ಬೆಳಗಾವಿಯಲ್ಲಿ ಸೆ.14ರ ಸೋಮವಾರ ತಡರಾತ್ರಿ ಮನೆಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ತಂದೆ ಹಾಗೂ ಮಗ ಚಿಕಿತ್ಸೆ ಫಲಿಸದೆ ಸೆ.16ರ ಬುಧವಾರ ಮೃತಪಟ್ಟಿದ್ದಾರೆ. ಇದೀಗ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಆರಕ್ಕೆ ಏರಿದೆ.
ಗಜಾನನ ರಾಜಾರಾಮ ಧಮೋನೆ (65) ಹಾಗೂ ಅವರ ಪುತ್ರ ರೋಷನ್ (21) ಮೃತಪಟ್ಟವರು. ಸೋಮವಾರ ತಡರಾತ್ರಿ ಮನೆಯಲ್ಲಿ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯ ಜ್ವಾಲೆಗೆ ಸಿಲುಕಿ ಒಂದೇ ಕುಟುಂಬದ ನಾಲ್ವರು ಹೆಣ್ಣು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದರು.
ಈ ಸಂದರ್ಭ ತೀವ್ರವಾಗಿ ಸುಟ್ಟ ಗಾಯಗಳೊಂದಿಗೆ ಗಂಭೀರ ಸ್ಥಿತಿಯಲ್ಲಿದ್ದ ಗಜಾನನ ಹಾಗೂ ರೋಷನ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರೂ ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಗಣೇಶೋತ್ಸವದ ಸಂಭ್ರಮದ ನಡುವೆ ಮಂಗಳವಾರ ನಸುಕಿನ ಜಾವ ಈ ಅಗ್ನಿ ಅವಘಡ ಸಂಭವಿಸಿತ್ತು. ಈ ದುರಂತದಲ್ಲಿ ಒಂದೇ ಕುಟುಂಬದ ಭಾರತಿ ದಾಮೋನೆ (50), ಶಾರದಾ ಗಜಾನನ ದಾಮೋನೆ (45), ಪ್ರಿಯಾ ಗಜಾನನ ದಾಮೋನೆ (28) ಮತ್ತು ಗಂಗಾ ಗಜಾನನ ದಾಮೋನೆ (25) ಮೃತಪಟ್ಟಿದ್ದರು.
ಮಂಗಳವಾರದ ಅಗ್ನಿ ಅವಘಡದಲ್ಲಿ ಮೃತಪಟ್ಟ ನಾಲ್ವರ ಅಂತ್ಯಕ್ರಿಯೆಯನ್ನು ಅಂದೇ ಸಂಜೆ ನೆರವೇರಿಸಲಾಗಿತ್ತು. ಇದೀಗ ಗಜಾನನ ಮತ್ತು ರೋಶನ್ ಅವರ ಸಾವಿನೊಂದಿಗೆ, ಒಂದೇ ಕುಟುಂಬದ ಒಟ್ಟು ಆರು ಮಂದಿ ಈ ದುರಂತಕ್ಕೆ ಬಲಿಯಾದಂತಾಗಿದೆ.





