ಜೀವನ ಎಂಬುದು ಏರಿಳಿತ ತುಂಬಿದ ಜೀವನದಿಯ ಪ್ರವಾಹ. ನೆನಪು, ಅನುಭವಗಳ ನಿಲ್ಲದ ನಿತ್ಯ ನಿರಂತರ ಪಯಣ. ಇದರಲ್ಲಿ ಸುಖದುಃಖ, ಸಿಹಿಕಹಿ ಸಂಘರ್ಷಗಳ ಮಿಶ್ರಣ ಎಲ್ಲರಿಗೂ ಕಟ್ಟಿಟ್ಟ ಬುತ್ತಿ. ನಮ್ಮ ನಡುವೆ ನಡೆಯುವ ಪ್ರತಿಯೊಂದು ಘಟನೆ ಅದು ಸಕಾರಾತ್ಮಕ ಯಾ ನಕಾರಾತ್ಮಕವೇ ಆಗಿರಲಿ, ಎಲ್ಲರಿಗೂ ಹೊಸ ಅನುಭವ, ಅನುದಿನದ ಪಾಠ ಆಗಲಿದೆ. ಸಮಯ ಇದನ್ನು ಸದಾ ಮುನ್ನಡೆಸುತ್ತದೆ. ಈ ಜೀವನಾನುಭವ ನಮ್ಮ ಮುಂದೆ ಬೆಳ್ಳಿತೆರೆಯಲ್ಲಿ ವಿವಿಧ ಭಾಷೆಗಳಲ್ಲಿ ಮೂಡಿಬಂದಾಗ, ಅದಕ್ಕೆ ಪ್ರತಿಸ್ಪಂದನೆ ಹೇಗಿರುತ್ತದೆ? ಬನ್ನಿ, ವಿವರವಾಗಿ ತಿಳಿಯೋಣ…..!

ಕನ್ನಡ : ಲ್ಯಾಂಡ್ ಲಾರ್ಡ್
ದುನಿಯಾ ವಿಜಯ್ ನಟನೆಯ `ಲ್ಯಾಂಡ್ ವಾರ್ಡ್’ ಸಿನಿಮಾ ಜನವರಿ 23ಕ್ಕೆ ತೆರೆಕಂಡು ಇಪ್ಪತ್ತೈದು ದಿನಗಳನ್ನು ಪೂರೈಸಿ ಯಶಸ್ವಿ ಪ್ರದರ್ಶನದೊಂದಿಗೆ ಮುಂದುವರಿಯುತ್ತಿದೆ. ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದ್ದ ಸಿನಿಮಾ ಗಣ್ಯರ ಮೆಚ್ಚುಗೆ ಪಡೆದಿದೆ. ಸರ್ಕಾರದಿಂದ ಚಿತ್ರಕ್ಕೆ ತೆರಿಗೆ ವಿನಾಯಿತಿ ಕೂಡ ಸಿಕ್ಕಿದೆ. ಚಿತ್ರರಂಗದ ಯಶಸ್ವಿ ಕಥೆಗಾರ ಜಡೇಶ್ ಹಂಪಿ ನಿರ್ದೇಶನ ಮಾಡಿರುವ ಈ ಸಿನಿಮಾ ಭೂಮಾಲೀಕರ ತುಳಿತಕ್ಕೆ ಒಳಗಾದವರ ಕಥೆಯನ್ನು ಒಳಗೊಂಡಿದೆ. ಈ ಹಿಂದೆ ಬ್ಲಾಕ್ ಬಸ್ಟರ್ ಹಿಟ್ ಆದ `ಕಾಟೇರ’ ಸಿನಿಮಾದ ಕಥೆ, ಚಿತ್ರಕಥೆಯಲ್ಲಿ ನಿರ್ದೇಶಕ ತರುಣ್ ಸುಧೀರ್ ಜೊತೆ ಜಡೇಶ್ ಕೈ ಜೋಡಿಸಿದ್ದರು.
ಈ ಸಿನಿಮಾದಲ್ಲಿ ಸಹ `ಕಾಟೇರ’ ಸಿನಿಮಾದ ಶೇಡ್ ಕಾಣಿಸಿಕೊಳ್ಳುತ್ತದೆ. `ಲ್ಯಾಂಡ್ ಲಾರ್ಡ್’ ಸಿನಿಮಾ ಹೆಸರೇ ಸೂಚಿಸುತ್ತಿರುವಂತೆ ಭೂಮಾಲೀಕರ ದರ್ಪದ ಕಥೆ. ಜೀತದಾಳುಗಳ ನೋವಿನ ಕಥೆ. ಭೂಮಾಲೀಕರ ದೌರ್ಜನ್ಯಕ್ಕೆ ಒಳಗಾಗು ಕುಟುಂಬವೊಂದು ಅದನ್ನು ಮೆಟ್ಟಿ ನಿಲ್ಲುವ ಜೊತೆಗೆ ತಮ್ಮಂತೆ ಸಂತ್ರಸ್ತರಾದರಲ್ಲಿ ಶಕ್ತಿ, ಮಾಹಿತಿ ತುಂಬುವ ಕಥೆ ಇಲ್ಲಿದೆ. ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವ ಬಡವನ ಕಥೆ ಇದೆ. ಜಾತಿಯ ಹೆಸರಿನಲ್ಲಿ ಶೋಷಣೆಗೆ ಒಳಗಾದ ಜನರ ಕಹಾನಿ ಇದೆ. ರೆಟ್ರೋ ಕಾಲದ ಕಥೆಯನ್ನು ಪ್ರೆಕ್ಷಕರ ಮುಂದೆ ಇಡಲಾಗಿದೆ. ದುನಿಯಾ ವಿಜಯ್ ಇಲ್ಲಿ ವಯಸ್ಸಾದ ವ್ಯಕ್ತಿಯ ಪಾತ್ರದಲ್ಲಿ, ತಮ್ಮ ಇತರೆ ಕೆಲಸ ಸಿನಿಮಾಗಳಿಗಿಂತಲೂ ಭಿನ್ನವಾದ ರೀತಿಯ ಪಾತ್ರದಲ್ಲಿ ನಟಿಸಿದ್ದಾರೆ. ಅಮಾನವೀಯ, ಅಹಂಕಾರಿ ಭೂಮಾಲೀಕನ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ನಟಿಸಿದ್ದು, ರಾಜ್ ವಿಲನ್ ಆಗಿಯೂ ಸಖತ್ ಗಮನ ಸೆಳೆಯುತ್ತದೆ.
ಇಡೀ ಊರಿಗೆ ಊರೇ ದಣಿಗಳ ಒಡೆತನದಲ್ಲಿ ಇರುವಾಗ, ತನ್ನ ಪಾಲಿಗೂ ಸ್ವಂತದ ತುಂಡು ಭೂಮಿ ಇರಬೇಕು ಎಂಬುದು ಬಡವನ ಆಸೆ. ಆದರೆ ಬಡವರಿಗೆ ಭೂಮಿ ಕೊಟ್ಟರೆ ಅವರು ಕೂಡ `ಲ್ಯಾಂಡ್ ಲಾರ್ಡ್’ ಎನಿಸಿಕೊಳ್ಳುತ್ತಾರೆ. ಅದರಿಂದ ತಮ್ಮ ಪ್ರತಿಷ್ಠೆಗೆ ಧಕ್ಕೆ ಬರುತ್ತದೆ ಎಂಬುದು ದಣಿಗಳ ವಾದ. ಹಾಗಾಗಿ, ಎಂದೆಂದಿಗೂ ಬಡವರಿಗೆ ಭೂಮಿಯ ಒಡೆತನ ಸಿಗಲೇಬಾರದು ಎಂದು ದಣಿಗಳು ಕುತಂತ್ರ ನಡೆಸುತ್ತಾರೆ. ಅಂಥ ದಣಿಗಳ ವಿರುದ್ಧ ಸಿಡಿದು ನಿಲ್ಲುವ ರಾಚಯ್ಯ ಉರ್ಫ್ ಕೊಡಲಿ ರಾಚಯ್ಯ ಎಂಬ ಬಡವನ ಕಥೆ ಈ ಸಿನಿಮಾದಲ್ಲಿ ಇದೆ. ಸಿನಿಮಾದಲ್ಲಿ ವಿಜಯ್ ಪುತ್ರಿ ರಿತನ್ಯಾ ಪೊಲೀಸ್ ಕಾನ್ ಸ್ಟೇಬಲ್ ಪಾತ್ರದಲ್ಲಿ ನಟಿಸಿದ್ದಾರೆ. ಯುವ ನಟ ಶಿಶಿರ್ ಬೈಕಾಡಿ ಪಾತ್ರ ಗಮನ ಸೆಳೆಯುತ್ತಿದೆ. ರಾಕೇಶ್ ಅಡಿಗ ಸಹ ಸಖತ್ ವಿಲನಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಉಮಾಶ್ರೀ ಅದ್ಭುತ ನಟನೆ ಚಿತ್ರಕ್ಕೆ ಹೆಚ್ಚಿನ ಕಳೆ ತುಂಬಿದರೆ, ನಟಿ ರಚಿತಾ ರಾಮ್ ಪಾತ್ರ ಖಡಕ್ ಆಗಿದೆ. ಒಟ್ಟಾರೆಯಾಗಿ ಜಡೇಶ್ ದಮನಿತರ ಸಿಟ್ಟಿನ ಕಥೆಯನ್ನು ಆ್ಯಕ್ಷನ್ ಲೇಪದೊಂದಿಗೆ ತೆರೆಗೆ ತಂದು ಗೆದ್ದಿದ್ದಾರೆ. ಸಿನಿಮಾಕ್ಕೆ ಹೇಮಂತ್ ಗೌಡ ಮತ್ತು ಕೆವಿ ಸಂಪತ್ ಬಂಡವಾಳ ಹೂಡಿದ್ದಾರೆ. ಸಂಗೀತ ನೀಡಿರುವುದು ಅಜನೀಶ್ ಲೋಕನಾಥ್. ಸಂಭಾಷಣೆ ಬರೆದಿರುವುದು ಮಾಸ್ತಿ ಉಪ್ಪಾರಹಳ್ಳಿ.

ತಮಿಳು : ವಿತ್ ಲವ್
ಅಭಿಶಾನ್ ಚೆನ್ನೈನ ಒಬ್ಬ ಪ್ರಖ್ಯಾತ ಗ್ರಾಫಿಕ್ ಡಿಸೈನರ್. ಅವನ ತಂಗಿ ಅಣ್ಣನ ಮದುವೆಗಾಗಿ ಕಾಳಜಿ ವಹಿಸುತ್ತಾ, ಆನ್ ಲೈನ್ ನಲ್ಲಿ ವೈವಾಹಿಕ ಮಾಹಿತಿ ತಡಕಾಡುತ್ತಾಳೆ. ನಂತರ ಆತ ಅನಸ್ವರಾ ಎಂಬಾಕೆಯನ್ನು ಕಾಫಿ ಹೌಸ್ ನಲ್ಲಿ ಭೇಟಿಯಾಗುತ್ತಾನೆ. ಸೋಶಿಯಲ್ ಮೀಡಿಯಾ ಸೆಲೆಬ್ರಿಟಿಗಳೆನಿಸಿದ ಮೋನಿಶಾ ಮತ್ತು ಸತ್ಯ ತಿರುಚ್ಚಿಯ ಒಂದೇ ಶಾಲೆಯಲ್ಲಿ ಓದಿದರೆಂದು ಅಲ್ಲಿ ತಿಳಿಯುತ್ತದೆ. ಅವರು ತಮ್ಮ ಶಾಲೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾ ಹೈಸ್ಕೂಲ್ ಪ್ರೇಮದ ಬಗ್ಗೆ ಚರ್ಚಿಸುತ್ತಾರೆ. `ಅವರನ್ನು ಹುಡುಕಿ ತಮ್ಮ ಹಳೆಯ ಪ್ರೇಮ ನೆನಪಿಸೋಣ. ಮುಂದೆ ತಮ್ಮ ಮದುವೆ ಬಗ್ಗೆ ನಿರ್ಧರಿಸೋಣ,’ ಎಂದು ಇಬ್ಬರೂ ನಿರ್ಧರಿಸುತ್ತಾರೆ. ಮೊದಲು ಇದಕ್ಕೆ ಒಪ್ಪದ ಸತ್ಯ ನಂತರ ಸರಿ ಅಂತಾನೆ.
ಮುಂದೆ ಇವರಿಬ್ಬರೂ ಈ ಎಮೋಶನಲ್ ಜರ್ನಿ ಮೂಲಕ ತಮ್ಮ ಪ್ರೇಮ ಗುರುತಿಸಿದರೆ ಎಂಬುದೇ ಉಳಿದ ಕಥೆ. ಅಪ್ಪಟ ಕೌಟುಂಬಿಕ ಚಿತ್ರವಾದ ಇದು ಎಲ್ಲೂ ಬೇಸರ ತರಿಸದು. ಹೆಣ್ಣಿನ ಸ್ವಾಭಿಮಾನ, ಅನನ್ಯತೆ, ಹೆಣ್ತನಗಳ ಹಿರಿಮೆ ಎತ್ತಿಹಿಡಿಯುತ್ತದೆ. ಚಿತ್ರದ ನಿರ್ದೇಶಕರು ಮದನ್, ಇದು ಅವರ ಮೊದಲ ಪ್ರಯತ್ನ. ಅಭಿಶಾನ್, ಅನಸ್ವರಾ, ಹರೀಶ್ ಕುಮಾರ್, ಕಾವ್ಯಾ ಮುಖ್ಯ ತಾರಾಗಣದಲ್ಲಿದ್ದಾರೆ. ಸಂಗೀತ ಸಿಯಾನ್ ರಾಲ್ಡನ್ ಅವರದು.

ಗುಜರಾತಿ : ಲಗನ್ ಲಾಗೇ ರೇ
ಈ ಚಿತ್ರದ ನಿರ್ದೇಶಕ ಸಂದೀಪ್ ಪಟೇಲ್, ಪ್ರೇಮಕಥೆಗಳ ನಿರ್ದೇಶನದಲ್ಲಿ ಮತ್ತೊಮ್ಮೆ ಗೆದ್ದಿದ್ದಾರೆ. ಬ್ಯೂಟಿಫುಲ್ ರೊಮ್ಯಾಂಟಿಕ್ ಕಥೆಗೆ, ಹ್ಯೂಮರ್ ಟಚ್ ಸಖತ್ತಾಗಿ ಬ್ಲೆಂಡ್ ಆಗಿದೆ. ನಾಯಕಿ ಆರೋಹಿ ಪಟೇಲ್ ತನ್ನ ಪ್ರಬುದ್ಧ ನಟನೆಯಿಂದ ಗಮನ ಸೆಳೆಯುತ್ತಾರೆ. ಅದೇ ತರಹ ಮ್ಹಾರ್ ಠಾಕರ್ ಸಹ ಮತ್ತೊಮ್ಮೆ ಎಲ್ಲರ ಮನ ಗೆದ್ದಿದ್ದಾರೆ. ಹಾಡುಗಳು ನಿಜಕ್ಕೂ ಹೃದಯಸ್ಪರ್ಶಿ!
ಚಿತ್ರದಲ್ಲಿನ ಭಾವಾತಿರೇಕದ ದೃಶ್ಯಗಳು ಮನಮೋಹಕ. ಮನತಟ್ಟುವ ಈ ಅಪ್ಪಟ ಕೌಟುಂಬಿಕ ಚಿತ್ರ ಖಂಡಿತಾ ಎಲ್ಲರಿಗೂ ಇಷ್ಟವಾಗುತ್ತದೆ. ತತ್ಸತ್ ಮುನ್ಶಿ ತಮ್ಮ ಪೋಷಕ ಪಾತ್ರದಿಂದ ಮೆಚ್ಚುಗೆ ಗಳಿಸುತ್ತಾರೆ. ವೈದಿಕಾ ಕೌರ್ ತನ್ನ ಈ ಮೊದಲ ಚಿತ್ರದಲ್ಲೇ ಸೈ ಎನಿಸಿದ್ದಾರೆ. ನಿಜಕ್ಕೂ ಉತ್ಕೃಷ್ಟ ವಿನೂತನ ಅನುಭವ ನೀಡುವ ಈ ಚಿತ್ರವನ್ನು ನಿಮ್ಮ ಮನೆಮಂದಿ ಜೊತೆ ನೋಡಿ ಆನಂದಿಸಿ!

ಬಂಗಾಳಿ ಚಿತ್ರ
ಈ ಚಿತ್ರದ ಕಥೆಯೇ ತೀರಾ ವಿಭಿನ್ನ. ಬಾಲಕಾರ್ಮಿಕ ಶೋಷಣೆ ಇಲ್ಲಿನ ಮುಖ್ಯ ವಿಷಯ. ಚಿತ್ರದ ನಿರ್ದೇಶಕ ಸೌಕಾರ್ಯಾ ಘೋಷ್ ರ ಪ್ರಕಾರ, `ಅಪರಾಧಿಗೆ ಕಾರಣ ವಿವರಿಸುವ ಅವಕಾಶ ನೀಡದ ಈ ಸಮಾಜ ಅವರನ್ನು ಕಳಂಕಿತರಾಗಿಸುತ್ತದೆ. ಲೈಂಗಿಕ ಸಮಾನತಚ್ಛೆಯ ವಿಷಯದಲ್ಲಿ ಎಷ್ಟೇ ಪ್ರಗತಿ ಆಗಿರಲಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಅನಾದಿ ಕಾಲದಿಂದ ಇಂದಿಗೂ ಹಾಗೇ ಉಳಿದುಕೊಂಡಿದೆ. ಸಂತ್ರಸ್ತ ಮಕ್ಕಳು ಮುಂದೆ ಅಪರಾಧಿಗಳಾದರೆ ಅದಕ್ಕೆ ಸಮಾಜ ಹೊಣೆಯಲ್ಲವೇ?’
ಈ ಚಿತ್ರದ ಮೂಲಕಥೆ ಹೀಗೆ ಲೈಂಗಿಕ ಶೋಷಣೆಗೆ ಒಳಪಟ್ಟ ಹುಡುಗಿಯದ್ದು. ಹೀಗಾಗಿ ನಿಜಕ್ಕೂ ಥ್ರಿಲ್ಲರ್ ಚಿತ್ರವಾಗಿ ಯಶಸ್ವಿಯಾಗಿದೆ. ಜಯಾ ಅಹಸಾನ್, ಕೌಶಿಕ್ ಸೇನ್, ಅರ್ಶಿಯಾ ಮುಖರ್ಜಿ, ಅನಸೂಯಾ ಮುಜುಂದಾರ್ ಮುಂತಾದವರ ಪ್ರಮುಖ ತಾರಾಗಣವಿದೆ. ಇದು ಕೋಲ್ಕತಾ ಅಂತಾರಾಷ್ಟ್ರೀಯ ಚಿತ್ರ ಮಹೋತ್ಸವದಲ್ಲೂ ಪ್ರದರ್ಶನ ಕಂಡಿತ್ತು. ಚಿತ್ರಕ್ಕೆ ಸಂಗೀತ ಒದಗಿಸಿದರು ಮೇಘ್ ಬ್ಯಾನರ್ಜಿ.

ಮಲೆಯಾಳಂ : ಅನೋಮಿ
ದಿ ಈಕ್ವೇಶನ್ ಆಫ್ ಡೆತ್ ಇದೊಂದು ಅಪರೂಪದ ಸೈಕಲಾಜಿಕ್ ಸೈನ್ಸ್ ಫಿಕ್ಷನ್ ಥ್ರಿಲ್ಲರ್ ಚಿತ್ರ. ಇಲ್ಲಿನ ಟೆಕ್ನಿಕ್ ಪ್ರಯೋಗ ಹಾಗೂ ಪಾತ್ರ ಪೋಷಣೆಯ ವೈವಿಧ್ಯತೆ ಪ್ರಶಂಸನೀಯ ಪ್ರಯತ್ನ. ಫಾರೆನ್ಸಿಕ್ ಎಕ್ಸ್ ಪರ್ಟ್ ರರಾ, ತನ್ನ ತಮ್ಮ ಝಿಯಾನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದನ್ನು ಒಪ್ಪದೆ, ಸ್ವಯಂ ಇನ್ ವೆಸ್ಟಿಗೇಶನ್ ಗೆ ಇಳಿಯುತ್ತಾಳೆ. ಇದಕ್ಕೆ ಪೂರಕವಾಗಿ ಸಹೋದ್ಯೋಗಿ ಗಿಬ್ರಾ+ನ್, ವಿಚಿತ್ರವಾಗಿ ನರ್ತಿಸುತ್ತಾ ಅನುಮಾನ ಹುಟ್ಟಿಸುತ್ತಾನೆ. `ಕಾಣೆಯಾಗಿದ್ದಾನೆ’ ಎಂಬಲ್ಲಿಂದ ಶುರುವಾದ ಕಥೆ, ಕೇಂದ್ರಿತ ಸೈನ್ಸ್ ಫಿಕ್ಷನ್ ಗೆ ತಿರುಗಿ ತೀವ್ರ ಕುತೂಹಲ ಮೂಡಿಸುತ್ತದೆ.
ಬಹಳ ದಿನಗಳ ನಂತರ ಭಾವನಾ ಮಲೆಯಾಳಂ ಚಿತ್ರಗಳಿಗೆ ಕಮ್ ಬ್ಯಾಕ್ ಆಗಿರುವುದು ಇಲ್ಲಿನ ಪ್ಲಸ್ ಪಾಯಿಂಟ್. ಈ ಇಂಡಸ್ಟ್ರಿಗೆ ಈಕೆ ಮರಳಿ ಬಂದದ್ದು, ಹಲವರ ಹುಬ್ಬೇರಿಸಿದೆ! ಬಹುಕಾಲ ಈಕೆ ಕನ್ನಡ, ತಮಿಳು ಚಿತ್ರಗಳಲ್ಲಿ ನಟಿಸುತ್ತಾ ತವರಿನಿಂದ ದೂರವಿದ್ದರು. ಇಲ್ಲಿನ ಈಕೆಯ ಭಾವಾಭಿನಯ, ಅಕ್ಕನಾಗಿ ವೇದನೆ ಅನುಭವಿಸುತ್ತಾ, ಪ್ರಾಮಾಣಿಕ ದಕ್ಷ ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವಿಕೆ ಮೆಚ್ಚತಕ್ಕದ್ದು. ರೆಹಮಾನ್, ಭಾವನಾ, ಅರ್ಜುನ್ ಲಾಲ್, ಬೀನು ಪಪ್ಪು, ಶೆಬಿನ್ ಬೆನ್ಸನ್ ಪ್ರಧಾನ ಭೂಮಿಕೆಯಲ್ಲಿದ್ದರೆ, ಚಿತ್ರದ ನಿರ್ದೇಶನ ರಿಯಾಸ್ ಮರತ್ ರದು ಹಾಗೂ ಸಂಗೀತ ಹರ್ಷವರ್ಧನ್ ರಾಮೇಶ್ವರ್ ಜೋಡಿಯದು.

ತೆಲುಗು : ಯೂಪೇರಿಯಾ
ಜನರನ್ನು ಚಿಂತನೆಯ ಒರೆಗೆ ಹಚ್ಚುವ ಚಿತ್ರಗಳು ಬಹಳ ಕಡಿಮೆ. ಮನರಂಜನೆ, ಗ್ಲಾಮರ್ ಒಂದೇ ಇಂದಿನ ಚಿತ್ರಗಳ ಮೂಲಮಂತ್ರ. ಈ ನಿಟ್ಟಿನಲ್ಲಿ ಪ್ರೇಕ್ಷರನ್ನು ಬಡಿದೆಚ್ಚರಿಸುವಂಥ `ಆಲೋಚಿಂಚಂಡಿ’ 1988ರಲ್ಲಿ ಆರ್. ನಾರಾಯಣ ಮೂರ್ತಿಯವರಿಂದ ಮೂಡಿಬಂದಿತ್ತು. ನಿರುದ್ಯೋಗದ ಭೀಕರ ಸಮಸ್ಯೆ ಇದರ ಮೂಲ. ಇಂಥದ್ದೇ ಮತ್ತೊಂದು ಚಿಂತನಾರ್ಹ ಚಿತ್ರವೇ `ಯೂಪೇರಿಯಾ.’ ಇಂದಿನ ಯುವಜನತೆಗೆ ತಕ್ಕುದೆನಿಸುವ ಈ ಗಂಭೀರ ಚಿತ್ರದ ನಿರ್ದೇಶಕರು ಗುಣಶೇಖರ್. ಚಿರಂಜೀವಿಯ `ಚೂಡಾಲಿನಿಂದಿ,` ಮಹೇಶ್ ಬಾಬುವಿನ `ಒಕ್ಕಡು’ ಮುಂತಾದ ಖ್ಯಾತ ಚಿತ್ರ ನೀಡಿದರು.
ಯುವಜನತೆ ಡ್ರಗ್ಸ್ ಗೆ ಬಲಿಯಾದರೆ ನಾಳೆ ದೇಶದ ಭವಿಷ್ಯ? ಅವರನ್ನು ನಂಬಿಕೊಂಡಿರುವ ತಾಯಿತಂದೆಯರ ಪಾಡೇನು? ಜುಬಿಲಿ ಹಿಲ್ಸ್ ನ ಪಬ್ ರೇಪ್ ಕೇಸ್ ಈ ಚಿತ್ರಕ್ಕೆ ಪ್ರೇರಣೆ. ಯುವಜನತೆಯ ನಶೆ, ಲೋಲುಪತೆ, ಅವರ ಕರ್ತವ್ಯಲೋಪವನ್ನು ಪ್ರಶ್ನಿಸುತ್ತದೆ. ಚೈತ್ರಾಳಾಗಿ ನಟಿಸಿರುವ ಸಾರಾ ಅರ್ಜುನ್ ಚಿತ್ರದ ಜೀವಾಳ. ಭೂಮಿಕಾ, ಗೌತಮ್ ಮೆನನ್, ವಿಕಾಸ್ ಮುಖ್ಯ ತಾರಾಗಣದಲ್ಲಿದ್ದಾರೆ. ಪೋಷಕ ಪಾತ್ರಗಳಾದ ರೋಹಿತ್, ನಾಸರ್, ರವಿ ಪ್ರಕಾಶ್ ಮುಂತಾದವರು ಸಹ ಅಷ್ಟೇ ಗಮನ ಸೆಳೆಯುತ್ತಾರೆ. ಸಂಗೀತ ಕಾಲಭೈರವ ಅವರದು.

ಮರಾಠಿ : ಅಗ ಅಗ ಸೂನ್ ಬಾಯಿ! ಕಾಯ್ ಮ್ಹಣತಾಯ್ ಸಾಸೂಬಾಯಿ
ಅತ್ತೆ ಸೊಸೆಯರ ಸೂಕ್ಷ್ಮ ಸಂಬಂಧದ ಚಿತ್ರಗಳು ಭಾರತೀಯ ಚಿತ್ರರಂಗದಲ್ಲಿ ಅನಾದಿ ಕಾಲದಿಂದಲೂ ಮೂಡಿಬರುತ್ತಿವೆ. ಈ ನಿಟ್ಟಿಗೆ ಮರಾಠಿಯ ಈ ಅಪ್ಪಟ ಸಾಂಸಾರಿಕ ಚಿತ್ರ ಮತ್ತೊಂದು ಹೊಸ ಸೇರ್ಪಡೆ. ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ನೋಡಬಹುದಾದ, ಸಾಮರಸ್ಯದ ಅರಿವು ಮೂಡಿಸುವ ಈ ಹೊಸ ಪ್ರಯತ್ನ ಶ್ಲಾಘನೀಯ! ಅತ್ತೆಸೊಸೆ ಎಂದರೆ ಕೇವಲ ಕಿತ್ತಾಟಷ್ಟೆ ಅಲ್ಲ, ಅದೊಂದು ಆತ್ಮೀಯ ಅನುಬಂಧ ಎಂದು ಇಂದಿನ ಯಾಂತ್ರಿಕ, ಮಾರಾಮಾರಿ, ಗ್ಲಾಮರಸ್ ಸಿನಿಮಾಗಳ ಮಧ್ಯೆ ಹಿತಕರ ಸಾಂಸಾರಿಕ ತಂಗಾಳಿ ತೀಡುವ ಪ್ರಯತ್ನವಿದು. ಹೆಣ್ಣಿನ ಸೂಕ್ಷ್ಮ ಸಂವೇದನೆಗಳನ್ನು ಅತಿ ಸುಂದರವಾಗಿ ಕಟ್ಟಿಕೊಡು ಪ್ರಯತ್ನ ಇಲ್ಲಿದೆ. ತಲೆಮಾರುಗಳ ಅಂತರ, ಬೇರೆ ಕೌಟುಂಬಿಕ ಹಿನ್ನೆಲೆಗಳಿಂದ ಬಂದ ತಮ್ಮ ಮಾತೇ ನಡೆಯಬೇಕೆನ್ನುವ ಅತ್ತೆಸೊಸೆಯರಿಬ್ಬರೂ ಸಂಸಾರ ಬಿರುಕು ಬಿಡದಂತೆ ಅದನ್ನು ಹೇಗೆ ಮುನ್ನಡೆಸಿದರು ಎಂಬುದೇ ಇಲ್ಲಿ ಕಾಮಿಡಿ ಜೊತೆಗೆ ಬೆರೆತ ಪ್ಲಸ್ ಪಾಯಿಂಟ್!
ನಿರ್ಮಿತೀ ಸಾವಂತ್, ಪ್ರಾರ್ಥನಾ ಬೆಹೆರೆ, ಓಂಕಾರ್ ದತ್ತ, ರಾಜನ್ ಬಿ.ಸಿ., ನಕುಲ್ ಫಣೇಕರ್ ಮುಂತಾದವರ ಪ್ರಮುಖ ತಾರಾಣವಿದೆ. ನಿರ್ದೇಶನ ಕೇದಾರ್ ಶಿಂಧೆಯವರದು, ಕುನಾಲ್ ಕರಣ್, ದೇವದತ್ತ್ ಬಾಜಿ, ಸೂರಜ್ ಧೀರಜ್ ರ ಕಾಂಬೋ ಸಂಗೀತವಿದೆ.





