ಮಿನಿಕಥೆ ಮಾಲಾ ಪ್ರಸಾದ್

ಮದುವೆಗಾಗಿ ಪರಸ್ಪರ ಒಪ್ಪಿಕೊಂಡ ದೀಪಕ್ಮತ್ತು ಆರಾಧನಾ ಜಾತಕ ಸರಿಹೊಂದಲಿಲ್ಲವೆಂದು ಹಿಂಜರಿಯಲಿಲ್ಲ. ಮುಂದೆ ಏನಾಯಿತು…..?

ವಿಶಾಲಾ ಮತ್ತು ನಾಗರಾಜರ ಒಬ್ಬನೇ ಮಗ ದೀಪಕ್‌. ತಾಯಿ ವೈದ್ಯೆ, ತಂದೆ ವಕೀಲರು. ಹುಬ್ಬಳಿಯಲ್ಲಿ ನೆಲೆಸಿದ್ದರು. ದೀಪಕ್ ಬಿ.ಇ. ನಂತರ ಉದ್ಯೋಗ ನಿಮಿತ್ತ ಬೆಂಗಳೂರಿಗೆ ಬಂದು ನೆಲೆಸಿದ್ದನು.

ನಟರಾಜ್‌ ಮತ್ತು ವಾಣಿ ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳು. ನಟರಾಜ್‌ ಬ್ಯಾಂಕ್‌ ಉದ್ಯೋಗಿಯಾಗಿ ಸೇವೆ ಸಲ್ಲಿಸಿ ಬೆಂಗಳೂರಿನಲ್ಲಿ ನೆಲೆಸಿದ್ದರು. ವಾಣಿ ಗೃಹಿಣಿ, ದಿವ್ಯಾ ಮತ್ತು ಆರಾಧನಾ ಇಬ್ಬರು ಹೆಣ್ಣುಮಕ್ಕಳು. ದಿವ್ಯಾ ಎಂ.ಫಾರ್ಮಾ ಮಾಡಿ ಮದುವೆಯಾಗಿ ಸೆಟ್‌ ಆಗಿದ್ದಳು. ಆರಾಧಾನಾ ಬಿ.ಇ. ಮಾಡಿ ಕೆಲಸದಲ್ಲಿದ್ದಳು.

ಇತ್ತ ದೀಪಕ್‌ ಹಾಗೂ ಆರಾಧನಾ ಇಬ್ಬರಿಗೂ ಮದುವೆಗಾಗಿ ನೋಡುತ್ತಿದ್ದರು. ಇವರಿಬ್ಬರ ಜಾತಕಗಳು ಇಬ್ಬರ ತಂದೆ ತಾಯಿಯಂದಿರ ಕೈ ಸೇರಿತು. ಜಾತಕ ಸರಿ ಹೋಗುತ್ತದೆಯೇ ಎಂದು ತಿಳಿದು ನೋಡುವಷ್ಟರಲ್ಲಿ ಮಧ್ಯಸ್ಥಿಕೆ ವಹಿಸಿದ್ದ ಒಬ್ಬರು, ಆರಾಧನಾಳ ತಂದೆಯ ಬಳಿ ಮೊದಲು ಹುಡುಗ ಹುಡುಗಿ ನೋಡಲಿ, ಆಮೇಲೆ ಜಾತಕ ನೋಡೋಣ ಎಂದರು.

ಹೆಣ್ಣು ನೋಡುವ ಶಾಸ್ತ್ರಕ್ಕೆ ತಯಾರಿ ಮಾಡಿದರು. ಆರಾಧನಾಳನ್ನು ನೋಡುವುದಕ್ಕಾಗಿ ದೀಪಕ್‌ ಅಪ್ಪ, ಅಮ್ಮ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬಂದರು. ದೀಪಕ್‌, ಆರಾಧನಾ ಇಬ್ಬರು ಒಬ್ಬರನ್ನೊಬ್ಬರು ಹೆಣ್ಣು ನೋಡುವ ಶಾಸ್ತ್ರದಲ್ಲಿ ನೋಡಿಕೊಂಡರು. ಇಬ್ಬರೂ ಪರಸ್ಪರ ಮಾತನಾಡಲು ಇಚ್ಛಿಸಿದರು. ಪೋಷಕರ ಒಪ್ಪಿಗೆ ಮೇರೆಗೆ ದೀಪಕ್‌, ಆರಾಧನಾ ಇಬ್ಬರು ಮಾತನಾಡಲು ಬಾಲ್ಕನಿಯ ಕಡೆ ಹೋದರು. ನಂತರ ಇಬ್ಬರಿಗೂ ಒಪ್ಪಿಗೆಯಾಯಿತು. ಇಬ್ಬರೂ ಬಿ.ಇ. ಆದ್ದರಿಂದ ಅರ್ಥ ಮಾಡಿಕೊಂಡು ಸುಲಭವಾಗಿ ಜೀವನ ಯಾನ ನಡೆಸಬಹುದು ಎಂದುಕೊಂಡಿದ್ದರು. ಇದಕ್ಕೆ ಇಬ್ಬರ ಪೋಷಕರೂ ಸಮ್ಮತಿಸಿದರು.

ನಂತರ ಈಗ ಜಾತಕ ತೋರಿಸಿದರೆ ಇಬ್ಬರ ಜಾತಕಗಳು ಸರಿ ಹೊಂದುತ್ತಿಲ್ಲ ಎಂದು ಮಧ್ಯಸ್ಥಿಕೆ ವಹಿಸಿದ್ದ ವ್ಯಕ್ತಿಗೆ ಹೇಳಿದರು. ಇದಕ್ಕೆ, ನಾವು ಮೊದಲು ಜಾತಕ ತೋರಿಸಬೇಕಿತ್ತು ಎಂದು ಹೇಳಿದ್ದು. ನೀವೇ ಮೊದಲು ಹುಡುಗಿ ನೋಡುವ ಶಾಸ್ತ್ರ ಮುಗಿಯಲಿ, ಆನಂತರ ಜಾತಕಗಳನ್ನು ತೋರಿಸೋಣವೆಂದಿದ್ದಿರಿ ಎಂದು ಅವರ ಕಡೆ ತಪ್ಪು ಮಾಡಿ ತೋರಿಸಿದರು.

ದೀಪಕ್‌, ಆರಾಧನಾ ಇಬ್ಬರು ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದರು. ಮೊಬೈಲ್ ಸಂಖ್ಯೆಯನ್ನು ಎಕ್ಸ್ ಚೇಂಜ್‌ ಮಾಡಿಕೊಂಡಿದ್ದರು. ಇಬ್ಬರ ನಡುವೆ ಮಾತುಕತೆ ಆರಂಭವಾಗಿತ್ತು. ಮನೆಯಲ್ಲಿ ಈಗ ಬೇಡವೆಂದರೂ ಇಬ್ಬರೂ ಒಪ್ಪುತ್ತಿಲ್ಲ. ಪೋಷಕರು ಮದುವೆ ಮಾಡದೆ ಬೇರೆ ವಿಧಿ ಇಲ್ಲ ಎಂಬ ಪರಿಸ್ಥಿತಿಗೆ ತಲುಪಿದರು. ಇದಕ್ಕಾಗಿ ಇಬ್ಬರ ಪೋಷಕರು ತಮಗೆ ಗೊತ್ತಿರುವ ಪುರೋಹಿತರ ಮೊರೆಹೋದರು. ನಡೆದ ವಿಷಯವನ್ನೆಲ್ಲ ಪುರೋಹಿತರಿಗೆ ತಿಳಿಸಿ ದೀಪಕ್‌ ಆರಾಧನಾರ ಜಾತಕಗಳನ್ನು ಅವರಿಗೆ ತೋರಿಸಿದರು.

ಇಬ್ಬರ ಜಾತಕಗಳು ಸರಿ ಹೊಂದುತ್ತಿಲ್ಲ, ಒಂದು ಸಣ್ಣ ಹೋಮ ಮಾಡಿದರೆ ಸರಿ ಹೋಗುತ್ತದೆ, ಭಯಪಡುವ ಅಗತ್ಯವಿಲ್ಲ ಎಂದರು. ನಿಶ್ಚಿತಾರ್ಥದ ದಿನ ನಿಶ್ಚಿತಾರ್ಥಕ್ಕೆ ಮುಂಚೆ ಹೋಮ ಮಾಡಿಸಬೇಕೆಂದರು. ಇಬ್ಬರ ಪೋಷಕರು ಆಗಲೆಂದು ಒಪ್ಪಿಕೊಂಡು ನಿರಾಳರಾದರೂ ಮನಸ್ಸಿನಲ್ಲಿ ಸ್ವಲ್ಪ ಭಯ ಇದ್ದೇ ಇತ್ತು.

ದೀಪಕ್‌, ಆರಾಧನಾ ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಜಾತಕಗಳು ಸರಿ ಹೊಂದದಿದ್ದರೂ ಇಬ್ಬರೂ ಮದುವೆಯಾಗಲು ಆಗಲೇ ನಿಶ್ಚಯಿಸಿದ್ದರು. ನಿಶ್ಚಿತಾರ್ಥದ ದಿನ ಇಬ್ಬರನ್ನು ಕೂಡಿಸಿ ಹೋಮ ಮಾಡಿಸಿ ನಂತರ ನಿಶ್ಚಿತಾರ್ಥವನ್ನು ನೆರವೇರಿಸಿದರು. ಎರಡು ತಿಂಗಳ ನಂತರ ಮದುವೆ ಮುಹೂರ್ತವನ್ನು ಇಟ್ಟುಕೊಂಡರು.

ಮದುವೆ ಶಾಪಿಂಗ್‌ ಹೆಸರಿನಲ್ಲಿ ದೀಪಕ್‌ ಮತ್ತು ಆರಾಧನಾ ಇನ್ನಷ್ಟು ಕ್ಲೋಸ್‌ ಆದರು. ಮದುವೆ ಮುಹೂರ್ತದ ಸಮಯ ಬಂದೇಬಿಟ್ಟಿತು. ಮದುವೆ ವಿಜೃಂಭಣೆಯಿಂದ ನೆರವೇರಿತು.

ಮದುವೆಯ ನಂತರ ಇಬ್ಬರು ಉದ್ಯೋಗದಲ್ಲಿ ಇದ್ದುದರಿಂದ ಹೊಸ ಸಂಸಾರದಲ್ಲಿ ಬ್ಯುಸಿ ಆಗಿದ್ದರು. ಆದರೂ ಇಬ್ಬರ ಮಧ್ಯೆ ಅನುಬಂಧ ಹೆಚ್ಚಾಯಿತು. ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಹತ್ತಿರವಾದರೂ, ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದ ಕಾರಣ ಮದುವೆಯಾದಾಗಲೇ ಬೇಗ ಮಗು ಬೇಡವೆಂದುಕೊಡಿದ್ದರು. ಈ ವಿಷಯವಾಗಿ ಮನೆಯವರು ಎಷ್ಟೇ ಹೇಳಿದರೂ ಕೇಳಲಿಲ್ಲ. ಮೂರು ವರ್ಷದ ನಂತರ ಅನುರಾಧಾ ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದಳು. ಈಗ ಅವರ ಮದುವೆಯಾಗಿ 12 ವರ್ಷಗಳು ಕಳೆದಿದ್ದವು. ದೀಪಕ್‌ ಆರಾಧನಾ ಇಬ್ಬರೂ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಕೆಲವೊಮ್ಮೆ ಚಿಕ್ಕ ಚಿಕ್ಕ ಪರಿಹಾರಗಳು ನಮ್ಮ ಜೀವನವನ್ನು ಸರಿಪಡಿಸುತ್ತವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ