FMSCI ಭಾರತೀಯ ರಾಷ್ಟ್ರೀಯ ರ‍್ಯಾಲಿ ಚಾಂಪಿಯನ್‌ಶಿಪ್ (INRC) 2026ರ 2ನೇ ಸುತ್ತು ಕೊಯಮತ್ತೂರಿನಲ್ಲಿ ಆರಂಭವಾಗಿದೆ. ಬ್ಲೂಬ್ಯಾಂಡ್ ಸ್ಪೋರ್ಟ್ಸ್ ರ‍್ಯಾಲಿ ಆಫ್ ಕೊಯಮತ್ತೂರು 2026ರಲ್ಲಿ 64 ಕಾರುಗಳು ಮತ್ತು 128 ಸ್ಪರ್ಧಿಗಳು ಭಾಗವಹಿಸುತ್ತಿದ್ದು, ಇಂದು ಮತ್ತು ನಾಳೆ ರ‍್ಯಾಲಿ ನಡೆಯಲಿದೆ.

ಬ್ಲೂಬ್ಯಾಂಡ್ ಸ್ಪೋರ್ಟ್ಸ್‌ನ ಪ್ರವರ್ತಕ ಹಾಗೂ ನಿರ್ದೇಶಕ ಪ್ರೇಮನಾಥ್ ಕಾಸಿನಾಥ್ ಅವರ ನೇತೃತ್ವದಲ್ಲಿ, ಎಫ್‌ಎಂಎಸ್‌ಸಿಐ ಮಾರ್ಗದರ್ಶನದಲ್ಲಿ ಹಾಗೂ ಕೊಯಮತ್ತೂರು ಆಟೋ ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ ರ‍್ಯಾಲಿಯನ್ನು ಆಯೋಜಿಸಲಾಗಿದೆ.

ಸೆಪ್ಟೆಂಬರ್ 18ರಂದು ನಡೆದ ಸಾಂಪ್ರದಾಯಿಕ ಧ್ವಜಾರೋಹಣ ಸಮಾರಂಭದ ಮೂಲಕ ರ‍್ಯಾಲಿಗೆ ಚಾಲನೆ ನೀಡಲಾಯಿತು. ತಮಿಳುನಾಡಿನ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ತಿರು. ವಿ. ಸಂಪತ್ ಕುಮಾರ್ ಹಾಗೂ ಸಿಆರ್‌ಪಿಎಫ್ ಇನ್‌ಸ್ಪೆಕ್ಟರ್ ಜನರಲ್ ವಿಜಯ್ ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಮೊದಲ ಸುತ್ತಿನಲ್ಲಿ ಮುನ್ನಡೆ ಸಾಧಿಸಿದ್ದ ಏಳು ಬಾರಿ ರಾಷ್ಟ್ರೀಯ ಚಾಂಪಿಯನ್ ಗೌರವ್ ಗಿಲ್ ಸೇರಿದಂತೆ ಕರ್ಣ ಕದೂರ್, ಡೀನ್ ಮಸ್ಕರೆನ್ಹಾಸ್, ನವೀನ್ ಪುಲಿಗಿಲ್ಲ, ಜೇಸನ್ ಸಲ್ದಾನ್ಹಾ, ಫಬೀದ್ ಅಹ್ಮರ್ ಮತ್ತು ಫಿಲಿಪ್ಪೋಸ್ ಮಥಾಯಿ ಪ್ರಮುಖ ಸ್ಪರ್ಧಿಗಳಾಗಿದ್ದಾರೆ. ಮಹಿಳಾ ವಿಭಾಗದಲ್ಲಿ ಪ್ರಗತಿ ಗೌಡ, ಅನುಶ್ರಿಯಾ ಗುಲಾಟಿ, ಅಥಿರಾ ಮುರಳಿ, ತರುಷಿ ವಿಕ್ರಮ್ ಮತ್ತು ಫೋಬಿ ಡೇಲ್ ಸೇರಿದಂತೆ ಹಲವು ಸ್ಪರ್ಧಿಗಳು ಕಣದಲ್ಲಿದ್ದಾರೆ.

ಕೊಯಮತ್ತೂರಿನ ರ‍್ಯಾಲಿಯಲ್ಲಿ ಬ್ಲ್ಯಾಕ್ ಥಂಡರ್ ಮತ್ತು ಎಸ್.ಎಂ. ಅಗ್ರೋ  ಎಂಬ ಎರಡು ಹಂತಗಳಲ್ಲಿ ಒಟ್ಟು ಎಂಟು ಬಾರಿ ಸ್ಪರ್ಧೆ ನಡೆಯಲಿದೆ.  110.8 ಕಿ.ಮೀ. ಸ್ಪರ್ಧಾತ್ಮಕ ದೂರ  ಹೊಂದಿರುವ ರ‍್ಯಾಲಿಯ ಬಹುತೇಕ ಮಾರ್ಗ ಜಲ್ಲಿ ರಸ್ತೆಯಿಂದ ಕೂಡಿದೆ. ಹೀಗಾಗಿ ವೇಗದ ಜೊತೆಗೆ ಕಾರಿನ ನಿಯಂತ್ರಣ, ಟೈರ್‌ಗಳ ನಿರ್ವಹಣೆ ಹಾಗೂ ಸ್ಥಿರ ಪ್ರದರ್ಶನವು ಚಾಲಕರಿಗೆ ಪ್ರಮುಖ ಸವಾಲಾಗಲಿದೆ.

ರ‍್ಯಾಲಿಯ ಎರಡನೇ ದಿನವಾದ ಸೆಪ್ಟೆಂಬರ್ 20ರಂದು ಬೆಳಗ್ಗೆ 9:30ಕ್ಕೆ ಸ್ಪರ್ಧೆ ಆರಂಭವಾಗಲಿದ್ದು, ಮಧ್ಯಾಹ್ನ 2:30ಕ್ಕೆ ತಾತ್ಕಾಲಿಕ ಅಂತಿಮ ಫಲಿತಾಂಶ ಪ್ರಕಟವಾಗಲಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ