ನೇಪಾಳ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬದುಕುಳಿದವರಿಗಾಗಿ ರಕ್ಷಣಾ ತಂಡಗಳು ತೀವ್ರ ಶೋಧ ನಡೆಸುತ್ತಿವೆ. ವ್ಯಾಪಕ ಹಾನಿಯಿಂದಾಗಿ ಹಲವು ಪ್ರದೇಶಗಳಲ್ಲಿ ಆಹಾರ ಮತ್ತು ಕುಡಿಯುವ ನೀರಿನ ಕೊರತೆ ಎದುರಾಗಿದೆ.

ಇದೇ ವೇಳೆ, ತ್ರಿಶೂಲಿ-3ಎ ಜಲವಿದ್ಯುತ್‌ ಯೋಜನೆಯ ಸುರಂಗದಲ್ಲಿ ಕೆಲವರು ಸಿಲುಕಿರುವುದನ್ನು ನೇಪಾಳ ಸೇನೆ ಪತ್ತೆಹಚ್ಚಿದೆ. ಅವರನ್ನು ಹೊರತೆಗೆಯಲು ಸುರಂಗದೊಳಗೆ ಪ್ರವೇಶಿಸುವ ಮಾರ್ಗವನ್ನು ಹುಡುಕಲಾಗುತ್ತಿದೆ.

‘ಎರಡು ಹೆಲಿಕಾಪ್ಟರ್‌ಗಳನ್ನು ಕಳುಹಿಸಲಾಗಿದೆ. ಆದರೆ, ಸುರಂಗದ ಪ್ರವೇಶ ದ್ವಾರಗಳನ್ನು ಪತ್ತೆಹಚ್ಚುವುದೇ ಕಷ್ಟವಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆ ಸವಾಲಾಗಿದೆ’ ಎಂದು ಸೇನಾ ವಕ್ತಾರ ರಾಜಾ ರಾಮ್ ಬಸ್ನೆಟ್‌ ತಿಳಿಸಿದ್ದಾರೆ.ಸ್ಥಳದಿಂದ ಸುಮಾರು 350 ಕಾರ್ಮಿಕರು ಹಾಗೂ ನಿವಾಸಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಅದೇ ಪ್ರದೇಶದಲ್ಲಿ ಇನ್ನೂ 100ಕ್ಕೂ ಹೆಚ್ಚು ಮಂದಿ ಸಿಲುಕಿದ್ದು, ಅವರನ್ನು ರಕ್ಷಿಸುವ ಕಾರ್ಯ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.

ತ್ರಿಶೂಲಿ ಕಣಿವೆಯ ಇತರ ಅಣೆಕಟ್ಟು ಯೋಜನೆಗಳಿಂದ ರಕ್ಷಿಸಲ್ಪಟ್ಟ ಕಾರ್ಮಿಕರು ಪ್ರವಾಹ ಎಷ್ಟು ವೇಗವಾಗಿ ಅಪ್ಪಳಿಸಿತು ಎಂಬ ಭೀಕರ ಅನುಭವವನ್ನು ಹಂಚಿಕೊಂಡಿದ್ದಾರೆ.

ಅಣೆಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದ ಬುದ್ಧ ತಮಾಂಗ್‌ ಅವರು ಪ್ರವಾಹ ಬಂದಾಗ ಸುರಂಗದೊಳಗಿದ್ದ ಕಾರಣ ಬದುಕುಳಿದಿದ್ದಾರೆ. 24 ಗಂಟೆಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದ ಅವರನ್ನು ಗುರುವಾರ ಹೆಲಿಕಾಪ್ಟರ್‌ ಮೂಲಕ ರಕ್ಷಿಸಲಾಗಿದೆ.

‘ನಾನು ಸುರಂಗದೊಳಗಿದ್ದ ಕಾರಣ ಬದುಕುಳಿದೆ. ಆದರೆ ಇನ್ನೊಂದು ಬದಿಯಲ್ಲಿ ಕೆಲಸ ಮಾಡುತ್ತಿದ್ದ ಹಿರಿಯ ಅಧಿಕಾರಿಗಳೆಲ್ಲರೂ ಪ್ರವಾಹದಲ್ಲಿ ಕೊಚ್ಚಿಹೋದರು’ ಎಂದು ತಮಾಂಗ್‌ ಹೇಳಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ