ಉದ್ಯೋಗವೆಂದರೆ ಕೇವಲ ಸಂಬಳಕ್ಕಾಗಿ ಕೆಲಸ ಮಾಡುವುದಲ್ಲ.  ತಾನು ಕೆಲಸ ಮಾಡುವ ಸಂಸ್ಥೆಯ ಅವಿಭಾಜ್ಯ ಅಂಗವಾಗಿ ಬೆಳೆಯುವುದು.

ಉದ್ಯೋಗ ಬದಲಾಯಿಸುವುದು ಸುಲಭ. ಆದರೆ ಒಂದು ಸಂಸ್ಥೆಯ ಬದಲಾವಣೆಯ ಭಾಗವಾಗುವುದು ದೊಡ್ಡ ಸವಾಲು

ಫ್ಲಿಪ್‌ಕಾರ್ಟ್‌ನಂತಹ ಕಾರ್ಪೊರೇಟ್ ಸಂಸ್ಥೆಗಳ ವೇಗದ ವಾತಾವರಣದಿಂದ ರೇವಾ ವಿಶ್ವವಿದ್ಯಾಲಯದ ಮಾಹಿತಿ ತಂತ್ರಜ್ಞಾನ ವಿಭಾಗದ ನಿರ್ದೇಶಕರಾಗಿ ಸೇರಿ ಮೂರು ವರ್ಷಗಳು 2026  August 10ಕ್ಕೆ ಪೂರ್ಣಗೊಂಡಿವೆ. ಹಿಂದಿರುಗಿ ನೋಡಿದಾಗ, ಇದು ಕೇವಲ ಉದ್ಯೋಗ ಬದಲಾವಣೆಯಾಗಿರಲಿಲ್ಲ; ವಿಭಿನ್ನ ಕ್ಷೇತ್ರ, ವಿಭಿನ್ನ ಸವಾಲುಗಳು, ವಿಭಿನ್ನ ಜನರು ಮತ್ತು ಅನೇಕ ಹೊಸ ಅನುಭವಗಳೊಂದಿಗೆ ಸಾಗಿದ ಒಂದು ಅರ್ಥಪೂರ್ಣ ಪಯಣ.

ಯಾವುದೇ ಸಂಸ್ಥೆಗೆ ಕೆಲಸಕ್ಕೆ ಸೇರಿದಾಗ, ನಾನು ಸಂಬಳಕ್ಕಾಗಿ ಕೆಲಸ ಮಾಡುತ್ತಿದ್ದೇನೆ ಎಂಬ ಭಾವನೆ ಇರಬಾರದು. ತನ್ನಲ್ಲಿರುವ ಕೌಶಲ್ಯವನ್ನು ಬಳಸಿಕೊಳ್ಳಲು ಸಂಸ್ಥೆಯೂ ಒಂದು ವೇದಿಕೆಯನ್ನು ಬಯಸುತ್ತದೆ. ಅದೇ ಸಮಯದಲ್ಲಿ ಸಂಸ್ಥೆಯ ಬೆಳವಣಿಗೆಗೂ ಕೌಶಲ್ಯವಂತ ವ್ಯಕ್ತಿಗಳ ಅಗತ್ಯವಿರುತ್ತದೆ. ಹೀಗಾಗಿ ಉದ್ಯೋಗಿ ಮತ್ತು ಸಂಸ್ಥೆ ಪರಸ್ಪರ ಬೆಳೆಯುವ Win-Win Situation ನಿರ್ಮಾಣವಾಗಬೇಕು. ಈ ಮೂರು ವರ್ಷಗಳಲ್ಲಿ ನಾನು ಇದೇ ಮನೋಭಾವದಿಂದ ಕೆಲಸ ಮಾಡಲು ಪ್ರಯತ್ನಿಸಿದ್ದೇನೆ.

ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥನಾಗಿ ಸೇರಿಕೊಂಡರೂ, ನನ್ನ ಜವಾಬ್ದಾರಿಯನ್ನು IT ವಿಭಾಗಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳದೆ, ಸಾಧ್ಯವಾದಷ್ಟು ಇತರ ವಿಭಾಗಗಳಿಗೂ ನನ್ನ ಅನುಭವ ಮತ್ತು ಸಾಮರ್ಥ್ಯದ ಮೂಲಕ ಕೊಡುಗೆ ನೀಡುವ ಮೂಲಕ ಸಂಸ್ಥೆಯ ಅವಿಭಾಜ್ಯ ಅಂಗವಾಗಿರುವ ತೃಪ್ತಿ ನನಗಿದೆ.

ಕಾರ್ಪೊರೇಟ್ ಜಗತ್ತಿನಿಂದ ಶಿಕ್ಷಣ ಕ್ಷೇತ್ರದತ್ತ

ಖಾಸಗಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಕೆಲಸ ಮಾಡುವಾಗ ವೇಗ, ಕಾರ್ಯಕ್ಷಮತೆ, ಪ್ರಕ್ರಿಯೆ, ಫಲಿತಾಂಶ ಮತ್ತು ಗ್ರಾಹಕ ತೃಪ್ತಿ ಪ್ರಮುಖ ಮಾನದಂಡಗಳಾಗಿರುತ್ತವೆ. ಒಂದು ಸಮಸ್ಯೆ ಎದುರಾದರೆ ಅದರ ತ್ವರಿತ ಪರಿಹಾರವೇ ಮುಖ್ಯ. ಆದರೆ ವಿಶ್ವವಿದ್ಯಾಲಯದ IT ವ್ಯವಸ್ಥೆಯನ್ನು ನಿರ್ವಹಿಸುವುದು ಸಂಪೂರ್ಣ ವಿಭಿನ್ನ ಅನುಭವ.

ಇಲ್ಲಿ IT ಎನ್ನುವುದು ಕೇವಲ ಕಂಪ್ಯೂಟರ್, ಸರ್ವರ್, ನೆಟ್‌ವರ್ಕ್ ಅಥವಾ Wi-Fi ನಿರ್ವಹಣೆಯಲ್ಲ. ಸಾವಿರಾರು ವಿದ್ಯಾರ್ಥಿಗಳು, ಬೋಧಕ–ಬೋಧಕೇತರ ಸಿಬ್ಬಂದಿ, ಸಂಶೋಧಕರು, ಆಡಳಿತ ವಿಭಾಗಗಳು, ಪರೀಕ್ಷಾ ವ್ಯವಸ್ಥೆಗಳು, ERP, LMS, CCTV, ಡಿಜಿಟಲ್ ವ್ಯವಸ್ಥೆಗಳು, ಸೈಬರ್ ಭದ್ರತೆ, ಡೇಟಾ ಮತ್ತು ದಿನನಿತ್ಯದ ಶೈಕ್ಷಣಿಕ ಚಟುವಟಿಕೆಗಳೊಂದಿಗೆ IT ನೇರವಾಗಿ ಸಂಪರ್ಕ ಹೊಂದಿರುತ್ತದೆ. ಅಂದರೆ, ಇಲ್ಲಿ IT ಒಂದು support function ಮಾತ್ರವಲ್ಲ. ಅದು ಸಂಸ್ಥೆಯ core businessನ ಅವಿಭಾಜ್ಯ ಅಂಗ.

ಮೂರು ವರ್ಷಗಳಲ್ಲಿ ಕಂಡ ದೊಡ್ಡ ಬದಲಾವಣೆ

ಈ ಮೂರು ವರ್ಷಗಳಲ್ಲಿ ಅತ್ಯಂತ ದೊಡ್ಡ ತೃಪ್ತಿ ಎಂದರೆ, IT ಮೂಲಸೌಕರ್ಯವನ್ನು ಕೇವಲ ಸಮಸ್ಯೆ ಬಂದಾಗ ಪರಿಹರಿಸುವ ವ್ಯವಸ್ಥೆಯಿಂದ, ಮುಂದಿನ ದಿನಗಳ ಅಗತ್ಯಗಳನ್ನು ಊಹಿಸಿ ರೂಪಿಸುವ ವ್ಯವಸ್ಥೆಯತ್ತ ಕೊಂಡೊಯ್ಯುವ ಪ್ರಯತ್ನ. ನೆಟ್‌ವರ್ಕ್, Wi-Fi, ಸರ್ವರ್, ಸ್ಟೋರೇಜ್, ಬ್ಯಾಕಪ್, ಸೈಬರ್ ಸೆಕ್ಯುರಿಟಿ, ಡೆಸ್ಕ್‌ಟಾಪ್, ಸಾಫ್ಟ್‌ವೇರ್, CCTV, ಡಿಜಿಟಲ್ ಸೇವೆಗಳು ಮತ್ತು asset management ಮುಂತಾದ ಕ್ಷೇತ್ರಗಳಲ್ಲಿ ಹಂತ ಹಂತವಾಗಿ ಸುಧಾರಣೆ ತರಲು ಪ್ರಯತ್ನಿಸಲಾಗಿದೆ. ಹಳೆಯ ಮತ್ತು unmanaged network infrastructure ಅನ್ನು ಬದಲಿಸಿ manageable switches, PoE infrastructure, VLAN segmentation, structured racks ಹಾಗೂ ಉತ್ತಮ network visibility ಕಡೆಗೆ ಸಾಗುವುದು ಈ ಪಯಣದ ಪ್ರಮುಖ ಭಾಗವಾಗಿದೆ. ಅದೇ ರೀತಿ, ಹಳೆಯ ತಲೆಮಾರಿನ ಕಂಪ್ಯೂಟರ್‌ಗಳನ್ನು ಹಂತ ಹಂತವಾಗಿ ಬದಲಿಸಿ, ಹೊಸ generation computing environment ನಿರ್ಮಿಸುವ ಪ್ರಯತ್ನವೂ ನಡೆದಿದೆ.

Problem Solverನಿಂದ Technology Plannerವರೆಗೆ

ಈ ಮೊದಲಿನ ದಿನಗಳಲ್ಲಿ IT ವಿಭಾಗದ ಮುಖ್ಯ ಕೆಲಸವೆಂದರೆ ಸಮಸ್ಯೆ ಬಂದಾಗ ಪರಿಹರಿಸುವುದು. ಆದರೆ ಈಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಸಮಸ್ಯೆ ಬಂದಾಗ ಕೇವಲ ಸಮಯಸ್ಯೆ ಪರಿಹರಿಸುವುದಷ್ಟೇ ಅಲ್ಲದೇ, ಸಮಸ್ಯೆ ಏಕೆ ಬಂತು? ಎಂಬುದರ ಜೊತೆಗೆ ಮುಂದೆ ಆ ರೀತಿಯ ಸಮಸ್ಯೆ ಬಾರದಂತೆ ಏನು ಮಾಡಬೇಕು? ಎಂಬ ಪ್ರಶ್ನೆಯೂ ಮುಖ್ಯವಾಗಿದೆ. ಈ ಬದಲಾವಣೆ ಬಹುಶಃ ಈ ಮೂರು ವರ್ಷಗಳ ಅತ್ಯಂತ ದೊಡ್ಡ ಕಲಿಕೆ. ಒಂದು Network/server down ಆದ ನಂತರ ಅದನ್ನು ಸರಿಪಡಿಸುವುದಕ್ಕಿಂತ, redundancy, backup, monitoring ಮತ್ತು disaster recovery ಬಗ್ಗೆ ಮುಂಚಿತವಾಗಿ ಯೋಚಿಸುವುದು ಮುಖ್ಯ. Wi-Fi ಸಮಸ್ಯೆ ಬಂದ ನಂತರ AP ಹೆಚ್ಚಿಸುವುದಕ್ಕಿಂತ, user density, bandwidth, coverage, authentication ಮತ್ತು network architecture ಬಗ್ಗೆ ಸಮಗ್ರವಾಗಿ ಯೋಚಿಸುವುದು ಮುಖ್ಯ. Asset ಕಳೆದುಹೋದ ನಂತರ ಹುಡುಕುವುದಕ್ಕಿಂತ, ಅದರ ಸಂಪೂರ್ಣ lifecycle ಅನ್ನು track ಮಾಡುವ ವ್ಯವಸ್ಥೆ ರೂಪಿಸುವುದು ಮುಖ್ಯ. ಇದೇ IT ನಿರ್ವಹಣೆಯಿಂದ IT leadership ಕಡೆಗಿನ ಬದಲಾವಣೆ.

ಸಂಸ್ಥೆಯ ಅವಿಭಾಜ್ಯ ಅಂಗವಾಗಿ ಬೆಳೆಯುವುದು.

ಅದರ ಮೊದಲ ಸುಂದರ ಅನುಭವ 2023ರ ಸೆಪ್ಟೆಂಬರ್ 5ರ ಶಿಕ್ಷಕರ ದಿನಾಚರಣೆಯ ಸಂದರ್ಭ. ನನ್ನ ವೇಷಭೂಷಣವನ್ನು ಗಮನಿಸಿ ಅದೇ ವರ್ಷದ ಕನ್ನಡ ರಾಜ್ಯೋತ್ಸವದಂದು ಕುವೆಂಪು ರಂಗಮಂದಿರದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದ ನಿರೂಪಣೆಯ ಅವಕಾಶ ದೊರೆಯಿತು. ಇಡೀ ವಿಶ್ವವಿದ್ಯಾಲಯದ ಸಿಬ್ಬಂದಿಗೆ ನನ್ನ ವೈಯಕ್ತಿಕ ಪರಿಚಯವಾಗುವುದರ ಜೊತೆಗೆ, “IT Director ಕೂಡ ಇಷ್ಟು ಸ್ಪಷ್ಟವಾಗಿ ಕನ್ನಡ ಮಾತನಾಡ ಬಲ್ಲರೇ??” ಎಂಬ ಅಚ್ಚರಿಯೂ ಮೂಡಿದ್ದಾಗ, ಆಗ ಮನಸ್ಸಿನಲ್ಲಿ ನಾನೇ ಹೇಳಿಕೊಂಡದ್ದು—ಇದು ಕೇವಲ ಟ್ರೈಲರ್ಸಿನಿಮಾ ಇನ್ನೂ ತುಂಬಾ ಇದೆ!”

ಕನ್ನಡ ಮತ್ತು ಕ್ರಿಕೆಟ್ ನನ್ನ ಅತ್ಯಂತ ಪ್ರೀತಿಯ ವಿಷಯಗಳು. ನಾನು ಕೆಲಸ ಮಾಡಿದ ಕಡೆಗಳಲ್ಲೆಲ್ಲಾ ಕ್ರಿಕೆಟ್ ತಂಡ ಕಟ್ಟಿದಂತೆ, ರೇವಾದಲ್ಲೂ IT ವಿಭಾಗದ ಕ್ರಿಕೆಟ್ ತಂಡವನ್ನು ಕಟ್ಟುವ ಪ್ರಯತ್ನ ಮಾಡಿದೆ. ಮೊದಲ ವರ್ಷವೇ ತಂಡ ಉಪಾಂತ್ಯ (Semies) ತಲುಪಿದ್ದು ಸಂತೋಷದ ಸಂಗತಿ. ಇದರ ಮೂಲಕ ಕ್ರೀಡಾ ವಿಭಾಗದ ಸಹೋದ್ಯೋಗಿಗಳೊಂದಿಗೆ ಉತ್ತಮ ಸ್ನೇಹ ಬೆಳೆದಿತುKhel Khoj ಕಾರ್ಯಕ್ರಮ, ಹೊನಲು ಬೆಳಕಿನ RCL—REVA Corporate Cricket League—ನಲ್ಲಿ ವೀಕ್ಷಕ ವಿವರಣೆಗಾರನಾಗಿ ಭಾಗವಹಿಸುವುದು ಹಾಗೂ ಕೆಲವು ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವುದು ನನ್ನ ವೃತ್ತಿಜೀವನದ ವಿಶಿಷ್ಟ ಅನುಭವಗಳಾಗಿವೆ.

ಅದೇ ರೀತಿ, ಅಯೋಧ್ಯೆಯಲ್ಲಿ ಶ್ರೀರಾಮಲಲ್ಲನ ಭವ್ಯ ಮಂದಿರದಲ್ಲಿ ಪ್ರಾಣಪ್ರತಿಷ್ಠೆಯಾದ ಐತಿಹಾಸಿಕ ಕ್ಷಣವನ್ನು ರೇವಾದ ಎರಡು ಭವ್ಯ ರಂಗಮಂದಿರಗಳಲ್ಲಿ ನೇರ ಪ್ರಸಾರ ಮಾಡುವ ಅವಕಾಶದಿಂದ ಆರಂಭವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಪಯಣ, ನಂತರ ವಿಶ್ವವಿದ್ಯಾಲಯದಲ್ಲಿ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಯಜ್ಞ–ಯಾಗಾದಿಗಳಲ್ಲೂ ಭಾಗವಹಿಸುವ ಅವಕಾಶದವರೆಗೆ ಮುಂದುವರಿಯಿತು. ಇದು ನಿಜಕ್ಕೂ ಲಡ್ಡು ಬಾಯಿಗೆ ಬಂದು ಬಿದ್ದಂತೆ ಅನುಭವ.

ವಿವಿಧ ವಿಭಾಗಗಳ ವಿದ್ಯಾರ್ಥಿಗಳೊಂದಿಗೆ IT ತಂತ್ರಜ್ಞಾನದ ಜೊತೆಗೆ ನಾಡು–ನುಡಿ, ಸಂಸ್ಕೃತಿ ಮತ್ತು ಸಂಸ್ಕಾರಗಳ ಕುರಿತು ವಿಚಾರ ವಿನಿಮಯ ಮಾಡುವ ಅವಕಾಶವೂ ದೊರೆಯಿತು. ಹೀಗಾಗಿ ನನ್ನ ಅನುಭವ IT ವಿಭಾಗಕ್ಕೆ ಮಾತ್ರ ಸೀಮಿತವಾಗದೆ, ನಿಧಾನವಾಗಿ ರೇವಾ ತಂಡದ ಅವಿಭಾಜ್ಯ ಅಂಗವಾಗುವ ಅವಕಾಶವನ್ನು ನೀಡಿತು.

ಕಾರ್ಪೊರೇಟ್ ವಲಯದಿಂದ ವಿಶ್ವವಿದ್ಯಾಲಯಕ್ಕೆ ಬರುತ್ತೇನೆ ಎಂದಾಗ ಹಲವರು ಆಶ್ಚರ್ಯಪಟ್ಟಿದ್ದರು. ಆದರೆ ವಿದ್ಯಾರ್ಥಿಗಳೇ ದೇಶದ ಮುಂದಿನ ಪ್ರಜ್ಞಾವಂತ ಪ್ರಜೆಗಳು. ಅಂತಹ ಯುವಜನರೊಂದಿಗೆ ನನ್ನ ವೃತ್ತಿಜೀವನದ ಮಹತ್ವದ ವರ್ಷಗಳನ್ನು ಕಳೆಯುವ ಅವಕಾಶ ದೈವದತ್ತವಾಗಿ ದೊರೆತಿದೆ ಎಂಬ ಭಾವನೆ ಇಂದಿಗೂ ಹಸಿರಾಗಿದೆ. ಈ ಅವಕಾಶವನ್ನು ಶಕ್ತಿಮೀರಿ ಸದುಪಯೋಗಪಡಿಸಿಕೊಂಡಿರುವ ಸಂತೃಪ್ತಿ ಇದ್ದು, ಮೂರು ವರ್ಷಗಳು ಇಷ್ಟು ಬೇಗ ಕಳೆದು ಹೋಯಿತೇ? ಎನ್ನುವ ಸುಂದರ ಅನುಭವವೂ ಆಗುತ್ತಿದೆ.

ಈ ಪಯಣದಲ್ಲಿ ಸಾಧನೆಗಳಷ್ಟೇ ಅಲ್ಲ, ಸವಾಲುಗಳೂ ಸಾಕಷ್ಟಿವೆ. Corporate environmentನ ವೇಗ, ವಿಶ್ವವಿದ್ಯಾಲಯದ ವಿಭಿನ್ನ ಪ್ರಕ್ರಿಯೆಗಳು, legacy systems, ಬಳಕೆದಾರರ ನಿರೀಕ್ಷೆಗಳು, vendor management, cybersecurity, network, infrastructure—ಇವೆಲ್ಲವೂ ಪ್ರತಿದಿನವೂ ಹೊಸ ಪಾಠ ಕಲಿಸಿವೆ.

ಆದರೆ ಒಂದು ವಿಷಯ ಸ್ಪಷ್ಟವಾಗಿದೆ—IT ಎಂದರೆ ಕೇವಲ technology ಅಲ್ಲ; People + Process + Technologyಗಳ ಸಮನ್ವಯವೇ ನಿಜವಾದ IT leadership.

ಈ ಮೂರು ವರ್ಷಗಳ ಪಯಣದ ಪ್ರತಿಯೊಂದು ಹೆಜ್ಜೆಯಲ್ಲೂ ಬೆನ್ನೆಲುಬಾಗಿ ನಿಂತ ವಿಶ್ವವಿದ್ಯಾಲಯದ ಆಡಳಿತ ವರ್ಗಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಲೇ ಬೇಕಾದದ್ದು ನನ್ನ ಆದ್ಯ ಕರ್ತವ್ಯವಾಗಿದೆ. 

ಯಾವುದೇ ಕಠಿಣ ಪರಿಸ್ಥಿತಿಯಲ್ಲೂ ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ ಎಂದು ಹೇಳಿ ಹಗಲು–ರಾತ್ರಿ ಎನ್ನದೆ ಅಹರ್ನಿಶಿ ದುಡಿಯುತ್ತಿರುವ ನನ್ನ IT ವಿಭಾಗದ ಎಲ್ಲಾ ಸಹೋದ್ಯೋಗಿಗಳಿಗೆ ವಿಶೇಷ ಧನ್ಯವಾದಗಳು.

ಮತ್ತು ನನ್ನ ವೃತ್ತಿಜೀವನದ ಏರಿಳಿತಗಳನ್ನಷ್ಟೇ ಅಲ್ಲ, ನನ್ನ ತಿಕ್ಕಲುತನಗಳನ್ನೂ ಸಹಿಸಿಕೊಂಡು, ಅಗತ್ಯವಿದ್ದಾಗ ತಿದ್ದಿ–ತೀಡಿ ಸರಿಯಾದ ದಾರಿಯಲ್ಲಿ ನಡೆಸುತ್ತಿರುವ ನನ್ನ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ನಾನು ಆಭಾರಿ.

ಮೂರು ವರ್ಷಗಳ ಪಯಣ ಮುಗಿದಿದೆಆದರೆ ಇದು ಅಂತ್ಯವಲ್ಲಇನ್ನಷ್ಟು ಕಲಿಯಲುಇನ್ನಷ್ಟು ಕೊಡುಗೆ ನೀಡಲು ಮತ್ತು ರೇವಾದ ಬೆಳವಣಿಗೆಯೊಂದಿಗೆ ನನ್ನನ್ನೂ ಬೆಳೆಸಿಕೊಳ್ಳಲು ಆರಂಭವಾಗಿರುವ ಮತ್ತೊಂದು ಹೊಸ ಅಧ್ಯಾಯ.

“ರೇವಾ ನನಗೆ ಕೇವಲ ಕೆಲಸ ಮಾಡುವ ಸ್ಥಳವಲ್ಲ; ಕಳೆದ ಮೂರು ವರ್ಷಗಳಲ್ಲಿ ಅದು ನನ್ನ ವೃತ್ತಿಜೀವನದ ಒಂದು ಮಹತ್ವದ ಅಧ್ಯಾಯವಾಗಿ, ನನ್ನ ಅನುಭವಗಳ, ಸಂಬಂಧಗಳ, ಆತ್ಮೀಯತೆಗಳ ಮತ್ತು ಮರೆಯಲಾಗದ ನೆನಪುಗಳ ಅವಿಭಾಜ್ಯ ಭಾಗವಾಗಿದೆ. ಇಲ್ಲಿ ನಾನು ತೋರಿದ ಕಾರ್ಯಕ್ಷಮತೆ, ಕರ್ತವ್ಯನಿಷ್ಠೆ ಮತ್ತು ವೃತ್ತಿಪರತೆ, ನಾನು ಇಲ್ಲಿ ಕೆಲಸ ಮಾಡುವ ಅವಧಿಗೆ ಮಾತ್ರ ಸೀಮಿತವಾಗದೆ, ನಾನು ನಿವೃತ್ತಿಯಾದ ನಂತರವೂ ನನ್ನ ಕೆಲಸದ ಛಾಪು ಉಳಿಯಬೇಕು. ನನ್ನ ನಂತರ ಈ ಜವಾಬ್ದಾರಿ ವಹಿಸಿಕೊಳ್ಳುವವರು ‘ಇದು ನಮ್ಮ ಹಿಂದಿನವರಿಂದ ಬಂದ ಒಂದು ಉತ್ತಮ ಮಾನದಂಡ’ ಎಂದು ಭಾವಿಸಿ ಅದನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವಂತಹ ವಾತಾವರಣ ನಿರ್ಮಾಣವಾದಾಗಲೇ, ನಾವು ಮಾಡಿದ ಕೆಲಸಕ್ಕೆ ನಿಜವಾದ ಸಾರ್ಥಕತೆ ದೊರೆಯುತ್ತದೆ ಅಲ್ಲವೇ?”

ಏನಂತೀರೀ?

ನಿಮ್ಮವನೇ 

ಉಮಾಸುತ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ