ಮದುರೈನ ಕುಂಜಮ್ಮ ಭಾರತ ರತ್ನವಾಗಿ ಬೆಳೆದ ಅದ್ಭುತ ಸಂಗೀತಯಾನ
ದಕ್ಷಿಣ ಭಾರತದ ಅನೇಕ ಮನೆಗಳಲ್ಲಿ ಬೆಳಗಿನ ಜಾವ ಶ್ರೀ ವೆಂಕಟೇಶ್ವರ ಸುಪ್ರಭಾತ ಅಥವಾ ಭಜ ಗೋವಿಂದಂ ಕೇಳುವುದರ ಮೂಲಕವೇ ಅವರ ದೈನಂದಿನ ಕಾರ್ಯಕ್ರಮಗಳು ಆರಂಭವಾಗುತ್ತದೆ. ಅದೊಂದು ರೀತಿಯ ಅಲಿಖಿತ ಸಾಂಸ್ಕೃತಿಕ ಸಂಪ್ರದಾಯವೇ ಆಗಿಬಿಟ್ಟಿದ್ದು, ತಿರುಮಲದಲ್ಲಿಯೂ ಸಹಾ ಅದೇ ಶ್ರೀ ವೆಂಕಟೇಶ್ವರ ಸುಪ್ರಭಾತ ಪ್ರಸಿದ್ಧವಾಗಿದ್ದು, ಭಾರತೀಯ ಶಾಸ್ತ್ರೀಯ ಸಂಗೀತದ ಇತಿಹಾಸದಲ್ಲಿ ಕೆಲವು ಹೆಸರುಗಳು ಕೇವಲ ಕಲಾವಿದರ ಹೆಸರುಗಳಾಗಿ ಉಳಿಯುವುದಿಲ್ಲ. ಅವು ಒಂದು ಯುಗದ ಸಂಕೇತಗಳಾಗುತ್ತವೆ. ಅಂತಹ ಅಪರೂಪದ ಹೆಸರುಗಳಲ್ಲಿ ಅಗ್ರಸ್ಥಾನದಲ್ಲಿರುವವರು ಮದುರೈ ಶಣ್ಮುಖವಡಿವು ಸುಬ್ಬಲಕ್ಷ್ಮಿ , ಎಂ. ಎಸ್. ಸುಬ್ಬಲಕ್ಷ್ಮಿ.
ಅವರ ಕಂಠದಲ್ಲಿ ಕರ್ನಾಟಕ ಸಂಗೀತದ ಶಾಸ್ತ್ರೀಯ ಗಾಂಭೀರ್ಯವಿತ್ತು. ಭಜನೆಗಳಲ್ಲಿ ಭಕ್ತಿಯ ಭಾವವಿತ್ತು. ತಮಿಳು, ತೆಲುಗು, ಕನ್ನಡ, ಸಂಸ್ಕೃತ, ಹಿಂದಿ ಸೇರಿದಂತೆ ಹಲವು ಭಾಷೆಗಳ ಸಾಹಿತ್ಯಕ್ಕೆ ಅವರು ಜೀವ ತುಂಬಿದರು. ಸಂಗೀತ ಸಭೆಯಿಂದ ಸಿನಿಮಾ ಪರದೆಗೆ, ಅಲ್ಲಿಂದ ದೇಶದ ಅತ್ಯುನ್ನತ ವೇದಿಕೆಗಳಿಗೆ ಮತ್ತು ಕೊನೆಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯವರೆಗೆ ಅವರ ಸಂಗೀತದ ಪಯಣ ಸಾಗಿತು.
ಅವರು ಭಾರತ ರತ್ನ ಪಡೆದ ಮೊದಲ ಸಂಗೀತಗಾರ್ತಿ/ಸಂಗೀತಗಾರ, 1974ರಲ್ಲಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪಡೆದ ಮೊದಲ ಭಾರತೀಯ ಸಂಗೀತಗಾರ್ತಿ, ಮತ್ತು 1966ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರದರ್ಶನ ನೀಡಿದ ಮೊದಲ ಭಾರತೀಯ ಸಂಗೀತಗಾರ್ತಿ ಎಂಬ ಹೆಗ್ಗಳಿಕೆಗಳಿಗೆ ಪಾತ್ರರಾದಂತಹವರು.
ಮದುರೈನ ಸಂಗೀತಮಯ ಮನೆಯಲ್ಲಿ ಹುಟ್ಟಿದ ಕುಂಜಮ್ಮ
ಎಂ. ಎಸ್. ಸುಬ್ಬಲಕ್ಷ್ಮಿ 1916ರ ಸೆಪ್ಟೆಂಬರ್ 16ರಂದು ತಮಿಳುನಾಡಿನ ಮದುರೈನಲ್ಲಿ ಜನಿಸಿದರು. ಅವರ ತಂದೆ ಸುಬ್ರಮಣ್ಯ ಅಯ್ಯರ್ ವಕೀಲರಾಗಿದ್ದರೆ, ತಾಯಿ ಮದುರೈ ಶಣ್ಮುಖವಡಿವು ಪ್ರಸಿದ್ಧ ವೀಣಾ ವಾದಕಿಯಾಗಿದ್ದರು. ಕುಟುಂಬದಲ್ಲಿ ಅವರನ್ನು ಪ್ರೀತಿಯಿಂದ ಕುಂಜಮ್ಮ ಎಂದು ಕರೆಯಲಾಗುತ್ತಿತ್ತು.
ಅಜ್ಜಿ ಅಕ್ಕಮ್ಮಾಳೂ ಪಿಟೀಲು ವಾದಕಿಯಾಗಿದ್ದರು. ಹೀಗಾಗಿ ಸಂಗೀತ ಅವರಿಗೆ ಹೊರಗಿನಿಂದ ಬಂದ ಶಿಕ್ಷಣವಲ್ಲ. ಮನೆಯ ಉಸಿರಿನಲ್ಲೇ ಬೆರೆತಿದ್ದ ವಾತಾವರಣವಾಗಿತ್ತು. ತಾಯಿಯ ವೀಣೆಯ ನಾದ, ದೇವಾಲಯಗಳ ನಾದಸ್ವರ, ಭಜನೆಗಳು—ಇವೆಲ್ಲವೂ ಬಾಲಕಿ ಸುಬ್ಬಲಕ್ಷ್ಮಿಯ ಸಂಗೀತಪ್ರಜ್ಞೆಯನ್ನು ರೂಪಿಸಿದವು. ಬಾಲ್ಯದಲ್ಲಿಯೇ ಅವರ ಅಸಾಧಾರಣ ಪ್ರತಿಭೆ ಹೊರಹೊಮ್ಮಿತು. ಕೇವಲ ಎಂಟು ವರ್ಷ ವಯಸ್ಸಿನಲ್ಲಿ ಅವರು ಸಾರ್ವಜನಿಕವಾಗಿ ಮರಾಠಿ ಭಜನೆಯನ್ನು ಹಾಡಿ ಶ್ರೋತೃಗಳನ್ನು ಆಕರ್ಷಿಸಿದ್ದರು ಎಂದು ಭಾರತ ಸರ್ಕಾರದ ದಾಖಲೆ ಹೇಳುತ್ತದೆ.
ಹನ್ನೊಂದರ ಹರೆಯದಲ್ಲೇ ವೇದಿಕೆಯ ಮೇಲೆ
ಸುಬ್ಬಲಕ್ಷ್ಮಿಯ ಸಂಗೀತ ಪಯಣಕ್ಕೆ ಸಾಮಾನ್ಯ ಬಾಲಕಿಯ ಪಯಣದಂತಿರಲಿಲ್ಲ. 1927ರಲ್ಲಿ, ಸುಮಾರು 11ನೇ ವಯಸ್ಸಿನಲ್ಲಿ, ತಿರುಚಿರಾಪಳ್ಳಿಯ ರಾಕ್‌ಫೋರ್ಟ್ ದೇವಸ್ಥಾನದ 100 ಕಂಬಗಳ ಮಂಟಪದಲ್ಲಿ ಅವರ ಆರಂಭಿಕ ಪ್ರಮುಖ ಸಾರ್ವಜನಿಕ ಕಛೇರಿಯೊಂದು ನಡೆಯಿತು ಎಂದು ಜೀವನಚರಿತ್ರಾ ಮೂಲಗಳು ದಾಖಲಿಸುತ್ತವೆ. ಆ ಕಾರ್ಯಕ್ರಮದಲ್ಲಿ ಮೈಸೂರು ಟಿ. ಚೌಡಯ್ಯ ಪಿಟೀಲಿನಲ್ಲಿ ಹಾಗೂ ದಕ್ಷಿಣಾಮೂರ್ತಿ ಪಿಳ್ಳೈ ಮೃದಂಗದಲ್ಲಿ ಸಂಗತಿಸಿದ್ದರು ಎಂದು ವರದಿಯಾಗಿದೆ.
ಅವರ ಪ್ರತಿಭೆ ನಿಧಾನವಾಗಿ ದಕ್ಷಿಣ ಭಾರತದ ಸಂಗೀತ ವಲಯದಲ್ಲಿ ಗಮನ ಸೆಳೆಯತೊಡಗಿತು. ಅವರು ತಮ್ಮ ತಾಯಿ ಶಣ್ಮುಖವಡಿವಿನಿಂದ ಕರ್ನಾಟಕ ಸಂಗೀತದ ಆರಂಭಿಕ ಹಾಗೂ ಗಾಢವಾದ ತರಬೇತಿ ಪಡೆದರು. ನಂತರ ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರಿಂದ ಕರ್ನಾಟಕ ಸಂಗೀತದ ಪರಂಪರೆಯನ್ನು ಮತ್ತಷ್ಟು ಆಳವಾಗಿ ಅಭ್ಯಾಸ ಮಾಡಿದರು. ಹಿಂದೂಸ್ತಾನಿ ಸಂಗೀತದ ಕೆಲವು ಅಂಶಗಳನ್ನು ಪಂಡಿತ ನಾರಾಯಣರಾವ್ ವ್ಯಾಸ್ ಅವರಿಂದಲೂ ಕಲಿತರು. ಅವರ ಸಂಗೀತದ ರೂಪುಗೊಳಿಸುವಿಕೆಯಲ್ಲಿ ಕರೈಕುಡಿ ಸಾಂಬಶಿವ ಅಯ್ಯರ್, ಮಜವರಾಯನೆಂದಲ್ ಸುಬ್ರಮಣ್ಯ ಭಾಗವತರ್ ಮತ್ತು ಅರಿಯಕ್ಕುಡಿ ರಾಮಾನುಜ ಅಯ್ಯಂಗಾರ್ ಅವರಂತಹ ದಿಗ್ಗಜರ ಸಂಪರ್ಕವೂ ಮಹತ್ವದ್ದಾಗಿತ್ತು.
13ರ ವಯಸ್ಸಿನಲ್ಲಿ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಇತಿಹಾಸ
1929ರಲ್ಲಿ, ಕೇವಲ 13 ವರ್ಷ ವಯಸ್ಸಿನಲ್ಲಿ, ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ವೇದಿಕೆಯಲ್ಲಿ ಅವರು ಭಜನೆಗಳನ್ನು ಹಾಡಿದರು. ಇದು ಸಾಮಾನ್ಯ ಕಾರ್ಯಕ್ರಮವಾಗಿರಲಿಲ್ಲ. ಆ ಕಾಲದಲ್ಲಿ ಕರ್ನಾಟಕ ಸಂಗೀತದ ಪ್ರಮುಖ ವೇದಿಕೆಗಳಲ್ಲಿ ಮಹಿಳೆಯರಿಗೆ, ಅದರಲ್ಲೂ ಇಷ್ಟು ಕಿರಿಯ ವಯಸ್ಸಿನ ಬಾಲಕಿಗೆ ದೊರೆಯುತ್ತಿದ್ದ ಅವಕಾಶ ಬಹಳ ಅಪರೂಪ. ಅವರ ಗಾಯನ ಕೇಳಿದ ಸಂಗೀತ ದಿಗ್ಗಜರು ಅವರಲ್ಲಿದ್ದ ಪ್ರತಿಭೆಯನ್ನು ಗುರುತಿಸಿದರು.

ನಂತರ 1932ರ ಜನವರಿ 1ರಂದು ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಕಾರ್ಯಕ್ರಮದಲ್ಲಿ ಅರಿಯಕ್ಕುಡಿ ರಾಮಾನುಜ ಅಯ್ಯಂಗಾರ್ ಗೈರುಹಾಜರಾಗಿದ್ದ ಕಾರಣ ಬದಲಿ ಕಲಾವಿದೆಯಾಗಿ ಸುಬ್ಬಲಕ್ಷ್ಮಿ ಹಾಡಿದರು. ಅಲ್ಲಿ ಟಿ.ಎನ್. ರಾಜರತ್ನಂ ಪಿಳ್ಳೈ, ಚೆಂಬೈ ವೈದ್ಯನಾಥ ಭಾಗವತರ್ ಮತ್ತು ಮೈಸೂರು ಟಿ. ಚೌಡಯ್ಯ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಆ ಕಾರ್ಯಕ್ರಮ ಅವರ ವೃತ್ತಿಜೀವನದಲ್ಲಿ ಮಹತ್ವದ ತಿರುವಾಯಿತು. ಅವರು ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ವಾರ್ಷಿಕ ಸಮ್ಮೇಳನದಲ್ಲಿ ಪ್ರಮುಖವಾಗಿ ಹಾಡಿದ ಮೊದಲ ಮಹಿಳಾ ಕಲಾವಿದೆಯಾಗಿ ಗುರುತಿಸಲ್ಪಟ್ಟರು.
ಅದ್ಭುತವಾದ ಆ ಕಂಠ
ಎಂ.ಎಸ್. ಅವರ ಧ್ವನಿಯ ವಿಶೇಷತೆ ಕೇವಲ ಮಧುರತೆ ಮಾತ್ರವಾಗಿರಲಿಲ್ಲ. ಅವರ ಗಾಯನದಲ್ಲಿ, ಸ್ವರಶುದ್ಧತೆ, ಸ್ಪಷ್ಟವಾದ ಉಚ್ಚಾರಣೆ, ಭಾವಪೂರ್ಣತೆ, ರಾಗದ ಆಳವಾದ ಅರಿವು, ಸಾಹಿತ್ಯದ ಅರ್ಥವನ್ನು ತಲುಪಿಸುವ ಸಾಮರ್ಥ್ಯ, ಕೃತಿಯ ಆತ್ಮವನ್ನು ಉಳಿಸುವ ಶಿಸ್ತು, ಎಲ್ಲವೂ ಒಂದಾಗಿ ಬೆರೆತಿದ್ದವು.
ಸಂಗೀತ ನಾಟಕ ಅಕಾಡೆಮಿಯ ದಾಖಲೆಯೇ ಅವರ ರಾಗಗಳ ಮಧುರ ನಿರೂಪಣೆ ಮತ್ತು ಶುದ್ಧವಾದ ಪದೋಚ್ಚಾರಣೆಯನ್ನು ವಿಶೇಷವಾಗಿ ಉಲ್ಲೇಖಿಸುತ್ತದೆ. ಹಿಂದೂಸ್ತಾನಿ ಸಂಗೀತದ ದಿಗ್ಗಜ ಉಸ್ತಾದ್ ಬಡೆ ಗುಲಾಂ ಅಲಿ ಖಾನ್ ಅವರನ್ನು ಸುಸ್ವರಲಕ್ಷ್ಮಿ ಎಂದು ಕರೆದರೆ, ಕವಿ ಸರೋಜಿನಿ ನಾಯ್ಡು ಅವರನ್ನು ನೈಟಿಂಗೇಲ್ ಆಫ್ ಇಂಡಿಯಾ ಎಂದು ಕರೆದರು. ಲತಾ ಮಂಗೇಶ್ಕರ್ ಅವರು ಅವರನ್ನು ತಪಸ್ವಿನಿ ಎಂದು ಗೌರವಿಸಿದ್ದರು.
ಸಿನಿಮಾ ರಂಗಕ್ಕೆ ಪ್ರವೇಶ
ಎಂ.ಎಸ್. ಸುಬ್ಬಲಕ್ಷ್ಮಿಯ ಜೀವನದಲ್ಲಿ ಸಂಗೀತದಷ್ಟೇ ಕುತೂಹಲ ಮೂಡಿಸುವ ಮತ್ತೊಂದು ಅಧ್ಯಾಯವೆಂದರೆ ಅವರ ಸಿನಿಮಾ ಪಯಣ. ಸಾಮಾನ್ಯವಾಗಿ ಅಂದಿನ ಕಾಲದಲ್ಲಿ ನಟ/ನಟಿಯರೇ ಗಾಯನ ಮಾಡುತ್ತಿದ್ದ ಅಥವಾ ಗಾಯಕ/ಗಾಯಕಿಯರೇ ನಟ/ನಟಿಯರಾಗಿ ಸಿನಿಮಾರಂಗದಲ್ಲಿ ಅಭಿನಯಿಸುವ ಸಂಪ್ರದಾಯವಿದ್ದದ್ದಲ್ಲದೇ ನೋಡುವುದಕ್ಕೂ ಬಹಳ ಸುಂದರವಾಗಿದ್ದ ಕಾರಣ, 1938ರಲ್ಲಿ ಬಿಡುಗಡೆಯಾದ ಸೇವಾಸದನಂ ಅವರ ಮೊದಲ ಚಿತ್ರ. ಸಮಾಜ ಸುಧಾರಣೆಯ ವಿಚಾರವನ್ನು ಆಧರಿಸಿದ್ದ ಈ ಚಿತ್ರದಲ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸಿದರು.
- ಸೇವಾಸದನಂ – 1938 ಸಾಮಾಜಿಕ ಸುಧಾರಣೆಯ ಹಿನ್ನೆಲೆಯ ಚಿತ್ರ.
- ಶಕುಂತಲೈ – 1940 ಕಾಳಿದಾಸನ ಶಕುಂತಲೆಯ ಕಥೆಯನ್ನು ಆಧರಿಸಿದ ಚಿತ್ರ. ಎಂ.ಎಸ್. ಶಕುಂತಲೆಯ ಪಾತ್ರ ನಿರ್ವಹಿಸಿದರು.
- ಸಾವಿತ್ರಿ – 1941 ಈ ಚಿತ್ರದಲ್ಲಿ ಅವರು ನಾರದನ ಪಾತ್ರ ನಿರ್ವಹಿಸಿದ್ದು ವಿಶೇಷ.
- ಮೀರಾ – 1945 ಇದು ಅವರ ಸಿನಿಮಾ ಜೀವನದ ಅತ್ಯಂತ ಪ್ರಸಿದ್ಧ ಅಧ್ಯಾಯ. ತಮಿಳು ‘ಮೀರಾ’ಯ ಯಶಸ್ಸಿನ ನಂತರ ಹಿಂದಿ ಪ್ರೇಕ್ಷಕರಿಗೂ ಅವರ ಸಂಗೀತ ತಲುಪಿತು. ಅವರ ಚಿತ್ರಗಳ ಪಟ್ಟಿಯನ್ನು ಸರ್ಕಾರದ ಹಾಗೂ ಇತರ ದಾಖಲೆಗಳೂ ದೃಢಪಡಿಸುತ್ತವೆ.
- ಮೀರಾ — ನಟಿಗಿಂತ ಭಕ್ತಿಗಾಯಕಿಯಾಗಿ ಗೆದ್ದ ಕ್ಷಣ
1945ರ ‘ಮೀರಾ’ ಚಿತ್ರದಲ್ಲಿ ಎಂ.ಎಸ್. ಸುಬ್ಬಲಕ್ಷ್ಮಿ ಸಂತ ಮೀರಾಬಾಯಿಯ ಪಾತ್ರವನ್ನು ನಿರ್ವಹಿಸಿದರು. ಆ ಚಿತ್ರ ಕೇವಲ ಸಿನಿಮಾ ಆಗಿರಲಿಲ್ಲ. ಅದು ಎಂ.ಎಸ್. ಅವರ ಸಂಗೀತವನ್ನು ದೇಶದ ಸಾಮಾನ್ಯ ಜನರ ಮನೆಗಳಿಗೂ ತಲುಪಿಸಿದ ಸಾಂಸ್ಕೃತಿಕ ಘಟನೆ. ಮೀರಾಬಾಯಿಯ ಭಕ್ತಿಗೀತೆಗಳನ್ನು ಅವರು ಹಾಡಿದ ರೀತಿ, ಅವರ ಅಭಿನಯ ಮತ್ತು ಧ್ವನಿಯಲ್ಲಿದ್ದ ಭಕ್ತಿ—ಇವು ಜನಮನದಲ್ಲಿ ಎಂ.ಎಸ್. ಅವರನ್ನು ಗಾಯಕಿಯಿಂದ ಭಕ್ತಿಯ ಸ್ವರವಾಗಿ ರೂಪಿಸಿತು. ಚಿತ್ರವು 25 ವಾರಗಳಿಗೂ ಹೆಚ್ಚು ಪ್ರದರ್ಶನ ಕಂಡಿತು ಎಂಬ ದಾಖಲೆಗಳಿವೆ. ಆ ನಂತರ ಅವರ ಭಜನೆಗಳು ಉತ್ತರ ಭಾರತದಲ್ಲಿಯೂ ಜನಪ್ರಿಯವಾದವು. ಇದರಿಂದ ಕರ್ನಾಟಕ ಸಂಗೀತದ ಗಡಿಯನ್ನು ಮೀರಿ ಎಂ.ಎಸ್. ಅವರ ಧ್ವನಿ ಭಾರತದ ಸಾಮಾನ್ಯ ಕುಟುಂಬಗಳಿಗೂ ತಲುಪಿತು.
ವೈವಾಹಿಕ ಜೀವನ — ಟಿ. ಸದಾಶಿವಂ ಅವರೊಂದಿಗೆ ಹೊಸ ಅಧ್ಯಾಯ

1940ರ ಜುಲೈ 10ರಂದು ಎಂ.ಎಸ್. ಸುಬ್ಬಲಕ್ಷ್ಮಿ ಟಿ. ಸದಾಶಿವಂ ಅವರನ್ನು ವಿವಾಹವಾದರು. ಸದಾಶಿವಂ ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ, ಚಿತ್ರ ನಿರ್ಮಾಪಕ ಹಾಗೂ ಸಾರ್ವಜನಿಕ ಜೀವನದಲ್ಲಿ ಸಕ್ರಿಯ ವ್ಯಕ್ತಿಯಾಗಿದ್ದರು. ನಂತರ ಅವರು ಕಲ್ಕಿ ಪತ್ರಿಕೆಯ ಸ್ಥಾಪನೆಯಲ್ಲೂ ಪ್ರಮುಖ ಪಾತ್ರವಹಿಸಿದರು. ಈ ವಿವಾಹ ಎಂ.ಎಸ್. ಅವರ ವೈಯಕ್ತಿಕ ಜೀವನವನ್ನಷ್ಟೇ ಅಲ್ಲ, ಅವರ ಕಲಾಜೀವನವನ್ನೂ ಬದಲಿಸಿತು.
ಸದಾಶಿವಂ ಅವರ ದೃಷ್ಟಿಯಲ್ಲಿ ಎಂ.ಎಸ್. ಕೇವಲ ದಕ್ಷಿಣ ಭಾರತದ ಸಂಗೀತಗಾರ್ತಿಯಾಗಿ ಉಳಿಯಬಾರದು. ಅವರ ಪ್ರತಿಭೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪಬೇಕು ಎಂಬುದು ಮುಖ್ಯವಾಗಿತ್ತು. ಅವರ ಕಛೇರಿ ಯೋಜನೆ, ಸಿನಿಮಾ ಆಯ್ಕೆ, ಸಾರ್ವಜನಿಕ ಸಂಪರ್ಕ ಮತ್ತು ರಾಷ್ಟ್ರೀಯ ಮಟ್ಟದ ಅವಕಾಶಗಳಲ್ಲಿ ಸದಾಶಿವಂ ಮಹತ್ವದ ಪಾತ್ರ ವಹಿಸಿದರು. ಎಂ.ಎಸ್. ಅವರ ಅಪೂರ್ವ ಪ್ರತಿಭೆ ಸದಾಶಿವಂ ಅವರ ಮಾರ್ಗದರ್ಶನ ಮತ್ತು ನಿರ್ವಹಣೆಯಿಂದಾಗಿ ಓರೆಗೆ ಹಚ್ಚಿ, ಆ ಪ್ರತಿಭೆಗೆ ದೊಡ್ಡ ವೇದಿಕೆಯನ್ನು ಕಲ್ಪಿಸಿತು ಎಂದರೂ ತಪ್ಪಾಗದು
ಸಂಗೀತವೇ ಜೀವನ — ವೈವಾಹಿಕ ಸಹಭಾಗಿತ್ವ

ಸದಾಶಿವಂ ಅವರೊಂದಿಗೆ ಎಂ.ಎಸ್. ಅವರ ಸಂಬಂಧ ಕೇವಲ ಗಂಡ–ಹೆಂಡತಿಯ ಸಂಬಂಧವಾಗಿರಲಿಲ್ಲ. ಅದು ಕಲೆ, ಸಂಗೀತ, ಸಾರ್ವಜನಿಕ ಜೀವನ ಮತ್ತು ಸೇವೆಯನ್ನು ಒಟ್ಟಿಗೆ ಸಾಗಿಸಿದ ಸಹಭಾಗಿತ್ವವಾಗಿತ್ತು. 1940ರ ದಶಕದಲ್ಲಿ ಅವರ ಕುಟುಂಬಜೀವನದಲ್ಲಿ ಸದಾಶಿವಂ ಅವರ ಮೊದಲ ಪತ್ನಿಯ ಮಕ್ಕಳೂ ಇದ್ದರು. ಅವರ ಪುತ್ರಿ ರಾಧಾ ವಿಶ್ವನಾಥನ್ ಮುಂದೆ ಎಂ.ಎಸ್. ಅವರ ಪ್ರಮುಖ ಸಂಗೀತ ಸಹಚರಿಯಾಗಿದರು. ರಾಧಾ ಅವರು ತಾಯಿಯೊಂದಿಗೆ ವೇದಿಕೆಯಲ್ಲಿ ಹಾಡುತ್ತಾ ಅನೇಕ ವರ್ಷಗಳ ಕಾಲ ಎಂ.ಎಸ್. ಅವರ ಸಂಗೀತ ಪಯಣದ ಅವಿಭಾಜ್ಯ ಭಾಗವಾಗಿದ್ದರು.
ಗಾಂಧೀಜಿಗೂ ಪ್ರಿಯವಾದ ಕಂಠ
ಮಹಾತ್ಮ ಗಾಂಧೀಜಿಗೂ ಎಂ.ಎಸ್. ಅವರ ಧ್ವನಿಯ ಬಗ್ಗೆ ವಿಶೇಷ ಮೆಚ್ಚುಗೆ ಇತ್ತು. 1947ರಲ್ಲಿ ಗಾಂಧೀಜಿಯವರ ಮೆಚ್ಚಿನ ಹರಿ ತುಮ ಹರೋ ಭಜನೆಯನ್ನು ಅವರ ಒತ್ತಾಯದ ಮೇರೆಗೆ ಎಂ.ಎಸ್. ರಾತ್ರಿ ದಾಖಲಿಸಿ ಕಳುಹಿಸಿದರು ಎಂಬ ಘಟನೆ ಪ್ರಸಿದ್ಧವಾಗಿದೆ. ಇದು ಅವರ ಗಾಯನದ ವ್ಯಾಪ್ತಿಯನ್ನು ತೋರಿಸುವ ಒಂದು ಸುಂದರ ಉದಾಹರಣೆ. ಅವರು ಕೇವಲ ಸಂಗೀತ ಸಭೆಗಳ ಕಲಾವಿದೆಯಲ್ಲ; ದೇಶದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮನಸ್ಸಿನ ಭಾಗವಾಗಿದ್ದರು.
ಚೆನ್ನೈನಿಂದ ದೇಶದಾದ್ಯಂತ — ಕಛೇರಿಗಳ ಹೊಸ ಯುಗ
1940ರ ದಶಕದಿಂದ ಎಂ.ಎಸ್. ಅವರ ಕಛೇರಿಗಳು ದಕ್ಷಿಣ ಭಾರತವನ್ನು ಮೀರಿ ದೇಶದ ಪ್ರಮುಖ ನಗರಗಳಿಗೆ ತಲುಪಿದವು. 1943/44ರ ಮುಂಬೈ ಕಾರ್ಯಕ್ರಮಗಳು ಅವರ ರಾಷ್ಟ್ರೀಯ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದವು. ಶಾಸ್ತ್ರೀಯ ಕೃತಿಗಳ ಜೊತೆಗೆ ಅವರು ತುಳಸೀದಾಸ್, ಮೀರಾಬಾಯಿ, ಗುರುನಾನಕ್ ಮೊದಲಾದವರ ಭಜನೆಗಳನ್ನು ಹಾಡಿದರು. ಇದೇ ಅವರ ವಿಶೇಷತೆ. ಕರ್ನಾಟಕ ಸಂಗೀತದ ಗಂಭೀರತೆಯನ್ನು ಕಳೆದುಕೊಳ್ಳದೆ, ಸಾಮಾನ್ಯ ಶ್ರೋತೃನ ಹೃದಯಕ್ಕೂ ತಲುಪುವುದು. ಅವರು ಕೀರ್ತನೆ, ಭಜನೆ, ಸ್ತೋತ್ರ, ಸಂಸ್ಕೃತ ಶ್ಲೋಕ ಮತ್ತು ವಿವಿಧ ಭಾರತೀಯ ಭಾಷೆಗಳ ಭಕ್ತಿಗೀತೆಗಳನ್ನು ಒಂದೇ ಸಂಗೀತ ಲೋಕದಲ್ಲಿ ಪರಿಚಯಿಸಿದರು.
ವಿಶ್ವದ ವೇದಿಕೆಗಳ ಮೇಲೆ ಭಾರತೀಯ ಸಂಗೀತ
ಎಂ.ಎಸ್. ಸುಬ್ಬಲಕ್ಷ್ಮಿಯ ಸಂಗೀತದ ನಿಜವಾದ ವಿಶ್ವಯಾನ 1960ರ ದಶಕದಲ್ಲಿ ವೇಗ ಪಡೆದುಕೊಂಡಿತು.
1963 — Edinburgh International Festival
ಎಡಿನ್‌ಬರ್ಗ್ ಅಂತರರಾಷ್ಟ್ರೀಯ ಉತ್ಸವದಲ್ಲಿ ಅವರ ಪ್ರದರ್ಶನ ಭಾರತೀಯ ಶಾಸ್ತ್ರೀಯ ಸಂಗೀತವನ್ನು ಪಾಶ್ಚಾತ್ಯ ಪ್ರೇಕ್ಷಕರ ಮುಂದೆ ಅತ್ಯಂತ ಗೌರವಯುತವಾಗಿ ಪರಿಚಯಿಸಿತು.
Carnegie Hall, New York
ನ್ಯೂಯಾರ್ಕ್‌ನ ಪ್ರಸಿದ್ಧ Carnegie Hallನಲ್ಲಿಯೂ ಅವರು ಹಾಡಿದರು.
1966 — ವಿಶ್ವಸಂಸ್ಥೆ
ಇದು ಅವರ ಜೀವನದ ಐತಿಹಾಸಿಕ ಶಿಖರಗಳಲ್ಲಿ ಒಂದು.
1966ರ United Nations General Assembly ಕಾರ್ಯಕ್ರಮದಲ್ಲಿ ಅವರು ಹಾಡಿದರು. ಇದು ವಿಶ್ವಸಂಸ್ಥೆಯ ವೇದಿಕೆಯಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತದ ಅಪೂರ್ವ ಪ್ರತಿನಿಧಿತ್ವವಾಗಿತ್ತು.
ಅವರ ಗಾಯನದ ಮೂಲಕ ಭಾರತ ತನ್ನ ಸಂಸ್ಕೃತಿಯನ್ನು ಯಾವುದೇ ರಾಜಕೀಯ ಘೋಷಣೆಯಿಲ್ಲದೆ ವಿಶ್ವದ ಮುಂದೆ ಪರಿಚಯಿಸಿತು.
ರಾಯಲ್ ಆಲ್ಬರ್ಟ್ ಹಾಲ್‌ನಿಂದ ಮಾಸ್ಕೋವರೆಗೆ
ಅವರ ಅಂತರರಾಷ್ಟ್ರೀಯ ಪಯಣ ಅಲ್ಲಿಗೆ ನಿಲ್ಲಲಿಲ್ಲ. ಅವರು ಎಡಿನ್‌ಬರ್ಗ್, ನ್ಯೂಯಾರ್ಕ್, ಲಂಡನ್, ಕೆನಡಾ ವಿವಿಧ ಯುರೋಪಿಯನ್ ವೇದಿಕೆಗಳು ಮಾಸ್ಕೋ ಮುಂತಾದ ಸ್ಥಳಗಳಲ್ಲಿ ಪ್ರದರ್ಶನ ನೀಡಿದರು. ಲಂಡನ್‌ನ Royal Albert Hallನಲ್ಲಿ ರಾಣಿ ಎಲಿಜಬೆತ್ II ಅವರ ಸಮ್ಮುಖದಲ್ಲಿಯೂ ಅವರು ಹಾಡಿದರು. 1987ರ Festival of India ಸಂದರ್ಭದಲ್ಲಿ ಮಾಸ್ಕೋದಲ್ಲೂ ಅವರ ಕಾರ್ಯಕ್ರಮ ನಡೆಯಿತು. ಹೀಗಾಗಿ ಅವರನ್ನು ಕೇವಲ ಕರ್ನಾಟಕ ಸಂಗೀತದ ಗಾಯಕಿ ಎಂದು ಕರೆಯುವುದು ಅವರ ವ್ಯಾಪ್ತಿಯನ್ನು ಕುಗ್ಗಿಸುವಂತಾಗುತ್ತದೆ. ಅವರು ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಬೆಳೆದಿದ್ದರು.
ಅವರ ಸಂಗೀತದ ಮತ್ತೊಂದು ಮುಖ — ಭಕ್ತಿ
ಎಂ.ಎಸ್. ಅವರ ಜನಪ್ರಿಯತೆಯ ಬಹುಮುಖ್ಯ ಕಾರಣಗಳಲ್ಲಿ ಒಂದು ಅವರ ಭಕ್ತಿಗೀತೆಗಳ ಗಾಯನ. ಅವರ ಧ್ವನಿಯಲ್ಲಿ ಪ್ರಸಿದ್ಧವಾದವುಗಳಲ್ಲಿ:
- ವೆಂಕಟೇಶ್ವರ ಸುಪ್ರಭಾತಂ
- ವಿಷ್ಣು ಸಹಸ್ರನಾಮ
- ಭಜ ಗೋವಿಂದಂ
- ಹರಿ ತುಮ ಹರೋ
- ಮೀನಾಕ್ಷಿ ಪಂಚರತ್ನಂ
- ವಿವಿಧ ಮೀರಾ ಭಜನೆಗಳು
- ಅನ್ನಮಾಚಾರ್ಯ ಕೀರ್ತನೆಗಳು
ಅನ್ನಮಾಚಾರ್ಯ ಕೀರ್ತನೆಗಳಿಗೆ ಹೊಸ ಜನಪ್ರಿಯತೆ
ಎಂ.ಎಸ್. ಅವರು ಅನ್ನಮಾಚಾರ್ಯರ ಕೀರ್ತನೆಗಳನ್ನು ಜನಪ್ರಿಯಗೊಳಿಸುವಲ್ಲಿಯೂ ಪ್ರಮುಖ ಪಾತ್ರವಹಿಸಿದರು. ಇದರ ಮೂಲಕ ಶತಮಾನಗಳ ಹಿಂದಿನ ಭಕ್ತಿಸಾಹಿತ್ಯವು ಹೊಸ ತಲೆಮಾರಿಗೆ, ಹೊಸ ಧ್ವನಿಯಲ್ಲಿ ತಲುಪಿತು. ಇದು ಅವರ ಸಂಗೀತ ಸಾಧನೆಯ ಮತ್ತೊಂದು ಮಹತ್ವದ ಕೊಡುಗೆ.
ಕಛೇರಿ ಎಂದರೆ ಕೇವಲ ಹಣ ಸಂಪಾದಿಸುವ ವೇದಿಕೆಯಲ್ಲ

ಎಂ.ಎಸ್. ಅವರ ವ್ಯಕ್ತಿತ್ವದ ವಿಶೇಷ ಅಂಶವೆಂದರೆ ಸೇವಾಭಾವ. ಸಂಗೀತ ನಾಟಕ ಅಕಾಡೆಮಿ ಅವರ ಬಗ್ಗೆ ನೀಡಿರುವ ದಾಖಲೆಗಳಲ್ಲಿ ಅವರು ಅನೇಕ benefit concerts ನೀಡಿದ್ದರೆಂದು ಉಲ್ಲೇಖಿಸಲಾಗಿದೆ. ಭಾರತ ಸರ್ಕಾರದ ಮಾಹಿತಿಯ ಪ್ರಕಾರ, ಅವರು 200ಕ್ಕೂ ಹೆಚ್ಚು ದಾನಾರ್ಥ ಕಛೇರಿಗಳನ್ನು ನಡೆಸಿದ್ದಾರೆ ಎಂಬ ದಾಖಲೆಗಳೂ ಉಲ್ಲೇಖವಾಗಿವೆ. ಅವರ ಸಂಗೀತದಿಂದ ಬಂದ ಆದಾಯದ ಒಂದು ದೊಡ್ಡ ಭಾಗವನ್ನು ವಿವಿಧ ಧಾರ್ಮಿಕ, ಸಾಮಾಜಿಕ ಮತ್ತು ಸಾರ್ವಜನಿಕ ಉದ್ದೇಶಗಳಿಗೆ ನೀಡುತ್ತಿದ್ದರು ಎಂಬುದು ಅವರ ಜೀವನದ ಪ್ರಮುಖ ಅಂಶ. ಹೀಗಾಗಿ ಅವರ ಸಂಗೀತದಲ್ಲಿ ಸಾಧನೆ ಮಾತ್ರವಲ್ಲ, ಸೇವೆಯೂ ಇತ್ತು.
ಅದೊಂದು ಯುದ್ದದ ಸಮಯದಲ್ಲಿ ಎಂ.ಎಸ್. ಸುಬ್ಬಲಕ್ಷ್ಮಿಯವರು ಸಂಗೀತ ಕಛೇರಿ ಮುಗಿಸಿದ ನಂತರ, ಕಾರ್ಯಕ್ರಮದ ಆಯೋಜಕರು, ಯುದ್ಧ ಸಮಯದಲ್ಲಿ ಸೈನಿಕರಿಗಾಗಿ ನಿಧಿ ಸಂಗ್ರಹಣೆ ಮಾಡುತ್ತಿದ್ದ, ಸಭಿಕರೆಲ್ಲರೂ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಬೇಕೆಂದು ಕೋರಿದಾಗ, ವೇದಿಕೆಯ ಮೇಲಿದ್ದ ಎಂ.ಎಸ್. ಅವರು ಕೊಂಚವೂ ಬೇಸರವಿಲ್ಲದೇ, ತಮ್ಮ ಕೈಗಳಲ್ಲಿದ್ದ ಅಷ್ಟೂ ಚಿನ್ನದ ಬಳೆಗಳನ್ನು ಸೈನಿಕರ ನಿಧಿಗಾಗಿ ದಾನ ಮಾಡಿದ್ದರು ಎಂಬ ಪ್ರಸಂಗ ಬಹಳ ಪ್ರಸಿದ್ದಿ ಪಡೆದಿದೆ.
1962ರ ಬೆಂಗಳೂರಿನ ಕೋಟೇ ರಾಮೋತ್ಸವದಲ್ಲಿ ಹಾಡದೇ ಹೋದ ಎಂ. ಎಸ್. ಸುಬ್ಬಲಕ್ಷ್ಮಿ
1962ರ ರಾಮೋತ್ಸವದಲ್ಲಿ ಎಂ. ಎಸ್. ಸುಬ್ಬಲಕ್ಷ್ಮಿಯವರ ಸಂಗೀತ ಕಚೇರಿ ನಿಗದಿಯಾಗಿತ್ತು. ಅನಕೃ ಅವರ ನೇತೃತ್ವದಲ್ಲಿ ಕೆಲವು ಕನ್ನಡಪರ ಹೋರಾಟಗಾರರು ಈ ಕಾರ್ಯಕ್ರಮದ ವಿರುದ್ಧ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆ ವೈಯಕ್ತಿಕವಾಗಿ ಎಂ. ಎಸ್. ಸುಬ್ಬಲಕ್ಷ್ಮಿಯವರ ವಿರುದ್ಧವಾಗಿರಲಿಲ್ಲ . ಅವರು ದೇಶದ ಶ್ರೇಷ್ಠ ಗಾಯಕಿಯರಲ್ಲಿ ಒಬ್ಬರು ಎಂಬ ಗೌರವವನ್ನು ಕನ್ನಡಿಗರು ಹೊಂದಿದ್ದರು. ಆದರೆ, ಕನ್ನಡಲ್ಲಿ ದಾಸ ಸಾಹಿತ್ಯ, ವಚನಗಳ ಪರಂಪರೆಯೇ ಇದ್ದರೂ, ಕರ್ನಾಟಕದ ಸಂಗೀತಕ್ಕೆ ಪುರಂದರದಾಸರೇ ಪಿತಾಮಹರಾದರೂ ಬಹುತೆಕ ಸಂಗೀತಗಾರರು ತಮ್ಮ ಕಛೇರಿಗಳಲ್ಲಿ ಕನ್ನಡದ ಕೃತಿಗಳನ್ನು ಹಾಡಲು ಹಿಂಜರಿಯುತ್ತಿದ್ದದ್ದರ ವಿರೋಧವಾಗಿ, ಪ್ರತಿಭಟನೆಯ ಸಂಕೇತವಾಗಿ ಅವರ ಕಾರ್ಯಕ್ರಮವೇ ಪ್ರಶ್ನೆಗೆ ಒಳಗಾಯಿತು.
ಸುಬ್ಬಲಕ್ಷ್ಮಿಯವರ ನಿರ್ಧಾರ
ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಎಂ. ಎಸ್. ಸುಬ್ಬಲಕ್ಷ್ಮಿಯವರು ಆನಕೃ ಅವರ ನಡೆಯನ್ನು ಸ್ವಾಗತಿಸಿ ಸ್ವಲ್ಪವೂ ಬೇಸರಿಕೊಳ್ಳದೇ, ಆ ವರ್ಷದ ಕೋಟೆ ಶ್ರೀ ರಾಮೋತ್ಸವದಲ್ಲಿ ಹಾಡದೆ ಉಳಿದ್ದಲ್ಲದೇ ಮರು ವರ್ಷದ ಕಛೇರಿಯಲ್ಲಿ ತಪ್ಪದೇ ಭಾಗವಹಿಸಿ ಕನ್ನಡ ಹಾಡುಗಳನ್ನು ವಿಶೇಷವಾಗಿ ಹಾಡುವ ಮೂಲಕ ಕಲಾವಿದರುಗಳಿಗೆ ಭಾಷೆಯ ಎಲ್ಲೆ ಇಲ್ಲಾ ಎಂಬುದನ್ನು ಸಾಭೀತು ಮಾಡಿದ್ದದ್ದು ವಿಶೇಷವಾಗಿತ್ತು
ಬೆಂಗಳೂರಿನ ಸಾಂಸ್ಕೃತಿಕ ಗುರುತು
ಪ್ರಶಸ್ತಿಗಳ ಮಹಾಪಟ್ಟಿ

ಎಂ.ಎಸ್. ಸುಬ್ಬಲಕ್ಷ್ಮಿ ಪಡೆದ ಗೌರವಗಳ ಪಟ್ಟಿ ಅತ್ಯಂತ ದೀರ್ಘ.
- 1954 — ಪದ್ಮಭೂಷಣ
- 1956 — ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ
- 1968 — ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಸಂಗೀತ ಕಲಾನಿಧಿ ಪ್ರಶಸ್ತಿಯನ್ನು ಪಡೆದ ಮೊದಲ ಮಹಿಳೆ
- 1974 — ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ
- 1975 — ಪದ್ಮವಿಭೂಷಣ
- 1988 — ಕಾಳಿದಾಸ ಸಮ್ಮಾನ್
- 1990 — ಇಂದಿರಾ ಗಾಂಧಿ ರಾಷ್ಟ್ರೀಯ ಏಕತಾ ಪ್ರಶಸ್ತಿ
- 1998 — ಭಾರತ ರತ್ನ ಭಾರತದ ಅತ್ಯುನ್ನತ ನಾಗರಿಕ ಗೌರವ. ಭಾರತ ರತ್ನ ಪಡೆದ ಮೊದಲ ಸಂಗೀತಗಾರ್ತಿ/ಸಂಗೀತಗಾರ ಎಂಬ ಐತಿಹಾಸಿಕ ಸ್ಥಾನ ಪಡೆದರು.
ಅವರಿಗೆ ಹಲವು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್‌ಗಳೂ ದೊರೆತವು. ಸಾಂಸ್ಕೃತಿಕ ಸಂಸ್ಥೆಗಳು ಅನೇಕ ಬಿರುದುಗಳನ್ನು ನೀಡಿ ಗೌರವಿಸಿವೆ. ಸಾರ್ವಜನಿಕ ಸೇವೆಗಾಗಿ ನೀಡುವ ಏಷ್ಯಾದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ Ramon Magsaysay Award ಅನ್ನು ಪಡೆದ ಮೊದಲ ಭಾರತೀಯ ಸಂಗೀತಗಾರ್ತಿ ಎಂಬ ಗೌರವ.
ರಾಣಿಯಂತೆ ಗೌರವ, ಆದರೆ ಜೀವನದಲ್ಲಿ ಸರಳತೆ
ಎಂ.ಎಸ್. ಅವರ ಬಗ್ಗೆ ಮಾತನಾಡುವಾಗ ಅವರ ವ್ಯಕ್ತಿತ್ವವನ್ನು ಮರೆಯಲು ಸಾಧ್ಯವಿಲ್ಲ. ಅವರಿಗೆ ದೊರೆತ ಖ್ಯಾತಿ ಅಪಾರ. ಆದರೆ ಸಾರ್ವಜನಿಕ ಜೀವನದಲ್ಲಿ ಅವರು ಅತ್ಯಂತ ವಿನಯಶೀಲ, ಶಿಸ್ತಿನ, ಭಕ್ತಿಭಾವದ ಮತ್ತು ಸರಳ ವ್ಯಕ್ತಿತ್ವಕ್ಕಾಗಿ ಪ್ರಸಿದ್ಧರಾಗಿದ್ದರು. ಸಂಗೀತದ ದಿಗ್ಗಜರು ಅವರನ್ನು ಹೊಗಳಿದರೂ, ತಾವು ದೊಡ್ಡವರು ಎಂಬ ಅಹಂಕಾರ ಅವರ ವರ್ತನೆಯಲ್ಲಿ ಕಾಣಿಸುತ್ತಿರಲಿಲ್ಲ ಎಂಬುದು ಅವರನ್ನು ಹತ್ತಿರದಿಂದ ಕಂಡವರ ನೆನಪುಗಳಲ್ಲಿ ಪದೇಪದೇ ಬರುತ್ತದೆ. ಅವರ ವೇದಿಕೆಯ ಸಾನ್ನಿಧ್ಯವೂ ವಿಶಿಷ್ಟ. ಸರಳ ಸೀರೆ, ಮಿತವಾದ ಆಭರಣ, ಶಾಂತ ಮುಖಭಾವ ಮತ್ತು ಕಣ್ಣು ಮುಚ್ಚಿಕೊಂಡು ಸಂಗೀತದಲ್ಲಿ ಲೀನವಾಗುವ ಶೈಲಿ—ಇವೆಲ್ಲವೂ ಕ್ರಮೇಣ ಅವರದೇ ಆದ ಒಂದು ಸಾಂಸ್ಕೃತಿಕ ಚಿತ್ರಣವಾಯಿತು.
ಎಂ.ಎಸ್. ಸುಬ್ಬಲಕ್ಷ್ಮಿ — ವ್ಯಕ್ತಿತ್ವದ ಕೆಲವು ಪ್ರಮುಖ ಗುಣಗಳು
- ಶಿಸ್ತು ಅಸಾಧಾರಣ ಪ್ರತಿಭೆ ಇದ್ದರೂ ನಿರಂತರ ಸಾಧನೆಯನ್ನು ಅವರು ಬಿಟ್ಟುಕೊಡಲಿಲ್ಲ.
- ವಿನಯ ವಿಶ್ವದ ದೊಡ್ಡ ವೇದಿಕೆಗಳಲ್ಲಿ ಹಾಡಿದರೂ ತಮ್ಮನ್ನು ಸಂಗೀತದ ಸೇವಕಿಯಾಗಿ ಕಂಡುಕೊಂಡರು.
- ಭಕ್ತಿ ಅವರ ಸಂಗೀತದ ಬಹುಪಾಲು ಭಕ್ತಿ, ಸಾಹಿತ್ಯ ಮತ್ತು ಆಧ್ಯಾತ್ಮಿಕ ಭಾವನೆಗಳಿಂದ ಕೂಡಿತ್ತು.
- ಭಾಷಾ ವೈವಿಧ್ಯ ತಮಿಳು ಮಾತ್ರವಲ್ಲದೆ ತೆಲುಗು, ಕನ್ನಡ, ಸಂಸ್ಕೃತ, ಹಿಂದಿ ಮುಂತಾದ ಭಾಷೆಗಳ ಕೃತಿಗಳನ್ನು ಹಾಡಿದರು.
- ಸಾಮಾಜಿಕ ಹೊಣೆಗಾರಿಕೆ ಸಂಗೀತವನ್ನು ಸಮಾಜ ಸೇವೆಗೆ ಬಳಸಿದರು.
- ಭಾರತೀಯತೆಯ ಪ್ರತಿನಿಧಿ ವಿದೇಶಗಳಲ್ಲಿ ಹಾಡಿದಾಗ ಕೇವಲ ತಮ್ಮನ್ನು ಪ್ರದರ್ಶಿಸಲಿಲ್ಲ; ಭಾರತೀಯ ಸಂಗೀತ ಪರಂಪರೆಯನ್ನು ಪರಿಚಯಿಸಿದರು.
ಮಹಿಳಾ ಕಲಾವಿದರಿಗೆ ದಾರಿ ತೆರೆದವರು
ಎಂ.ಎಸ್. ಅವರ ಸಾಧನೆಯನ್ನು ಕೇವಲ ವೈಯಕ್ತಿಕ ಪ್ರತಿಭೆಯ ದೃಷ್ಟಿಯಿಂದ ನೋಡಿದರೆ ಒಂದು ದೊಡ್ಡ ಇತಿಹಾಸದ ಭಾಗ ತಪ್ಪಿಹೋಗುತ್ತದೆ. 20ನೇ ಶತಮಾನದ ಮೊದಲಾರ್ಧದಲ್ಲಿ ಮಹಿಳೆಯರು ಸಾರ್ವಜನಿಕ ವೇದಿಕೆಯಲ್ಲಿ ವೃತ್ತಿಪರ ಸಂಗೀತಗಾರರಾಗಿ ಗುರುತಿಸಿಕೊಳ್ಳುವುದು ಸುಲಭವಾಗಿರಲಿಲ್ಲ. ಅಂತಹ ಕಾಲದಲ್ಲಿ ಮದುರೈನ ಸಂಗೀತ ಕುಟುಂಬದಿಂದ ಬಂದ ಒಬ್ಬ ಬಾಲಕಿ, ಸಾರ್ವಜನಿಕ ವೇದಿಕೆ → ಮ್ಯೂಸಿಕ್ ಅಕಾಡೆಮಿ → ಸಿನಿಮಾ → ರಾಷ್ಟ್ರೀಯ ಕಛೇರಿಗಳು → ಅಂತರರಾಷ್ಟ್ರೀಯ ವೇದಿಕೆ → ವಿಶ್ವಸಂಸ್ಥೆ → ಭಾರತ ರತ್ನ ಎಂಬ ದಾರಿಯನ್ನು ನಿರ್ಮಿಸಿದರು. ಇದು ಅವರ ವೈಯಕ್ತಿಕ ಸಾಧನೆಯಷ್ಟೇ ಅಲ್ಲ; ಭಾರತೀಯ ಮಹಿಳಾ ಕಲಾವಿದರ ಇತಿಹಾಸದಲ್ಲಿಯೂ ಒಂದು ಮಹತ್ವದ ಅಧ್ಯಾಯ.
ಎಂ.ಎಸ್. ಮತ್ತು ಕರ್ನಾಟಕ ಸಂಗೀತದ ಜನಪ್ರಿಯೀಕರಣ

ಅವರು ಶಾಸ್ತ್ರೀಯ ಸಂಗೀತವನ್ನು ಅದರ ಶಿಸ್ತಿನಿಂದ ದೂರ ಮಾಡಲಿಲ್ಲ. ಆದರೆ ಅದರ ಸೌಂದರ್ಯವನ್ನು ಸಾಮಾನ್ಯ ಶ್ರೋತೃನಿಗೂ ತಲುಪಿಸಿದರು. ಒಂದು ಕಡೆ ಅವರು ಗಂಭೀರ ರಾಗಾಲಾಪನೆ, ಕೃತಿ, ನಿರವಲ್, ಸ್ವರಪ್ರಸ್ತಾರಗಳಂತಹ ಕರ್ನಾಟಕ ಸಂಗೀತದ ಶಾಸ್ತ್ರೀಯ ಅಂಶಗಳನ್ನು ಕಟ್ಟುನಿಟ್ಟಾಗಿ ನಿರ್ವಹಿಸುತ್ತಿದ್ದರು. ಮತ್ತೊಂದು ಕಡೆ, ಭಜನೆ, ಸ್ತೋತ್ರ, ಸುಪ್ರಭಾತಂ, ಶ್ಲೋಕ ಗಳ ಮೂಲಕ ಸಂಗೀತ ಸಭೆಗೆ ಎಂದಿಗೂ ಹೋಗದ ವ್ಯಕ್ತಿಯ ಮನೆಗೂ ತಲುಪಿದರು. ಇದೇ ಅವರ ಅಪರೂಪದ ಯಶಸ್ಸಿನ ರಹಸ್ಯಗಳಲ್ಲಿ ಒಂದು.
ಸದಾಶಿವಂ ಅವರ ನಿಧನದ ನಂತರ
ಟಿ. ಸದಾಶಿವಂ 1997ರಲ್ಲಿ ನಿಧನರಾದರು. ಅವರ ನಿಧನದ ನಂತರ ಎಂ.ಎಸ್. ಅವರ ಸಾರ್ವಜನಿಕ ಕಛೇರಿ ಜೀವನವೂ ಬಹುತೇಕ ಅಂತ್ಯಗೊಂಡಿತು. ನಂತರದ ವರ್ಷಗಳಲ್ಲಿ ಅವರು ಸಾರ್ವಜನಿಕ ವೇದಿಕೆಗಳಿಂದ ದೂರ ಉಳಿದರು. ಸುಮಾರು ಆರು ದಶಕಗಳ ಕಾಲ ಸಂಗೀತ ಲೋಕದಲ್ಲಿ ಪ್ರಭಾವ ಬೀರಿದ ನಂತರ, ಅವರು 2004ರ ಡಿಸೆಂಬರ್ 11ರಂದು ಚೆನ್ನೈನಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಆದರೆ ಎಂ.ಎಸ್. ಅವರ ಧ್ವನಿ ಸಾಯಲಿಲ್ಲ
ಇಂದು ಅವರು ನಮ್ಮ ನಡುವೆ ದೇಹತಃ ಇಲ್ಲ. ಆದರೆ ಬೆಳಗಿನ ಜಾವ ಕೇಳಿಬರುವ ವೆಂಕಟೇಶ್ವರ ಸುಪ್ರಭಾತಂ, ಮಂದಿರಗಳಲ್ಲಿ ಕೇಳಿಸುವ ವಿಷ್ಣು ಸಹಸ್ರನಾಮ, ಭಕ್ತರ ಕಂಠದಲ್ಲಿ ಕೇಳಿಸುವ ಭಜ ಗೋವಿಂದಂ, ಮೀರಾಭಜನೆಗಳಲ್ಲಿ ಮೂಡುವ ಭಕ್ತಿ— ಇವೆಲ್ಲದರ ಮೂಲಕ ಎಂ.ಎಸ್. ಸುಬ್ಬಲಕ್ಷ್ಮಿ ಇನ್ನೂ ಬದುಕಿದ್ದಾರೆ. ಅವರ ಧ್ವನಿ ಒಂದು ಕಾಲದ ಧ್ವನಿಯಲ್ಲ. ಅದು ಭಾರತೀಯ ಸಂಗೀತದ ಸ್ಮರಣೆಯ ಧ್ವನಿ.
ಎಂ.ಎಸ್. ಸುಬ್ಬಲಕ್ಷ್ಮಿ ಅವರ ಪರಂಪರೆ
ಅವರನ್ನು ಕೇವಲ “ಕರ್ನಾಟಕ ಸಂಗೀತದ ಮಹಾನ್ ಗಾಯಕಿ” ಎಂದು ಹೇಳುವುದು ಸಾಕಾಗುವುದಿಲ್ಲ. ಅವರು, ಗಾಯಕಿ, ನಟಿ, ಭಕ್ತಿಗಾಯಕಿ, ಸಾಂಸ್ಕೃತಿಕ ರಾಯಭಾರಿ, ದಾನಶೀಲ ಕಲಾವಿದೆ, ಮಹಿಳಾ ಕಲಾವಿದರಿಗೆ ದಾರಿದೀಪ, ಭಾರತೀಯ ಸಂಗೀತದ ವಿಶ್ವಮುಖ ಎಲ್ಲವೂ ಆಗಿದ್ದರು. ಅವರ ಜೀವನವು ಪ್ರತಿಭೆ ಮಾತ್ರ ಸಾಕಾಗುವುದಿಲ್ಲ ಎಂಬುದನ್ನು ತೋರಿಸುತ್ತದೆ. ಪ್ರತಿಭೆ + ಸಾಧನೆ + ಶಿಸ್ತು + ವಿನಯ + ಸೇವೆ = ಶಾಶ್ವತ ಸಾಧನೆ.
ಅವರು ಸಂಗೀತದಿಂದ ಖ್ಯಾತಿಯನ್ನು ಪಡೆದರು; ಆದರೆ ಸಂಗೀತವನ್ನು ಖ್ಯಾತಿಗಾಗಿ ಬಳಸಲಿಲ್ಲ.
ಸಂಗೀತವೇ ಅವರ ಸಾಧನೆ. ಸಂಗೀತವೇ ಅವರ ಸೇವೆ. ಸಂಗೀತವೇ ಅವರ ಪ್ರಾರ್ಥನೆ. ಅದಕ್ಕಾಗಿಯೇ ಎಂ.ಎಸ್. ಸುಬ್ಬಲಕ್ಷ್ಮಿ ಒಬ್ಬ ಗಾಯಕಿಯ ಹೆಸರು ಮಾತ್ರವಲ್ಲ.
ಭಾರತೀಯ ಸಂಗೀತದ ಅಮರ ಸ್ವರ.
ಏನಂತೀರೀ?
ಸೃಷ್ಟಿಕರ್ತ, ಉಮಾಸುತ





