ಹಿರಿಯ ನಟಿ ಊರ್ವಶಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ಮಲಯಾಳಂ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ ‘ಆಶಾ’ ಇದೀಗ ಡಿಜಿಟಲ್ ಪ್ರೀಮಿಯರ್ಗೆ ಸಜ್ಜಾಗಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಹಾಗೂ ವಿಮರ್ಶಕರ ಮೆಚ್ಚುಗೆ ಗಳಿಸಿದ್ದ ಈ ಚಿತ್ರ, ಅಕ್ಟೋಬರ್ 16 ರಿಂದ ಪ್ರಮುಖ ಒಟಿಟಿ ವೇದಿಕೆಯಾದ ಜೀ5ನಲ್ಲಿ (Zee5) ಪ್ರಸಾರವಾಗಲಿದೆ. ವಿಶೇಷವೆಂದರೆ ಮಲಯಾಳಂ ಮಾತ್ರವಲ್ಲದೆ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಿಗೂ ಡಬ್ ಆಗಿ ಈ ಸಿನಿಮಾ ಜೀ5 ವೇದಿಕೆಯಲ್ಲಿ ಪ್ರೇಕ್ಷಕರನ್ನು ತಲುಪಲಿದೆ.
ನಿರ್ದೇಶಕ ಸಫರ್ ಸನಲ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರವನ್ನು ವಿನಾಯಕ ಅಜಿತ್ ನಿರ್ಮಿಸಿದ್ದು, ಸೆಪ್ಟೆಂಬರ್ 11 ರಂದು ಥಿಯೇಟರ್ಗಳಲ್ಲಿ ಬಿಡುಗಡೆಯಾಗಿ ಸದ್ದು ಮಾಡಿತ್ತು. ಚಿತ್ರದಲ್ಲಿ ಊರ್ವಶಿ ಜೊತೆಗೆ ಜೋಜು ಜಾರ್ಜ್, ಐಶ್ವರ್ಯಾ ಲಕ್ಷ್ಮಿ, ವಿಜಯರಾಘವನ್, ಲಕ್ಷ್ಮಿ ಮೆನನ್, ಭಾಗ್ಯಲಕ್ಷ್ಮಿ ಹಾಗೂ ಅಜಯನ್ ಅದತ್ ಪ್ರಮುಖ ಪಾತ್ರಗಳಲ್ಲಿ ಬಣ್ಣಹಚ್ಚಿದ್ದಾರೆ. ತಾಯ್ತನ, ನೈತಿಕತೆ ಮತ್ತು ಸಣ್ಣ ನಿರ್ಧಾರಗಳಿಂದ ಜೀವನದಲ್ಲಿ ಎದುರಾಗುವ ಅನಿರೀಕ್ಷಿತ ತಿರುವುಗಳನ್ನು ಸೂಕ್ಷ್ಮವಾಗಿ ತೆರೆದಿಡುವ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ.
ಕಥೆಯು ಒಬ್ಬ ಸಾಮಾನ್ಯ ವಿಧವೆ ತಾಯಿ ‘ಆಶಾ’ಳ (ಊರ್ವಶಿ) ಸುತ್ತ ಸುತ್ತುತ್ತದೆ. ಹೆಣ್ಣುಮಕ್ಕಳ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಆಶಾಳ ಬದುಕಿನಲ್ಲಿ ರಸ್ತೆಯಲ್ಲಿ ನಡೆಯುವ ಸಣ್ಣ ಅಪಘಾತವೊಂದು ದೊಡ್ಡ ಸಂಚಲನವನ್ನೇ ಸೃಷ್ಟಿಸುತ್ತದೆ. ಜೋಜು ಜಾರ್ಜ್ ನಿರ್ವಹಿಸಿರುವ ‘ಜೀಮೋನ್’ ಪಾತ್ರದೊಂದಿಗೆ ಎದುರಾಗುವ ಸಣ್ಣ ಘರ್ಷಣೆಯು ನಿರೀಕ್ಷೆಗೂ ಮೀರಿದ ಘಟನಾವಳಿಗಳಿಗೆ ದಾರಿಯಾಗಿ, ಇಡೀ ಕುಟುಂಬದ ಬದುಕನ್ನೇ ಬುಡಮೇಲು ಮಾಡುತ್ತದೆ. ಕೇವಲ ನಾಯಕ-ಖಳನಾಯಕ ಎಂಬ ಸಾಂಪ್ರದಾಯಿಕ ಚೌಕಟ್ಟನ್ನು ಮೀರಿದ ಚಿತ್ರಕಥೆ ಇದಾಗಿದ್ದು, ಭಯ, ಅಹಂ, ಸಿಟ್ಟು ಹಾಗೂ ರಕ್ಷಣೆಯ ಭಾವನೆಗಳು ಮುಖಾಮುಖಿಯಾದಾಗ ಪರಿಸ್ಥಿತಿಗಳು ವ್ಯಕ್ತಿಯ ನಡವಳಿಕೆಯನ್ನು ಹೇಗೆ ಬದಲಿಸುತ್ತವೆ ಎಂಬುದನ್ನು ‘ಬಟರ್ಫ್ಲೈ ಎಫೆಕ್ಟ್’ ಪರಿಕಲ್ಪನೆಯಡಿ ನಿರ್ದೇಶಕರು ಅತ್ಯಂತ ರೋಚಕವಾಗಿ ತೆರೆಮೇಲೆ ತಂದಿದ್ದಾರೆ.
ಚಿತ್ರದ ಒಟಿಟಿ ಬಿಡುಗಡೆ ಕುರಿತು ಹರ್ಷ ವ್ಯಕ್ತಪಡಿಸಿರುವ ಜೀ5ನ ದಕ್ಷಿಣ ಭಾರತ ವಿಭಾಗದ ಮುಖ್ಯಸ್ಥ ಲಾಯ್ಡ್ ಸಿ ಕ್ಸೇವಿಯರ್, “ಕೇವಲ ಕಮರ್ಷಿಯಲ್ ಚಿತ್ರಗಳಿಗಷ್ಟೇ ಸೀಮಿತವಾಗದೆ, ಕಲಾತ್ಮಕ ಆಳ ಮತ್ತು ಹೊಸತನವಿರುವ ಕಥೆಗಳಿಗೆ ಮನ್ನಣೆ ನೀಡುವುದು ನಮ್ಮ ಧ್ಯೇಯ. ‘ಆಶಾ’ ಸಿನಿಮಾದಲ್ಲಿ ಊರ್ವಶಿ ಅವರ ನಟನೆ ಅದ್ಭುತವಾಗಿದ್ದು, ಪಾತ್ರದ ಅಸಹಾಯಕತೆ ಮತ್ತು ಆಂತರಿಕ ಶಕ್ತಿಯನ್ನು ಅವರು ಜೀವಂತಗೊಳಿಸಿದ್ದಾರೆ. ಇಂಥ ಅತ್ಯುತ್ತಮ ಚಿತ್ರವನ್ನು ದೇಶಾದ್ಯಂತ ಇರುವ ಸಿನಿರಸಿಕರಿಗೆ ಬಹುಭಾಷೆಗಳಲ್ಲಿ ತಲುಪಿಸುತ್ತಿರುವುದು ನಮಗೆ ಹೆಮ್ಮೆ ತಂದಿದೆ,” ಎಂದಿದ್ದಾರೆ. ತನ್ನವರ ರಕ್ಷಣೆಗಾಗಿ ಒಬ್ಬ ತಾಯಿ ಎಂತಹ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬಲ್ಲಳು ಎಂಬ ಕುತೂಹಲದ ಎಳೆಯೊಂದಿಗೆ ಮೂಡಿಬಂದಿರುವ ‘ಆಶಾ’, ಅಕ್ಟೋಬರ್ 16 ರಿಂದ ZEE5 ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.





