“ಒಂದು ಕಂಪನಿಯ ಮೊದಲ ಉದ್ಯೋಗಿಯಾಗಿದ್ದ ವ್ಯಕ್ತಿ, ಇಂದು ಬಹುಕೋಟಿ ಸಂಪತ್ತಿನ ಒಡೆಯ. ಆದರೆ ಬದುಕಿನಲ್ಲಿ ಮಾತ್ರ ಅದೇ ಸರಳತೆ, ಅದೇ ವಿನಯ!”
ಇದು ಯಾವುದೇ ಸಿನಿಮಾದ ಕಥೆಯಲ್ಲ. ಭಾರತದ ಇ-ಕಾಮರ್ಸ್ ಕ್ರಾಂತಿಯ ಪ್ರಮುಖ ಅಧ್ಯಾಯದ ನೈಜ ಕಥೆ. Flipkartನ ಮೊದಲ ಉದ್ಯೋಗಿಯಾಗಿ, ಕೇವಲ ₹8,000 ಸಂಬಳಕ್ಕೆ ಕೆಲಸ ಆರಂಭಿಸಿ, ತನ್ನ ಬುದ್ಧಿವಂತಿಕೆ, ಪರಿಶ್ರಮ, ಪ್ರಾಮಾಣಿಕತೆ ಮತ್ತು ಸಂಸ್ಥಾಪಕರ ಕನಸಿನ ಮೇಲಿನ ನಂಬಿಕೆಯಿಂದ ಕಂಪನಿಯ ಬೆಳವಣಿಗೆಯ ಅವಿಭಾಜ್ಯ ಭಾಗವಾದ ಅಂಬೂರು ಅಯ್ಯಪ್ಪ ಅವರ ಕಥೆ.
ನಾನು 2011ರಲ್ಲಿ ಫ್ಲಿಪ್‌ಕಾರ್ಟ್‌ಗೆ ಸೇರಿದಾಗ, ಕಂಪನಿಗೆ ಕೇವಲ ಮೂರು ವರ್ಷಗಳಷ್ಟೇ ಆಗಿತ್ತು. ಉದ್ಯೋಗಿಗಳ ಸಂಖ್ಯೆ ಸಾವಿರ ದಾಟಿರಲಿಲ್ಲ. ಆದರೆ ಅಲ್ಲಿ ಕೆಲಸ ಮಾಡುತ್ತಿದ್ದ ಯುವಕರ ಉತ್ಸಾಹ, ವೇಗ ಮತ್ತು ಕನಸುಗಳು ಮಾತ್ರ ಸಾವಿರಾರು ಕೋಟಿಗಳ ಮೌಲ್ಯದ ಸಂಸ್ಥೆಯನ್ನು ಕಟ್ಟುವಷ್ಟು ದೊಡ್ಡದಾಗಿದ್ದವು. IIT, IIM ಸೇರಿದಂತೆ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಂದ ಬಂದ ಪ್ರತಿಭಾವಂತ ಯುವಕರು ಒಂದೇ ಗುರಿಗಾಗಿ ದುಡಿಯುತ್ತಿದ್ದರು—ಭಾರತದಲ್ಲಿ ಇ-ಕಾಮರ್ಸ್ ಕ್ರಾಂತಿ ತರಬೇಕು! ಆಗ ನನ್ನಲ್ಲಿ ಸದಾ ಒಂದು ಕುತೂಹಲವಿತ್ತು “ಈ ಕಂಪನಿ ಹೇಗೆ ಆರಂಭವಾಯಿತು? ಮೊದಲ ಉದ್ಯೋಗಿ ಯಾರು? ಮೊದಲ ದಿನಗಳಲ್ಲಿ ಇಲ್ಲಿ ಏನಾಗುತ್ತಿತ್ತು?” ಆ ಪ್ರಶ್ನೆಗಳಿಗೆ ಉತ್ತರ ಹುಡುಕಿದಾಗ ಸಿಕ್ಕ ಹೆಸರು—ಅಂಬೂರು ಅಯ್ಯಪ್ಪ.
ಆಂಬೂರಿನಿಂದ ಬೆಂಗಳೂರಿಗೆ

ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಆಂಬೂರು ಪಟ್ಟಣದಲ್ಲಿ ಹುಟ್ಟಿ ಬೆಳೆದ ಅಯ್ಯಪ್ಪ, ಡಿಪ್ಲೊಮಾ ಶಿಕ್ಷಣ ಪೂರ್ಣಗೊಳಿಸಿದ ನಂತರ ಹೊಸೂರಿನ Ashok Leylandನಲ್ಲಿ ಅಪ್ರೆಂಟಿಸ್ ಆಗಿ ವೃತ್ತಿಜೀವನ ಆರಂಭಿಸಿದರು. ನಂತರ Hindustan Motorsನಲ್ಲೂ ಕೆಲಸ ಮಾಡಿದರು. ಉತ್ತಮ ಅವಕಾಶಗಳ ಹುಡುಕಾಟದಲ್ಲಿ ಬೆಂಗಳೂರಿಗೆ ಬಂದ ಅವರು First Flight Couriersನಲ್ಲಿ ಡೆಲಿವರಿ ಬಾಯ್ ಆಗಿ ಸೇರಿದರು. ಆ ಕೆಲಸವನ್ನು ಅವರು ಕೇವಲ ಉದ್ಯೋಗವೆಂದು ನೋಡಲಿಲ್ಲ. ಪಾರ್ಸೆಲ್ ಹೇಗೆ ಸಾಗುತ್ತದೆ? ಗ್ರಾಹಕರ ನಿರೀಕ್ಷೆ ಏನು? ಕೊರಿಯರ್ ಸಂಸ್ಥೆಯ ಕಾರ್ಯಾಚರಣೆ ಹೇಗೆ ನಡೆಯುತ್ತದೆ? ಯಾವ ಸಮಸ್ಯೆಗಳು ಎದುರಾಗುತ್ತವೆ?—ಎಲ್ಲವನ್ನೂ ಗಮನಿಸಿ ಕಲಿತರು. ನಾಲ್ಕೇ ವರ್ಷಗಳಲ್ಲಿ ದಕ್ಷಿಣ ಬೆಂಗಳೂರಿನ Inbound Mail Logistics ವಿಭಾಗದ ಮುಖ್ಯಸ್ಥರಾಗುವಷ್ಟು ಬೆಳೆದರು.
ಶಿಕ್ಷಣಕ್ಕಾಗಿ ಕೆಲಸವನ್ನೇ ಕಳೆದುಕೊಂಡರು!
ಮುಂದೆ ಓದಬೇಕೆಂಬ ಆಸೆಯಿಂದ ಮೂರು ತಿಂಗಳ ಡಿಪ್ಲೊಮಾ ಕೋರ್ಸ್ ಮಾಡಲು ನಿರ್ಧರಿಸಿದ ಅಯ್ಯಪ್ಪ, First Flightನಲ್ಲಿ ರಜೆ ಕೇಳಿದರು. ಆದರೆ ಮೂರು ತಿಂಗಳ ಕಾಲ ಹುದ್ದೆಯನ್ನು ಖಾಲಿ ಇಡಲು ಸಾಧ್ಯವಿಲ್ಲ ಎಂದು ಸಂಸ್ಥೆ ತಿಳಿಸಿತು. ಅಯ್ಯಪ್ಪ ಅಪಾಯ ಸ್ವೀಕರಿಸಿದರು. “ಕೆಲಸ ಉಳಿಯುತ್ತದೆಯೋ ಇಲ್ಲವೋ ಗೊತ್ತಿಲ್ಲ; ಆದರೆ ಶಿಕ್ಷಣ ಮುಖ್ಯ” ಎಂದು ರಜೆ ತೆಗೆದುಕೊಂಡರು. ಮೂರು ತಿಂಗಳ ಬಳಿಕ ಮರಳಿದಾಗ ಅವರ ಹುದ್ದೆಗೆ ಮತ್ತೊಬ್ಬರನ್ನು ನೇಮಿಸಲಾಗಿತ್ತು. ಆ ಕ್ಷಣದಲ್ಲಿ ಅವರು ನಿರುದ್ಯೋಗಿಯಾಗಿದ್ದರು. ಆದರೆ ಅದೇ ನಿರುದ್ಯೋಗ ಅವರ ಜೀವನದ ಅತ್ಯಂತ ದೊಡ್ಡ ಅವಕಾಶಕ್ಕೆ ಬಾಗಿಲಾಯಿತು.
ಒಂದು ದೂರವಾಣಿ ಕರೆ ಬದಲಿಸಿದ ಬದುಕು

ಅದು 2008. ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್—ಅಮೆಜಾನ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಭಾರತೀಯ ಇ-ಕಾಮರ್ಸ್‌ನ ಅಪಾರ ಸಾಧ್ಯತೆಗಳನ್ನು ಗುರುತಿಸಿ, ಉದ್ಯೋಗಕ್ಕೆ ರಾಜೀನಾಮೆ ನೀಡಿ, ಸುಮಾರು ₹2 ಲಕ್ಷ ಮೂಲಧನದೊಂದಿಗೆ ಬೆಂಗಳೂರಿನ ಸಣ್ಣ ಅಪಾರ್ಟ್‌ಮೆಂಟ್‌ನಿಂದ Flipkart ಆರಂಭಿಸಿದ್ದರು. ಆರಂಭದಲ್ಲಿ ಪುಸ್ತಕಗಳ ಆರ್ಡರ್‌ಗಳನ್ನು ಅವರೇ ಸ್ವೀಕರಿಸುತ್ತಿದ್ದರು, ಪ್ಯಾಕ್ ಮಾಡುತ್ತಿದ್ದರು, ಗ್ರಾಹಕರಿಗೆ ಕರೆ ಮಾಡುತ್ತಿದ್ದರು. ದಿನಕ್ಕೆ ಸುಮಾರು 100 ಆರ್ಡರ್‌ಗಳು ಬರುತ್ತಿದ್ದವು. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವರು ಇಬ್ಬರು ಸಂಸ್ಥಾಪಕರು ಮಾತ್ರ.





