ಖ್ಯಾತ ನಟ ಪ್ರಕಾಶ್ ರಾಜ್ ಅವರಿಗೆ ಚುನಾವಣಾ ಆಯೋಗ ದೊಡ್ಡ ಶಾಕ್ ನೀಡಿದ್ದು, ಬೆಂಗಳೂರಿನ ಮತದಾರರ ಪಟ್ಟಿಯಿಂದ ಅವರ ಹೆಸರನ್ನು ಕೈಬಿಡಲಾಗಿದೆ. ಈ ಕುರಿತು ನಟ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ವಿಡಿಯೋ ಹಂಚಿಕೊಂಡಿರುವ ಅವರು, ‘ಎಸ್‌ಐಆರ್ ಬಳಿಕ ಬೆಂಗಳೂರಿನ ಮತದಾರರ ಪಟ್ಟಿಯಿಂದ ನನ್ನ ಹೆಸರು ಅಳಿಸಲಾಗಿದೆ. ನನ್ನ ಮತದಾನದ ಹಕ್ಕನ್ನು ಮರಳಿ ಪಡೆಯಲು ಮುಂದಿನ ಪ್ರಕ್ರಿಯೆ ಏನು ಎಂಬುದನ್ನು ನೋಡುತ್ತೇನೆ ಎಂದು ಹೇಳಿದ್ದಾರೆ.
“ಸ್ನೇಹಿತರೇ, ನಿಮಗೆ ಒಂದು ಜೋಕ್ ಹೇಳಬೇಕು. ಎಸ್‌ಐಆರ್ ಬಳಿಕ ಬೆಂಗಳೂರಿನ ಮತದಾರರ ಪಟ್ಟಿಯಿಂದ ಮತದಾನದ ಹಕ್ಕು ಕಳೆದುಕೊಂಡಿರುವ 65 ಲಕ್ಷ ಮತದಾರರಲ್ಲಿ ನಾನೂ ಒಬ್ಬನಾಗಿದ್ದೇನೆ. ಚೆನ್ನಾಗಿದೆ ಅಲ್ಲವೇ?...
ನಾನು ಈ ಕ್ಷೇತ್ರದಲ್ಲೇ ಹುಟ್ಟಿದ್ದೇನೆ. ಇಲ್ಲೇ ವಾಸಿಸಿದ್ದೇನೆ. ಇಲ್ಲಿಯೇ ಶಾಲೆ, ಕಾಲೇಜು ಹಾಗೂ ರಂಗಭೂಮಿಯಲ್ಲಿ ನಟಿಸಿದ್ದೇನೆ. ನಿಮ್ಮ ಮಾಹಿತಿಗಾಗಿ ಹೇಳುವುದಾದರೆ, ಇದೇ ಕ್ಷೇತ್ರದಿಂದ ನಾನು ಲೋಕಸಭೆ ಅಭ್ಯರ್ಥಿಯೂ ಆಗಿದ್ದೆ.
ಇದು ಒಳ್ಳೆಯ ಜೋಕ್. ಆಟ ಶುರುವಾಗಿದೆ. ನನ್ನ ಮತದಾರರ ಗುರುತಿನ ಚೀಟಿಯನ್ನು ಮರಳಿ ಪಡೆಯಲು ಯಾವ ಪ್ರಕ್ರಿಯೆ ಅನುಸರಿಸಬೇಕು ಎಂಬುದನ್ನು ನೋಡೋಣ. ಆಟ ಮುಂದುವರಿಯಲಿ ಎಂದು ಹೇಳಿದ್ದಾರೆ.
ಕೆಲವರು ತಮಗೆ ಮತ ಹಾಕುವುದಿಲ್ಲ ಎಂಬ ಕಾರಣಕ್ಕೆ ಕೆಲವು ನಾಗರಿಕರ ಮತದಾನದ ಹಕ್ಕನ್ನು ನಿರಾಕರಿಸಲು ಅಧಿಕಾರವನ್ನು ಬಳಸಬಹುದು. ಆದರೆ, ಅಂತಿಮವಾಗಿ ಅಧಿಕಾರದಿಂದ ಕೆಳಗಿಳಿಸುವ ಜನರ ಶಕ್ತಿಯನ್ನು ತಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.





