– ರಾಘವೇಂದ್ರ ಅಡಿಗ ಎಚ್ಚೆನ್.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಪ್ರಕರಣದ ಎ14 ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗುವ ಅರ್ಜಿ ವಿಚಾರಣೆಯಲ್ಲಿ ಇತರ ಆರೋಪಿಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿಲ್ಲ ಎಂದು ಕೋರ್ಟ್ ಮಹತ್ವದ ಆದೇಶ ನೀಡಿದೆ. ಪ್ರದೋಷ್ ಮಾಫಿ ಸಾಕ್ಷಿಯಾಗುವ ವಿಚಾರಕ್ಕೆ ಆರೋಪಿಗಳ ಪರ ವಕೀಲರು ಆಕ್ಷೇಪಣೆ ವ್ಯಕ್ತಪಡಿಸಿದ್ದರೂ, ಅವರ ಆಕ್ಷೇಪಣೆಯನ್ನು ಪರಿಗಣಿಸಲು ಕೋರ್ಟ್ ನಿರಾಕರಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದರು. ದರ್ಶನ್, ಪ್ರದೋಷ್, ನಾಗರಾಜ್, ಲಕ್ಷ್ಮಣ್ ಹಾಗೂ ಜಗದೀಶ್ ವೀಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ವಿಚಾರಣೆಯಲ್ಲಿ ಭಾಗಿಯಾದರು. ದರ್ಶನ್ ಇತರ ಆರೋಪಿಗಳ ಹಿಂದೆ ಪ್ರತ್ಯೇಕವಾಗಿ ಕುಳಿತಿರುವುದು ಕಂಡುಬಂದರೆ, ಪವಿತ್ರಾಗೌಡ ಕೂಡ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿ ವಿಚಾರಣೆ ಎದುರಿಸಿದರು.
ಆಕ್ಷೇಪಣೆಗೆ ಅವಕಾಶವಿಲ್ಲ
ಪ್ರದೋಷ್ ಸಲ್ಲಿಸಿರುವ ಮಾಫಿ ಸಾಕ್ಷಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಆರೋಪಿಗಳಿಗೆ ಅವಕಾಶ ನೀಡಬೇಕು ಎಂದು ಆರೋಪಿಗಳ ಪರ ವಕೀಲರು ವಾದಿಸಿದ್ದರು. ಮಾಫಿ ಸಾಕ್ಷಿ ಅರ್ಜಿಗೆ ತಮ್ಮ ಆಕ್ಷೇಪಣೆ ಇದೆ, ತಮ್ಮ ವಾದವನ್ನೂ ಆಲಿಸಬೇಕು ಎಂದು ವಕೀಲರು ಮನವಿ ಮಾಡಿದ್ದರು.
ಆದರೆ ಆರೋಪಿಗಳ ಆಕ್ಷೇಪಣೆಯನ್ನು ಪರಿಗಣಿಸಲು ಕೋರ್ಟ್ ನಿರಾಕರಿಸಿದೆ. ಪ್ರದೋಷ್ ಮಾಫಿ ಸಾಕ್ಷಿಯಾಗುವ ಅರ್ಜಿಗೆ ಇತರ ಆರೋಪಿಗಳು ಆಕ್ಷೇಪಣೆ ಸಲ್ಲಿಸಲು ಅವಕಾಶವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಇದರಿಂದ ದರ್ಶನ್ ಸೇರಿದಂತೆ ಇತರ ಆರೋಪಿಗಳ ಪರ ವಕೀಲರ ವಾದಕ್ಕೆ ಹಿನ್ನಡೆಯಾದಂತಾಗಿದೆ.
ಪ್ರದೋಷ್ ಮಾಫಿ ಸಾಕ್ಷಿಯಾಗುವ ಅರ್ಜಿಯನ್ನು ಕೋರ್ಟ್ ಅಂತಿಮವಾಗಿ ಪರಿಗಣಿಸುತ್ತದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಪ್ರತ್ಯೇಕ ಆದೇಶ ಹೊರಬೀಳಲಿದೆ. ಈ ಬಗ್ಗೆ ನ್ಯಾಯಮೂರ್ತಿ ಸುಜಾತಾ ಎಂ. ಸಾಂಬ್ರಾಣಿ ಅವರಿಂದ ಮಹತ್ವದ ಆದೇಶ ಹೊರಬಂದಿದೆ.
ಮಧ್ಯಾಹ್ನ 3 ಗಂಟೆಗೆ ಆದೇಶ ನಿರೀಕ್ಷಿಸಲಾಗಿತ್ತು. ಬಳಿಕ ಆದೇಶದ ಪ್ರಕ್ರಿಯೆ ಮುಂದುವರಿದಿದ್ದು, ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಕೋರ್ಟ್ ಹಾಲ್‌ಗೆ ದರ್ಶನ್ ಪರ ವಕೀಲ ಹಸ್ಮತ್ ಪಾಷ ಕೂಡ ಆಗಮಿಸಿದ್ದರು.
ಪ್ರದೋಷ್ ಮಾಫಿ ಸಾಕ್ಷಿಯಾಗುವ ಅರ್ಜಿಯನ್ನು ಕೋರ್ಟ್ ಅಂಗೀಕರಿಸಿದರೆ ಪ್ರಕರಣದ ಮುಂದಿನ ವಿಚಾರಣೆಯಲ್ಲಿ ಅದರ ಪರಿಣಾಮ ಏನಾಗಲಿದೆ ಎಂಬುದು ಇದೀಗ ಕುತೂಹಲ ಮೂಡಿಸಿದೆ





