ಯೆಮೆನ್ ಮತ್ತು ಸೊಮಾಲಿಯಾ ಕರಾವಳಿ ಸಮೀಪ ನಡೆದ ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 22 ಭಾರತೀಯ ಪ್ರಜೆಗಳಿದ್ದ ಎರಡು ವಾಣಿಜ್ಯ ಹಡಗುಗಳನ್ನು ಅಪಹರಿಸಲಾಗಿದೆ.

ಸೀಮುಲ್ (Seamull) ಟ್ಯಾಂಕರ್‌, ಸಿಬು 1 (SIBU 1) ತೈಲ ಸಾಗಣೆ ಹಡಗಿನಲ್ಲಿ 20 ಮಂದಿ ಸಿಬ್ಬಂದಿ ಇದ್ದು, ಅವರಲ್ಲಿ 16 ಮಂದಿ ಭಾರತೀಯರಾಗಿದ್ದಾರೆ.

ಯೆಮೆನ್‌ನ ಅಲ್ ಮುಕಲ್ಲಾ ನಗರದ ಪೂರ್ವಕ್ಕೆ 136 ನಾಟಿಕಲ್ ಮೈಲುಗಳಷ್ಟು ದೂರದಲ್ಲಿದ್ದಾಗ ಹಡಗು ಅಪಾಯದ ಸಂದೇಶ ರವಾನಿಸಿತ್ತು ಎಂದು ಸಾಗಣೆ ಹಡಗುಗಳ ಮೇಲ್ವಿಚಾರಣಾ ಸಂಸ್ಥೆ ವ್ಯಾನ್‌ಗಾರ್ಡ್ ತಿಳಿಸಿದೆ.

“ಆರು ಮಂದಿ ಸಶಸ್ತ್ರ ವ್ಯಕ್ತಿಗಳು ಹಡಗನ್ನು ಹತ್ತಿ ವಶಕ್ಕೆ ಪಡೆದಿದ್ದು, ಇದೀಗ ಹಡಗಿನ ನಿಯಂತ್ರಣ ಅವರ ಕೈಯಲ್ಲಿದೆ. ಅವರು ಹಡಗನ್ನು ಸೊಮಾಲಿಯಾ ಕಡೆಗೆ ತಿರುಗಿಸುತ್ತಿದ್ದಾರೆ,” ಎಂದು ಯುರೋಪಿಯನ್ ಒಕ್ಕೂಟದ ಮಾರಿಟೈಮ್ ಸೆಕ್ಯುರಿಟಿ ಸೆಂಟರ್ ಇಂಡಿಯನ್ ಓಷನ್ (MSCIO) ತಿಳಿಸಿದೆ.

ಹಡಗಿನಲ್ಲಿದ್ದ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಹಡಗಿನ ಚಲನವಲನಗಳ ಮೇಲೆ ಭದ್ರತಾ ಸಂಸ್ಥೆಗಳು ನಿರಂತರ ನಿಗಾ ಇರಿಸಿವೆ.

ಸೀಮುಲ್ ಟ್ಯಾಂಕರ್‌ಗೆ ಕಳೆದ ಡಿಸೆಂಬರ್‌ನಲ್ಲಿ ಅಮೆರಿಕ ನಿರ್ಬಂಧ ವಿಧಿಸಿತ್ತು. ಇರಾನ್‌ನ ತೈಲವನ್ನು ವಂಚನೆ ಸಾಗಣೆ ವಿಧಾನಗಳ ಮೂಲಕ ರಫ್ತು ಮಾಡುತ್ತಿದ್ದ “shadow fleet”ಯ ಭಾಗವಾಗಿದ್ದ ಹಡಗುಗಳ ಪೈಕಿ ಇದೂ ಒಂದು ಎಂದು ಅಮೆರಿಕ ಆರೋಪಿಸಿತ್ತು.

ಯುಎಇ ಮೂಲದ ಖತ್ರತ್ ಅಲ್‌ನಾದಾ ಅಲ್‌ಮಾಸಿ ಶಿಪ್ ಮ್ಯಾನೇಜ್‌ಮೆಂಟ್ ನಿರ್ವಹಿಸುತ್ತಿದ್ದ ನಾಲ್ಕು ಹಡಗುಗಳ ಪೈಕಿ ಸೀಮುಲ್ ಕೂಡ ಒಂದು. ಈ ಹಡಗುಗಳು ಹಲವು ಸಂದರ್ಭಗಳಲ್ಲಿ ನಾಫ್ತಾ ಮತ್ತು ಗ್ಯಾಸಾಯಿಲ್ ಸೇರಿದಂತೆ ಇರಾನ್‌ನ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸಿದ್ದವು. ಅಲ್ಲದೆ, ಯೆಮೆನ್‌ನ ಹೌತಿ ನಿಯಂತ್ರಿತ ಬಂದರುಗಳಿಗೂ ಈ ಹಡಗುಗಳು ತೆರಳಿದ್ದವು ಎಂದು ವರದಿಯಾಗಿದೆ.

ಇದೇ ವೇಳೆ, ಕ್ಯಾಮರೂನ್ ಧ್ವಜ ಹೊಂದಿರುವ M/V LUTUF ಎಂಬ ಹಡಗನ್ನು ಆಗಸ್ಟ್ 17ರಂದು ಸೊಮಾಲಿಯಾದ ಪಂಟ್‌ಲ್ಯಾಂಡ್ ಕರಾವಳಿ ಸಮೀಪ ಅಪಹರಿಸಲಾಗಿದೆ. ಈ ಹಡಗಿನಲ್ಲಿ 10 ಮಂದಿ ಸಿಬ್ಬಂದಿ ಇದ್ದು, ಅವರಲ್ಲಿ 6 ಮಂದಿ ಭಾರತೀಯರು ಇದ್ದರು. ಟರ್ಕಿಯ ಸೇನಾ ಉಪಕರಣಗಳು, ಸಂವಹನ ಸಾಧನಗಳು ಮತ್ತು ಉಪಗ್ರಹ ಉಪಕರಣಗಳನ್ನು ಹಡಗು ಸಾಗಿಸುತ್ತಿತ್ತು ಎಂದು ಸೊಮಾಲಿಯಾ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಎಪಿ ವರದಿ ತಿಳಿಸಿದೆ.

ಕಡಲ್ಗಳ್ಳರ ಹಾವಳಿ: ಈ ಎರಡು ಘಟನೆಗಳು ಸೊಮಾಲಿಯಾ ಕಡಲ್ಗಳ್ಳರ ಚಟುವಟಿಕೆಗಳು ಮತ್ತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ನಡೆದಿವೆ. ಈ ಪ್ರದೇಶದಲ್ಲಿ ಈಗಾಗಲೇ ಹಲವು ವಾಣಿಜ್ಯ ಹಡಗುಗಳನ್ನು ಕಡಲ್ಗಳ್ಳರ ಗುಂಪುಗಳು ವಶದಲ್ಲಿಟ್ಟುಕೊಂಡಿವೆ ಎಂದು ವರದಿಗಳು ತಿಳಿಸಿವೆ.

ಭಾರತೀಯ ಸಿಬ್ಬಂದಿಯ ಸುರಕ್ಷತೆ ಸೇರಿದಂತೆ ಪರಿಸ್ಥಿತಿಯ ಮೇಲೆ ಅಧಿಕಾರಿಗಳು ಹಾಗೂ ಸಮುದ್ರ ಭದ್ರತಾ ಸಂಸ್ಥೆಗಳು ನಿರಂತರ ನಿಗಾ ಇರಿಸಿದ್ದು, ಅಪಹರಣಕ್ಕೊಳಗಾದ ಹಡಗುಗಳ ಚಲನವಲನ ಮತ್ತು ಸಿಬ್ಬಂದಿಯ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ