ಉತ್ತರ ಪ್ರದೇಶದ ಪ್ರಯಾಗ್‌ರಾಜ್-ಕೌಶಂಬಿ ಗಡಿಯಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದೆ.
ಕಾರ್ಖಾನೆ ಬಳಿಯ ಮನೆಗಳಲ್ಲಿ ವಾಸಿಸುತ್ತಿದ್ದ 8 ಮಕ್ಕಳು ಸೇರಿದಂತೆ ಹನ್ನೊಂದು ಮಂದಿ ಸುಟ್ಟು ಕರಕಲಾಗಿದ್ದು, 18ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಮೃತಪಟ್ಟವರನ್ನು ಪ್ರಿಯಾಂಜಲಿ (5), ಪ್ರವೀಣ್ ಸಿಂಗ್ (13), ಜಾನ್ವಿ (12), ಆದಿತ್ಯ (12), ಆದಿತ್ಯಾ (8), ರವಿ (8), ಅಂಜು (32), ಗ್ಯಾನ್ ಸಿಂಗ್ (40), ವಿಕ್ರಮ್ ಸರೋಜ್ (35), ಅನ್ಷ್ (6), ನಾನ (4) ಎಂದು ಗುರುತಿಸಲಾಗಿದೆ. ಸ್ಫೋಟದ ತೀವ್ರತೆಯಿಂದ ಇಡೀ ಕಾರ್ಖಾನೆ ನೆಲಸಮವಾಗಿದೆ. 100 ಮೀಟರ್ ವ್ಯಾಪ್ತಿಯೊಳಗಿನ ಎಂಟು ಮನೆಗಳು ಹಾನಿಗೊಳಗಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟದ ಪರಿಣಾಮ ಸುಮಾರು 500 ಮೀಟರ್ ದೂರದಲ್ಲಿರುವ ಪ್ರಯಾಗ್‌ರಾಜ್-ಕಾನ್ಪುರ್ ರೈಲ್ವೆ ಮಾರ್ಗದಲ್ಲಿ OHE (ಓವರ್‌ಹೆಡ್ ಎಲೆಕ್ಟ್ರಿಕ್ ಲೈನ್) ಮಾರ್ಗವು ಅಸ್ತವ್ಯಸ್ತಗೊಂಡಿದೆ. ಇದು ಕಾನ್ಪುರದಿಂದ ಪ್ರಯಾಗ್‌ರಾಜ್‌ಗೆ ಸುಮಾರು ಒಂದೂವರೆ ಗಂಟೆಗಳ ಕಾಲ ರೈಲು ಕಾರ್ಯಾಚರಣೆಯನ್ನು ಅಡ್ಡಿಪಡಿಸಿತ್ತು. ಎಂಜಿನಿಯರ್‌ಗಳು ಮಾರ್ಗವನ್ನು ದುರಸ್ತಿಪಡಿಸಿ ಪುನಃಸ್ಥಾಪಿಸಿದರು.
ಸ್ಫೋಟದ ಶಬ್ದವು 2 ಕಿಲೋಮೀಟರ್ ದೂರದವರೆಗೆ ಕೇಳಿಬಂತು. ಸ್ವಲ್ಪ ಸಮಯದಲ್ಲೇ ದಡ್ಡ ಹೊಗೆ ಪ್ರದೇಶವನ್ನು ಆವರಿಸಿತು. ಗ್ರಾಮಸ್ಥರು ಸುಟ್ಟ ಗಾಯಾಳುಗಳನ್ನು ಹಾಸಿಗೆಗಳ ಮೇಲೆ ಹೊತ್ತುಕೊಂಡು ಹೋಗುತ್ತಿರುವುದು ಕಂಡುಬಂದಿದೆ.
ಕೌಶಾಂಬಿ ಜಿಲ್ಲೆಯ ಮೊಹಮ್ಮದ್‌ಪುರ ಗ್ರಾಮದಲ್ಲಿ ಬೆಳಗ್ಗೆ 11:30 ಕ್ಕೆ ಅವಘಡ ಸಂಭವಿಸಿದೆ. ಈ ಗ್ರಾಮ ಪ್ರಯಾಗ್‌ರಾಜ್ ಗಡಿಯಲ್ಲಿದ್ದು, ಮನುರಿಯಲ್ಲಿರುವ ವಾಯುಪಡೆಯ ನಿಲ್ದಾಣವು ಇಲ್ಲಿಂದ 2 ಕಿ.ಮೀ ದೂರದಲ್ಲಿದೆ. ಪೊಲೀಸ್, ವಾಯುಪಡೆ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್‌ನ 200 ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, 10 ಬುಲ್ಡೋಜರ್‌ಗಳು ಅವಶೇಷಗಳನ್ನು ಹೊರತೆಗೆದಿವೆ.





