ಬೆಂಗಳೂರಿನಲ್ಲಿ ಆಹಾರ ಸುರಕ್ಷತಾ ಇಲಾಖೆ ನಡೆಸಿದ ಮೂರು ದಿನಗಳ ವಿಶೇಷ ಕಾರ್ಯಾಚರಣೆಯಲ್ಲಿ 60 ತ್ರೀ ಸ್ಟಾರ್ ಹಾಗೂ ಫೈವ್ ಸ್ಟಾರ್ ಹೋಟೆಲ್‌ಗಳನ್ನು ತಪಾಸಣೆ ನಡೆಸಲಾಗಿದೆ.

ತಪಾಸಣೆ ಸಂದರ್ಭ ಕೊಳೆತ ಮಾಂಸ, ಅವಧಿ ಮೀರಿದ ಆಹಾರ ಪದಾರ್ಥಗಳು, ಕೊಳೆತ ತರಕಾರಿಗಳು, ಹಲವು ಬಾರಿ ಬಳಸಿದ ಅಡುಗೆ ಎಣ್ಣೆ ಸೇರಿದಂತೆ ಹಲವು ಆಹಾರ ಸುರಕ್ಷತಾ ನಿಯಮ ಉಲ್ಲಂಘನೆಗಳು ಪತ್ತೆಯಾಗಿವೆ. ಅಲ್ಲದೆ, ಒಂದು ವರ್ಷಕ್ಕೂ ಹೆಚ್ಚು ಅವಧಿ ಮೀರಿರುವ ಮಾಂಸಾಹಾರ ಉತ್ಪನ್ನಗಳೂ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆಯ ಸಂದರ್ಭ ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 60 ತ್ರೀ-ಸ್ಟಾರ್ ಮತ್ತು ಫೈವ್-ಸ್ಟಾರ್ ಹೋಟೆಲ್‌ಗಳನ್ನು ತಪಾಸಣೆ ನಡೆಸಲಾಗಿದೆ. ಒಟ್ಟು 77 ಆಹಾರ ಮಾದರಿಗಳನ್ನು ಸಂಗ್ರಹಿಸಿ, ಗುಣಮಟ್ಟ ಹಾಗೂ ಆಹಾರ ಸುರಕ್ಷತಾ ಮಾನದಂಡಗಳ ಪಾಲನೆಯನ್ನು ಪರಿಶೀಲಿಸಲು ಆಹಾರ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.

ವಿವಿಧ ಹೋಟೆಲ್‌ಗಳು ಮತ್ತು ಆಹಾರ ಮಳಿಗೆಗಳಿಂದ ಚಿಕನ್, ಮಾಂಸ, ಮೀನು, ಬ್ರೆಡ್, ಮೇಯನೇಸ್, ಅಡುಗೆ ಎಣ್ಣೆ, ಮೊಸರು, ಬೇಳೆ, ಕಡಲೆ, ಕೊತ್ತಂಬರಿ, ಚಟ್ನಿ ಹಾಗೂ ಮ್ಯಾರಿನೇಟ್ ಮಾಡಲಾದ ಆಹಾರ ಉತ್ಪನ್ನಗಳ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.

ತಪಾಸಣೆ ಸಂದರ್ಭ ಎಫ್​ಎಸ್​ಎಸ್​ಎಐ ನಿಯಮಗಳಿಗೆ ಅನುಗುಣವಾಗಿರದ ಲೇಬಲಿಂಗ್, ತಪ್ಪು ಬ್ರ್ಯಾಂಡಿಂಗ್, ಅವಧಿ ಮೀರಿದ ಆಹಾರ ಉತ್ಪನ್ನಗಳ ಸಂಗ್ರಹ, ಮಾಂಸ–ಮೀನು–ಕೋಳಿ ಮಾಂಸದ ಅಸಮರ್ಪಕ ಸಂಗ್ರಹಣೆ, ಅಸ್ವಚ್ಛ ಆಹಾರ ನಿರ್ವಹಣೆ, ತರಕಾರಿಗಳಲ್ಲಿ ಶಿಲೀಂಧ್ರ ಬೆಳವಣಿಗೆ ಹಾಗೂ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರ ಪದಾರ್ಥಗಳ ಅಸಮರ್ಪಕ ಪ್ರತ್ಯೇಕ ಸಂಗ್ರಹಣೆ ಸೇರಿದಂತೆ ಹಲವು ಉಲ್ಲಂಘನೆಗಳು ಕಂಡುಬಂದಿವೆ.

ಈ ಸಂಬಂಧ ಹೋಟೆಲ್‌ಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೆ, ಕಾನೂನು ಪ್ರಕಾರ ಮುಂದಿನ ಕ್ರಮಕ್ಕಾಗಿ ಸಂಬಂಧಪಟ್ಟ ತೀರ್ಪು ನೀಡುವ ಅಧಿಕಾರಿಗಳ ಮುಂದೆ ಪ್ರಕರಣ ದಾಖಲಿಸುವಂತೆ ಶಿಫಾರಸು ಮಾಡಲಾಗಿದೆ.

ವಶಪಡಿಸಿಕೊಂಡ ಆಹಾರ ಪದಾರ್ಥಗಳು: ಮಟನ್/ಚಿಕನ್/ಮೀನು: 640 ಕೆ.ಜಿ.

ತಪ್ಪು ಲೇಬಲಿಂಗ್​: ತಯಾರಿಕಾ ದಿನಾಂಕ ಅಥವಾ ಅವಧಿ ಮುಕ್ತಾಯ ದಿನಾಂಕ ನಮೂದಿಸದಿರುವುದು. ಒಂದು ವರ್ಷಕ್ಕೂ ಹೆಚ್ಚು ಅವಧಿ ಮೀರಿರುವುದು.

ತರಕಾರಿಗಳು: 276 ಕೆ.ಜಿ. — ಕೊಳೆತ ಹಾಗೂ ಶಿಲೀಂಧ್ರ ಬಾಧಿತ

ಹಾಲು/ಮೊಸರು: 45 ಲೀಟರ್ — ಅವಧಿ ಮೀರಿದ

ಬೇಕರಿ ಉತ್ಪನ್ನಗಳು: 12 ಕೆ.ಜಿ. — ಅವಧಿ ಮೀರಿದ ಕೇಕ್ ಸೇರಿದಂತೆ ಇತರ ಉತ್ಪನ್ನಗಳು

ತಪಾಸಣೆ ವೇಳೆ ವಶಪಡಿಸಿಕೊಂಡ ಅವಧಿ ಮೀರಿದ ಹಾಗೂ ಆಹಾರ ಸುರಕ್ಷತಾ ದೃಷ್ಟಿಯಿಂದ ಅಸುರಕ್ಷಿತ ಆಹಾರ ಪದಾರ್ಥಗಳನ್ನು ನಿಗದಿತ ನಿಯಮಾವಳಿಗಳ ಪ್ರಕಾರ ವಿಲೇವಾರಿ ಮಾಡಲಾಗಿದೆ.

ಅಂತಾರಾಷ್ಟ್ರೀಯ ಆಹಾರ ಸರಪಳಿ ಸಂಸ್ಥೆಗಳ ಮೇಲೂ ನಿಗಾ: KFC, McDonald’s ಮತ್ತು Subway ಸೇರಿದಂತೆ ಅಂತಾರಾಷ್ಟ್ರೀಯ ಆಹಾರ ಸರಪಳಿ ಸಂಸ್ಥೆಗಳ ಮಳಿಗೆಗಳನ್ನೂ ತಪಾಸಣೆಗೆ ಒಳಪಡಿಸಲಾಗಿದೆ.

ಬ್ರಿಗೇಡ್ ರಸ್ತೆಯ McDonald’s ಮಳಿಗೆಯಲ್ಲಿ ತಪಾಸಣೆ ನಡೆಸಿದ ವೇಳೆ, ಬಳಸಿದ ಫ್ರೈಯಿಂಗ್ ಎಣ್ಣೆಯ ಸಂಸ್ಕರಣೆ/ಶುದ್ಧೀಕರಣಕ್ಕೆ ಮೆಗ್ನೀಸಿಯಂ ಸಲ್ಫೈಟ್ ಬಳಸುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ