಗೊಳ್ಳುತ್ತಿದ್ದವು. ಆದರೆ ಕಾವೇರಿ ಪ್ರತಿಭಟನೆಯ ತೀವ್ರತೆಯಿಂದಾಗಿ ಇಂದು ಶೋಗಳ ಸಂಖ್ಯೆ ಕೇವಲ 100ಕ್ಕೆ ಇಳಿದಿದೆ. ಎಲ್ಲಾ ಚಿತ್ರಮಂದಿರಗಳಿಂದಲೂ ತಮಿಳು ಸಿನಿಮಾದ ಶೋಗಳನ್ನು ತೆಗೆದುಹಾಕಲಾಗುತ್ತಿದೆ.
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕರ್ನಾಟಕದಲ್ಲಿ ಆಕ್ರೋಶದ ಕಟ್ಟೆ ಒಡೆದಿದೆ. ಈ ಹಿನ್ನೆಲೆಯಲ್ಲಿ ತಮಿಳು ಭಾಷೆಯ ಸಿನಿಮಾಗಳನ್ನು ಕರ್ನಾಟಕದಲ್ಲಿ ಪ್ರದರ್ಶಿಸಬಾರದು ಎಂದು ಕನ್ನಡ ಪರ ಸಂಘಟನೆಗಳು ಪಟ್ಟು ಹಿಡಿದಿವೆ. ಹೀಗಾಗಿ ಮಾಲೀಕರು ಸ್ವಯಂಪ್ರೇರಿತರಾಗಿ ತಮಿಳು ಚಿತ್ರದ ಪ್ರದರ್ಶನವನ್ನು ನಿಲ್ಲಿಸುತ್ತಿದ್ದಾರೆ. ಇದಲ್ಲದೆ ಕಾವೇರಿ ಕೊಳ್ಳದ ಭಾಗದಲ್ಲೂ ‘ಜನ ನಾಯಗನ್’ ಸಿನಿಮಾ ಪ್ರದರ್ಶನ ರದ್ದು ಮಾಡಲಾಗಿದೆ.





