ಮನಸ್ಸಿನ ವಿವಿಧ ಭಾವಗಳನ್ನು ವಿಶ್ಲೇಷಿಸಿ ಅದನ್ನು ಸದಾ ಆರೋಗ್ಯವಾಗಿ ಇಟ್ಟುಕೊಳ್ಳುವುದು ವಿವೇಕವಂತರ ಲಕ್ಷಣ. ಯುಗಾದಿಯ ಸಂದರ್ಭದಲ್ಲಿ ಕಷ್ಟ ಸುಖವನ್ನು ಬೇವು ಬೆಲ್ಲವಾಗಿ ಸ್ವೀಕರಿಸಿ ಸಮಚಿತ್ತ ಪಡೆಯುವುದು ಹೇಗೆಂದು ತುಸು ಗಮನಿಸೋಣವೇ….?

ಮನಸ್ಸೆಂಬ ಕನ್ನಡಿ ಬಾಳಿನ ಬುತ್ತಿ. ಅನುಭವಗಳ ಅಕ್ಷಯ ನಿಧಿ. ಮನಸ್ಸಿದ್ದರೆ ಮಾರ್ಗ, ಮನಸ್ಸು ಮನುಷ್ಯನ ದೊಡ್ಡ ಭಾಗವೆಂದೇ ಹೇಳಬಹುದು. ಮನಸ್ಸು ಸಂತೋಷವಾಗಿದ್ದರೆ ದೈನಂದಿನ ಕೆಲಸ ಕಾರ್ಯಗಳು ಸಹ ಸೊಗಸಾಗಿ ನಡೆಯುತ್ತದೆ. ಅದೇ ಮನಸ್ಸು ಸರಿ ಇಲ್ಲದಿದ್ದರೆ ಕೆಲಸ ಕಾರ್ಯಗಳು ಆಗುವುದಿಲ್ಲ. ಯಾವ ಶ್ರದ್ಧೆ, ನಿಷ್ಠೆ ಕೆಲಸಗಳಿಗೆ ಚಾಲನೆ ಇರುವುದಿಲ್ಲ. ಹಾಗಾಗಿ ಮನುಷ್ಯನಿಗೆ ಸಂತೋಷದ ಮನಸ್ಸು ಅತಿ ಸೂಕ್ಷ್ಮದಾಯಕ ಎಂದು ಹೇಳಬಹುದು.

ಆತ್ಮೀಯರು ಜೊತೆಯಲ್ಲಿದ್ದರೆ, ಮನಸ್ಸಿನ ಬುತ್ತಿ ಸಂತೋಷದಾಯಕ ರಸದೌತಣವಾಗಿರುತ್ತದೆ. ಜೀವನದ ಅನುಭವಗಳಲ್ಲಿ ನಿಂದಿಸುವವರು, ಟೀಕಿಸುವವರು, ಅಮಾನಿಸುವವರು, ತಿರಸ್ಕರಿಸುವವರು, ಇಲ್ಲಸಲ್ಲದ ಅಪವಾದ ಹೊರಿಸುವವರು ಇಂಥವರ ನಡುವೆ ಬಾಯಿ ಕಟ್ಟಿ ಮನದಲ್ಲಿಯೇ ಬುತ್ತಿಯೂಟ ಮಾಡಬೇಕು. ಆ ಬುತ್ತಿಯಲ್ಲಿ ಸುಖಗಳಂತೆ ಕಷ್ಟಗಳು ಗೂಡು ಕಟ್ಟಿ ವಾಸಿಸುತ್ತವೆ.

ಕಾಲಚಕ್ರ ಮೆದುಳಿನ ವಜ್ರ ಪಂಜರದಲ್ಲಿ ಅನುಭವಗಳನ್ನು ಬಂಧಿಸುವವರಿಂದ ಜೀವನ ಸಾಗರದ ಹಾದಿಯ ಪಯಣಕ್ಕೆ ತಕ್ಕ ಪಾಠ ಸಹ ಅಲೆಗಳಾಗಿ ಎಚ್ಚರಿಸುತ್ತಿರುವ ಘಂಟೆಗಳಾಗಿರುತ್ತವೆ. ಕಾಲ ಪಂಜರದಲ್ಲಿ ಸಿಕ್ಕಿಬಿದ್ದ ಗಿಳಿಯಂತೆ ಕಷ್ಟಸುಖವನ್ನು ಸಮ ದೃಷ್ಟಿಯಿಂದ ನೋಡಲು ಸಮರ್ಥವಾಗಿರುತ್ತದೆ. ಮನಸ್ಸಿಗೆ ಜೀವನದ ಅನುಭವಗಳನ್ನು ಜೇನುಗೂಡಿನಂತೆ ಸಂಗ್ರಹಿಸುವ ಶಕ್ತಿ ಇದೆ. ಮನಸ್ಸು ಅನುಭವಗಳ ನಿಧಿ.

ಮನಸ್ಸೆಂಬ ಕನ್ನಡಿಯಲ್ಲಿ ಕೊಳಕು ಚಿತ್ರಗಳನ್ನು ತುಂಬಿಕೊಂಡವಷ್ಟೂ ಮನುಷ್ಯ ದರಿದ್ರನಾಗುತ್ತಾನೆ. ಜೀವನದ ಮಹಾ ಘಟನೆಗಳು, ಸನ್ನಿವೇಶ, ಅಮೃತ ನೆನಪುಗಳನ್ನು ಮನಸ್ಸಿನ ಪಂಜರದಲ್ಲಿ ಕೂಡಿಸಬೇಕು, ಆಗ ಅದು ಅಪೂರ್ವ ಅನುಭವಗಳ ಸಂಗ್ರಹವಾಗುತ್ತದೆ. ಈ ವರ್ಣಮಯ ತರಂಗಗಳ ನೆನಪಿನಂಗಳನ್ನು ಆಗಾಗ ಸವಿಯುತ್ತಿದ್ದರೆ ಮನಸ್ಸು ಆನಂದಮಯವಾಗಿರುತ್ತದೆ.

ಮಾತಿನ ಆದಿ, ಅಂತ್ಯವೇ ಮೌನ. ಮೌನಕ್ಕೂ ಮಾತಿನಷ್ಟೇ ತೂಕವಿದೆ. ಜೀವನದಲ್ಲಿ ಕೆಲವೊಮ್ಮೆ ನಾವು ಮೌನವಾಗಿ ಇರಬೇಕಾಗಿರುತ್ತದೆ. ಕೆಲವು ಸಮಯದಲ್ಲಿ ಮೌನ ನಮ್ಮನ್ನು ರಕ್ಷಿಸುತ್ತದೆ. ತಮ್ಮ ಹಠವೇ ಸರಿಯೆಂದು ವಾದಿಸುವವರ ಎದುರು ಮೌನವಾಗಿರುವುದು ಒಳ್ಳೆಯದು.

ದಿನನಿತ್ಯ ಬೆಳಗ್ಗೆಯಿಂದ ಸಂಜೆಯವರೆಗೂ ನಮ್ಮ ಕಿವಿಗೆ ಹಲವು ಮಾತುಗಳು ಬೀಳುತ್ತಲೇ ಇರುತ್ತವೆ. ಅವೆಲ್ಲಕ್ಕೂ ಸ್ಪಂದಿಸಲೇಬೇಕು ಎಂದೇನೂ ಇಲ್ಲ, ಬೇಕಾಗಿದ್ದಕ್ಕೆ ಮಾತ್ರ ಸ್ಪಂದಿಸಿ ಉಳಿದ ಮಾತುಗಳನ್ನು ಮೌನದಿಂದಲೇ ನಿರ್ಲಕ್ಷಿಸುವವರು ಬುದ್ಧಿವಂತರು. ಎಲ್ಲದಕ್ಕೂ ಸ್ಪಂದಿಸಿ ಮನಸ್ಸಿನ ಶಾಂತಿಯನ್ನು ಹಾಳು ಮಾಡಿಕೊಳ್ಳುವುದು ಬೇಡ.

ಮನಸ್ಸನ್ನು ನೆಮ್ಮದಿಯಿಂದ ರಕ್ಷಿಸಿಕೊಳ್ಳಲು ಮೌನದ ಹೊದಿಕೆ ಅತಿ ಮುಖ್ಯ. ಮೌನಕ್ಕೆ ಆಂತರಿಕ, ಬಾಹ್ಯ ಎಂಬ ಎರಡು ಮುಖಗಳುಂಟು. ನಾವು ಯಾವುದೇ ಕ್ರಿಯೆಗೆ ಮಾತಿನ ಮೂಲಕ ಪ್ರತಿಕ್ರಿಯಿಸುವ ಮುನ್ನ ಮನಸ್ಸಿನೊಂದಿಗೆ ಮೌನವಾಗಿ ಚರ್ಚಿಸಬೇಕು. ಮೌನದಿಂದ ಮೌನ ಮಾನವನಿಗೆ ಹೊಸ ಹೊಸ ಚಿಂತನೆಗೆ ಅವಕಾಶ ನೀಡುತ್ತದೆ. ಪರಿಸ್ಥಿತಿಯನ್ನು ಅವಲೋಕಿಸಿ, ಚಿಂತಿಸಿ ಆಡುವಂತಹ ಮಾತು ನಿಜಕ್ಕೂ ಪ್ರಖರವಾಗಿರುತ್ತದೆ.

ಮೌನ ಮನದ ರಕ್ಷಾ ಕವಚಗಳಲ್ಲೊಂದು. ಸೂಕ್ಷ್ಮ ಮನಸ್ಸಿಗೆ ಮಾತಿಗಿಂತಲೂ ಮೌನವೇ ಹಿತ. ನಿಶ್ಶಬ್ದದೊಳಗಿನ ಮಂಥನ ಸುಪ್ತ ಮನಸ್ಸಿಗೆ ಚೇತನ ಎನ್ನುವುದು ಹಿರಿಯರ ಮಾತು.

ಮನೋನಿಗ್ರಹಕ್ಕೆ ಇಂದಿಗೂ ಹಲವರು ಮೌನ ವ್ರತವನ್ನು ಆಚರಿಸುತ್ತಿರುವ ಉದಾಹರಹಣೆಗಳು ನಮ್ಮ ಮುಂದಿದೆ. ಇನ್ನೊಬ್ಬರ ಮನದೊಳಗಿರುವ ಮಾತನ್ನು ಮೌನವಾಗಿ ಆಲಿಸಿದಾಗ ಮಾತ್ರವೇ ಕೇಳುವುದು. ಅಜ್ಞಾನಿಗಳಿಗಂತೂ ಮೌನವೆಂಬುದೂ ಅತಿ ಅಗತ್ಯವಾದುದು. ಜ್ಞಾನಿಗಳಿಗೆ ಮೌನ ಕಾಲಬುಡದಲ್ಲಿಯೇ ಇರುತ್ತದೆ. ಮೌನ ಏಕಾಂತಕ್ಕೆ ತುಂಬಾ ಸನಿಹ. ಅಂತಹ ಏಕಾಂತದ ಸುಖವನ್ನು ಅನುಭವದಿಂದ ಮಾತ್ರ ಪಡೆಯಲು ಸಾಧ್ಯ ಎಂಬುದು ಗಾಂಧೀಜಿಯವರ ಮಾತು.

ಕೊಡಗಿನ ಸೊಬಗು ಮಲೆನಾಡಿನ ಸೌಂದರ್ಯದಲ್ಲಿ ತೇಲಿ ನಲಿದಂತಾಗುತ್ತದೆ, ಕಹಿ ಘಟನೆ ತುಂಬಿಕೊಂಡಿದ್ದರೆ ಮನಸ್ಸು ಒಡೆದ ಕನ್ನಡಿಯಾಗಿರುತ್ತದೆ. ಮನಸ್ಸು ತುಂಬಾ ಸೂಕ್ಷ್ಮವಾದದ್ದು. ಮನಸ್ಸನ್ನು ಗೆದ್ದವರು ಹೃದಯ ಮಂದಿರದಲ್ಲಿ ಸದಾ ಆರಾಧ್ಯ ಮೂರ್ತಿಯಾಗಿರುತ್ತಾರೆ. ನೋವುಂಟು ಮಾಡಿದರು ಬೇಗ ಮಾಸಿ ಹೋಗುತ್ತಾರೆ. ಕನ್ನಡಿ ನೋಡಲು ತುಂಬಾ ಸುಂದರವಾಗಿರುತ್ತದೆ. ಅದೇ ಕನ್ನಡಿ ಕೈ ತಪ್ಪಿದರೆ ಗಾಜು ಪುಡಿಪುಡಿ ಆಗುತ್ತದೆ. ಮನಸ್ಸು ಅಷ್ಟೇ…. ಒಮ್ಮೆ ಒಡೆದ ಮನಸ್ಸು ಒಡೆದ ಹಾಲಿನಂತೆ. ಹಾಗಾಗಿ ನಮ್ಮ ಮನಸ್ಸೆಂಬ ಕನ್ನಡಿಯನ್ನು ಹಿಡಿತದಲ್ಲಿ ಇಟ್ಟುಕೊಂಡು, ಬೇಕಾದನ್ನು ಮಾತ್ರ ಸ್ವೀಕರಿಸಿ, ಆನಂದಾಗಿಸೋಣ, ಉತ್ತಮ ಆರೋಗ್ಯ ಪಡಿಯೋಣ.

ಗೀತಾ ವಿ.ಆರ್‌.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ