– ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರ ತಾಯಿ ರತ್ನಕಾಂತಿ ಶೆಟ್ಟಿ ಅವರು ನಿಧನರಾಗಿದ್ದಾರೆ. ತಾಯಿಯ ಅಗಲಿಕೆಯಿಂದ ತೀವ್ರ ದುಃಖಿತರಾಗಿರುವ ಗುರುಕಿರಣ್, ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ಪ್ರೀತಿಯ ತಾಯಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.
ತಮ್ಮ ತಾಯಿಯ ನಿಧನದ ಸುದ್ದಿಯನ್ನು ಹಂಚಿಕೊಂಡಿರುವ ಗುರುಕಿರಣ್, ‘ನನ್ನ ಪ್ರೀತಿಯ ತಾಯಿ ರತ್ನಕಾಂತಿ ಶೆಟ್ಟಿ ಅವರು ನಿಧನರಾಗಿದ್ದಾರೆ ಎಂಬ ಹೃದಯವಿದ್ರಾವಕ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇನೆ. ಜೀವನದಲ್ಲಿ ಏನೇ ಆಗಿದ್ದರೂ, ಏನೇ ಸಾಧಿಸಿದ್ದರೂ ಅದಕ್ಕೆಲ್ಲಾ ನನ್ನ ತಾಯಿಯೇ ಕಾರಣ’ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ಗುರುಕಿರಣ್ ಅವರ ಈ ಪೋಸ್ಟ್ ಕಂಡ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಹಾಗೂ ಆತ್ಮೀಯರು ಕಂಬನಿ ಮಿಡಿದಿದ್ದಾರೆ. ತಾಯಿ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿ ಗುರುಕಿರಣ್ ಕುಟುಂಬಕ್ಕೆ ದೊರೆಯಲಿ ಎಂದು ಹಲವರು ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.
ಕನ್ನಡ ಚಿತ್ರರಂಗದ ಟ್ರೆಂಡ್ ಸೆಟ್ಟರ್ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿರುವ ಗುರುಕಿರಣ್, 90ರ ದಶಕದ ಕೊನೆಯಲ್ಲಿ ‘ಎ’ ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ‘ಉಪೇಂದ್ರ’, ‘ಆಪ್ತಮಿತ್ರ’, ‘ಅಪ್ಪು’, ‘ಜೋಗಿ’ ಸೇರಿದಂತೆ ಹಲವು ಸೂಪರ್‌ಹಿಟ್ ಚಿತ್ರಗಳಿಗೆ ವಿಭಿನ್ನ ಹಾಗೂ ಎನರ್ಜಿಟಿಕ್ ಸಂಗೀತ ನೀಡುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಸಂಗೀತ ನಿರ್ದೇಶಕರಾಗಿ ಮಾತ್ರವಲ್ಲದೆ ಗಾಯಕ ಹಾಗೂ ನಟನಾಗಿಯೂ ಕನ್ನಡಿಗರ ಮನಗೆದ್ದಿರುವ ಗುರುಕಿರಣ್, ರಾಜ್ಯ ಸರ್ಕಾರಿ ಪ್ರಶಸ್ತಿ ಸೇರಿದಂತೆ ಹಲವು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರ ಈ ಯಶಸ್ಸಿನ ಪಯಣದಲ್ಲಿ ತಾಯಿ ರತ್ನಕಾಂತಿ ಶೆಟ್ಟಿ ಅವರ ಬೆಂಬಲ ಮತ್ತು ಪ್ರೋತ್ಸಾಹ ದೊಡ್ಡ ಶಕ್ತಿಯಾಗಿತ್ತು. ಇದೀಗ ಆ ಶಕ್ತಿಯನ್ನೇ ಕಳೆದುಕೊಂಡಿರುವ ಗುರುಕಿರಣ್‌ಗೆ ಚಿತ್ರರಂಗ ಹಾಗೂ ಅಭಿಮಾನಿ ಬಳಗ ಧೈರ್ಯ ತುಂಬುತ್ತಿದೆ.





