“ಮಾನವ ಕಳ್ಳಸಾಗಣೆ ವಿರೋಧಿ ಮಸೂದೆಯನ್ನು ರಚಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದರು”
ಸೋಶಿಯಲ್ ಇಂಪ್ಯಾಕ್ಟ್ ಐಕಾನ್ ಅವಾರ್ಡ್
ಕೀರ್ತಿ ಜಯಕುಮಾರ್ ಒಬ್ಬ ಸಾಮಾಜಿಕ ಕಾರ್ಯಕರ್ತೆ, ಕಲಾವಿದೆ, ಉದ್ಯಮಿ ಹಾಗೂ ಲೇಖಕಿ. 2013ರಲ್ಲಿ `ರೆಡ್ ಎಲಿಫೆಂಟ್ ಫೌಂಡೇಶನ್’ನ್ನು ಸ್ಥಾಪಿಸಿದರು. ಈ ಸಂಸ್ಥೆಯು ಒಂದು ಯುವ ನೇತೃತ್ವದ ಶಾಂತಿ ನಿರ್ಮಾಣದ ಉಪಕ್ರಮವಾಗಿದ್ದು, ವಕಾಲತ್ತು ವಹಿಸುವುದು, ಕಥೆ ಹೇಳುವುದು, ತಂತ್ರಜ್ಞಾನ ಮತ್ತು ಡಿಜಿಟಲ್ ಮಾಧ್ಯಮದ ಮೂಲಕ ಲಿಂಗ ಸಮಾನತೆ, ಶಾಂತಿ ಮತ್ತು ಸಾಮಾಜಿಕ ನ್ಯಾಯದ ಮೇಲೆ ಬೆಳಕು ಚೆಲ್ಲುತ್ತದೆ.
ಕೀರ್ತಿ ಜಯಕುಮಾರ್ 1987ರ ಡಿಸೆಂಬರ್ 15ರಂದು ಬೆಂಗಳೂರಿನಲ್ಲಿ ಜನಿಸಿದರು. ಚೆನ್ನೈನ ಸ್ಕೂಲ್ ಆಫ್ ಎಕ್ಸಿನ್ಸ್ ನ ಲಾದಿಂದ ಕಾನೂನು ಪದವಿ ಪಡೆದರು. ಹಾಗೂ ಕೋಸ್ಟರಿಕಾದ ಯೂನಿವರ್ಸಿಟಿ ಫಾರ್ ಪೀಸ್ ನಿಂದ ಶಾಂತಿ ಅಧ್ಯಯನ ಮತ್ತು ಸಂಘರ್ಷ ಸಮಾಧಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಕೀರ್ತಿ ಕಾನೂನು ಪದವಿ ಜೊತೆಗೆ `ಶಾಂತಿ ಮತ್ತು ಸಂಘರ್ಷ ಅಧ್ಯಯನ’ದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಮ್ಮ ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದ ಕೀರ್ತಿ ಜಯಕುಮಾರ್ ಗೆ ಅವರ ತಾಯಿಯೇ ಎಲ್ಲದಕ್ಕೂ ಪ್ರೋತ್ಸಾಹದಾಯಕಿ ಆಗಿದ್ದರು.
“ನಮ್ಮ ತಾಯಿ ನನ್ನ ಕನಸುಗಳನ್ನು ನನಸಾಗಿಸಿಕೊಳ್ಳಲು ಸದಾ ಸ್ಛೂರ್ತಿ ಹಾಗೂ ಪ್ರೋತ್ಸಾಹ ನೀಡುತ್ತಾರೆ,” ಎಂದು ಹೇಳಿದ್ದಾರೆ.
ಕೀರ್ತಿ ಜಯಕುಮಾರ್ `ಸಾಹಸ್’ ಎಂಬ ಜಿಪಿಎಸ್ ಸಕ್ರಿಯಗೊಳಿಸುವ ವೆಬ್ ಮತ್ತು ಮೊಬೈಲ್ ಅಪ್ಲಿಕೇಶನ್ ನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಮಹಿಳೆಯರು ಹಿಂಸೆ, ಅತ್ಯಾಚಾರದಿಂದ ಪಾರಾಗಲು ಮತ್ತು ಸಹಾಯ ಪಡೆಯಲು ಸಹಕಾರಿಯಾಗಿದೆ. ಈ ಅಪ್ಲಿಕೇಶನ್ 197 ದೇಶಗಳಲ್ಲಿ ಲಭ್ಯವಿದ್ದು, ಇದು ಮಹಿಳೆಯರಿಗೆ ವೈದ್ಯಕೀಯ, ಕಾನೂನು ಮತ್ತು ಇತರ ರೀತಿಯ ಸಹಾಯವನ್ನು ಒದಗಿಸುತ್ತದೆ.
“ಮಹಿಳೆಯರನ್ನು ಸಬಲೀಕರಣಗೊಳಿಸುವುದು ಮತ್ತು ಅವರ ಹಕ್ಕುಗಳಿಗಾಗಿ ಹೋರಾಡಲು ಅವರನ್ನು ಪ್ರೇರೇಪಿಸುವುದು ನನ್ನ ಗುರಿ. ಮಹಿಳೆಯರಿಗೆ ತಮ್ಮ ಜೀವನವನ್ನು ಬದಲಾಯಿಸಲು ಧೈರ್ಯವನ್ನು ನೀಡಲು ನಾನು ಬಯಸುತ್ತೇನೆ,” ಎನ್ನುತ್ತಾರೆ ಕೀರ್ತಿ ಜಯಕುಮಾರ್.
ಮುಖ್ಯ ಕೃತಿಗಳು ಮತ್ತು ಕೊಡುಗೆಗಳು
ಮಹಿಳೆಯರ ಕಲ್ಯಾಣಕ್ಕಾಗಿ `ಸಾಹಸ್’ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಾಗಿದೆ.
112ಕ್ಕೂ ಹೆಚ್ಚು ಕಾರ್ಯಾಗಾರಗಳನ್ನು ನಡೆಸಿ, 3500ಕ್ಕೂ ಹೆಚ್ಚು ಮಕ್ಕಳು ಮತ್ತು ಯುವ ಜನತೆಗೆ ಲಿಂಗ ಹಾಗೂ ಶಾಂತಿಯ ಕುರಿತು ಶಿಕ್ಷಣ ನೀಡಿದ್ದಾರೆ.
ನ್ಯಾಯ ಮತ್ತು ಸಮಾನತೆಯಂತಹ ವಿಷಯಗಳ ಕುರಿತು ಉಪನ್ಯಾಸ ಹಾಗೂ ಕವಿತೆಗಳನ್ನು ಪ್ರಕಟಿಸಿದ್ದಾರೆ.
ವಿಶ್ವಸಂಸ್ಥೆಯ ಸಹಯೋಗದಲ್ಲಿ ಆನ್ ಲೈನ್ ಸ್ವಯಂಸೇವಕ ಕಾರ್ಯಕ್ರಮಗಳ ಮೂಲಕ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ್ದಾರೆ.
ಪ್ರಶಸ್ತಿ ಹಾಗೂ ಪುರಸ್ಕಾರಗಳು
ಸ್ವಯಂ ಸೇವಕ ಕೆಲಸಕ್ಕಾಗಿ ಆಗಿನ ಅಧ್ಯಕ್ಷ ಬರಾಕ್ ಒಬಾಮಾರಿಂದ ಯುಎಸ್ ಅಧ್ಯಕ್ಷೀಯ ಸೇವಾ ಪ್ರಶಸ್ತಿ (2012).
ಯು.ಎನ್. ಆನ್ ಲೈನ್ ವಾಲೆಂಟಿಯರ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಮೂರು ಬಾರಿ ಪಡೆದಿದ್ದಾರೆ.
ವರ್ಷದ ಅತ್ಯುತ್ತಮ ಮಹಿಳಾ ಸಾಧಕಿ (2018) ಪ್ರಶಸ್ತಿ.
ಫೆಬ್ರವರಿ 2018ರಲ್ಲಿ ಫೇಸ್ ಬುಕ್ ಭಾರತದ 6 ಮಹಿಳೆಯರಲ್ಲಿ ಒಬ್ಬರಾಗಿದ್ದರು.
ಶ್ವೇತಭವನದಲ್ಲಿ ನಡೆದ ಯುನೈಟೆಡ್ ಸ್ಟೇಟ್ ಆಫ್ ಅಮೆರಿಕಾ ಮಹಿಳಾ ಶೃಂಗಸಭೆಗೆ (2016) ಆಹ್ವಾನ.
ನವದೆಹಲಿಯಲ್ಲಿ ಇವರು ಅಧ್ಯಕ್ಷ ಒಬಾಮಾರವರ ಟೌನ್ ಹಾಲ್ ಗೆ (2018) ಆಹ್ವಾನ ನೀಡಲಾಗಿತ್ತು.
ಕೀರ್ತಿರವರ ನಾಯಕತ್ವ ಲಿಂಗ ಸಮಾನತೆ ಮತ್ತು ಶಾಂತಿ ನಿರ್ಮಾಣದ ಕಡೆಗೆ ಮನಸ್ಥಿತಿಗಳಲ್ಲಿ ಬದಲಾವಣೆ ತಂದಿದೆ. ರೆಡ್ ಎಲಿಫೆಂಟ್ ಫೌಂಡೇಶನ್ ಮೂಲಕ ಕೀರ್ತಿ ಜಯಕುಮಾರ್ ರ ಕೆಲಸ ಲಿಂಗ ಸಮಾನತೆ ಮತ್ತು ಶಾಂತಿಯನ್ನು ಉತ್ತೇಜಿಸಲು ಕಾನೂನು ಜ್ಞಾನ, ತಂತ್ರಜ್ಞಾನ ಮತ್ತು ಕಥೆ ಹೇಳುವಿಕೆಯನ್ನು ಸಂಯೋಜಿಸುವ ಸಮರ್ಪಿತ ಕ್ರಿಯಾಶೀಲತೆಗೆ ಒಂದು ಉದಾಹರಣೆಯಾಗಿದೆ. ಕೀರ್ತಿ ಜಯಕುಮಾರ್ ರ ಕಥೆಯು ಮಹಿಳೆ ತನ್ನ ಕನಸುಗಳನ್ನು ಹೇಗೆ ನನಸಾಗಿಸಬಹುದು ಮತ್ತು ಸಮಾಜದಲ್ಲಿ ಬದಲಾವಣೆ ಹೇಗೆ ತರಬಹುದು ಎಂಬುದಕ್ಕೆ ಪ್ರೇರಣೆಯಾಗಿದೆ. ಅವರು ಕಥೆಯ ಮೂಲಕ ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಕಥೆ ಮುಂದಿನ ಪೀಳಿಗೆಗೆ ಸ್ಛೂರ್ತಿದಾಯಕವಾಗಿದೆ.
– ಗರಿಮಾ ಪಂಕಜ್





