ರಾಗಿ ಕಣ ಹಾಗೂ ಸಹಜ ಸಮೃದ್ಧ ಸಂಸ್ಥೆ ಕರ್ನಾಟಕದ ಹಲವಾರು ಭಾಗಗಳಲ್ಲಿ ಸೊಪ್ಪು ಮೇಳಗಳನ್ನು ನಡೆಸುತ್ತಿದ್ದು, ಭಾನುವಾರ ಬೆಂಗಳೂರಿನ ಗೊಟ್ಟಿಗೆರೆ ಸಮೀಪದ ರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರದ ಆವರಣದಲ್ಲಿ ಸೊಪ್ಪು ಮೇಳ ಆಯೋಜಿಸಲಾಗಿತ್ತು.
ದೇಸಿ ಸೊಪ್ಪಿನ ವೈವಿಧ್ಯ, ರುಚಿ ಹಾಗೂ ಜ್ಞಾನ ಪರಿಚಯಿಸುವ ನಿಟ್ಟಿನಲ್ಲಿ ಇಡೀ ದಿನ ಸೊಪ್ಪಿನ ಮೇಳ ನಡೆಸಲಾಯಿತು.
ವೈವಿಧ್ಯಮ, ತರಹೇವಾರಿ ತಾಜಾ ತಾಜಾ ಸೊಪ್ಪುಗಳನ್ನು ಕಂಡು ಗ್ರಾಹಕರು ಹಿರಿಹಿರಿ ಹಿಗ್ಗಿದರು. ಸೊಪ್ಪು ಮೇಳದಲ್ಲಿ 150ಕ್ಕೂ ಹೆಚ್ಚು ಬಗೆಯ ಸೊಪ್ಪುಗಳು ಒಂದೇ ಕಡೆ ಸಿಕ್ಕಿದನ್ನು ಕಂಡು ಖುಷಿಪಟ್ಟರು.
ಹೆಗ್ಗಡದೇವನಕೋಟೆಯ ಕಾಡುಹಳ್ಳಿಯ ರೈತರು 25ಕ್ಕೂ ಹೆಚ್ಚು ಬಗೆಯ ಸೊಪ್ಪುಗಳನ್ನು ಪ್ರದರ್ಶಿಸಿದರು. ಉತ್ತರ ಕರ್ನಾಟಕದ ರೈತ ಮಹಿಳೆಯರು ಕಿರಕಸಾಲಿ, ಹಕ್ಕರಿಕೆ ಸೇರಿದಂತೆ 50ಕ್ಕೂ ಹೆಚ್ಚು ಬಗೆಯ ಜವಾರಿ ಸೊಪ್ಪುಗಳನ್ನು ಮಾರಾಟ ಮಾಡಿದರು.
ಮಹಿಳಾ ಸಂಘ ತಯಾರಿಸಿದ ಸೊಪ್ಪಿನ ಮೌಲ್ಯವರ್ಧಿತ ಉತ್ಪನ್ನಗಳಾದ ತಾಳಿಪಟ್ಟಿ, ಪಚಡಿ, ಪುಂಡಿಪಲ್ಯ, ಸೊಪ್ಪಿನ ಜ್ಯೂಸ್, ರಾಗಿ ಮುದ್ದೆ, ಸೊಪ್ಪಿನ ಸಾರು ಸೇರಿದಂತೆ ನಾನಾ ಖಾದ್ಯಗಳು ಭೋಜನ ಪ್ರಿಯರ ಹೊಟ್ಟೆ ತುಂಬಿಸಿದವು.
ತರಹೇವಾರಿ ಸೊಪ್ಪುಗಳನ್ನು ಖರೀದಿಸಿದ ಗ್ರಾಹಕರು, ಇಂತಹ ಮೇಳಗಳು ನಮ್ಮ ಬೆಂಗಳೂರಿನ ಎಲ್ಲೆಡೆ ನಡೆಯುವಂತಾಗಲಿ ಎಂದು ಆಶಿಸಿದರು.





