ದಿನ ಪೂರ್ತಿ ಮನರಂಜನೆಯೇ ಇರದ ನನಗೆ ತುಸು ಬಿಡುವು ಸಿಕ್ಕರೆ ಸಾಕು ತುಂಟ ಹಾಗೂ ಮುಗ್ದ ಮಕ್ಕಳ ವಿಡಿಯೋ ನೋಡುವ ಒಂದು ತವಕ.
ಪ್ರತೀ ಬಾರಿಯಂತೆ ಹೀಗೆ ಒಂದು ದಿನ ವೀಡಿಯೋಗಳನ್ನು ನೊಡುವ ವೇಳೆ ನನ್ನ ಗಮನಕ್ಕೆ ಬಂದದ್ದು ಚಿಕ್ಕ ಮಕ್ಕಳು ಸಹ ದೊಡ್ಡವರಂತೆ ’’ಗೆಟ್ ರೆಡಿ ವಿತ್ ಮಿ ‘‘ ಎನ್ನುವ ಹೊಸ ವಿಚಾರವನ್ನು ಆರಂಭಮಾಡಿರುವುದು.
ಒಂದು ರೀತಿಯಲ್ಲಿ ಆಲೋಚನೆ ಮಾಡಿದರೆ ವಯಸ್ಸಿಗೂ ಮೀರಿದ ಪ್ರಯತ್ನ ಹಾಗೂ ಕಲೆ ಈ ಮಕ್ಕಳಲ್ಲಿ ಇದೆ ಎಂದು ಖುಷಿಪಡುವುದೋ ಅಥವಾ ಕಾಸ್ಮೆಟಿಕ್ ಒರೆಕ್ಸಿಯಾ ಎಂಬ ಗೀಳಿಗೆ ಮಕ್ಕಳು ತುತ್ತಾಗುತಿದ್ದಾರೆ ಎಂದು ನಿರಾಸೆ ಪಡುವುದೋ ಒಂದು ತಿಳಿಯದೇ ಹೋಯಿತು.
ಹಿರಿಯರು ಅಥವಾ ಯುವ ಜನರ ಫ್ಯಾಷನ್ ಪ್ರಯೋಗಗಳು ಮಕ್ಕಳ ಮೇಲೂ ಪರಿಣಾಮ ಬೀರುತ್ತಿದ್ದು, ಇದೀಗ ಅವರೂ ಇಂಥ ಪ್ರಯೋಗಗಳ ಮೊರೆ ಹೋಗುತ್ತಿರುವುದು ಸಮಾಜದಲ್ಲಿನ ಹೊಸ ಬದಲಾವಣೆ.
ಸಹಜತೆಯಲ್ಲೇ ವಿಶೇಷ ಹಾಗೂ ಅಂದವಾಗಿ ಕಾಣುವ ಮಕ್ಕಳಿಗೆ ಕ್ರೀಮ್ ಎಂಬ ಲೇಪನವೇಕೆ ಅಲ್ಲವೇ ಎಂಬುದೇ ನನ್ನ ಪ್ರಶ್ನೆಯಾಗಿದೆ.
ಎಳೆಯರ ಮನಸ್ಸು ಅತ್ಯಂತ ಸೂಕ್ಷ್ಮವಾಗಿರುತ್ತದೆ; ಗ್ರಹಿಕೆ ಮತ್ತು ಅನುಕರಣೆ ಅವರ ಸಹಜ ಗುಣ. ವಯಸ್ಸಿಗೆ ಮೀರಿದ ವಿಷಯಗಳ ಅರಿವಿಲ್ಲದಿದ್ದರೂ, ಕಣ್ಣಿಗೆ ಕಂಡದ್ದನ್ನು ತಕ್ಷಣ ಅನುಕರಿಸಲು ಹೊರಡುತ್ತಾರೆ.
ಇಂದಿನ ಡಿಜಿಟಲ್ ಹಾಗೂ ಮೊಬೈಲ್ ಯುಗದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿರುವ "Get ready with me" (GRWM) ವೀಡಿಯೊಗಳು ಮಕ್ಕಳ ಗಮನವನ್ನು ಅಪಾಯಕಾರಿ ಹಂತದಲ್ಲಿ ಸೆಳೆಯುತ್ತಿವೆ ಎಂಬುದು ನಿಮಗೆ ಎಂದಾದರೂ ಅನಿಸಿದೆಯೇ?
ಸಾಮಾನ್ಯವಾಗಿ ಬಾಲ್ಯದಲ್ಲಿ ಚರ್ಮವು ಬಾಲ್ಯದ ಹಾಲುಗಲ್ಲದ ದುಂಡು ಮೊಗವು ಹೆಚ್ಚು ಸೂಕ್ಷ್ಮವಾಗಿಯೂ ಹಾಗೂ ಮೃದುವಾಗಿಯೂ ಇರುತ್ತದೆ.
ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ 'ಲೈಕ್ಸ್', 'ಫಾಲೋವರ್ಸ್' ಮತ್ತು ಜನರ ಮೆಚ್ಚುಗೆಯ ಆಸೆಗೆ ಬಿದ್ದು, ಮಕ್ಕಳು ದೊಡ್ಡವರಂತೆ ವರ್ತಿಸಲು ಮತ್ತು ಮಾತನಾಡಲು ಶ್ರಮಿಸುತ್ತಿದ್ದಾರೆ.
ಇದರ ಪರಿಣಾಮವಾಗಿ, ಅಂಗಡಿಗಳಿಂದ ಅಥವಾ ಆನ್‌ಲೈನ್ ಮೂಲಕ ಸಿಗುವ ವಿವಿಧ ರೀತಿಯ ಸೌಂದರ್ಯ ವರ್ಧಕಗಳನ್ನು ಬಳಸಿ ತಮ್ಮ ನೈಸರ್ಗಿಕ ರೂಪವನ್ನು ಬದಲಾಯಿಸಿಕೊಳ್ಳುವ ಹಂತಕ್ಕೆ ತಲುಪುತ್ತಿದ್ದಾರೆ.
ಚರ್ಮದ ಮೇಲೆ ಮೊಡವೆಗಳು, ಸಣ್ಣಪುಟ್ಟ ಕಲೆಗಳು ಮೂಡುವುದು ತೀರಾ ಸಹಜ ಪ್ರಕ್ರಿಯೆ. ಆದರೆ "ಪರಿಪೂರ್ಣ ಚರ್ಮ" (Flawless Skin) ಒಂದೇ ಸೌಂದರ್ಯದ ಮಾನದಂಡ ಎಂಬ ಕಲ್ಪನೆಯನ್ನು ನಾವು ಅತಿಯಾಗಿ ನಂಬುತ್ತಿದ್ದೇವೆ.
ಮುಖದ ಮೇಲಿನ ಸಣ್ಣ ಕಲೆ ಅಥವಾ ಸೂಕ್ಷ್ಮ ರೇಖೆಗಳೂ ಇಂದಿನ ಮಕ್ಕಳಲ್ಲಿ ತೀವ್ರ ಮಾನಸಿಕ ಅಭದ್ರತೆ ಮತ್ತು ಒತ್ತಡವನ್ನುಂಟುಮಾಡುತ್ತಿವೆ.
ಕೋವಿಡ್ ಸಮಯದಲ್ಲಿ ಟಿಕ್‌ಟಾಕ್, ಇನ್‌ಸ್ಟಾಗ್ರಾಮ್ ಹಾಗೂ ಗೂಗಲ್‌ಗಳಲ್ಲಿ ಚರ್ಮದ ಆರೈಕೆಗೆ (Skincare) ಸಂಬಂಧಿಸಿದ ಮಾಹಿತಿಗಳು ದಾಖಲೆ ಮಟ್ಟದಲ್ಲಿ ವೀಕ್ಷಣೆ ಪಡೆದವು.
ಇಂತಹ ವೀಡಿಯೊಗಳ ಅತಿಯಾದ ಪ್ರಭಾವದಿಂದ ಮಕ್ಕಳ ಆತ್ಮವಿಶ್ವಾಸ ಮತ್ತು ಆಂತರಿಕ ಸಂತೃಪ್ತಿ ಗಣನೀಯವಾಗಿ ಕುಸಿಯುತ್ತಿದೆ. 2026ರ ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ, ಸುಮಾರು 2,500ಕ್ಕೂ ಹೆಚ್ಚು ಯುವಜನರು ಈ "ಪರಿಪೂರ್ಣ ಸೌಂದರ್ಯದ" ಹಂಬಲದಿಂದಾಗಿ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ.





