–  ರಾಘವೇಂದ್ರ ಅಡಿಗ ಎಚ್ಚೆನ್.

ಭಾರತೀಯ ಚಿತ್ರರಂಗಕ್ಕೆ ನೀಡಿದ ಅಪಾರ ಕೊಡುಗೆ ಹಾಗೂ ಶ್ರೇಷ್ಠ ಸಿನಿ ಪಯಣಕ್ಕಾಗಿ ಹಿರಿಯ ನಟ ಅನಂತ್ ನಾಗ್ ಅವರು 2024ನೇ ಸಾಲಿನ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದ ಮತ್ತೊಂದು ಹೆಮ್ಮೆಯ ಅಧ್ಯಾಯಕ್ಕೆ ಅವರು ಕಾರಣರಾಗಿದ್ದಾರೆ. ವರನಟ ಡಾ. ರಾಜ್‌ಕುಮಾರ್ ಅವರ ಬಳಿಕ ಈ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾಗುತ್ತಿರುವ ಕನ್ನಡದ ಎರಡನೇ ನಟ ಎಂಬ ಹೆಗ್ಗಳಿಕೆಗೆ ಅನಂತ್ ನಾಗ್ ಪಾತ್ರರಾಗಿದ್ದಾರೆ. ಸೆಪ್ಟೆಂಬರ್ 22ರಂದು ಗುಜರಾತ್‌ನ ಕೆವಾಡಿಯಾದಲ್ಲಿ ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅನಂತ್ ನಾಗ್ ಅವರಿಗೆ ಈ ಗೌರವವನ್ನು ಪ್ರದಾನ ಮಾಡಲಾಗುತ್ತದೆ.

ಕನ್ನಡ ಚಿತ್ರರಂಗಕ್ಕೆ ನೀಡಿದ ಅದ್ಭುತ ಕೊಡುಗೆಗಾಗಿ 1995ರ ಸಾಲಿನ, ಅಂದರೆ 43ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಸಂದರ್ಭದಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಡಾ. ರಾಜ್‌ಕುಮಾರ್ ಅವರಿಗೆ ನೀಡಿ ಗೌರವಿಸಲಾಗಿತ್ತು. ಈ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ನಟ ಎಂಬ ಹೆಗ್ಗಳಿಕೆಗೆ ಡಾ. ರಾಜ್‌ಕುಮಾರ್ ಪಾತ್ರರಾಗಿದ್ದರು.

ಅದಾದ ಬಳಿಕ ಕನ್ನಡದ ಯಾವುದೇ ನಟರು ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿರಲಿಲ್ಲ. ಇದೀಗ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ 2024ನೇ ಸಾಲಿನ ಪ್ರಶಸ್ತಿಗೆ ಅನಂತ್ ನಾಗ್ ಅವರನ್ನು ಆಯ್ಕೆ ಮಾಡಲಾಗಿದೆ. ಇದರಿಂದ ಕನ್ನಡ ಚಿತ್ರರಂಗದಲ್ಲಿ ಸಂಭ್ರಮ ಮನೆ ಮಾಡಿದೆ.

ಹಲವು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅನಂತ್ ನಾಗ್, ತಮ್ಮ ಸಹಜ ಅಭಿನಯ, ಪಾತ್ರಗಳಲ್ಲಿನ ವೈವಿಧ್ಯತೆ ಹಾಗೂ ಅದ್ಭುತ ಪ್ರತಿಭೆಯ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದ್ದಾರೆ. ನಾಯಕನ ಪಾತ್ರದಿಂದ ಹಿಡಿದು ಪೋಷಕ ಪಾತ್ರಗಳವರೆಗೆ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿರುವ ಅವರು, ತಮ್ಮದೇ ಆದ ನಟನಾ ಶೈಲಿಯಿಂದ ಕನ್ನಡ ಚಿತ್ರರಂಗದ ಮೇಲೆ ಅಚ್ಚಳಿಯದ ಛಾಪು ಮೂಡಿಸಿದ್ದಾರೆ ಅನಂತ್ ನಾಗ್ ಅವರು ನಿರ್ವಹಿಸಿದ ಪ್ರತಿಯೊಂದು ಪಾತ್ರಕ್ಕೂ ಆಳ, ನೈಜತೆ ಹಾಗೂ ಸಹಜತೆಯನ್ನು ತುಂಬಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲೂ ತಮ್ಮ ಅಭಿನಯದ ಮೂಲಕ ಗಮನ ಸೆಳೆದಿರುವ ಅವರಿಗೆ ಇದೀಗ ದೇಶದ ಪ್ರತಿಷ್ಠಿತ ಸಿನಿ ಗೌರವಗಳಲ್ಲಿ ಒಂದಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಒಲಿದು ಬಂದಿದೆ.

ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳಿಂದ ತಮ್ಮ ಸಹಜ ಅಭಿನಯ, ಅದ್ಭುತ ವೈವಿಧ್ಯತೆ ಮತ್ತು ಪ್ರತಿಭೆಯ ಮೂಲಕ ಅವರು ಭಾರತೀಯ ಚಿತ್ರರಂಗ, ಅದರಲ್ಲೂ ವಿಶೇಷವಾಗಿ ಕನ್ನಡ ಚಿತ್ರರಂಗದ ಮೇಲೆ ಅಚ್ಚಳಿಯದ ಛಾಪು ಮೂಡಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಪ್ರತಿಯೊಂದು ಪಾತ್ರಕ್ಕೂ ಅನಂತ್ ನಾಗ್ ಅವರು ಅಪರೂಪದ ಆಳ ಮತ್ತು ನೈಜತೆಯನ್ನು ತುಂಬಿದ್ದಾರೆ. ಅತ್ಯಂತ ಶ್ರೇಷ್ಠ ಕಲಾವಿದರೊಬ್ಬರಿಗೆ ಸಂದಿರುವ ಈ ಗೌರವ ಸಂಪೂರ್ಣವಾಗಿ ಅರ್ಹವಾದದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ತಿಳಿಸಿದ್ದಾರೆ.

ಡಾ. ರಾಜ್‌ಕುಮಾರ್ ಬಳಿಕ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆಯುತ್ತಿರುವ ಕನ್ನಡದ ಎರಡನೇ ನಟ ಎಂಬ ಹೆಗ್ಗಳಿಕೆಯೊಂದಿಗೆ ಅನಂತ್ ನಾಗ್ ಅವರ ದಶಕಗಳ ಸಿನಿ ಪಯಣ ಮತ್ತೊಂದು ಐತಿಹಾಸಿಕ ಗೌರವದೊಂದಿಗೆ ಗುರುತಿಸಿಕೊಂಡಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ