ಕೆಲವೊಮ್ಮೆ ಜೀವನದಲ್ಲಿ ನಾವು ಹುಡುಕಿಕೊಂಡು ಹೋಗುವ ಸಂತೋಷ ನಮಗೆ ಸಿಗುವುದಿಲ್ಲ. ಆದರೆ… ನಾವು ಹುಡುಕದೇ ಇದ್ದಾಗ, ನಿರೀಕ್ಷೆಯೇ ಇಲ್ಲದ ಕ್ಷಣದಲ್ಲಿ, ಅದು ನಮ್ಮ ಬಾಗಿಲಿಗೆ ಬಂದು ನಿಂತುಬಿಡುತ್ತದೆ. ಅಂತಹ ಕ್ಷಣಗಳನ್ನೇ ಬಹುಶಃ “ಬಯಸದೇ ಬಂದ ಭಾಗ್ಯ” ಎನ್ನಬಹುದೇನೋ!

ಶಂಕರ ದೊಡ್ಡ ಐಟಿ ಕಂಪನಿಯೊಂದರಲ್ಲಿ ಜವಾಬ್ದಾರಿಯುತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದ. ಕೆಲಸ ಎಂದರೆ ಅವನಿಗೆ ಕೇವಲ ಉದ್ಯೋಗವಾಗಿರಲಿಲ್ಲ. ಅದು ಅವನ ಬದುಕಿನ ಒಂದು ಭಾಗವೇ ಆಗಿತ್ತು. ದಿನಕ್ಕೆ ಹನ್ನೆರಡು–ಹದಿನಾಲ್ಕು ಗಂಟೆ ಕೆಲಸ ಮಾಡುವುದು ಅವನಿಗೆ ಸಾಮಾನ್ಯವಾಗಿತ್ತು. ಆಗಷ್ಟೇ ಹುಟ್ಟಿದ್ದ ಮುದ್ದಾದ ಮಗಳು. ಇನ್ನೂ ತವರು ಮನೆಯಲ್ಲೇ ಬಾಣಂತಿಯಾಗಿದ್ದ ಹೆಂಡತಿ. ಮಗಳ ಮುಖವನ್ನು ನೋಡಬೇಕು, ಹೆಂಡತಿಯ ಜೊತೆ ಒಂದೆರಡು ಮಾತು ಮಾತನಾಡಬೇಕು, “ಹೇಗಿದ್ದೀಯ?” ಎಂದು ಕೇಳಬೇಕು ಎನ್ನುವ ಆಸೆ ಇದ್ದರೂ, ಕೆಲಸದ ಒತ್ತಡದ ಮುಂದೆ ಆ ಆಸೆಗಳೆಲ್ಲಾ ಮೂಲೆಗುಂಪಾಗುತ್ತಿದ್ದವು.

ಪ್ರತೀ ಬಾರಿ ಹೆಂಡತಿ, “ರೀ… ನೀವು ನಮಗೆ, ಕುಟುಂಬಕ್ಕೆ ಸಮಯವೇ ಕೊಡ್ತಾ ಇಲ್ಲಾ…” ಎಂದು ಬೇಸರದಿಂದ ಹೇಳುತ್ತಿದ್ದಳು. ಅದಕ್ಕೆ ಶಂಕರ ಎಂದಿನಂತೆ, “ಅಯ್ಯೋ… ಇರಮ್ಮಾ! ಕೆಲಸ ಇರುವಾಗ ಕೆಲಸ ಮಾಡಿಬಿಡಬೇಕು. ಇನ್ನೇನು? ಕೆಲಸ ಮುಗಿದ ಮೇಲೆ ನಾವೆಲ್ಲಾ ಆರಾಮವಾಗಿ ಇರೋಣ…” ಎಂದು ಸಮಜಾಯಿಷಿ ಹೇಳುತ್ತಿದ್ದ. ಅವಳಿಗೆ ಆ ಮಾತು ಸಮಾಧಾನ ಕೊಡುತ್ತಿತ್ತೋ, ಇಲ್ಲವೋ ಗೊತ್ತಿಲ್ಲ.

ಆದರೆ ಶಂಕರ ಮಾತ್ರ ತನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ ಎಂಬ ಸಮಾಧಾನದಿಂದ ಮತ್ತೆ ಕಂಪ್ಯೂಟರ್ ಮುಂದೆ ಕುಳಿತುಬಿಡುತ್ತಿದ್ದ. ಕೆಲವೊಮ್ಮೆ ಕೆಲಸದ ತೀವ್ರತೆ ಎಷ್ಟಿರುತ್ತಿತ್ತೆಂದರೆ, ಕಚೇರಿಗೆ ಹೋದ ಮೇಲೆ 24 ಗಂಟೆ, 48 ಗಂಟೆ, ಕೆಲವೊಮ್ಮೆ 72 ಗಂಟೆಯವರೆಗೂ ಮನೆಗೆ ಬಾರದ ಸಂದರ್ಭಗಳೂ ಬರುತ್ತಿದ್ದವು. ಅಂತಹ ಪರಿಸ್ಥಿತಿ ಯಾವಾಗ ಬೇಕಾದರೂ ಬರಬಹುದು ಎಂಬ ದೂರದೃಷ್ಟಿಯಿಂದಲೇ, ಅವನ ಕಚೇರಿಯ ಡ್ರಾಯರ್‌ನಲ್ಲಿ ಬ್ರಷ್, ಪೇಸ್ಟ್, ಸೋಪು, ಟವೆಲ್ ಮತ್ತು ಒಂದೆರಡು ಜೋಡಿ ಬಟ್ಟೆಗಳು ಯಾವಾಗಲೂ ಸಿದ್ಧವಾಗಿರುತ್ತಿದ್ದವು.

ಮನೆಯಲ್ಲಿರುವ ಶಂಕರನಿಗಿಂತ ಕಚೇರಿಯಲ್ಲಿರುವ ಶಂಕರನನ್ನೇ ಹೆಚ್ಚು ನೋಡ್ತೀವಿ!” ಎಂದು ಅವನ ತಂದೆ-ತಾಯಿಯೂ ಕೆಲವೊಮ್ಮೆ ತಮಾಷೆ ಮಾಡುತ್ತಿದ್ದರು. ಆದರೂ ಮಗನ ಕೆಲಸದ ಸ್ವಭಾವ ಅವರಿಗೆ ಚೆನ್ನಾಗಿ ಗೊತ್ತಿತ್ತು. “ಮನೆಗೆ ಬರಲು ಆಗದಿದ್ದರೆ ಪರವಾಗಿಲ್ಲ. ಆದರೆ ಸಮಯ ಸಿಕ್ಕಾಗ ಒಂದು ಕರೆ ಮಾಡು. ನೀನು ಚೆನ್ನಾಗಿದ್ದೀಯ ಅನ್ನೋದು ಗೊತ್ತಾದರೆ ಸಾಕು,” ಎಂದು ಅವರು ಹೇಳುತ್ತಿದ್ದರು. ಅದು ಅವರ ಮಗನ ಮೇಲಿನ ಪ್ರೀತಿ.

ಅದೊಂದು ದಿನವೂ ಶಂಕರ ಎಂದಿನಂತೆ ಕೆಲಸಕ್ಕೆ ಹೋಗಿದ್ದ. ಆದರೆ ಇದ್ದಕ್ಕಿದ್ದಂತೆ ಒಂದು ತುರ್ತು ಕರೆ ಬಂತು. “ತಕ್ಷಣ ಮುಂಬೈಗೆ ಹೋಗಬೇಕು.” ಮತ್ತೇನು? ಮನೆಗೆ ಫೋನ್ ಮಾಡಿ, “ತುರ್ತು ಕೆಲಸ ಬಂದಿದೆ. ಮುಂಬೈಗೆ ಹೋಗ್ತಿದ್ದೀನಿ. ಬಹುಶಃ ತಡರಾತ್ರಿ ಬರಬಹುದು, ಇಲ್ಲವೇ ನಾಳೆ ಆಗಬಹುದು,” ಎಂದು ತಿಳಿಸಿದ. ಹೆಂಡತಿ ಏನಾದರೂ ಹೇಳುವ ಮುನ್ನವೇ ಮುಂದಿನ ಕೆಲಸದ ಚಿಂತೆ ಅವನನ್ನು ಆವರಿಸಿತ್ತು.

ಮುಂಬೈ ವಿಮಾನ ನಿಲ್ದಾಣ ತಲುಪುವಷ್ಟರಲ್ಲಿ ಅಲ್ಲಿನ ಸಹೋದ್ಯೋಗಿ ಅವನಿಗಾಗಿ ಕಾಯುತ್ತಿದ್ದ. ಇಬ್ಬರೂ ಸಮಯ ವ್ಯರ್ಥ ಮಾಡದೆ ನೇರವಾಗಿ ಪ್ರಭಾದೇವಿಯಲ್ಲಿದ್ದ VSNL ಡೇಟಾ ಸೆಂಟರ್ ಕಡೆಗೆ ದೌಡಾಯಿಸಿದರು. ಮುಂಬೈನ ಡೇಟಾ ಸೆಂಟರ್ ಶಂಕರನಿಗೆ ಹೊಸದು. ಆದರೆ ಅವನ ಸಹೋದ್ಯೋಗಿಗೆ ಅದು ಎರಡನೇ ಮನೆಯಂತಿತ್ತು. ಅಲ್ಲಿನ ಬಹುತೇಕ ಸಿಬ್ಬಂದಿಗೆ ಆತ ಪರಿಚಿತ. ಒಳಗೆ ಕಾಲಿಟ್ಟ ತಕ್ಷಣ, “ನಮಸ್ಕಾರ ಸರ್!” “ಹೇಗಿದ್ದೀರಾ?” ಎಂಬ ಮಾತುಗಳು ಕೇಳಿಬರುತ್ತಿದ್ದವು.

ಅವನ ಜೊತೆ ಹೊಸದಾಗಿ ಬಂದಿದ್ದ ಶಂಕರನನ್ನು ನೋಡಿದ ಕೆಲವರು ಕುತೂಹಲದಿಂದ, “ಇವರು ಯಾರು?” ಎಂಬ ಪ್ರಶ್ನಾರ್ಥಕ ಮುಖ ಮಾಡಿದರು. ಸಹೋದ್ಯೋಗಿ ತಕ್ಷಣ, “ಇವರು ಬೆಂಗಳೂರಿನಿಂದ ಬಂದಿದ್ದಾರೆ. ನಮ್ಮ ಸರ್ವರ್ ಸಮಸ್ಯೆ ಬಗೆಹರಿಸಲು ಬಂದಿದ್ದಾರೆ,” ಎಂದು ಪರಿಚಯಿಸಿದ. ಶಂಕರ ಸಣ್ಣ ನಗು ಬೀರಿ ಎಲ್ಲರಿಗೂ ನಮಸ್ಕರಿಸಿ ನೇರವಾಗಿ ಸರ್ವರ್ ರ್ಯಾಕ್ ಬಳಿ ಹೋದ.

ಪರಿಶೀಲಿಸಿದಾಗ ಪರಿಸ್ಥಿತಿ ಗಂಭೀರವಾಗಿತ್ತು. Server OS crash ಆಗಿತ್ತು. ಎಷ್ಟೇ ಪ್ರಯತ್ನಿಸಿದರೂ ಸರಿಯಾಗಲಿಲ್ಲ. ಗಂಟೆಗಳು ಕಳೆಯುತ್ತಿದ್ದವು. ಒಂದು ಹಂತದಲ್ಲಿ ಶಂಕರ ನಿರ್ಧಾರಕ್ಕೆ ಬಂದ. “OS reinstall ಮಾಡೋಣ. ನಂತರ Application ಮತ್ತು Data restore ಮಾಡೋಣ.” ಬೆಂಗಳೂರಿನ ಮ್ಯಾನೇಜರ್‌ಗೆ ಕರೆ ಮಾಡಿ ಪರಿಸ್ಥಿತಿಯನ್ನು ವಿವರಿಸಿ ಅನುಮತಿ ಪಡೆದು ಕೆಲಸ ಆರಂಭಿಸಿದ. ಅವನ ತಲೆಯಲ್ಲಿ ಒಂದೇ ಯೋಚನೆ.

“ಇವತ್ತು ಹೇಗಾದರೂ ಕೆಲಸ ಮುಗಿಸಿ ಬೆಂಗಳೂರಿಗೆ ಹೋಗಬೇಕು.” ಮಗಳು ಹುಟ್ಟಿದ ಮೇಲೆ ಅವಳನ್ನು ನೋಡಲು ಕೂಡ ಸಮಯ ಸಿಗದ ತಂದೆಯ ಮನಸ್ಸಿನಲ್ಲಾದರೂ, ಆ ಪುಟ್ಟ ಕಂದಮ್ಮನ ಮುಖ ಒಮ್ಮೆ ಕಣ್ಣ ಮುಂದೆ ಬಂದಿರಬಹುದೇನೋ! ಆದರೆ ಸರ್ವರ್‌ಗೆ ಅದ್ಯಾವ ಕರುಣೆಯೂ ಇರಲಿಲ್ಲ. OS reinstall ಆಗಲು ಸಮಯ. Restore ಆಗಲು ಸಮಯ. Testing ಆಗಲು ಸಮಯ.

ಒಂದು ಕೆಲಸ ಮುಗಿದರೆ ಮತ್ತೊಂದು ಕೆಲಸ ಎದುರು. ಶಂಕರ ಗಡಿಯಾರ ನೋಡಿದ. ಸಮಯ ಮಧ್ಯಾಹ್ನ ಮೂರು. ಅಷ್ಟರಲ್ಲಿ ಅವನ ಹೊಟ್ಟೆ ಜೋರಾಗಿ “ಗುಡುಗುಡು” ಎಂದು ತನ್ನ ಹಕ್ಕನ್ನು ಕೇಳಿತು. ಬೆಳಿಗ್ಗೆ ಸ್ವಲ್ಪ ತಿಂಡಿ ತಿಂದಿದ್ದ. ಮಧ್ಯಾಹ್ನ ಊಟ ಮಾಡಿದ್ದೇನೆ ಎಂಬುದನ್ನೇ ಮರೆತುಬಿಟ್ಟಿದ್ದ. “ಬಾ… OS reinstall ಆಗೋವರೆಗೂ ಊಟ ಮಾಡಿಕೊಂಡು ಬರೋಣ,” ಎಂದು ಸಹೋದ್ಯೋಗಿಯೊಂದಿಗೆ ಡೇಟಾ ಸೆಂಟರ್‌ನ ಕ್ಯಾಂಟೀನ್‌ಗೆ ಹೋದ. ಅಲ್ಲಿ ಕೇಳಿದ ಉತ್ತರ ಅವನಿಗೆ ಇನ್ನೊಂದು ಆಘಾತ.

“ಸರ್… ಊಟ ೨:೩೦ಕ್ಕೇ ಮುಗಿದುಹೋಯ್ತು. ಮೊದಲೇ ಹೇಳಿದ್ದರೆ ನಿಮಗಾಗಿ ಊಟ ತೆಗೆದಿಡುತ್ತಿದ್ದೆವು.” ಶಂಕರ ಕ್ಯಾಂಟೀನ್‌ನ ಒಂದು ಮೂಲೆಯಲ್ಲಿ ನಿಂತು ಖಾಲಿ ತಟ್ಟೆಗಳನ್ನು ನೋಡಿದ. ಹೊಟ್ಟೆ ಹೇಳುತ್ತಿತ್ತು— “ನನಗೆ ಕೆಲಸ ಬೇಡ… ಊಟ ಬೇಕು!” ಹೊರಗೆ ಹೋಗಿ ಊಟ ಮಾಡಬೇಕೆಂದರೆ ಕನಿಷ್ಠ ಒಂದು ಗಂಟೆ ಹೋಗುತ್ತದೆ. ಅಷ್ಟರಲ್ಲಿ ಕೆಲಸ? ಸರ್ವರ್? ಬೆಂಗಳೂರು? ಎಲ್ಲವೂ ತಲೆಯೊಳಗೆ ಓಡಾಡುತ್ತಿದ್ದವು.

ಅದೇ ಸಮಯದಲ್ಲಿ ಕ್ಯಾಶ್ ಕೌಂಟರ್ ಬಳಿ ನಿಂತಿದ್ದ ವ್ಯಕ್ತಿಯೊಬ್ಬ ಮತ್ತೊಬ್ಬನ ಜೊತೆ ಕನ್ನಡದಲ್ಲಿ ಮಾತನಾಡುತ್ತಿದ್ದ. ಶಂಕರನ ಕಿವಿಗೆ ಆ ಕನ್ನಡ ಮಾತು ಬಿದ್ದ ಕ್ಷಣ— ಮರುಭೂಮಿಯಲ್ಲಿ ನೀರು ಸಿಕ್ಕಂತಾಯಿತು! ಅವನು ತಕ್ಷಣ,

“ಹೋಯ್! ನಮಸ್ಕಾರ… ಊರು ಕಡೆಯವರಾ? ಯಾವ ಊರು?” ಎಂದು ಕೇಳಿದ. ಆ ವ್ಯಕ್ತಿ ನಗುತ್ತಾ, “ನಮ್ಮದು ಕುಂದಾಪ್ರ!” ಶಂಕರನ ಮುಖ ಅರಳಿತು. “ಅಯ್ಯೋ! ನಮ್ಮದು ಬೆಂಗಳೂರು. ಆದರೆ ಕುಂದಾಪುರ, ಕೋಟೇಶ್ವರ, ತೆಕ್ಕಟ್ಟೆಯಲ್ಲಿ ನಮ್ಮ ಸ್ನೇಹಿತರು ತುಂಬಾ ಜನ ಇದ್ದಾರೆ. ಆಗಾಗ್ಗೆ ಅಲ್ಲಿಗೆ ಹೋಗ್ತಿರ್ತೀನಿ.” ಅಷ್ಟೇ.

ಕನ್ನಡ ಎಂಬ ಎರಡು ಅಕ್ಷರಗಳು ಎರಡು ಅಪರಿಚಿತರನ್ನು ಕ್ಷಣಾರ್ಧದಲ್ಲಿ ಪರಿಚಿತರನ್ನಾಗಿ ಮಾಡಿಬಿಟ್ಟವು.

ಭಾಷೆ ಕೆಲವೊಮ್ಮೆ ಮಾತಾಡಲು ಮಾತ್ರ ಇರುವುದಿಲ್ಲ. ಅದು ಮನುಷ್ಯನನ್ನು ಮನುಷ್ಯನಿಗೆ ಜೋಡಿಸುವ ಸೇತುವೆಯೂ ಹೌದು. ಶಂಕರ ಸಂಕೋಚದಿಂದ, “ನಮ್ಮಿಬ್ಬರಿಗೂ ಊಟದ ವ್ಯವಸ್ಥೆ ಮಾಡಬಹುದಾ?” ಎಂದು ಕೇಳಿದ. “ಓಯ್, ನಿಲ್ಲಿ. ಊಟದ ಸಮಯ ಮುಗಿದುಹೋಗಿದೆ. ಆದರೂ ಒಳಗೆ ಏನಾದರೂ ಉಳಿದಿದೆಯಾ ನೋಡ್ತೀನಿ,” ಎಂದು ಹೇಳಿ ಆತ ಒಳಗೆ ಹೋದ. ಶಂಕರ ಅಲ್ಲೇ ನಿಂತ. ಮನಸ್ಸಿನಲ್ಲಿ ಒಂದು ಮಾತು ಬಂತು—

“ಕನ್ನಡ ತಾಯಿ ಯಾವ ಕನ್ನಡಿಗನನ್ನೂ ಹಸಿವಿನಿಂದ ಇರಲು ಬಿಡುವುದಿಲ್ಲ.” ಸ್ವಲ್ಪ ಹೊತ್ತಿನ ನಂತರ ಆತ ಹೊರಗೆ ಬಂದ. “ಸರ್… ಊಟ ಖಾಲಿಯಾಗಿದೆ. ಪಲ್ಯ ಇಲ್ಲ, ಹಪ್ಪಳ ಇಲ್ಲ, ಪಾಯಸವೂ ಇಲ್ಲ. ಆದರೆ ನಮಗೆ ಅಂತ ತೆಗೆದಿಟ್ಟಿದ್ದ ಸ್ವಲ್ಪ ಅನ್ನ, ಸಾಂಬಾರ್, ರಸಂ, ಮೊಸರು ಇದೆ. ಆಗುತ್ತಾ?” “ಅಯ್ಯೋ ಮಾರಾಯಾ! ಮೊದಲು ಕೊಡು!” ಆ ಕ್ಷಣ ಶಂಕರನಿಗೆ ಅದು ಪಂಚತಾರಾ ಹೋಟೆಲ್‌ನ ಊಟಕ್ಕಿಂತಲೂ ದೊಡ್ಡ ಔತಣವಾಗಿತ್ತು. ಮೂರು ದಿನದಿಂದ ಅನ್ನ ಕಂಡಿಲ್ಲವೇನೋ ಎಂಬಂತೆ ಇಬ್ಬರೂ ಊಟ ಮಾಡಿದರು. ಕೊನೆಯಲ್ಲಿ ಹೊಟ್ಟೆ ತುಂಬಿದ ಸಂತೋಷಕ್ಕೆ ಸಣ್ಣದಾಗಿ “ಡರ್…” ಎಂದು ತೇಗಿ,

ಎಷ್ಟು ದುಡ್ಡಾಯ್ತು?” ಎಂದು ಕೇಳಿದ. ಆ ವ್ಯಕ್ತಿ ತಕ್ಷಣ, “ಓಯ್ ಮಾರಾಯ್ರೇ! ನೀವು ನಮ್ಮವರು. ನಿಮ್ಮ ಬಳಿ ಹಣ ತೆಗೆದುಕೊಳ್ಳುವುದಾ?” ಶಂಕರನ ಮನಸ್ಸು ಮತ್ತಷ್ಟು ತುಂಬಿತು. ಅವನು ಹೋಗುವಾಗ, “ರಾತ್ರಿಯ ಊಟ ಬೇಕಾ?” ಎಂದು ಕೇಳಿದರು. “ಹೌದು ಬೇಕು!” “ಸರಿ. ಎಂಟು–ಎಂಟೂವರೆ ಗಂಟೆಗೆ ಬನ್ನಿ.” ಶಂಕರ ರಾತ್ರಿಯ ಊಟದ ಹಣವನ್ನು ಮುಂಗಡವಾಗಿ ಕೊಟ್ಟು, “ಧನ್ಯವಾದಗಳು,” ಎಂದು ಹೇಳಿ ಮತ್ತೆ ಕೆಲಸದ ಜಗತ್ತಿಗೆ ಮರಳಿದ.

ಇದೆಲ್ಲವನ್ನೂ ನೋಡುತ್ತಿದ್ದ ಅವನ ಸಹೋದ್ಯೋಗಿ ಮಾತ್ರ ಅಚ್ಚರಿಯಿಂದ, “ಅಲ್ಲಾ! ನಾನು ಎಷ್ಟೋ ದಿನಗಳಿಂದ ಇಲ್ಲಿಗೆ ಬರುತ್ತಿದ್ದೀನಿ. ಇಲ್ಲಿನ ಬಹುತೇಕರು ನನಗೆ ಪರಿಚಿತರು. ಆದರೆ ನನಗೆಂದೂ ಈ ಪರಿಯ ಆತಿಥ್ಯ ಸಿಕ್ಕಿರಲಿಲ್ಲ!” ಎಂದ. ಶಂಕರ ನಕ್ಕು,

“ಇದಕ್ಕೇ ಹೇಳೋದು… ಅಚಾನಕ್ಕಾಗಿ ಬಂದ ಅದೃಷ್ಟ!” ಸ್ವಲ್ಪ ನಿಂತು, ಮತ್ತು ನಮ್ಮ ಭಾಷೆಯ ತಾಕತ್ತು! ಎಂದ.

ನಂತರ ಕೆಲಸ ಇನ್ನೂ ಎರಡು–ಮೂರು ದಿನ ಎಳೆದಿತು. ಆ ಎರಡು–ಮೂರು ದಿನಗಳ ಕಾಲ ಶಂಕರನಿಗೆ ಆ ಕ್ಯಾಂಟೀನ್‌ನಲ್ಲಿ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿಯ ಊಟ—ಎಲ್ಲವೂ ರಾಜಾತಿಥ್ಯದಂತೆ ದೊರೆಯಿತು. ಅದು ಕೇವಲ ಊಟವಾಗಿರಲಿಲ್ಲ. ಅದು ದೂರದ ಊರಿನಲ್ಲಿ ಸಿಕ್ಕ ಮನೆಯ ಮಮತೆ.

ಆದರೆ ಕೆಲಸದ ಒತ್ತಡ ಎಷ್ಟೇ ಇದ್ದರೂ ಒಂದು ವಿಷಯವನ್ನು ಮಾತ್ರ ಶಂಕರ ಮರೆಯಲಿಲ್ಲ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ತನ್ನ ತಂದೆ-ತಾಯಿಗೆ ಕರೆ. ಹೆಂಡತಿಗೆ ಕರೆ. ಮಗಳ ವಿಚಾರ. ಮನೆಯ ವಿಚಾರ. ಅವನ ಜೀವನದಲ್ಲಿ ಕುಟುಂಬಕ್ಕೆ ಸಮಯ ಕಡಿಮೆಯಾಗಿರಬಹುದು. ಆದರೆ ಪ್ರೀತಿ ಮಾತ್ರ ಕಡಿಮೆಯಾಗಿರಲಿಲ್ಲ.

ಒಂದು ದಿನ ಹೆಂಡತಿ ಫೋನ್‌ನಲ್ಲಿ, “ರೀ… ನೀವು ಹೇಗೂ ಮುಂಬೈಗೆ ಹೋಗಿದ್ದೀರಲ್ಲಾ. ಅಲ್ಲಿ ಚಂದನೆಯ ವಿವಿಧ ಪ್ರಾಣಿ-ಪಕ್ಷಿಗಳ ಆಕಾರದ ಫರ್ ಗೊಂಬೆಗಳು ಸಿಗುತ್ತವೆ ಅಂತ ಕೇಳಿದ್ದೀನಿ. ನಮ್ಮ ಮಗಳಿಗಾಗಿ ಒಂದೆರಡು ತೆಗೆದುಕೊಂಡು ಬನ್ನಿ. ಅವಳು ಸ್ವಲ್ಪ ದೊಡ್ಡವಳಾದಾಗ ಆಟವಾಡಬಹುದು,” ಎಂದಳು. “ಸರಿ ಸರಿ… ಪ್ರಯತ್ನಿಸುತ್ತೀನಿ,” ಎಂದು ಶಂಕರ ಹೇಳಿದ.

ಆದರೆ ಅವನಿಗೆ ಗೊತ್ತಿತ್ತು—

ಪ್ರಯತ್ನಿಸುವುದು ಮತ್ತು ಸಮಯ ಸಿಗುವುದು ಎರಡು ಬೇರೆ ವಿಚಾರಗಳು. ಕೆಲಸವೇ ಕೆಲಸ. ಡೇಟಾ ಸೆಂಟರ್‌ನಿಂದ ಹೊರಗೆ ಹೋಗಲು ಸಮಯವಿಲ್ಲ. ಮಗಳ ಗೊಂಬೆಯ ಮಾತು ನಿಧಾನವಾಗಿ ಅವನ ನೆನಪಿನಿಂದ ಜಾರಿಹೋಯಿತು.

ಕೊನೆಗೂ ಎಲ್ಲಾ ಕೆಲಸ ಮುಗಿಯಿತು. ಸರ್ವರ್‌ಗಳು ಸರಿಯಾಗಿ ಕೆಲಸ ಮಾಡುತ್ತಿವೆ. Applicationಗಳು ಓಡುತ್ತಿವೆ. Data restore ಆಗಿದೆ. ಮೂರು–ನಾಲ್ಕು ದಿನಗಳ ಕಾಲ ಎಲ್ಲವನ್ನೂ ಗಮನಿಸಿ, ಕೊನೆಗೆ ಶಂಕರ ಬೆಂಗಳೂರಿಗೆ ಮರಳಲು ವಿಮಾನ ನಿಲ್ದಾಣಕ್ಕೆ ಬಂದ. ಚೆಕ್-ಇನ್ ಮಾಡುವಾಗಲೇ—

“ಅಯ್ಯೋ!” ಹೆಂಡತಿ ಹೇಳಿದ್ದ ಗೊಂಬೆಗಳು ನೆನಪಾದವು. ವಿಮಾನ ನಿಲ್ದಾಣದಲ್ಲಿ ಹುಡುಕಿದ. ಅಂದಿನ ವಿಮಾನ ನಿಲ್ದಾಣಗಳು ಇಂದಿನಷ್ಟು ಶಾಪಿಂಗ್ ಸೌಲಭ್ಯ ಹೊಂದಿರಲಿಲ್ಲ. ಏನೂ ಸಿಗಲಿಲ್ಲ. “ಸರಿ ಬಿಡು… ಒಂದೆರಡು ದಿನ ಬೇಸರ ಮಾಡಿಕೊಳ್ಳುತ್ತಾಳೆ. ಬೆಂಗಳೂರಿಗೆ ಹೋದ ಮೇಲೆ ಒಳ್ಳೆಯ ಗೊಂಬೆ ತೆಗೆದುಕೊಂಡರಾಯಿತು,” ಎಂದು ಮನಸ್ಸಿಗೆ ಸಮಾಧಾನ ಮಾಡಿಕೊಂಡ. ಅಷ್ಟರಲ್ಲಿ,

“Excuse me, sir…” ಎಂದು ಒಬ್ಬ ಮಹಿಳೆಯ ಧ್ವನಿ ಕೇಳಿಸಿತು. ಅವಳು ಒಂದು ಚಿಕ್ಕ ಆಟವೊಂದನ್ನು ಹಿಡಿದುಕೊಂಡು, “Sir, we have a lucky draw from your airlines. Can you please roll the dice, sir?” ಎಂದಳು.

ಶಂಕರನ ಮನಸ್ಸಿನಲ್ಲಿ ಮೊದಲಿಗೆ ಬಂದ ಯೋಚನೆ— “ಅಯ್ಯೋ, ಇದೆಲ್ಲಾ ಬೇಕಿತ್ತಾ? ಹೆಸರು, ಫೋನ್ ನಂಬರ್ ತೆಗೆದುಕೊಂಡು ನಂತರ ಕರೆ ಮಾಡಿ ಪೀಡಿಸುತ್ತಾರೆ!” ಆದರೆ ವಿಮಾನಕ್ಕೆ ಇನ್ನೂ ಸಮಯವಿತ್ತು. “ಸರಿ… ಅದೃಷ್ಟ ಪರೀಕ್ಷಿಸಿಯೇ ಬಿಡೋಣ,” ಎಂದು ದಾಳವನ್ನು ಕೈಗೆತ್ತಿಕೊಂಡ. ದಾಳ ಉರುಳಿತು. ಸಂಖ್ಯೆ 5

ಅವನ ಅದೃಷ್ಟ ಸಂಖ್ಯೆ! “ವಾವ್!” ಎಂದು ಆಕೆ ಸಂತೋಷದಿಂದ ಹೇಳಿ ಬಹುಮಾನ ತೋರಿಸಿದಳು. ಒಂದು ಸುಂದರವಾದ ಚಾಕು ಸೆಟ್! ಶಂಕರನ ಮುಖ ಕ್ಷಣಾರ್ಧದಲ್ಲಿ ಬದಲಾಯಿತು. ಮನಸ್ಸಿನಲ್ಲಿ, “ಅಯ್ಯೋ ದೇವರೇ! ಹೆಂಡತಿ ಹೇಳಿದ ಗೊಂಬೆ ತರದೆ, ಚಾಕು ಸೆಟ್ ತೆಗೆದುಕೊಂಡು ಮನೆಗೆ ಹೋದರೆ… ಈ ಚಾಕುಗಳಿಂದಲೇ ನನ್ನ ಕಥೆ ಮುಗಿಸಿಬಿಡುತ್ತಾಳೆ!” ಎಂದುಕೊಂಡ. ಬೇರೆ ಬಹುಮಾನಗಳೇನಿವೆ ಎಂದು ನೋಡುತ್ತಿದ್ದ.

ಅಷ್ಟರಲ್ಲಿ ಅವನ ಕಣ್ಣು ಒಂದು ಕಡೆ ಬಿತ್ತು. ಸಣ್ಣ ಸಣ್ಣ ಪ್ರಾಣಿ-ಪಕ್ಷಿಗಳ ಆಕಾರದ ಮುದ್ದಾದ ಗೊಂಬೆಗಳು! ಅವನಿಗೆ ತಕ್ಷಣ ಮಗಳ ಮುಖ ನೆನಪಾಯಿತು. ಅವಳ ಪುಟ್ಟ ಕೈಗಳು… ಅವಳ ಮುದ್ದಾದ ನಗು… ಇನ್ನೂ ಮಾತೇ ಸರಿಯಾಗಿ ಬರದ ಆ ಕಂದಮ್ಮ… “ಇದನ್ನೇ ತೆಗೆದುಕೊಂಡು ಹೋಗಬೇಕು,” ಎಂದು ಮನಸ್ಸಿನಲ್ಲಿ ತೀರ್ಮಾನಿಸಿದ. ತಕ್ಷಣ,

“Since I already have enough knife sets at home, can I exchange this for those dolls? I have a little one at home,” ಎಂದು ಕೇಳಿದ. ಅವಳು ಒಂದು ಕ್ಷಣವೂ ಯೋಚಿಸದೆ, “Yes, sir. You can exchange.” ಎಂದು ಹೇಳಿ ಅವನು ಆಯ್ಕೆ ಮಾಡಿದ ಗೊಂಬೆಗಳನ್ನು ಕೈಗೆ ಕೊಟ್ಟಳು. ಶಂಕರನ ಮುಖದಲ್ಲಿ ಮೂಡಿದ ಸಂತೋಷಕ್ಕೆ ಅಳತೆಯೇ ಇರಲಿಲ್ಲ.

ಅವನು ಹುಡುಕಲಿಲ್ಲ. ಅವನು ಖರೀದಿಸಲಿಲ್ಲ. ಅವನು ಯೋಜಿಸಿರಲಿಲ್ಲ.

ಆದರೂ…

ಮಗಳಿಗಾಗಿ ಹೆಂಡತಿ ಕೇಳಿದ್ದ ಅದೇ ರೀತಿಯ ಗೊಂಬೆಗಳು ಅವನ ಕೈಗೆ ಬಂದುಬಿಟ್ಟಿದ್ದವು. ಇದಕ್ಕಲ್ಲವೇ ಹೇಳೋದು “ಬಯಸದೇ ಬಂದ ಭಾಗ್ಯ!”

ಮನೆಗೆ ತಲುಪುವಷ್ಟರಲ್ಲಿ ತಡರಾತ್ರಿ ಆಗಿತ್ತು. ಆದ್ದರಿಂದ ಮರುದಿನ ಬೆಳಿಗ್ಗೆ ತವರು ಮನೆಯಲ್ಲಿದ್ದ ಹೆಂಡತಿ ಮತ್ತು ಮಗಳನ್ನು ನೋಡಲು ಹೊರಟ. ಈ ಬಾರಿ ಮಾತ್ರ ಅವನ ಕೈ ಖಾಲಿಯಾಗಿರಲಿಲ್ಲ. ಅವನ ಕೈಯಲ್ಲಿ ಮಗಳಿಗಾಗಿ ಮುದ್ದಾದ ಗೊಂಬೆಗಳಿದ್ದವು. ಹೆಂಡತಿ ಅವನನ್ನು ನೋಡಿದ ತಕ್ಷಣವೇ,

“ರೀ…!” ಎಂದು ಸಂತೋಷದಿಂದ ಓಡಿ ಬಂದಳು. ಗೊಂಬೆಗಳನ್ನು ನೋಡಿದಳು. ಅವಳ ಕಣ್ಣುಗಳು ಅರಳಿದವು. “ರೀ… ತುಂಬಾ ಚೆನ್ನಾಗಿವೆ ಈ ಗೊಂಬೆಗಳು!” ಸ್ವಲ್ಪ ಹೊತ್ತು ಅವುಗಳನ್ನು ನೋಡುತ್ತಾ, “Actually… ನಾನೂ ಇದೇ ರೀತಿಯ ಸಣ್ಣ ಸಣ್ಣ ಗೊಂಬೆಗಳನ್ನೇ ತೆಗೆದುಕೊಂಡು ಬರಬೇಕು ಅಂತ ಯೋಚಿಸಿದ್ದೆ. ಈ ವಯಸ್ಸಿನಲ್ಲೇ ಮಕ್ಕಳು ಆಡಲು ಇದು ತುಂಬಾ ಅನುಕೂಲ ಅಂತ ನಿಮಗೆ ಹೇಳಬೇಕು ಅಂದುಕೊಂಡಿದ್ದೆ. ಆದರೆ ಮರೆತೇ ಬಿಟ್ಟಿದ್ದೆ!”

ಅವಳು ಶಂಕರನ ಕಡೆ ಪ್ರೀತಿಯಿಂದ ನೋಡಿ, “ನೋಡಿ… ನೀವು ನನ್ನ ಮನಸ್ಸಿನಲ್ಲಿದ್ದದ್ದನ್ನೇ ತಂದಿದ್ದೀರಲ್ಲಾ!” ಎಂದಳು. ಆ ಮಾತು ಕೇಳಿದ ಶಂಕರನ ಮನಸ್ಸು ತುಂಬಿಬಂದಿತು. ಒಂದೆಡೆ ಮಗಳ ಮೇಲಿನ ಪ್ರೀತಿ. ಮತ್ತೊಂದೆಡೆ ಹೆಂಡತಿಯ ಸಂತೋಷ. ಇಷ್ಟೆಲ್ಲಾ ದಿನ ಕೆಲಸದ ಹಿಂದೆ ಓಡುತ್ತಿದ್ದ ಅವನಿಗೆ ಆ ಕ್ಷಣದಲ್ಲಿ ಮಾತ್ರ— “ನಾನು ಯಾರಿಗಾಗಿ ಇಷ್ಟೆಲ್ಲಾ ಓಡಾಡುತ್ತಿದ್ದೇನೆ?” ಎಂಬ ಪ್ರಶ್ನೆಗೆ ಉತ್ತರ ಸಿಕ್ಕಂತಾಯಿತು. ಆದರೆ…

ಹೆಂಡತಿ ಅವನನ್ನು ವಾಚಾಮಗೋಚರವಾಗಿ ಹೊಗಳುತ್ತಿದ್ದರೂ, “ನಿಮಗೆ ಗೊತ್ತಾ? ಇಷ್ಟು ಚೆನ್ನಾಗಿ ಯೋಚಿಸಿ ತಂದಿದ್ದೀರಲ್ಲಾ!” ಎಂದು ಹೇಳುತ್ತಿದ್ದರೂ… ಶಂಕರ ಮಾತ್ರ ಬಾಯಿ ಬಿಡಲಿಲ್ಲ. ಏಕೆಂದರೆ… ಅದು ಅವನು ಕೊಂಡು ತಂದಿದ್ದಲ್ಲ! ಅದು Airline‌ನ Lucky Drawನಲ್ಲಿ ಸಿಕ್ಕಿದ್ದು! ಆ ವಿಷಯವನ್ನು ಹೇಳಿದರೆ ಇಷ್ಟು ಹೊತ್ತು ತನ್ನ ಬಗ್ಗೆ ಹೆಂಡತಿಯ ಮನಸ್ಸಿನಲ್ಲಿ ಕಟ್ಟಿಕೊಂಡಿದ್ದ “ಪ್ರೀತಿಯ ಗಂಡ”ನ ಚಿತ್ರ ಸ್ವಲ್ಪ ಕದಲಬಹುದೆಂಬ ಭಯವೋ ಏನೋ! ಆದ್ದರಿಂದ ಶಂಕರ ಸುಮ್ಮನೆ ನಗುತ್ತಾ,

“ಹೌದಾ… ನಿನಗೆ ಇಷ್ಟ ಆಯ್ತಲ್ಲಾ… ಅದೇ ಸಾಕು,” ಎಂದುಬಿಟ್ಟ. ಆ ದಿನ ಮೊದಲ ಬಾರಿಗೆ ಕೆಲಸ, ಸರ್ವರ್, ಡೇಟಾ, OS, Deadline ಯಾವುದೂ ಅವನ ತಲೆಯಲ್ಲಿರಲಿಲ್ಲ. ಅವನ ಕಣ್ಣ ಮುಂದೆ ಇದ್ದದ್ದು— ಮಗಳ ಕೈಯಲ್ಲಿ ಆಡುತ್ತಿದ್ದ ಆ ಪುಟ್ಟ ಗೊಂಬೆಗಳು. ಹೆಂಡತಿಯ ಮುಖದಲ್ಲಿದ್ದ ಆ ಸಂತೋಷ. ಮತ್ತು ತನ್ನ ಮನಸ್ಸಿನಲ್ಲಿ ಮೂಡಿದ್ದ ಒಂದು ವಿಚಿತ್ರವಾದ ತೃಪ್ತಿ. ಜೀವನದಲ್ಲಿ ಕೆಲವು ಉಡುಗೊರೆಗಳಿಗೆ ಬೆಲೆ ಇರುವುದಿಲ್ಲ. ಅವುಗಳ ಹಿಂದೆ ಹಣ ಇರುವುದಿಲ್ಲ. ಅವುಗಳ ಹಿಂದೆ ದೊಡ್ಡ ಯೋಜನೆಯೂ ಇರುವುದಿಲ್ಲ. ಆದರೆ ಅವು ನಮ್ಮ ಹೃದಯಕ್ಕೆ ತುಂಬಾ ಹತ್ತಿರವಾಗಿರುತ್ತವೆ.

ಒಬ್ಬ ಅಪರಿಚಿತ ಕನ್ನಡಿಗನಿಂದ ಸಿಕ್ಕ ಒಂದು ಊಟ…ಒಂದು ಭಾಷೆಯಿಂದ ಸಿಕ್ಕ ಆತ್ಮೀಯತೆ…

ಒಂದು ವಿಮಾನ ನಿಲ್ದಾಣದಲ್ಲಿ ಅಚಾನಕ್ಕಾಗಿ ಉರುಳಿದ ಒಂದು ದಾಳ… ಮತ್ತು ಆ ದಾಳದಲ್ಲಿ ಬಂದ ಅದೃಷ್ಟ ಸಂಖ್ಯೆ… ಕೊನೆಗೆ ಮಗಳ ಕೈ ಸೇರಿದ ಪುಟ್ಟ ಗೊಂಬೆಗಳು…

ಇವೆಲ್ಲವೂ ಸೇರಿ ಶಂಕರನ ಜೀವನಕ್ಕೆ ಒಂದು ಸಣ್ಣ ಪಾಠ ಕಲಿಸಿತು.

ಕೆಲವೊಮ್ಮೆ ನಾವು ಜೀವನದಲ್ಲಿ ಏನನ್ನೋ ಹುಡುಕುತ್ತಾ ಓಡುತ್ತಿರುತ್ತೇವೆ. ಆದರೆ ದೇವರು ನಮಗಾಗಿ ಇಟ್ಟಿರುವ ಸಂತೋಷವನ್ನು ನಾವು ಹುಡುಕಬೇಕಾಗಿಲ್ಲ. ಅದು ಸರಿಯಾದ ಸಮಯದಲ್ಲಿ, ಸರಿಯಾದ ರೂಪದಲ್ಲಿ, ನಮ್ಮ ಕೈಗೆ ಬಂದು ಬೀಳುತ್ತದೆ.

ಅದಕ್ಕೇ ಇರಬೇಕು… “ಬಯಸದೇ ಬಂದ ಭಾಗ್ಯ” ಎನ್ನುವುದು ಇಷ್ಟು ಸಿಹಿಯಾಗಿರುವುದು!

ಏನಂತೀರೀ?
ನಿಮ್ಮವನೇ ಉಮಾಸುತ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ