– ರಾಘವೇಂದ್ರ ಅಡಿಗ ಎಚ್ಚೆನ್.
ವಿಭಿನ್ನ ಶೀರ್ಷಿಕೆಯ ‘ಲಾರ್ಡ್ ಗಾಗ’ ಸಿನಿಮಾ ಈಗಾಗಲೇ ಕುತೂಹಲ ಮೂಡಿಸಿದೆ. ಪ್ರೀತಿ, ಪ್ರೇಮ, ಪ್ರಣಯ, ಭಾವನೆ, ವ್ಯಸನ ಮತ್ತು ಮನುಷ್ಯನ ಆಯ್ಕೆಗಳ ಸುತ್ತ ಸಾಗುವ ಈ ಚಿತ್ರವನ್ನು ರೊಮ್ಯಾಂಟಿಕ್ ಸೈಕಾಲಜಿಕಲ್ ಥ್ರಿಲ್ಲರ್ ಶೈಲಿಯಲ್ಲಿ ರೂಪಿಸಲಾಗುತ್ತಿದೆ. ವಿಶೇಷವೆಂದರೆ, ಚಿತ್ರದ ಕಥೆ ಹಿಮ್ಮುಖ ನಿರೂಪಣೆಯಲ್ಲಿ ಸಾಗಲಿದ್ದು, ಮನುಷ್ಯನ ಅಹಂನ ವಿವಿಧ ಮುಖಗಳನ್ನು ತೆರೆಮೇಲೆ ಅನಾವರಣಗೊಳಿಸಲಿದೆ ಎಂದು ಚಿತ್ರತಂಡ ತಿಳಿಸಿದೆ.

‘ಲಾರ್ಡ್ ಗಾಗ’ ಸಿನಿಮಾಗೆ ವೈಕೆ ಕಥೆ ಮತ್ತು ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ‘ಝೀರೋ ಗ್ರ್ಯಾವಿಟಿ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ಉದ್ಯಮಿ ಮುಕಿ ರೆಘುನಾಥನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ರೊಮ್ಯಾಂಟಿಕ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಶೂನ್ಯ ನಾಯಕನಾಗಿ ನಟಿಸಿದ್ದು, ಸ್ವರೂಪಿಣಿ ಮತ್ತು ದಿಶಾ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ಮಾಪಕ ಮುಕಿ ರೆಘುನಾಥನ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ.

ಇತ್ತೀಚೆಗೆ ಚಿತ್ರದ ಟೈಟಲ್ ಪೋಸ್ಟರ್ ಮತ್ತು ಮೋಶನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಬಹುತೇಕ ಚಿತ್ರೀಕರಣವನ್ನು ಸದ್ದಿಲ್ಲದೆ ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಕಲಾವಿದರು ಮತ್ತು ತಂತ್ರಜ್ಞರನ್ನು ಪರಿಚಯಿಸಿದೆ. ಕಾಲಾತೀತ ಕಥೆಯೊಂದಿಗೆ ವಿಭಿನ್ನ ನಿರೂಪಣೆಯನ್ನು ಪ್ರಯತ್ನಿಸಿರುವ ಈ ಸಿನಿಮಾ, ಪ್ರೇಕ್ಷಕರಿಗೆ ಹೊಸ ಅನುಭವ ನೀಡುವ ಉದ್ದೇಶ ಹೊಂದಿದೆ.

ಚಿತ್ರದ ಕುರಿತು ಮಾತನಾಡಿದ ನಿರ್ಮಾಪಕ ಮುಕಿ ರೆಘುನಾಥನ್, ಸಿನಿಮಾ ಇಡೀ ಚಿತ್ರರಂಗಕ್ಕೆ ಹೊಸ ಮೈಲಿಗಲ್ಲಾಗಬೇಕು ಎಂಬ ಉದ್ದೇಶದಿಂದ ತಂಡ ಶ್ರಮಿಸಿದೆ ಎಂದು ಹೇಳಿದ್ದಾರೆ. ಹಲವು ಬಾರಿ ತಿದ್ದುಪಡಿ ಮಾಡಿದ ಬಳಿಕ ಚಿತ್ರಕ್ಕೆ ಅಂತಿಮ ರೂಪ ನೀಡಲಾಗಿದೆ. ಈಗಾಗಲೇ ವಿವಿಧ ವರ್ಗಗಳಿಗೆ ಸೇರಿದ 3 ಸಾವಿರಕ್ಕೂ ಅಧಿಕ ಪ್ರೇಕ್ಷಕರಿಗೆ ಸಿನಿಮಾ ತೋರಿಸಿ, ಅವರ ಅನಿಸಿಕೆ, ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆದುಕೊಂಡ ನಂತರ ಅಂತಿಮಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನು ನಾಯಕ ಶೂನ್ಯ ಕೂಡ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ತಾನು ನಾಯಕನಾಗಿ ನಟಿಸಿದ್ದೇನೆ ಎನ್ನುವುದಕ್ಕಿಂತ, ಒಂದು ಪ್ರಮುಖ ಪಾತ್ರ ನಿರ್ವಹಿಸಿದ್ದೇನೆ ಎಂದು ಹೇಳುವುದು ಸೂಕ್ತ ಎಂದಿದ್ದಾರೆ. ಇಲ್ಲಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯೇ ನಿಜವಾದ ನಾಯಕ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಸಿನಿಮಾಕ್ಕೂ ಮುನ್ನ 45ಕ್ಕೂ ಹೆಚ್ಚು ಕಥೆಗಳನ್ನು ಕೇಳಿದ್ದ ಶೂನ್ಯ, ಕೊನೆಗೆ ‘ಲಾರ್ಡ್ ಗಾಗ’ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ.





