ಭಾರತದ ಯುವ ಗ್ರ್ಯಾಂಡ್‌ ಮಾಸ್ಟರ್‌ ಆರ್‌. ಪ್ರಜ್ಞಾನಂದ ರೋಚಕ ಫೈನಲ್‌ ಪಂದ್ಯದಲ್ಲಿ ಅಮೆರಿಕದ ಫ್ಯಾಬಿಯಾನೊ ಕರುವಾನಾ ಅವರನ್ನು ಮಣಿಸಿ, ಪ್ರತಿಷ್ಠಿತ ಗ್ರ್ಯಾಂಡ್‌ ಚೆಸ್‌ ಟೂರ್‌ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದರೊಂದಿಗೆ ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಸೇಂಟ್‌ ಲೂಯಿಸ್‌ ಚೆಸ್‌ ಕ್ಲಬ್‌ನಲ್ಲಿ ನಡೆದ ಗ್ರ್ಯಾಂಡ್‌ ಫೈನಲ್‌ನ ಅಂತಿಮ ದಿನದ ಆರಂಭದಲ್ಲಿ ಕರುವಾನಾಗಿಂತ 6 ಅಂಕಗಳಿಂದ ಹಿನ್ನಡೆಯಲ್ಲಿದ್ದ ಪ್ರಜ್ಞಾನಂದ, ನಂತರ ಅದ್ಭುತ ಪುನರಾಗಮನ ಮಾಡಿದರು. ಅಂತಿಮವಾಗಿ 15-13 ಅಂಕಗಳಿಂದ ಜಯ ಸಾಧಿಸಿ, ತಮ್ಮ ಚೊಚ್ಚಲ ಗ್ರ್ಯಾಂಡ್‌ ಚೆಸ್‌ ಟೂರ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಈ ಗೆಲುವಿನೊಂದಿಗೆ ಪ್ರಜ್ಞಾನಂದ ಅವರು 2 ಲಕ್ಷ ಅಮೆರಿಕನ್‌ ಡಾಲರ್‌(1.91 ಕೋಟಿ ರೂ.)ಬಹುಮಾನ ಮೊತ್ತವನ್ನು ತಮ್ಮದಾಗಿಸಿಕೊಂಡರು. ಈ ಪ್ರಶಸ್ತಿ ಗೆಲುವಿನಿಂದ ಪ್ರಜ್ಞಾನಂದ ಮುಂದಿನ ವರ್ಷದ ಗ್ರ್ಯಾಂಡ್‌ ಚೆಸ್‌ ಟೂರ್‌ನಲ್ಲಿ ಪಾಲ್ಗೊಳ್ಳುವುದೂ ಖಚಿತವಾಗಿದೆ.

ವೆಸ್ಲಿಗೆ 3ನೇ ಸ್ಥಾನ: ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಗ್ರ್ಯಾಂಡ್‌ ಮಾಸ್ಟರ್‌ ವೆಸ್ಲಿಸೋ ಅವರು ವಿನ್ಸೆಂಟ್‌ ಕೀಮರ್‌ ವಿರುದ್ಧ ಗಮನಾರ್ಹ ಪ್ರದರ್ಶನ ತೋರಿದರು. ರ್ಯಾಪಿಡ್​ ವಿಭಾಗದಲ್ಲಿ ಇಬ್ಬರೂ ತಲಾ ಒಂದು ಪಂದ್ಯ ಗೆದ್ದು ಸಮಬಲ ಸಾಧಿಸಿದರು. ಆದರೆ ಬ್ಲಿಟ್ಜ್ ವಿಭಾಗದಲ್ಲಿ‌ ವೆಸ್ಲಿ ಪ್ರಾಬಲ್ಯ ಮೆರೆದರು. ಸೋ ನಾಲ್ಕೂ ಬ್ಲಿಟ್ಜ್ ಪಂದ್ಯಗಳನ್ನು ಗೆದ್ದು, ಒಂದು ಪಂದ್ಯ ಬಾಕಿಯಿರುವಂತೆಯೇ 18-12 ಅಂತರದಲ್ಲಿ ಕೀಮರ್‌ ವಿರುದ್ಧ ಗೆದ್ದ 3ನೇ ಸ್ಥಾನಿಯಾಗಿ ಹೊರಹೊಮ್ಮಿದರು.

ಗೆಲುವಿನ ಬಳಿಕ ಸುದ್ದಿ ಸಂಸ್ಥೆ ಜತೆ ಮಾತನಾಡಿದ ಪ್ರಜ್ಞಾನಂದ, ”ನಿಜ ಹೇಳಬೇಕೆಂದರೆ, ಅಂತಿಮ ದಿನ ನನಗೆ ಹೆಚ್ಚಿನ ಅವಕಾಶಗಳಿವೆ ಎಂದು ನಾನು ಭಾವಿಸಿರಲಿಲ್ಲ. ಫ್ಯಾಬಿಯಾನೊ ವಿರುದ್ಧ ಗೆಲುವು ಸಾಧಿಸುವುದೇ ಕಠಿಣ ಸಂಗತಿ. ಆದರೆ ಎರಡು ಗೆಲುವುಗಳನ್ನು ಸಾಧಿಸಿದ್ದು ಬಹಳ ಮುಖ್ಯವಾಯಿತ್ತು, ವಿಶೇಷವಾಗಿ ರ್ಯಾಪಿಡ್​ ವಿಭಾಗದಲ್ಲಿ,” ಎಂದು ಸಂತಸ ವ್ಯಕ್ತಪಡಿಸಿದರು.

ಪ್ರಜ್ಞಾನಂದನ ಚದುರಂಗದಾಟ: ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿರುವ 21 ವರ್ಷದ ಚೆನ್ನೈ ಮೂಲದ ಪ್ರಜ್ಞಾನಂದ, ದಿನದ ಆರಂಭದಲ್ಲಿ 6 ಅಂಕಗಳ ಹಿನ್ನಡೆಯಲ್ಲಿದ್ದರೂ ರ್ಯಾಪಿಡ್​ ವಿಭಾಗದ ಎರಡೂ ಪಂದ್ಯಗಳನ್ನು ಗೆದ್ದು ಅದ್ಭುತ ತಿರುಗೇಟು ನೀಡಿದರು. ಪ್ರತಿ ರ್ಯಾಪಿಡ್​ ಪಂದ್ಯದಲ್ಲಿ ಗೆದ್ದ ಆಟಗಾರನಿಗೆ ನಾಲ್ಕು ಅಂಕಗಳು ದೊರೆಯುವ ಹಿನ್ನೆಲೆಯಲ್ಲಿ, ಎರಡೂ ಪಂದ್ಯಗಳನ್ನು ಗೆದ್ದ ಪ್ರಜ್ಞಾನಂದ ಅವರು ಎರಡು ಅಂಕಗಳ ಮುನ್ನಡೆ ಸಾಧಿಸಿದರು.

ನಂತರ ನಡೆದ ನಾಲ್ಕು ಬ್ಲಿಟ್ಜ್ ಪಂದ್ಯಗಳಲ್ಲಿ ಇಬ್ಬರೂ ತಲಾ ಒಂದು ಪಂದ್ಯವನ್ನು ಗೆದ್ದರೆ, ಉಳಿದ ಎರಡು ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡವು. ರ್ಯಾಪಿಡ್​ ವಿಭಾಗದ ಅಂತ್ಯಕ್ಕೆ ಪಡೆದಿದ್ದ 2 ಅಂಕಗಳ ಮುನ್ನಡೆಯೇ ಅಂತಿಮವಾಗಿ ಭಾರತೀಯ ಗ್ರ್ಯಾಂಡ್‌ ಮಾಸ್ಟರ್‌ಗೆ ನಿರ್ಣಾಯಕವಾಯಿತು. ಬ್ಲಿಟ್ಜ್ ವಿಭಾಗದ ಮೊದಲ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು.

ಎರಡನೇ ಪಂದ್ಯದಲ್ಲಿ ಕರುವಾನಾ ಜಯ ಸಾಧಿಸಿ 12-12 ಅಂಕಗಳಿಂದ ಸಮಬಲ ಸಾಧಿಸಿದರು. ಆದರೆ ಮೂರನೇ ಪಂದ್ಯದಲ್ಲಿ ದೃಢ ಸಂಕಲ್ಪದ ಆಟವಾಡಿದ ಪ್ರಜ್ಞಾನಂದ, ಕರುವಾನಾ ಅವರನ್ನು ಮಣಿಸಿ ಮತ್ತೆ ಎರಡು ಅಂಕಗಳ ಮುನ್ನಡೆ ಸಾಧಿಸಿದರು. ಕೊನೆಯ ಬ್ಲಿಟ್ಜ್ ಪಂದ್ಯದಲ್ಲಿ ಕರುವಾನಾ ಜಯ ಸಾಧಿಸಿದ್ದರೆ, ವಿಶೇಷ ಸಮಯ ನಿಯಂತ್ರಣದೊಂದಿಗೆ ಇನ್ನೆರಡು ಪಂದ್ಯಗಳು ನಡೆಯಬೇಕಾಗುತ್ತಿತ್ತು. ಅಗತ್ಯವಿದ್ದರೆ ನಂತರ ಆರ್ಮಗೆಡ್ಡನ್‌ ಪಂದ್ಯಕ್ಕೂ ಅವಕಾಶವಿತ್ತು. ಆದರೆ ಪ್ರಜ್ಞಾನಂದ ಅವರಿಗೆ ಕೊನೆಯ ಪಂದ್ಯದಲ್ಲಿ ಡ್ರಾ ಸಾಕಾಗಿತ್ತು. ನಿರ್ಣಾಯಕ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಮೂಲಕ ಅವರು ಐತಿಹಾಸಿಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಇದೇ ವರ್ಷ ಪ್ರಜ್ಞಾನಂದ ಅವರು ನಾರ್ವೆ ಚೆಸ್‌ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಟಗಾರರಾಗಿಯೂ ಸಾಧನೆ ಮಾಡಿದ್ದರು. ಆ ಟೂರ್ನಿಯಲ್ಲಿ ವಿಶ್ವ ನಂ.1 ಆಟಗಾರ ಹಾಗೂ ಫೇವರಿಟ್‌ ಆಗಿದ್ದ ಮ್ಯಾಗ್ನಸ್‌ ಕಾಲ್‌ರ್‍ಸನ್‌ ವಿರುದ್ಧ ಎರಡು ಬಾರಿ ಜಯ ಸಾಧಿಸಿ ಗಮನ ಸೆಳೆದಿದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ