ಕನ್ನಡ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ಹಿರಿಯ ನಟ ಅನಂತ್ ನಾಗ್ ಅವರಿಗೆ 2024ರ ಸಾಲಿನ ಪ್ರತಿಷ್ಠಿತ ʻದಾದಾಸಾಹೇಬ್ ಫಾಲ್ಕೆʼ ಪ್ರಶಸ್ತಿಗೆ ಗರಿ ಮೂಡಿದೆ. ಭಾರತೀಯ ಚಲನಚಿತ್ರ ರಂಗಕ್ಕೆ ಅವರು ನೀಡಿದ ಅಪಾರ ಮತ್ತು ಸುದೀರ್ಘ ಕೊಡುಗೆಯನ್ನು ಗುರುತಿಸಿ, ʻದಾದಾಸಾಹೇಬ್ ಫಾಲ್ಕೆʼ ಪ್ರಶಸ್ತಿ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ.

ಐದು ದಶಕಗಳ ಕಾಲ ತಮ್ಮ ಸಹಜ ಅಭಿನಯದಿಂದ ಕೋಟ್ಯಂತರ ಪ್ರೇಕ್ಷಕರ ಮನ ಗೆದ್ದ ಕನ್ನಡದ ಮೇರು ನಟ ಅನಂತ್ ನಾಗ್‌ಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ ಒಲಿದುಬಂದಿದೆ.

1995ರಲ್ಲಿ ವರನಟ ಡಾ. ರಾಜ್‌ಕುಮಾರ್ ಅವರಿಗೆ ಈ ಗೌರವ ಲಭಿಸುವ ಮೂಲಕ ಕನ್ನಡ ಚಿತ್ರರಂಗ ಮೊದಲ ಬಾರಿಗೆ ʻದಾದಾಸಾಹೇಬ್ ಫಾಲ್ಕೆʼ ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು. ನಂತರ, 2008ರಲ್ಲಿ ಕನ್ನಡಿಗ ವಿ.ಕೆ ಮೂರ್ತಿ ಅವರಿಗೆ ಈ ಪ್ರಶಸ್ತಿ ಒಲಿದುಬಂದಿತ್ತು. ಈಗ 16 ವರ್ಷಗಳ ಸುದೀರ್ಘ ವಿರಾಮದ ಬಳಿಕ ಮತ್ತೊಬ್ಬ ಕನ್ನಡಿಗ ಅನಂತ್ ನಾಗ್ ಅವರಿಗೆ ಈ ಅತ್ಯುನ್ನತ ಗೌರವ ಲಭಿಸಿದೆ.ಅಭಿನಯ ಕ್ಷೇತ್ರದಲ್ಲಿ ಡಾ. ರಾಜ್‌ಕುಮಾರ್ ಅವರ ನಂತರ ಈ ಪ್ರಶಸ್ತಿ ಪಡೆಯುತ್ತಿರುವ ಎರಡನೇ ನಟ ಎಂಬ ಹೆಗ್ಗಳಿಕೆ ಅನಂತ್ ನಾಗ್ ಅವರದ್ದು. ಅನಂತ್‌ ನಾಗ್‌ ಅವರು ಕನ್ನಡ, ಹಿಂದಿ, ಮರಾಠಿ, ತೆಲುಗು ಮತ್ತು ಮಲೆಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ತಮ್ಮ ನಟನೆಯ ಛಾಪು ಮೂಡಿಸಿದ್ದಾರೆ.

ಸಿನಿಮಾ ರಂಗದ ಅತ್ಯುನ್ನತ ಗೌರವ ಎನ್ನಿಸಿರುವ ಈ ಪ್ರಶಸ್ತಿಯು ಅನಂತ್ ನಾಗ್ ಅವರ ಹಲವು ದಶಕಗಳ ಅದ್ಭುತ ಅಭಿನಯ ಪಯಣಕ್ಕೆ ಸಂದ ಗೌರವ. 2026ರ ಸೆಪ್ಟೆಂಬರ್ 22ರಂದು ಗುಜರಾತ್‌ನ ಏಕ್ತಾ ನಗರದಲ್ಲಿ ನಡೆಯಲಿರುವ ʻ72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿʼ ಪ್ರದಾನ ಸಮಾರಂಭದಲ್ಲಿ ಈ ಗೌರವವನ್ನು ಅನಂತ್​ನಾಗ್ ಅವರಿಗೆ ಅಧಿಕೃತವಾಗಿ ಪ್ರದಾನ ಮಾಡಲಾಗುವುದು.

ಅನಂತ್‌ ನಾಗ್‌ ಅವರಿಗೆ ದಾದಾ ಸಾಹೇಬ್​ ಪ್ರಶಸ್ತಿ ಪ್ರಕಟವಾಗುತ್ತಿದ್ದಂತೆ ಚಿತ್ರರಂಗದ ಪ್ರಮುಖರು, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಡಿ ಕೆ ಶಿವಕುಮಾರ್​, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಹೆಚ್‌ಡಿ ಕುಮಾರಸ್ವಾಮಿ ಸೇರಿದಂತೆ ರಾಜಕಾರಣಿಗಳು, ಚಿತ್ರೋದ್ಯಮದ ಗಣ್ಯರು ಹಾಗೂ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದು, ಹಿರಿಯ ನಟನಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.

ಅನಂತ್‌ ನಾಗ್‌ ಅವರು, ಗಂಭೀರ ಪಾತ್ರಗಳಿಂದ ಹಿಡಿದು ಹಾಸ್ಯಮಯ ಪಾತ್ರಗಳವರೆಗೆ ಪ್ರತಿಯೊಂದಕ್ಕೂ ಜೀವ ತುಂಬಿದ್ದಾರೆ. ‘ಬಯಲು ದಾರಿ’, ‘ಚಂದನದ ಗೊಂಬೆ’, ‘ಬೆಂಕಿಯ ಬಲೆ’, ‘ಗಣೇಶನ ಮದುವೆ’, ‘ಗೌರಿ ಗಣೇಶ’ಸಿನಿಮಾಗಳು ಪ್ರೇಕ್ಷಕರ ಮನಸ್ಸಿನಲ್ಲಿ ಎಂದಿಗೂ ಶಾಶ್ವತವಾಗಿ ಉಳಿಯುತ್ತವೆ.  ‘ಮಾಲ್ಗುಡಿ ಡೇಸ್’ ಮೂಲಕ ದೇಶಾದ್ಯಂತ ಪ್ರತಿ ಮನೆಮಾತಾಗಿದ್ದ ಅವರು, ಇತ್ತೀಚಿನ ‘ಕೆಜಿಎಫ್’ ಸಿನಿಮಾಗಳವರೆಗೂ ತಮ್ಮ ಅಭಿನಯವನ್ನು ಸಾಬೀತುಪಡಿಸುತ್ತಲೇ ಬಂದಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ