ಭಾರತೀಯ ಮೋಟಾರ್‌ಸ್ಪೋರ್ಟ್ಸ್ ರಂಗದ ದಿಗ್ಗಜ ಸಂಸ್ಥೆ ಎಂದೇ ಗುರುತಿಸಿಕೊಂಡಿರುವ ‘ಜೆಕೆ ಟೈರ್’ ದೇಶದ ಅತ್ಯಂತ ಪ್ರತಿಭಾವಂತ ಯುವ ಗೋ-ಕಾರ್ಟಿಂಗ್ ತಾರೆ, 11 ವರ್ಷದ ಅತೀಕಾ ಮಿರ್ ಅವರೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ದೇಶದ ಭವಿಷ್ಯದ ರೇಸಿಂಗ್ ಚಾಂಪಿಯನ್‌ಗಳನ್ನು ಗುರುತಿಸಿ ಪ್ರೋತ್ಸಾಹಿಸುವ ತನ್ನ ಬದ್ಧತೆಯನ್ನು ಜೆಕೆ ಟೈರ್ ಈ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದೆ.

ಕೇವಲ 11ನೇ ವಯಸ್ಸಿನಲ್ಲೇ ಅತೀಕಾ ಜಾಗತಿಕ ಕಾರ್ಟಿಂಗ್ ಲೋಕದಲ್ಲಿ ಅಸಾಧಾರಣ ಸಾಧನೆ ಮಾಡಿದ್ದಾರೆ. ಯುರೋಪ್ ಮತ್ತು ಮಧ್ಯಪ್ರಾಚ್ಯದಲ್ಲಿ ನಡೆದ ಕಠಿಣ ಚಾಂಪಿಯನ್‌ಶಿಪ್‌ಗಳಲ್ಲಿ ಕಣಕ್ಕಿಳಿದಿರುವ ಅವರು, ಎಫ್‌ಐಎ ಐಕೆಆರ್ (OKNJ) ವಿಭಾಗದಲ್ಲಿ ವಿಶ್ವದ ನಂ. 1 ಮಹಿಳಾ ಕಾರ್ಟ್ ರೇಸರ್ ಎಂಬ ದಾಖಲೆ ಬರೆದಿದ್ದಾರೆ. 2026ರ ‘ಚಾಂಪಿಯನ್ಸ್ ಆಫ್ ದಿ ಫ್ಯೂಚರ್ ಅಕಾಡೆಮಿ’ಯ ಯುರೋಪಿಯನ್ ಹಂತದಲ್ಲಿ ಪೋಡಿಯಂ ತಲುಪಿದ ಮೊದಲ ಭಾರತೀಯೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅವರು, ನಂತರ ಗ್ರೀಸ್‌ನಲ್ಲಿ ನಡೆದ ರೇಸ್‌ನಲ್ಲಿ ಕ್ವಾಲಿಫೈಯಿಂಗ್, ಹೀಟ್ಸ್ ಮತ್ತು ಫೈನಲ್‌ನಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಸರಣಿಯ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಸಾರ್ವಕಾಲಿಕ ಮೂರನೇ ಡ್ರೈವರ್ ಎನಿಸಿಕೊಂಡರು. ಇತ್ತೀಚೆಗೆ ‘ಕಾರ್ಟಿಂಗ್‌ನ ಫಾರ್ಮುಲಾ 1’ ಎಂದೇ ಪರಿಗಣಿಸಲ್ಪಡುವ ಎಫ್‌ಐಎ ಯುರೋಪಿಯನ್ ಕಾರ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಟಾಪ್-10 ಸ್ಥಾನ ಪಡೆದ ಅತ್ಯಂತ ಕಿರಿಯ ಭಾರತೀಯೆ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ. ಮಹಿಳಾ ಸಬಲೀಕರಣದ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಆತಿಕಾ, ಫಾರ್ಮುಲಾ 1 ಅಕಾಡೆಮಿಯ ‘ಡಿಸ್ಕವರ್ ಯುವರ್ ಡ್ರೈವ್’ ಕಾರ್ಯಕ್ರಮಕ್ಕೆ ಆಯ್ಕೆಯಾದ ಮೊದಲ ಭಾರತೀಯ ಹಾಗೂ ಏಷ್ಯನ್ ಮಹಿಳಾ ರೇಸರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಅಂಶುಮಾನ್ ಸಿಂಘಾನಿಯಾ (ವ್ಯವಸ್ಥಾಪಕ ನಿರ್ದೇಶಕರು, ಜೆಕೆ ಟೈರ್ & ಇಂಡಸ್ಟ್ರೀಸ್) ಮಾತನಾಡಿ, “ಯುವ ಪ್ರತಿಭೆಗಳನ್ನು ಬೆಳೆಸುವುದು ನಮ್ಮ ಮೋಟಾರ್‌ಸ್ಪೋರ್ಟ್ಸ್ ಪಯಣದ ಜೀವಾಳವಾಗಿದೆ. ಅತೀಕಾ ಭಾರತೀಯ ರೇಸಿಂಗ್‌ನ ಭವಿಷ್ಯದ ಪ್ರತಿಭೆಯಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಅವರ ಈ ಪಯಣಕ್ಕೆ ಬೆಂಬಲ ನೀಡಲು ನಮಗೆ ಅತ್ಯಂತ ಸಂತೋಷವಾಗಿದೆ. ಜೊತೆಗೆ, ಮೋಟಾರ್‌ಸ್ಪೋರ್ಟ್ಸ್ ಕ್ಷೇತ್ರದಲ್ಲಿ ಇನ್ನಷ್ಟು ಹೆಣ್ಣುಮಕ್ಕಳು ಮುಂದೆ ಬರಲು ಇದು ದೊಡ್ಡ ಸ್ಫೂರ್ತಿಯಾಗಲಿದೆ,” ಎಂದರು.

ಈ ಒಪ್ಪಂದದ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ ಅತೀಕಾ ಮಿರ್ ಮಾತನಾಡಿ, “ಜೆಕೆ ಟೈರ್ ಕುಟುಂಬಕ್ಕೆ ಸೇರ್ಪಡೆಗೊಂಡಿರುವುದು ನನಗೆ ರೋಮಾಂಚನಕಾರಿ ಅನುಭವವಾಗಿದೆ. ನನ್ನ ತಂದೆಯೂ ಸಹ ತಮ್ಮ ರೇಸಿಂಗ್ ದಿನಗಳಲ್ಲಿ ಜೆಕೆ ಟೈರ್‌ನಿಂದ ಬೆಂಬಲ ಪಡೆದಿದ್ದರು. ಭಾರತೀಯ ರೇಸಿಂಗ್ ಕ್ಷೇತ್ರಕ್ಕೆ ಸಂಸ್ಥೆ ನೀಡಿರುವ ಕೊಡುಗೆ ಅಪಾರವಾಗಿದೆ. ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತ ಮತ್ತು ಜೆಕೆ ಟೈರ್‌ನ ಕೀರ್ತಿಯನ್ನು ಹೆಚ್ಚಿಸಲು ನಾನು ಕೂಡ ಕಾತುರದಿಂದ ಕಾಯುತ್ತಿದ್ದೇನೆ,” ಎಂದರು.

ಕಳೆದ ಮೂರು ದಶಕಗಳಿಂದ ಭಾರತದಲ್ಲಿ ಮೋಟಾರ್‌ಸ್ಪೋರ್ಟ್ಸ್ ಸಂಸ್ಕೃತಿಯನ್ನು ಬೆಳೆಸುವಲ್ಲಿ ಜೆಕೆ ಟೈರ್ ಪ್ರಮುಖ ಪಾತ್ರ ವಹಿಸುತ್ತಿದೆ. ಸಂಸ್ಥೆಯ ರೇಸಿಂಗ್ ಮತ್ತು ಕಾರ್ಟಿಂಗ್ ಕಾರ್ಯಕ್ರಮಗಳು ಯುವ ಪ್ರತಿಭೆಗಳಿಗೆ ಅತ್ಯುತ್ತಮ ತರಬೇತಿ ವೇದಿಕೆಯಾಗಿದ್ದು, ಅವರ ಕೌಶಲ್ಯವನ್ನು ಬೆಳೆಸಲು ನೆರವಾಗುತ್ತಿವೆ. ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಹೆಮ್ಮೆ ತಂದಿರುವ ನಾರಾಯಣ್ ಕಾರ್ತಿಕೇಯನ್, ಕರುಣ್ ಚಂದೋಕ್, ಅರ್ಮಾನ್ ಇಬ್ರಾಹಿಂ ಮತ್ತು ಕುಶ್ ಮೈನಿ ಸೇರಿದಂತೆ ಹಲವು ಪ್ರಸಿದ್ಧ ರೇಸರ್‌ಗಳು ಜೆಕೆ ಟೈರ್‌ನ ರೇಸಿಂಗ್ ಕಾರ್ಯಕ್ರಮಗಳ ಮೂಲಕ ತಮ್ಮ ವೃತ್ತಿಜೀವನವನ್ನು ರೂಪಿಸಿಕೊಂಡಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ